ಬಿ.ಎಸ್.ಯೂಡಿಯೂರಪ್ಪ ಅವರಿಗೆ ಅವರೇ ಸಾಟಿ, ಜನಪರವಾದ ಅದರಲ್ಲೂ ರೈತ ಪರ ಸದಾ ಮಿಡಿಯುವ ಹೃದಯದ ಶ್ರೀಮಂತ ನಾಯಕ.   ಸೈಕಲ್ ಮೇಲೆ ರಾಜ್ಯವನ್ನೆಲ್ಲ ಸುತ್ತಾಡಿ ಪಕ್ಷ ಕಟ್ಟಿ ದಕ್ಷಿಣ ಭಾರತದಲ್ಲೇ ಬಿಜೆಪಿಯ ಅಧಿಕಾರದ ಹೆಬ್ಬಾಗಿಲು ತೆರೆಯುವಂತೆ ಮಾಡಿದ್ದು ದೊಡ್ಡ ಸಾಹಸವೇ ಸರಿ.

-ಗೋವಿಂದ ಎಂ.ಕಾರಜೋಳ, ಚಿತ್ರದುರ್ಗ ಸಂಸದರು, ಮಾಜಿ ಉಪ ಮುಖ್ಯಮಂತ್ರಿಗಳು.

ಬಿ.ಎಸ್.ಯೂಡಿಯೂರಪ್ಪ ಅವರಿಗೆ ಅವರೇ ಸಾಟಿ, ಜನಪರವಾದ ಅದರಲ್ಲೂ ರೈತ ಪರ ಸದಾ ಮಿಡಿಯುವ ಹೃದಯದ ಶ್ರೀಮಂತ ನಾಯಕ. ಗಟ್ಟಿಧ್ವನಿ, ಮನಸ್ಸು ಮಾತ್ರ ಮೃದು. ಅವರ ಸಂಘಟನಾತ್ಮಕ ಜಾಣ್ಮೆ ಹಾಗೂ ಬದ್ಧತೆಯನ್ನು ಅವಲೋಕಿಸುವುದಾದರೆ ಸೈಕಲ್ ಮೇಲೆ ರಾಜ್ಯವನ್ನೆಲ್ಲ ಸುತ್ತಾಡಿ ಪಕ್ಷ ಕಟ್ಟಿ ದಕ್ಷಿಣ ಭಾರತದಲ್ಲೇ ಬಿಜೆಪಿಯ ಅಧಿಕಾರದ ಹೆಬ್ಬಾಗಿಲು ತೆರೆಯುವಂತೆ ಮಾಡಿದ್ದು ದೊಡ್ಡ ಸಾಹಸವೇ ಸರಿ.

‘ಈ ನಿಮ್ಮ ಯಡಿಯೂರಪ್ಪ’ ಎಂದೇ ಜನರನ್ನು ಉದ್ದೇಶಿಸಿ ಮಾತನಾಡುವ ಹಮ್ಮು ಬಿಮ್ಮು ಇಲ್ಲದ ರಾಜಕಾರಣಿ ಹಾಗೂ ಅಂತಃಕರಣಿ.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 50 ವರ್ಷ ರಾಜ್ಯವನ್ನು ಸುತ್ತಿದ್ದಾರೆ. ರೈತರ ಪರವಾಗಿ ಹೋರಾಡಿ, ದೀನದಲಿತರಿಗೆ ನ್ಯಾಯ ಒದಗಿಸಿ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದವರು. ಅವರ ಜೀವನ ಮತ್ತು ಸಮಾಜಸೇವೆ ತೆರೆದ ಪುಸ್ತಕವಾಗಿದೆ.

