ರಂಗಕರ್ಮಿ ಅಲ್ಲ ಪೇಂಟರ್ ಪ್ರಸನ್ನ : ಚಿತ್ರಕಲಾ ಪರಿಷತ್‌ನಲ್ಲಿದೆ ಪ್ರದರ್ಶನ

| N/A | Published : Oct 26 2025, 01:05 PM IST

Prasanna
ರಂಗಕರ್ಮಿ ಅಲ್ಲ ಪೇಂಟರ್ ಪ್ರಸನ್ನ : ಚಿತ್ರಕಲಾ ಪರಿಷತ್‌ನಲ್ಲಿದೆ ಪ್ರದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಐದು ದಶಕಗಳಿಗೂ ಹೆಚ್ಚು ಕಾಲ ನಾಟಕ ರಚನೆ, ರಂಗ ನಿರ್ದೇಶನದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಪ್ರಸನ್ನ ಅವರು ಸ್ವತಃ ಚಿತ್ರಕಲಾವಿದರು ಎಂಬುದು ಅನೇಕರಿಗೆ ಗೊತ್ತಿರಲಾರದು. ಅವರು ರಚಿಸಿದ ಚಿತ್ರಗಳ ಪ್ರದರ್ಶನ ಈ ತಿಂಗಳಾಂತ್ಯಕ್ಕೆ ಚಿತ್ರಕಲಾ ಪರಿಷತ್‌ನಲ್ಲಿ ನಡೆಯಲಿದೆ

 ಕಳೆದ ಐದು ದಶಕಗಳಿಗೂ ಹೆಚ್ಚು ಕಾಲ ನಾಟಕ ರಚನೆ, ರಂಗ ನಿರ್ದೇಶನದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಪ್ರಸನ್ನ ಅವರು ಸ್ವತಃ ಚಿತ್ರಕಲಾವಿದರು ಎಂಬುದು ಅನೇಕರಿಗೆ ಗೊತ್ತಿರಲಾರದು. ಅವರು ರಚಿಸಿದ ಚಿತ್ರಗಳ ಪ್ರದರ್ಶನ ಈ ತಿಂಗಳಾಂತ್ಯಕ್ಕೆ ಚಿತ್ರಕಲಾ ಪರಿಷತ್‌ನಲ್ಲಿ ನಡೆಯಲಿದೆ

ಹೆಗ್ಗೋಡಿನ ಪ್ರಸನ್ನ ಅವರೆಂದರೆ ನಮಗೆ ತಕ್ಷಣಕ್ಕೆ ನೆನಪಿಗೆ ಬರುವುದು ಒಬ್ಬ ರಂಗಕರ್ಮಿಯಾಗಿ, ಒಬ್ಬ ಗಾಂಧಿವಾದಿಯಾಗಿ. ಆದರೆ ಅವರೊಳಗೆ ಇರುವುದು ಅದಷ್ಟೇ ಅಲ್ಲ. ಅವರು ನಾಟ್ಯಶಾಸ್ತ್ರದ ಬಗ್ಗೆ ಅದೆಷ್ಟು ಅಥೆಂಟಿಕ್ ಆಗಿ ಮಾತನಾಡಬಲ್ಲರೋ ಅಷ್ಟೇ ವಸ್ತುನಿಷ್ಠವಾಗಿ ಗಾಂಧಿ ಬಗೆಗೂ ಮಾತನಾಡಬಲ್ಲರು. ಸಂವಾದಕ್ಕೆ ನಿಲ್ಲಬಲ್ಲರು. ಅದೇ ರೀತಿ ಕೈಮಗ್ಗದ ಬಗ್ಗೆ, ನೇಕಾರಿಕೆ ಬಗ್ಗೆ, ಅದರ ಹೊಸ ಹೊಸ ವಿನ್ಯಾಸಗಳ ಬಗ್ಗೆ ತಾಸುಗಟ್ಟಳೆ ವಿವರಿಸಬಲ್ಲರು. ಎಲ್ಲಕ್ಕಿಂತ ಮುಖ್ಯವಾಗಿ ಅವರೊಬ್ಬ ಜಂಗಮ-ಜೋಗಿ. ಒಂದು ಕಾಟನ್ ಚೀಲ ಬಗಲಿಗೇರಿಸಿಕೊಂಡು ದೇಶಾಂತರ ಹೊರಟೇ ಬಿಡುವವರು. ನಿಂತಲ್ಲಿ ನಿಲ್ಲುವವರಲ್ಲ. ಇವತ್ತು ಕೇರಳದಲ್ಲಿದ್ದರೆ ಮುಂದಿನ ವಾರದ ಹೊತ್ತಿಗೆ ಮಧ್ಯಪ್ರದೇಶದಲ್ಲಿ ಹೊಸದೊಂದು ರಂಗಪ್ರಯೋಗದಲ್ಲಿ ವ್ಯಸ್ತರಾಗಿರುತ್ತಾರೆ.

