ರಾಜಕಾರಣಿಗಳು ನಮ್ಮ ನಾಡು-ನುಡಿ, ನೆಲ-ಜಲ, ಸಂಸ್ಕೃತಿ ಉದ್ಧಾರಕ್ಕೆ ಶ್ರಮಿಸುತ್ತಿಲ್ಲ : ಕರವೇ

| N/A | Published : Feb 04 2025, 02:15 AM IST / Updated: Feb 04 2025, 04:00 AM IST

ಸಾರಾಂಶ

ರಾಜಕಾರಣಿಗಳು ನಮ್ಮ ನಾಡು-ನುಡಿ, ನೆಲ-ಜಲ, ಸಂಸ್ಕೃತಿ ಉದ್ಧಾರಕ್ಕೆ ಶ್ರಮಿಸುತ್ತಿಲ್ಲ. ಕನ್ನಡದ ಅಸ್ಮಿತೆ ಉಳಿಸಲು ಮುಂದಾಗುತ್ತಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಆರೋಪಿಸಿದರು.

 ಬೆಂಗಳೂರು : ರಾಜಕಾರಣಿಗಳು ನಮ್ಮ ನಾಡು-ನುಡಿ, ನೆಲ-ಜಲ, ಸಂಸ್ಕೃತಿ ಉದ್ಧಾರಕ್ಕೆ ಶ್ರಮಿಸುತ್ತಿಲ್ಲ. ಕನ್ನಡದ ಅಸ್ಮಿತೆ ಉಳಿಸಲು ಮುಂದಾಗುತ್ತಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಆರೋಪಿಸಿದರು.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೌಕರರ ಕನ್ನಡ ಕೃಷಿ ಪ್ರತಿಷ್ಠಾನದಿಂದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ‘ಹೆಸರಾಯಿತು ಕರ್ನಾಟಕ- ಉಸಿರಾಗಲಿ ಕನ್ನಡ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೊರತುಪಡಿಸಿದರೆ ಇನ್ನುಳಿದ 223 ಶಾಸಕರಲ್ಲಿ ಯಾರಿಗೂ ನನ್ನ ಜನ, ನನ್ನ ಭಾಷೆ ಎಂಬ ಅಭಿಮಾನವಿಲ್ಲ. ನಮ್ಮ ಸಂಸ್ಕೃತಿ, ಸಂಸ್ಕಾರದ ಉನ್ನತಿಗೆ ಶ್ರಮಿಸಬೇಕು ಎಂಬ ಮನೋಭಾವ ಕಾಣಿಸುತ್ತಿಲ್ಲ. ಚಿಂತಕರ ಚಾವಡಿಯಾಗಿದ್ದ ವಿಧಾನ ಪರಿಷತ್‌ನಲ್ಲಂತೂ ಭೂ ಮಾಫಿಯಾ, ಗೋಲ್ಡ್‌ ಮಾಫಿಯಾ, ಫೈನಾನ್ಸ್‌ ಮಾಫಿಯಾಗಳು ಹೋಗಿ ಕುಳಿತುಕೊಳ್ಳುತ್ತಿವೆ. ಇವರು ಕನ್ನಡದ ಉಳಿವಿಗೆ ಪ್ರಯತ್ನಿಸುತ್ತಿಲ್ಲ ಎಂದು ಟೀಕಿಸಿದರು.

ಹೊಟ್ಟೆ ಪಾಡಿನ ಹೀರೋಗಳು: ಡಾ.ರಾಜ್‌ಕುಮಾರ್‌, ವಿಷ್ಣುವರ್ಧನ್‌, ಅಂಬರೀಷ್‌ ಕನ್ನಡದ ಅಪ್ಪಟ ಪ್ರತಿಭೆಗಳಾಗಿದ್ದರು. ಆದರೆ ಈಗಿನವರು ಹೊಟ್ಟೆಪಾಡಿನ ಹೀರೋಗಳು. ಯಾರೋ ಡೈಲಾಗ್‌ ಬರೆದುಕೊಡುತ್ತಾರೆ, ಇವರು ಹೇಳುತ್ತಾರೆ. ಕೋಟ್ಯಂತರ ರು. ಸಂಭಾವನೆ ಪಡೆದುಕೊಳ್ಳುತ್ತಾ ಜನಸಾಮಾನ್ಯರ ಪ್ರಾಣದ ಬಗ್ಗೆ ಭಯವೇ ಇಲ್ಲದಂತೆ ವರ್ತಿಸುತ್ತಾರೆ. ಇದರಿಂದ ಜೈಲಿಗೆ ಹೋಗಿ ಕುಳಿತುಕೊಳ್ಳುವಂತೆ ಆಗಿದೆ ಎಂದು ಮಾರ್ಮಿಕವಾಗಿ ನುಡಿದರು.

ಕನ್ನಡಿಗರು ಜಾಗೃತರಾಗಿ: ಕನ್ನಡ ಉಳಿಸಿ ಬೆಳೆಸುವ ಕೆಲಸ ಸರ್ಕಾರದಿಂದ ಆಗುವುದಿಲ್ಲ. ಕನ್ನಡಿಗರು ಜಾಗೃತರಾಗಿ ನಮ್ಮ ಭಾಷೆ ಉಳಿಸಿ ಬೆಳೆಸಲು ಮುಂದಾಗಬೇಕು. ಈ ಅಭಿಮಾನ ಬೆಳೆಸಿಕೊಳ್ಳದಿದ್ದರೆ ಸಂಕಷ್ಟ ಉಂಟಾಗುತ್ತದೆ. ಗುಜರಾತಿ, ಸಿಂಧಿ, ಮಾರ್ವಾಡಿಗಳಿಗೆ ಉತ್ಪನ್ನಗಳ ಏಜೆನ್ಸಿಗಳು ಸಿಗದೆ ಕನ್ನಡಿಗರಿಗೆ ಸಿಗುವಂತಾಗಬೇಕು. ಹಿಂದಿ ಹೇರಿಕೆ ಹೆಚ್ಚಾಗಿ ಒಕ್ಕೂಟ ವ್ಯವಸ್ಥೆಯಲ್ಲಿ ಅನ್ಯಾಯವಾದರೆ ಕನ್ನಡ ದೇಶ ಬೇಕು ಎಂದು ಆಗ್ರಹಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ, ನಟಿ ಪೂಜಾ ಗಾಂಧಿ, ಪ್ರತಿಷ್ಠಾನದ ಅಧ್ಯಕ್ಷ ಕೆ.ಎಸ್‌.ಪ್ರೀತಂ ಮತ್ತಿತರರು ಹಾಜರಿದ್ದರು.