ಆಡಳಿತ ಪಕ್ಷ, ಪ್ರತಿಪಕ್ಷ ಎನ್ನದೇ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ನೀಡಿ ರಾಜ್ಯದ ಅಭಿವೃದ್ಧಿಗೆ ಸಾಥ್ ನೀಡಿದ ಏಕೈಕ ಮುಖ್ಯಮಂತಿಯಾದ ಬಿ.ಎಸ್.ಯಡಿಯೂರಪ್ಪ ಅವರ ಸಂಪುಟದಲ್ಲಿ ಮಂತ್ರಿಯಾಗಿ ಕೆಲಸ ಮಾಡಿದ್ದು ನನ್ನ ಸುದೈವ. ಯಡಿಯೂರಪ್ಪ ಜನಪರ ಕಾಳಜಿ, ಆಡಳಿತ ವೈಖರಿ ಮಾದರಿ ಎನ್ನುವುದನ್ನು ನಾನು ಕಂಡಿದ್ದೇನೆ. ಅವರ ಸಾಮಾಜಿಕ ಸೇವೆ, ಅಭಿವೃದ್ಧಿಗೆ ಇಟ್ಟ ದಿಟ್ಟಹೆಜ್ಜೆ, ಸಂಕಷ್ಟದಲ್ಲಿ ಇರುವವರ ನೆರವಿಗೆ ತಕ್ಷಣದ ಮಿಡಿದ ಯಡಿಯೂರಪ್ಪ ಅವರ ಬಗ್ಗೆ ಹೇಳಬೇಕಾದದ್ದು ಸಾಕಷ್ಟಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಕೈಗೊಂಡ ಜನಪರ ನಿರ್ಧಾರಗಳ ಪೈಕಿ ಕೆಲವನ್ನಾದರೂ ರಾಜ್ಯದ ಜನತೆಗೆ ತಿಳಿಸಿದ್ದರೆ ಹೇಗೆ?

ಬಿಎಸ್‌ವೈ ಮಾನವೀಯತೆಗೆ ಸಾಕ್ಷಿ:

2008-09ರಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಅವರನ್ನು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಇಂಗಳಗಿ ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದೆ. ಎಚ್‌ಐವಿ ಪೀಡಿತರನ್ನು ಸಮಾಜ ತಿರಸ್ಕರಿಸದೆ ಒಪ್ಪಿಕೊಳ್ಳಬೇಕೆಂಬ ಸಂದೇಶ ಸಾರುವ ಉದ್ದೇಶದಿಂದ ಸೋಂಕಿತರ ಮನೆಗೆ ಯಡಿಯೂರಪ್ಪ ಅವರನ್ನು ಭೇಟಿ ಮಾಡಿಸಲಾಯಿತು. ನಂತರ ಬಹಿರಂಗ ಸಮಾವೇಶ ಆಯೋಜಿಸಲಾಗಿತ್ತು. ಎರಡೂವರೆ ಸಾವಿರ ಮಾಜಿ ದೇವದಾಸಿ ಮಹಿಳೆಯರನ್ನು ಸೇರಿಸಲಾಗಿತ್ತು. ಅವರಿಗೆ ಕ್ಯಾಪ್ ಹಾಕಿ ಕೂರಿಸಲಾಗಿತ್ತು. ಯಡಿಯೂರಪ್ಪ ಅವರು ವೇದಿಕೆ ಬಂದವರೇ ತಕ್ಷಣ ಗಾಬರಿಯಾಗಿ ‘ಇಷ್ಟೊಂದು ಹೆಣ್ಣುಮಕ್ಕಳು ಬಂದಿದ್ದಾರಲ್ಲ, ಅವರ ತಲೆಗೆ ಕ್ಯಾಪ್ ಹಾಕಿ ಏಕೆ ಕೂರಿಸಲಾಗಿದೆ?’ ಎಂದು ನನ್ನನ್ನು ಕೇಳಿದರು. ‘ಅವರೆಲ್ಲ ಮಾಜಿ ದೇವದಾಸಿಯರು, ಬಡವರಿದ್ದು, ಸಹಾಯ ಕೇಳಲು ಬಂದಿದ್ದಾರೆ. ಅವರಿಗೆ ವಾಸಿಸಲು ಒಂದು ರೂಮ್ ಕೂಡ ಇಲ್ಲದ ಕೆಟ್ಟ ಪರಿಸ್ಥಿತಿಯಲ್ಲಿದ್ದಾರೆ’ ಎಂದು ವಿವರಿಸಿದೆ. ‘ಹಾಗಾದರೆ ಅವರಿಗೆಲ್ಲ ಒಂದೊಂದು ಹಸು ಕೊಡೋಣವೇ’ ಎಂದರು. ‘ಹಸು ಕೊಟ್ಟರೆ ಸಾಕಲು ಆಗದು, ಕಡುಬಡವರು, ಅನೇಕರು ಗುಡಿಸಲಿನಲ್ಲಿದ್ದಾರೆ’ ಎಂದು ಯಡಿಯೂರಪ್ಪ ಅವರ ಗಮನಕ್ಕೆ ತಂದೆ. ‘ಹಾಗಾದರೆ ಏನು ಮಾಡಬೇಕಪ್ಪಾ?’ ಎಂದು ನನ್ನನ್ನು ಕೇಳಿದರು. ‘ಮಾಸಾಶನ ಕೊಟ್ಟರೆ ಅವರ ಮುಪ್ಪಿನಾವಸ್ಥೆ ತನಕ ಬದುಕಿಗೆ ನೆರವಾಗುತ್ತದೆ’ ಎಂದು ವಿವರಿಸಿದೆ.