ಅವರೊಳಗೊಬ್ಬ ಚಿತ್ರ ಕಲಾವಿದ ಕೂಡ ಇದ್ದಾನೆ

ಆದರೆ ಅವರೊಳಗೊಬ್ಬ ಚಿತ್ರ ಕಲಾವಿದ ಕೂಡ ಇದ್ದಾನೆ ಎಂಬುದು ಅನೇಕರಿಗೆ ತಿಳಿದಿರಲಾರದು. ಈಗಾಗಲೇ ಅವರು ಬರೆದಿರುವ ಚಿತ್ರಗಳ ಸಂಖ್ಯೆಯೇ ಸಾವಿರಾರು. ಇದನ್ನು ಯಾವಾಗ ಶುರುಮಾಡಿಕೊಂಡಿರಿ ಎಂದರೆ, ಯಾವಾಗ ನಾಟಕ ನಿರ್ದೇಶನ ಶುರುಮಾಡಿಕೊಂಡೆನೋ, ಆವತ್ತಿಂದ ಚಿತ್ರ ಬರೆಯುವುದಕ್ಕೂ ಕೈಹಚ್ಚಿದೆ ಎನ್ನುತ್ತಾರೆ. ಆದರೆ ತಮ್ಮೊಳಗಿನ ಈ ಕಲೆ ಬೆಳೆಯಲು ಮುಖ್ಯ ಕಾರಣರಾದವರು ಭಾರತದ ಆಧುನಿಕ ರಂಗಭೂಮಿಯ ಪಿತಾಮಹ ಎಂದೇ ಕರೆಸಿಕೊಂಡಿದ್ದ, ರಾಷ್ಟ್ರೀಯ ನಾಟಕ ಶಾಲೆಯ ಸ್ಥಾಪಕ ಇಬ್ರಾಹಿಂ ಅಲ್ಕಾಜಿ.

ಹತ್ತಾರು ವರ್ಷಗಳ ಹಿಂದೆ ಪ್ರಸನ್ನ ಮತ್ತು ಅಶೋಕ್ ಮಂದಣ್ಣ ದೆಹಲಿಯಲ್ಲಿರುವ ಇಬ್ರಾಹಿಂ ಅಲ್ಕಾಜಿ ಅವರ ಮನೆಗೆ ಹೋಗಿದ್ದಾರೆ. ಆಗ ಒಳಗಿನಿಂದ ಒಂದು ದೊಡ್ಡ ಕಂತೆ ಹಿಡಿದು ಬಂದ ಅಲ್ಕಾಜಿ ಅವಷ್ಟನ್ನೂ ಇವರ ಕೈಗಿಟ್ಟು, ಹಾಗೆ ನೋಡ್ತಾ ಇರಿ ಬಂದೆ ಎನ್ನುತ್ತ ಹೊರಟುಬಿಟ್ಟರು. ಆ ಕಟ್ಟನ್ನು ಬಿಚ್ಚಿ ನೋಡಿದರೆ ಎಂ.ಎಫ್ ಹುಸೇನ್ ಸೇರಿದಂತೆ ಅನೇಕ ಖ್ಯಾತ ಕಲಾವಿದರ ಅದ್ಭುತವಾದ ಪೆನ್ಸಿಲ್ ಮತ್ತು ಡಾರ್ಕ್ ಇಂಕಿನ ಆರ್ಟ್‌ಗಳು. ಅದನ್ನು ನೋಡಿದ ಪ್ರಸನ್ನ ಒಂದು ಕ್ಷಣ ಅವಾಕ್ಕಾದರು. ಅಂತಹ ಅಸಂಖ್ಯ ಕಲಾಕೃತಿಗಳು ಅಲ್ಕಾಜಿ ಅವರ ಬಳಿ ಇದ್ದವು. ಅವೆಲ್ಲವೂ ಒಂದಕ್ಕಿಂತ ಒಂದು ಅದ್ಭುತವಾದವು.

