ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿ-ಸ್ಮೈಲ್) ಮೂಲಕ ಹೊಸೂರು ರಸ್ತೆಯಿಂದ ಕಾಳೇನ ಅಗ್ರಹಾರದವರೆಗಿನ ಬನ್ನೇರುಘಟ್ಟ ಮುಖ್ಯರಸ್ತೆಯ ಸಮಗ್ರ ಅಭಿವೃದ್ಧಿಗೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವಂತೆ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್ ರಮೇಶ್ ಅಧಿಕಾರಿಗಳಿಗೆ ತಿಳಿಸಿದರು.ಬುಧವಾರ ಬನ್ನೇರುಘಟ್ಟ ಮುಖ್ಯ ರಸ್ತೆ ಹಾಗೂ ಇನ್ನಿತರ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಬಿ-ಸ್ಮೈಲ್ ಬನ್ನೇರುಘಟ್ಟ ರಸ್ತೆಯ ಹೊಸೂರು ರಸ್ತೆಯಿಂದ ಕೋಳಿ ಫಾರ್ಮ್ ಜಂಕ್ಷನ್‌ವರೆಗಿನ ರಸ್ತೆಯ ಸಮಗ್ರ ಅಭಿವೃದ್ಧಿ ಕೈಗೆತ್ತಿಕೊಳ್ಳಲು ಯೋಜನೆ ರೂಪಿಸಿದೆ. ಡಿಪಿಆರ್ ಸಿದ್ಧವಾದ ಕೂಡಲೇ ಕಾಮಗಾರಿ ಪ್ರಾರಂಭಿಸುವಂತೆ ಸೂಚಿಸಿದರು.
ಬಿಎಂಆರ್‌ಸಿಎಲ್ ಸಂಸ್ಥೆಯು ಡೈರಿ ಸರ್ಕಲ್‌ನಿಂದ ಕಾಳೇನ ಅಗ್ರಹಾರದವರೆಗಿನ ರಸ್ತೆಯನ್ನು ದಕ್ಷಿಣ ನಗರ ಪಾಲಿಕೆಗೆ ಹಸ್ತಾಂತರಿಸಿ ₹12.50 ಕೋಟಿಯನ್ನು ಪಾಲಿಕೆಗೆ ಜಮೆ ಮಾಡಿದೆ. ಕಾಮಗಾರಿಗಳು ಪ್ರಾರಂಭವಾಗಲು ಟೆಂಡರ್ ಅಂತಿಮಗೊಳಿಸಿ ಕೆಲಸ ವಹಿಸಿಕೊಡಲು ಸಮಯ ಬೇಕಿದೆ. ಆದ್ದರಿಂದ ಬಿಎಂಆರ್‌ಸಿಎಲ್ ಜಮೆ ಮಾಡಿರುವ ಮೊತ್ತದಿಂದ ರಸ್ತೆ ದುರಸ್ತಿಗೆ ಕಾಮಗಾರಿಯನ್ನು ತುರ್ತಾಗಿ ಕೈಗೆತ್ತಿಕೊಳ್ಳುವುದಾಗಿ ನಿರ್ದೇಶಿಸಿದರು.ಕಾಳೇನ ಅಗ್ರಹಾರದಿಂದ ಕೋಳಿ ಫಾರ್ಮ್‌ವರೆಗಿನ 3.65 ಕಿ.ಮೀ ವ್ಯಾಪ್ತಿಯ ಕಾಮಗಾರಿಯನ್ನು ಈಗಾಗಲೇ ಸಿಎಂಐಡಿಪಿ ಅಡಿಯಲ್ಲಿ ₹11.50 ಕೋಟಿ ವೆಚ್ಚದಲ್ಲಿ ಪಾಲಿಕೆಗೆ ಕೈಗೊಂಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಈ ವ್ಯಾಪ್ತಿಯ ಕೆಲಸವನ್ನು ಸದರಿ ಟೆಂಡರ್ ಅಡಿಯಲ್ಲೇ ತಕ್ಷಣವೇ ಪೂರ್ಣಗೊಳಿಸಬೇಕು ಎಂದು ಪಾಲಿಕೆಯ ಅಧಿಕಾರಿಗಳಿಗೆ ತಿಳಿಸಿದರು.
ಸಿಗ್ನಲ್ ಫ್ರೀ ಜಂಕ್ಷನ್:
ಬನ್ನೇರುಘಟ್ಟ ರಸ್ತೆಯ ವೇಗಾ ಸಿಟಿ ಮಾಲ್ ಜಂಕ್ಷನ್ ಅನ್ನು ಸಿಗ್ನಲ್ ಮುಕ್ತಗೊಳಿಸಲು ಅಂಡರ್‌ಪಾಸ್ (ಕೆಳಸೇತುವೆ) ಮತ್ತು ಮೇಲ್ಸೇತುವೆ ನಿರ್ಮಿಸುವ ಸಂಬಂಧ ಸಮಗ್ರ ಯೋಜನಾ ವರದಿ ಮತ್ತು ಅಂದಾಜು ಪಟ್ಟಿಯನ್ನು ಸಿದ್ಧಪಡಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಬಿ-ಸ್ಮೈಲ್ ತಾಂತ್ರಿಕ ನಿರ್ದೇಶಕ ಪ್ರಹ್ಲಾದ್, ಪಾಲಿಕೆ ಮುಖ್ಯ ಇಂಜಿನಿಯರ್ ಬಸವರಾಜ ಕಬಾಡೆ, ಕೆ.ವಿ.ರವಿ ಇದ್ದರು.