ಮಾಜಿ ದೇವದಾಸಿಯರ ಸಂಕಷ್ಟಕ್ಕೆ ಮಿಡಿದ ಯಡಿಯೂರಪ್ಪ ಅವರು ವೇದಿಕೆಯಲ್ಲೇ ಮಾಸಾಶನ ಘೋಷಣೆ ಮಾಡಿದರು. ಬೆಂಗಳೂರಿಗೆ ಹೋದ ತಕ್ಷಣವೇ ಸುಮಾರು 37 ಸಾವಿರ ಹೆಣ್ಣುಮಕ್ಕಳಿಗೆ ಒಂದೇ ದಿನ ಮಾಸಾಶನ ವಿತರಣೆ ಮಾಡಿದರು. ಇದು ಯಡಿಯೂರಪ್ಪ ಅವರ ಮಾನವೀಯತೆಗೆ ಸಾಕ್ಷಿ.

ನೇಕಾರರ ಸಂಕಷ್ಟಕ್ಕೂ ಮಿಡಿದ ಹೃದಯ:

ಯಡಿಯೂರಪ್ಪ ಅವರು ಹಾಗೂ ನಾನು ಚರ್ಚಿಸುತ್ತಿದ್ದಾಗ, ‘ನೇಕಾರರು ಬಹಳ ಬಡವರಿದ್ದು, ಸಂಕಷ್ಟದಲ್ಲಿದ್ದಾರೆ ಸರ್’ ಎಂದು ಅವರ ಗಮನಕ್ಕೆ ತಂದೆ. ‘ಉತ್ತರ ಕರ್ನಾಟಕದಲ್ಲಿ ಬಹುತೇಕ ಮಂದಿ ಹ್ಯಾಂಡ್‌ಲೂಮ್ ನೇಕಾರರಿದ್ದಾರೆ. ಹ್ಯಾಂಡ್‌ಲೂಮ್ ನಡೆಸೋದು ಅವರಿಗೆ ಕಷ್ಟ’ ಎಂದು ವಿವರಿಸಿದೆ.