ದೆಹಲಿಯಲ್ಲಿ ಅಲ್ಕಾಜಿ ಅವರು ತಮ್ಮದೇ ಆದ ತಂಡ ಕಟ್ಟಿಕೊಂಡು ಗ್ರೀಕ್ ದುರಂತ ನಾಟಕಗಳ ನಿರ್ದೇಶನ ಮಾಡುತ್ತಿದ್ದರು. ಇವರ ನಾಟಕ ನೋಡಲು ಆಗಾಗ ಬರುತ್ತಿದ್ದವರು ಹುಸೇನ್. ಅವರಿಬ್ಬರಿಗೂ ತುಂಬ ಆತ್ಮೀಯವಾದ ಒಡನಾಟವಿತ್ತು. ಅಂತಹ ನಾಟಕವನ್ನು ಮುಂದಿನ ಸೀಟಿನಲ್ಲಿಯೇ ಕುಂತು ನೋಡುತ್ತಿದ್ದ ಹುಸೇನ್ ಅವರು ಆ ದೃಶ್ಯಗಳನ್ನು ಬಿಳಿ ಆರ್ಟ್ ಪೇಪರ್ ಮೇಲೆ ಚಿತ್ರಿಸುತ್ತಿದ್ದರು. ಅಕ್ಷರಶಃ ಕತ್ತಲಲ್ಲಿ ಕುಂತು ವ್ಯಾಕ್ಸ್ ಅಂಟಿಸಿದ ಪೇಪರ್ ಮೇಲೆ ಇಂಡಿಯನ್ ಇಂಕ್ ಚೆಲ್ಲಿ ಬಿಡಿಸುತ್ತಿದ್ದ ಚಿತ್ರಗಳು. ನಾಟಕದಲ್ಲಿ ಪೌರಾಣಿಕ ಪಾತ್ರಗಳು ಅಲಂಕಾರ ಭೂಷಿತವಾಗಿ ಮೆರೆಯುತ್ತಿದ್ದರೆ ಇವರು ಬೆತ್ತಲೆ ಚಿತ್ರಗಳನ್ನು ಬರೆಯುತ್ತಿದ್ದರು. ಅವು ಒಂದೆರಡಲ್ಲ, ಕಂತು ಕಂತು. ಹಾಗೆ ಬರೆದ ಚಿತ್ರಗಳನ್ನು ಅವರು ಕೊಂಡೊಯ್ಯುತ್ತಲೂ ಇರಲಿಲ್ಲ, ಅಲ್ಕಾಜಿಯವರಿಗೇ ಕೊಟ್ಟು ಹೊರಟು ಬಿಡುತ್ತಿದ್ದರು. ಆವತ್ತು ಪ್ರಸನ್ನ ಅವರ ಕೈಗಿತ್ತಿದ್ದು ಕೂಡ ಅದೇ ಚಿತ್ರಗಳು. ಅವೆಲ್ಲವೂ ಒಂದಕ್ಕಿಂತ ಒಂದು ಅಸಾಧಾರಣವಾಗಿದ್ದವು.

ನಾಟಕದಿಂದಲೇ ಪ್ರೇರಿತವಾದ ಪಾತ್ರಗಳೇ ಕಲೆಗಳಾಗಿ ಅರಳಿವೆ.

ರಂಗದ ಮೇಲೆ ನೆರಳು-ಬೆಳಕಿನಲ್ಲಿ ಮೆರೆದಾಡಿದ ಪಾತ್ರಗಳನ್ನು ಕಲ್ಪಿಸಿಕೊಂಡು ತಮ್ಮದೇ ಆದ ರೂಪ ನೀಡಿದ ಹುಸೇನ್ ಅವರ ಚಿತ್ರಗಳು ಪ್ರಸನ್ನ ಅವರ ಮನಸ್ಸಿನಲ್ಲಿ ಅದೆಷ್ಟು ಆಳವಾಗಿ ಅಚ್ಚೊತ್ತಿಬಿಟ್ಟಿದ್ದವೆಂದರೆ ಪ್ರತಿದಿನ ನಾಟಕ ನಿರ್ದೇಶನ ಮಾಡುತ್ತ ಪಾತ್ರಗಳೊಂದಿಗೆ ತಲ್ಲೀನರಾಗುವ ತಮಗೆ ಇದು ಸಾಧ್ಯವಾಗದೇ? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಶುರುಮಾಡಿದರು. ಅದಕ್ಕೆ ಬೇಕಾದ ಪರಿಕರಗಳನ್ನು ಸಿದ್ಧಪಡಿಸಿಕೊಂಡು ಅದನ್ನು ತಮ್ಮಷ್ಟಕ್ಕೇ ತಾವೇ ಜಾರಿಗೆ ತಂದೂ ಬಿಟ್ಟರು. ಯಾಕೆಂದರೆ ಒಬ್ಬ ನಟನ ಸೂಕ್ಷ್ಮಾತಿ ಸೂಕ್ಷ್ಮ ಚಹರೆಗಳು ಮೊದಲು ಕಣ್ಣಿಗೆ ಕಟ್ಟುವುದು ನಾಟಕ ನಿರ್ದೇಶಕನಿಗೆ. ಆತನ ಪ್ರತಿಯೊಂದು ಆಂಗಿಕ ಅಭಿನಯಗಳು ಕಣ್ಣ ಮುಂದೆ ಸದಾ ಹಾದುಹೋಗುತ್ತಲೇ ಇರುತ್ತವೆ, ಹೀಗೆ ನಾಟಕದಿಂದಲೇ ಪ್ರೇರಿತವಾದ ಪಾತ್ರಗಳೇ ಪ್ರಸನ್ನ ಅವರ ಕೈಯಲ್ಲಿ ಕಲೆಗಳಾಗಿ ಅರಳಿವೆ.

