ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿವೇಶನದಲ್ಲಿ 3 ವರ್ಷದೊಳಗೆ ಮನೆ ಕಟ್ಟದಿದ್ದರೆ ಶೇ.10ರಷ್ಟು ದಂಡ

| Published : Jan 03 2025, 01:30 AM IST / Updated: Jan 03 2025, 05:12 AM IST

ಸಾರಾಂಶ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ನಿವೇಶನ ಖರೀದಿಸಿ ಲೀಸ್‌ ಕಂ ಅಗ್ರಿಮೆಂಟ್‌ ಮಾಡಿಸಿಕೊಂಡು 3 ವರ್ಷದೊಳಗೆ ಮನೆ ಕಟ್ಟದೆ ಒಪ್ಪಂದದ ನಿಯಮ ಉಲ್ಲಂಘಿಸಿದಂತವರಿಗೆ ನಿವೇಶನದ ಮಾರ್ಗಸೂಚಿ ದರದ ಶೇ.10ರಷ್ಟು ದಂಡ ಪಾವತಿ ಕಡ್ಡಾಯಗೊಳಿಸಲಾಗಿದೆ.

 ಬೆಂಗಳೂರು : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ನಿವೇಶನ ಖರೀದಿಸಿ ಲೀಸ್‌ ಕಂ ಅಗ್ರಿಮೆಂಟ್‌ ಮಾಡಿಸಿಕೊಂಡು 3 ವರ್ಷದೊಳಗೆ ಮನೆ ಕಟ್ಟದೆ ಒಪ್ಪಂದದ ನಿಯಮ ಉಲ್ಲಂಘಿಸಿದಂತವರಿಗೆ ನಿವೇಶನದ ಮಾರ್ಗಸೂಚಿ ದರದ ಶೇ.10ರಷ್ಟು ದಂಡ ಪಾವತಿ ಕಡ್ಡಾಯಗೊಳಿಸಲಾಗಿದೆ.

ನಾಡಪ್ರಭು ಕೆಂಪೇಗೌಡ ಬಡಾವಣೆ ಮತ್ತು ಅರ್ಕಾವತಿ ಬಡಾವಣೆ ಹೊರತುಪಡಿಸಿ ಬಿಡಿಎ ನಿರ್ಮಿಸಿರುವ 64 ಬಡಾವಣೆಗಳು ಇದರ ವ್ಯಾಪ್ತಿಗೆ ಬರುತ್ತವೆ. 2024 ಸೆಪ್ಟೆಂಬರ್‌ 23ರಿಂದ ಅನ್ವಯವಾಗುವಂತೆ ಮಾರ್ಗಸೂಚಿ ದರ ಶೇ.10 ದಂಡ ನಿಗದಿಪಡಿಸಲಾಗಿದೆ. ಆದರೆ, ಹೊಸ ವರ್ಷದಿಂದ ದಂಡ ವಸೂಲಿ ಕಟ್ಟುನಿಟ್ಟಾಗಿ ನಡೆಯಲಿದೆ ಎಂದು ಬಿಡಿಎ ಮೂಲಗಳು ತಿಳಿಸಿವೆ.

ಯಾವ ನಿವೇಶನಗಳು ತಕರಾರಿನಿಂದ ಕೂಡಿರುತ್ತವೆಯೋ ಅಂತಹ ನಿವೇಶನಗಳಿಗೆ ದಂಡದಿಂದ ವಿನಾಯಿತಿ ಸಿಗಲಿದೆ. ಉಳಿದಂತೆ ಲೀಸ್‌ ಕಂ ಅಗ್ರಿಮೆಂಟ್‌ ಆಗಿ ಮೂರು ವರ್ಷ ಮೀರಿದ ಎಲ್ಲಾ ನಿವೇಶನಗಳಿಗೆ ಇದು ಅನ್ವಯವಾಗಲಿದೆ. ಬಿಡಿಎ ಕಾಯ್ದೆ ಪ್ರಕಾರ ನಿಗದಿತ ಅವಧಿಯಲ್ಲಿ ಮನೆ ನಿರ್ಮಿಸದಿದ್ದರೆ ಅಂತಹ ನಿವೇಶನಗಳನ್ನು ವಶಪಡಿಸಿಕೊಳ್ಳವು ಅಧಿಕಾರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಇದೆ. ಆದರೆ, ಬಿಡಿಎ ಕ್ರಮವನ್ನು ಪ್ರಶ್ನಿಸಿ ಈ ಹಿಂದೆ ಕೆಲ ಗ್ರಾಹಕರು ನ್ಯಾಯಾಲಯದ ಮೊರೆ ಹೋಗಿದ್ದರು. ಹೀಗಾಗಿ ನಿವೇಶನ ವಾಪಸ್‌ ಪಡೆಯದೆ ದಂಡ ವಸೂಲಿಗೆ ನಿರ್ಧರಿಸಲಾಗಿದೆ.

ಖಾಲಿ ನಿವೇಶನಗಳಿಗೆ ದಂಡ ವಿಧಿಸುವ ನಿಯಮ ಮೊದಲಿನಿಂದಲೂ ಜಾರಿಯಲ್ಲಿದೆ. ಆದರೆ, ಅದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರಲಿಲ್ಲ. ಈ ವರ್ಷದಿಂದ ಕೆಲವು ಷರತ್ತುಗಳ ಅನ್ವಯ ಖಾಲಿ ನಿವೇಶನಗಳಿಗೆ ದಂಡ ವಿಧಿಸುವುದನ್ನು ಕಡ್ಡಾಯಗೊಳಿಸಲಾಗುವುದು ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.