ಹ್ಯಾಂಡ್‌ಲೂಮ್ ನೇಕಾರರ ಸಂಕಷ್ಟಕ್ಕೆ ನೆರವಾಗಲು ಏನು ಮಾಡಬೇಕೆಂದು ನನ್ನನ್ನು ಕೇಳಿದರು. ಜವಳಿ ಖಾತೆ ನನ್ನಲ್ಲಿಯೇ ಇತ್ತು. ‘ಏನಿಲ್ಲ, ಅವರಿಗೆಲ್ಲ ವಿದ್ಯುತ್ ಮಗ್ಗಕ್ಕೆ ಪರಿವರ್ತನೆ ಮಾಡಿಸೋಣ, ಒಬ್ಬರಿಗೆ ಎರಡೆರಡು ಪವರ್‌ಲೂಮ್ ಕೊಡಿಸೋಣ, ಅದರಲ್ಲಿ ಒಂದು ಉಚಿತ, ಇನ್ನೊಂದನ್ನು ಸಾಲದ ರೂಪದಲ್ಲಿ ಕೊಡಿಸೋಣ’ ಎಂದು ವಿವರಿಸಿದೆ. ‘ಇಷ್ಟಾದರೆ ಸಾಲದು ಪವರ್‌ಲೂಮ್‌ಗೆ ವಾಣಿಜ್ಯ ಉದ್ದೇಶ ವಿದ್ಯುತ್ ದರ ಆದರೆ ನೇಕಾರರಿಗೆ ಬಿಲ್ ಕಟ್ಟೋದು ಆಗಲ್ಲ ಸರ್’ ಎಂದರೆ, ‘ಆಗಲೂ ಮತ್ತೇನು ಮಾಡೋಣ’ ಎಂದು ಯಡಿಯೂರಪ್ಪ ಕೇಳಿದರು. ‘ವಿದ್ಯುತ್ ಸಬ್ಸಿಡಿ ಕೊಟ್ಟರೆ ಅನುಕೂಲವಾಗುತ್ತದೆ’ ಎಂದು ಅವರ ಗಮನಕ್ಕೆ ತಂದರೆ ‘ಆಯ್ತು ಸಬ್ಸಿಡಿ ಕೊಟ್ಟೇಬಿಡು’ ಎಂದು ನನಗೆ ಆದೇಶಿಸಿದ್ದರು. ಇಂಥ ಮಾನವೀಯತೆಯ ಮನುಷ್ಯನ್ನು ನಾನು ನೋಡಿದ್ದು ವಿರಳ.

ನೆರೆ ಸಂತ್ರಸ್ತರಿಗೆ ಸೂರು ಒದಗಿಸಿದ ನಾಯಕ:

2019ರಲ್ಲಿ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ವರುಣಾರ್ಭಟ ಉಂಟಾಗಿ, ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಯಿತು. ಆಕಾಶವೇ ಕೇಳಗೆ ಬಿದ್ದಂತೆ ಮಳೆಯ ಆರ್ಭಟ ಇತ್ತು. ಆ ವೇಳೆ ಸಿಎಂ ಯಡಿಯೂರಪ್ಪ, ನಾನು ಸೇರಿದಂತೆ ಅನೇಕರು ತಕ್ಷಣ ಬೆಳಗಾವಿಗೆ ತೆರಳಿದವು. ಆಗ ಯಡಿಯೂರಪ್ಪ ಅವರೊಬ್ಬರೇ ಮುಖ್ಯಮಂತ್ರಿ ಇದ್ದರು, ಮಂತ್ರಿಮಂಡಲ ರಚನೆಯಾಗಿರಲಿಲ್ಲ. ನಾನೂ ಮಂತ್ರಿ ಇರಲಿಲ್ಲ. ಸಭೆ ನಡೆಸುವಾಗ ಮನೆಗಳ ಬಿದ್ದ ಅಂಕಿಅಂಶಗಳನ್ನು ಅಧಿಕಾರಿಗಳು ವಿವರಿಸಲಾರಂಭಿಸಿದರು.