ಆದರೆ ಇಲ್ಲಿರುವ ಯಾವ ಚಿತ್ರವನ್ನೂ ಅವರು ಕ್ಯಾನ್‌ವಾಸ್ ಹಾಕಿ, ಮೌಂಟ್ ಇಟ್ಕೊಂಡು ಚಿತ್ರಿಸಿದ್ದಲ್ಲ. ಎಲ್ಲವೂ ಆಯಾ ಕ್ಷಣದಲ್ಲಿ ಅಯಾಚಿತವಾಗಿ ಮೂಡಿದ ಕಪ್ಪು-ಬಿಳುಪು ಚಿತ್ರಗಳು. ಅವುಗಳಿಗೆ ಯಾವುದೇ ಸಿದ್ಧಸೂತ್ರಗಳಿಲ್ಲ. ಆದರೆ ಬಹುತೇಕ ನಾಟಕದೊಳಗಣ ಬದುಕೇ ಇಲ್ಲಿ ಬಿಂಬಗಳಾಗಿವೆ. ನಾಟಕದಲ್ಲಿನ ಪಾತ್ರಗಳನ್ನು ಮತ್ತೆ ಮತ್ತೆ ನೋಡಿ ನೋಡಿ ಅವೆಲ್ಲವೂ ಅಂತರಂಗದಲ್ಲಿ ಸ್ಥಾಯಿಯಾಗಿ ಉಳಿದು ಬಿಟ್ಟಿರುತ್ತವೆ. ಅಂತಹ ಸ್ವರೂಪವನ್ನು ಯಾವ ರೂಪದಲ್ಲಿಯಾದರೂ ವಿಸ್ತಾರಗೊಳಿಸುವ ಸಾಮರ್ಥ್ಯ ಪ್ರಸನ್ನ ಅವರಿಗೆ ಕರಗತವಾಗಿ ಬಿಟ್ಟಿದೆ. ಇನ್ನು ರಂಗಭೂಮಿಯನ್ನು ಬಿಟ್ಟರೆ ಬದುಕಿನ ಬಹುತೇಕ ಸಮಯವನ್ನು ಅವರು ಈಗಲೂ ಕಳೆಯುತ್ತಿರುವುದು ಪ್ರವಾಸದಲ್ಲಿ. ಇಂತಹ ಸಮಯದಲ್ಲಿ ಕಂಡು ಮನಸ್ಸಿನಲ್ಲಿ ಸ್ಥಿರವಾದ ಎಷ್ಟೋ ದೃಶ್ಯಗಳಿಗೆ ಚಿತ್ರಕಲೆಯ ರೂಪ ಕೊಟ್ಟಿದ್ದಾರೆ.

