ಸಾರಾಂಶ
ನವದೆಹಲಿ: ಎನ್‌ಸಿಇಆರ್‌ಟಿ ಸಿದ್ಧಪಡಿಸಿರುವ ಕೇಂದ್ರೀಯ ಪಠ್ಯಕ್ರಮದ 3 ಹಾಗೂ 6ನೇ ಕ್ಲಾಸ್‌ನ ಕೆಲವು ಪಠ್ಯಪುಸ್ತಕಗಳಲ್ಲಿ ಸಂವಿಧಾನದ ಪೀಠಿಕೆಯು ಮಾಯವಾಗಿರುವ ವಿಷಯ ಬೆಳಕಿಗೆ ಬಂದಿದೆ ಎಂದು ಇಂಗ್ಲಿಷ್ ದೈನಿಕವೊಂದು ವರದಿ ಮಾಡಿದೆ.
ಇದು ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.ರಾಜ್ಯಸಭೆಯಲ್ಲಿ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ‘ಬಿಜೆಪಿ, ಅರೆಸ್ಸೆಸ್‌ನಿಂದ ಪಠ್ಯಗಳಲ್ಲಿ ಕೋಮು ತತ್ವ ಸೇರಿಸಲು ಯತ್ನ ನಡೆದಿದೆ. ಪೀಠಿಕೆಯನ್ನು ತೆಗೆದು ಹಾಕಿ ಎನ್‌ಸಿಇಆರ್‌ಟಿಯಿಂದ ಪಠ್ಯಗಳನ್ನು ತಿರುಚುವ ಯತ್ನ ನಡೆದಿದೆ’ ಎಂದು ಕಿಡಿಕಾರಿದ್ದಾರೆ.
ಆದರೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಈ ಆರೋಪ ನಿರಾಕರಿಸಿದ್ದಾರೆ. ‘ಈವರೆಗ 7ನೇ ಕ್ಲಾಸ್‌ವರೆಗಿನ ಪಠ್ಯಪುಸ್ತಕ ಮುದ್ರಿಸಲಾಗಿದೆ. ನಾನು 6ನೇ ಕ್ಲಾಸ್‌ನ ಪಠ್ಯ ನೋಡಿದೆ. ಅದರಲ್ಲಿ ಪೀಠಿಕೆ, ಮೂಲಭೂತ ಕರ್ತವ್ಯ ಮೂಲಭೂತ ಹಕ್ಕುಗಳು ಇವೆ. ಖರ್ಗೆ ಹೇಳಿಕೆ ಸುಳ್ಳು’ ಎಂದಿದ್ದಾರೆ. ಆದರೆ ಅವರು 3ನೇ ಕ್ಲಾಸ್ ಪಠ್ಯದಲ್ಲಿ ಪೀಠಿಕೆ ಮಾಯದ ಬಗ್ಗೆ ಯಾವುದೇ ಹೇಳಿಕೆ ನೀಡಲಿಲ್ಲ.ಎಲ್ಲಿ ಪೀಠಿಕೆ ಮಾಯ?:
ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ (ಎನ್‌ಸಿಇಆರ್‌ಟಿ),ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅಡಿ ಹೊಸದಾಗಿ ಮುದ್ರಿಸಿದ 3 ಮತ್ತು 6ನೇ ತರಗತಿಗಳ ಪಠ್ಯಪುಸ್ತಕಗಳಿಂದ ಸಂವಿಧಾನದ ಪೀಠಿಕೆಯನ್ನು ಕೈಬಿಟ್ಟಿದೆ.6 ನೇ ತರಗತಿಯ ವಿಜ್ಞಾನ ಪುಸ್ತಕದಲ್ಲಿ ಹಾಗೂ ಹಿಂದಿ ಪುಸ್ತಕದಲ್ಲಿ ಪೀಠಿಕೆ ಇದೆ. ಆದರೆ ಸಮಾಜ ವಿಜ್ಞಾನ ಪುಸ್ತಕದಲ್ಲಿ ಪೀಠಿಕೆಯನ್ನು ಪ್ರಕಟಿಸಿಲ್ಲ. ಇದರಲ್ಲಿ ನಾಗರಿಕರ ಮೂಲಭೂತ ಹಕ್ಕುಗಳು ಮತ್ತು ಮೂಲಭೂತ ಕರ್ತವ್ಯಗಳನ್ನು ಮಾತ್ರ ಪ್ರಕಟಿಸಲಾಗಿದೆ. ಹಳೆಯ ಸಮಾಜ ವಿಜ್ಞಾನ ಪಠ್ಯದಲ್ಲಿ ಪೀಠಿಕೆ ಇತ್ತು.
6ನೇ ಕ್ಲಾಸ್ ಹೊಸ ಇಂಗ್ಲಿಷ್ ಪಠ್ಯಪುಸ್ತಕದಲ್ಲಿ ರಾಷ್ಟ್ರಗೀತೆ ಇದೆ. ಸಂಸ್ಕೃತ ಪಠ್ಯಪುಸ್ತಕದಲ್ಲಿ ರಾಷ್ಟ್ರಗೀತೆ ಮತ್ತು ರಾಷ್ಟ್ರೀಯ ಗೀತೆ ಎರಡೂ ಇವೆ, ಆದರೆ ಪೀಠಿಕೆ ಇಲ್ಲ.
ಇನ್ನು 3ನೇ ಕ್ಲಾಸ್ ಹಿಂದಿ, ಇಂಗ್ಲಿಷ್, ಗಣಿತ ಮತ್ತು ‘ನಮ್ಮ ಸುತ್ತಲಿನ ಪ್ರಪಂಚ’ (ಇದು ಹಳೆಯ ಪರಿಸರ ಅಧ್ಯಯನಗಳು ಅಥವಾ ಇವಿಎಸ್ ಬದಲಿಗೆ ಮುದ್ರಿಸಿರುವ ಪುಸ್ತಕ) ಮುನ್ನುಡಿಯನ್ನು ಹೊಂದಿಲ್ಲ. ಹಳೆಯ ಇವಿಎಸ್ ಪುಸ್ತಕ ಮತ್ತು ಹಿಂದಿ ಪುಸ್ತಕ ಪೀಠಿಕೆಯನ್ನು ಹೊಂದಿದ್ದವು.