‘ಮನೆ ಕಳೆದುಕೊಂಡವರಿಗೆ ಏನು ಮಾಡಬಹುದು’ ಎಂದು ಯಡಿಯೂರಪ್ಪ ಕೇಳಿದರು, ಕೇಂದ್ರ ಸರಕಾರದ ಮಾರ್ಗಸೂಚಿ ಪ್ರಕಾರ ₹95,100 ಪರಿಹಾರ ಕೊಡಲು ಅವಕಾಶವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ‘₹95 ಸಾವಿರಗಳಲ್ಲಿ ಮನೆ ಆಗುತ್ತದೆಯೇ?’ ಎಂದು ಯಡಿಯೂರಪ್ಪನವರು ಪಕ್ಕದಲ್ಲಿದ್ದ ನನ್ನನ್ನು ಕೇಳಿದರು. ‘ಅಷ್ಟು ಪರಿಹಾರದ ಹಣದಲ್ಲಿ ಮನೆ ಆಗೋದು ಕಷ್ಟ ಸರ್’ ಎಂದು ಅವರ ಗಮನ ಸೆಳೆದೆ. ‘ಏನು ಮಾಡೋಣ’ ಎಂದು ನನ್ನನ್ನು ಕೇಳಿದರು. ‘ಪರಿಹಾರ ಸ್ವಲ್ಪ ಹೆಚ್ಚು ಕೋಡೋಣ ಸರ್’ ಎಂದೆ, ತಕ್ಷಣ ₹5 ಲಕ್ಷ ಪರಿಹಾರವನ್ನು ಸಭೆಯಲ್ಲೇ ಯಡಿಯೂರಪ್ಪ ಘೋಷಣೆ ಮಾಡಿದರು. ಅದೊಂದು ಐತಿಹಾಸಿಕ ಘೋಷಣೆಯೇ ಸರಿ. ಮುಂದೆ ನಾನೇ ಬೆಳಗಾವಿ ಉಸ್ತುವಾರಿ ಮಂತ್ರಿಯಾದೆ, ಅದೇ ಜಿಲ್ಲೆಗೆ ₹1200 ಕೋಟಿ ಪರಿಹಾರ ಕೊಡಲಾಯಿತು. ಯಡಿಯೂರಪ್ಪ ಸಾಮಾಜಿಕ ಬದ್ಧತೆ, ಜನಪರ ಕಾಳಜಿಗೆ ಅತ್ಯುತ್ತಮ ಉದಾಹರಣೆಯಾಗಿದೆ.

ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆದ ಮೇಲೆಯೇ ರಾಜ್ಯದಲ್ಲಿ ಅಭಿವೃದ್ಧಿಗೆ ವೇಗ ಸಿಕ್ಕಿದ್ದು, ಯೋಜನೆಗಳಿಗೆ ಕೋಟಿ ಕೋಟಿ ಅನುದಾನ ಕೊಟ್ಟಿದ್ದೇ ಅವರ ಅಧಿಕಾರಾವಧಿಯಲ್ಲಿ.

ಶಿಕಾರಿಪುರದಲ್ಲಿ ತಮ್ಮ ರಾಜಕೀಯ ಜೀವನ ಆರಂಭಿಸಿದ ಬಿಎಸ್‌ವೈ ಅವರು ಪ್ರಾರಂಭದಲ್ಲಿ ಆರ್‌ಎಸ್‌ಎಸ್‌ನ ತಾಲೂಕು ಕಾರ್ಯವಾಹರಾಗಿ, ನಂತರ ಪುರಸಭೆ ಅಧ್ಯಕ್ಷ, ಶಾಸಕ, ಪ್ರತಿಪಕ್ಷದ ನಾಯಕ, ಸಂಸದರಾಗಿ ದುಡಿದಿದ್ದಾರೆ.

ಬಿಜೆಪಿ ಜಿಲ್ಲಾಧ್ಯಕ್ಷರಾಗಿ, ರಾಜ್ಯಾಧ್ಯಕ್ಷರಾಗಿ, ರಾಷ್ಟ್ರೀಯ ಮಂಡಳಿ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಹೋರಾಟ ಹಾಗೂ ಪಾದಯಾತ್ರೆಗಳು ಅವರ 50 ವರ್ಷಗಳ ರಾಜಕೀಯ ಜೀವನದ ಭಾಗವಾಗಿವೆ. ವಿಧಾನಸೌಧದಲ್ಲಿ ರೈತರ ಪರವಾಗಿ ಮಾತನಾಡಲು ಎದ್ದು ನಿಂತರೆ ಸಾಕು ವಿಧಾನಸೌಧವೇ ನಡುಗುತಿತ್ತು ಎಂದು ಇಂದಿಗೂ ಪತ್ರಿಪಕ್ಷದವರೇ ಮಾತನಾಡುತ್ತಾರೆ. ಅಂಥ ವ್ಯಕ್ತಿತ್ವ ಯಡಿಯೂರಪ್ಪ ಅವರದು. ಅವರ ಹೋರಾಟ ಜೀವನ, ಕಾಯಕ ನಿಷ್ಠೆ, ನಾಯಕತ್ವ ರಾಜ್ಯದ ಜನರ ಮನಸ್ಸಿನಿಂದ ಎಂದೂ ಅಳಿಸಲಾಗದ ಪುಟಗಳಾಗಿವೆ.