ಇಷ್ಟೂ ವರ್ಷಗಳಲ್ಲಿ ಚಿತ್ರಿಸಿದ ಕೆಲವು ಚಿತ್ರಗಳ ಪ್ರದರ್ಶನ ಮತ್ತು ಮಾರಾಟ ಅಕ್ಟೋಬರ್ 30ರಿಂದ ನವೆಂಬರ್ 2ರ ತನಕ ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ ನಡೆಯಲಿದೆ. ‘ಬದುಕು ನಾಟಕದೊಳಗೋ ನಾಟಕವು ಬದುಕೊಳಗೋ’ ಎಂಬ ಹೆಸರಿನ ಈ ಪ್ರದರ್ಶನ ಮತ್ತು ಮಾರಾಟದ ಹಿಂದೆಯೇ ಒಂದು ಘನ ಉದ್ದೇಶವಿದೆ. ಚಿತ್ರಗಳ ಮಾರಾಟದಿಂದ ಬಂದ ಹಣವನ್ನು ಮೈಸೂರಿನಲ್ಲಿ ಅವರು ಮೂರು ವರ್ಷಗಳ ಹಿಂದಷ್ಟೇ ಕಟ್ಟಿರುವ ಭಾರತೀಯ ಶೈಕ್ಷಣಿಕ ರಂಗಭೂಮಿ ಟ್ರಸ್ಟ್‌ಗೆ ನೇರವಾಗಿ ವರ್ಗಾಯಿಸಲಾಗುತ್ತದೆ. ಮಕ್ಕಳಿಗೆ ರಂಗಭೂಮಿ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ಕಟ್ಟಲಾಗಿರುವ ಈ ಟ್ರಸ್ಟ್‌ನ ಚಟುವಟಿಕೆಗಳಿಗೆ ಇದರ ಹಣವನ್ನು ವಿನಿಯೋಗಿಸಲಾಗುತ್ತದೆ. ಭಾರತದ ಅನೇಕ ಭಾಗಗಳಿಂದ ಬರುವ ರಂಗಭೂಮಿ ತಜ್ಞರು ಅದಕ್ಕಾಗಿ ಕೆಲಸಮಾಡುತ್ತಿದ್ದಾರೆ. ಅದಕ್ಕೆ ಈಗ ಅತ್ಯಗತ್ಯವಾಗಿ ಬೇಕಾಗಿರುವುದು ಕಾರ್ಪಸ್ ಫಂಡ್. ಅದಕ್ಕಾಗಿ ಯಾರ ಬಳಿಯೂ ಕೈಯೊಡ್ಡದೇ ತಮ್ಮ ಜೋಳಿಗೆಯಲ್ಲಿ ವರ್ಷಗಳಿಂದ ಜೋಪಾನವಾಗಿ ಇಟ್ಟುಕೊಂಡಿದ್ದ ಅಪೂರ್ವವಾದ ಚಿತ್ರಕಲೆಗಳನ್ನು ಹೊರತೆಗೆದಿದ್ದಾರೆ.

ಇದೊಂದು ಬೆಡಗು. ಈ ಬೆಡಗನ್ನು ಈವರೆಗೆ ನಾನು ರಂಗಭೂಮಿಗೆ ಮಾತ್ರ ಸೀಮಿತಗೊಳಿಸಿಕೊಂಡು ನಿರ್ವಹಿಸಿದ್ದೆ. ಈಗ ಪ್ರದರ್ಶನದ ಮೂಲಕ ದೃಶ್ಯ ಕಲೆಗೆ ವಿಸ್ತರಿಸಿ, ಬದುಕು ಚಿತ್ರಣವೋ ಚಿತ್ರಣವು ಬದುಕೋ ಎಂಬ ಬೆಡಗಾಗಿಸಿ ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇನೆ. ನಿಜ ಹೇಳಬೇಕೆಂದರೆ ಬೆಡಗೇ ಸೃಜನಶೀಲತೆ. ಭಾರತೀಯ ಮೀಮಾಂಸೆ ಯಾವತ್ತೂ ಇದನ್ನೇ ಪ್ರತಿಪಾದಿಸಿದೆ, ಎನ್ನುವ ಪ್ರಸನ್ನ ಅವರು ಈ ಚಿತ್ರಕಲೆ ನನಗೆ ವಿಶೇಷ ಅನುಭೂತಿ ನೀಡಿದೆ ಎನ್ನುತ್ತಾರೆ.

ನಾನು ಬರೆದ ಇಲ್ಲಿನ ಬಹುತೇಕ ಚಿತ್ರಗಳು ರಂಗಭೂಮಿಯಿಂದಲೇ ಹುಟ್ಟಿಕೊಂಡವು. ಈಗ ಈ ಚಿತ್ರಗಳನ್ನು ಇಟ್ಟುಕೊಂಡೇ ನಟರಿಗೆ ಪುನರ್ ಪ್ರೇರಣೆ ನೀಡಬೇಕು ಎಂಬ ಉದ್ದೇಶವಿದೆ. ಚಿತ್ರದಲ್ಲಿ ಬಿಂಬಿತವಾದುದನ್ನು ಅವರಿಗೆ ಮನದಟ್ಟಾಗುವಂತೆ ಹೇಳಿದರೆ ಅವರಿಗೆ ಬಹಳ ಬೇಗ ಅರ್ಥವಾಗುತ್ತದೆ. ಆ ಬಳಿಕ ಅದನ್ನು ಪುಸ್ತಕರೂಪದಲ್ಲಿ ತರುವ ಪ್ರಯತ್ನ ಮಾಡುತ್ತೇನೆ.

- ಪ್ರಸನ್ನ

Read more Articles on