ಉಪವಾಸದ ಸಂಭ್ರಮ ಹೆಚ್ಚಿಸುವ ಈದುಲ್ ಫಿತ್ರ್

| Published : Apr 11 2024, 01:45 AM IST / Updated: Apr 11 2024, 06:18 AM IST

ಸಾರಾಂಶ

ರಂಜಾನಿನ ಚಂದ್ರ ದರ್ಶನವಾದರೆ ಉಪವಾಸ ಆರಂಭಿಸುವ ಜನತೆ, ಶವ್ವಾಲಿನ ಚಂದಿರ ಆಗಸದಲ್ಲಿ ಮೂಡುತ್ತಿದ್ದಂತೆಯೇ ಉಪವಾಸ ಕೊನೆಗೊಳಿಸಿ ಹಬ್ಬಕ್ಕೆ ತಯಾರಾಗುತ್ತಾರೆ.

ಈದುಲ್‌ ಫಿತ್ರ್‌. ಅಂದರೆ ಈದ್‌ ಅಥವಾ ಪೆರ್ನಾಲ್‌. ಜಾಗತಿಕ ಮುಸಲ್ಮಾನರ ಪಾಲಿಗೆ ಅತ್ಯಂತ ಶ್ರೇಷ್ಠ, ಮಹತ್ವ ಹಾಗೂ ಸಂಭ್ರಮದ ಹಬ್ಬ. ಬಿಸಿಲಿಗೆ ನೆತ್ತಿ ಸುಡುತ್ತಿದ್ದರೂ ಅನ್ನ ತ್ಯಜಿಸಿ, ಒಂದು ಹನಿ ನೀರು ಮುಟ್ಟದೆಯೇ ತಿಂಗಳ ಕಾಲ ಉಪವಾಸ ಆಚರಿಸಿದ ಮುಸ್ಲಿಮರು ಈಗ ಈದ್ ಸಂಭ್ರಮದಲ್ಲಿದ್ದಾರೆ. ರಂಝಾನಿನ ಚಂದ್ರದರ್ಶನವಾದರೆ ಉಪವಾಸ ಆರಂಭಿಸುವ ಜನತೆ, ಶವ್ವಾಲಿನ ಚಂದಿರ ಆಗಸದಲ್ಲಿ ಮೂಡುತ್ತಿದ್ದಂತೆಯೇ ಉಪವಾಸ ಕೊನೆಗೊಳಿಸಿ ಹಬ್ಬಕ್ಕೆ ತಯಾರಾಗುತ್ತಿದ್ದಾರೆ.

ರಂಝಾನ್ ಇಸ್ಲಾಮಿಕ್ ಕ್ಯಾಲೆಂಡರ್‌ನ 9ನೇ ತಿಂಗಳು. ನಮಾಝ್‌, ಹಜ್‌ನಂತೆಯೇ ಮುಸ್ಲಿಮನು ಪಾಲಿಸಲೇಬೇಕಾದ ಐದು ಕಡ್ಡಾಯ ಕರ್ಮಗಳಲ್ಲಿ ರಂಝಾನ್ ಉಪವಾಸವೂ ಒಂದು. ಅಂದರೆ ತಿಂಗಳ ಕಾಲ ಉಪವಾಸ. ಸೂರ್ಯೋದಯಕ್ಕೂ ಮುನ್ನ ಉಪಾಹಾರ ಸೇವಿಸಿದರೆ ಬಳಿಕ ಸೂರ್ಯಾಸ್ತದ ಸಮಯಕ್ಕಷ್ಟೇ ತಿನ್ನುವುದು, ಕುಡಿಯುವುದು. ಮುಂಜಾನೆ 4.30ರ ವೇಳೆಗೆ ಅನ್ನ-ಪಾನೀಯ ತ್ಯಜಿಸುವ ದೇಹಕ್ಕೆ ಒಂದು ಹನಿ ನೀರು ಸೇರಬೇಕಿದ್ದರೂ ಸಂಜೆ 6.30ರ ವರೆಗೆ ಕಾಯಬೇಕು.ಆದರೆ ಉಪವಾಸ ಬರೀ ಹಸಿವಿನ ದರ್ಶನವಾಗಿರದೆ, ದೇವ ಸ್ಮರಣೆಯ ಪ್ರತೀಕವೂ ಆಗಿರುವುದರಿಂದ ರಂಜಾನ್‌ ಉಪವಾಸವೂ ಈದ್‌ನಷ್ಟೇ ಸಂಭ್ರಮ.

ಮನ-ಮನೆ ಬೆಸೆಯುವ ಈದ್ರಂಜಾನಿನ ಎರಡು ತಿಂಗಳ ಮೊದಲೇ ಅಂದರೆ ರಜಬ್‌ ಹಾಗೂ ಶಅಬಾನ್‌ ತಿಂಗಳಿನಲ್ಲೇ ರಂಜಾನಿನ ಸಿದ್ಧತೆಗಳು ಮನೆ, ಪರಿಸರದಲ್ಲಿ ಗೋಚರಿಸತೊಡಗುತ್ತದೆ. ಮಸೀದಿ ಮಿನಾರಗಳಲ್ಲಿ ಪ್ರಾರ್ಥನೆಗಳು ಪ್ರತಿಧ್ವನಿಸುತ್ತಿರುತ್ತವೆ. ರಂಜಾನ್‌ ಬಂತೆಂದರೆ ಚಿಕ್ಕ ಮಕ್ಕಳಿಂದ ಶುರುವಾಗಿ ಮನೆಯ ಹಿರಿ ಜೀವಗಳಿಗೂ ಸಂಭ್ರಮ. ಊರಿನ ಹಾದಿ ಬೀದಿಗಳೂ ಕಳೆಗಟ್ಟುತ್ತವೆ. ವ್ಯಾಪಾರ ವಹಿವಾಟುಗಳು ವೇಗ ಪಡೆಯುತ್ತವೆ. ಹೀಗೆ ಒಂದು ತಿಂಗಳು ಉಪವಾಸ ಆಚರಿಸಿದ ಮುಸ್ಲಿಮರಿಗೆ ಈದ್‌ ಬಂತೆಂದರೆ ಡಬಲ್‌ ಖುಷಿ.

ಆಧುನಿಕತೆಯ ಭರಾಟೆ ನಡುವೆ ಅದೇನೇ ಬದಲಾಗಿದ್ದರೂ ಹಬ್ಬಗಳ ಶೈಲಿ, ಸಂಪ್ರದಾಯ ಬದಲಾಗಲ್ಲ. 29 ಅಥವಾ 30 ದಿನಗಳ ಉಪವಾಸ ಆಚರಿಸಿದ ಮುಸ್ಲಿಮರು ರಂಜಾನ್‌ನ ಕೊನೆ ದಿನ ಮುಸ್ಸಂಜೆಯಾಗುತ್ತಲೇ ಶವ್ವಾಲ್‌ ತಿಂಗಳ ಚಂದ್ರದರ್ಶನಕ್ಕೆ ಕಾದು ಕುಳಿತಿರುತ್ತಾರೆ. ಇನ್ನೇನು ಮಸೀದಿಯಲ್ಲಿ ತಕ್ಬೀರ್‌ ಧ್ವನಿಗಳು ಮೊಳಗಿತು ಅನ್ನುವಷ್ಟರಲ್ಲಿ ಹಬ್ಬಕ್ಕೆ ತಯಾರಿ ಆರಂಭಗೊಳ್ಳುತ್ತವೆ. ಈದ್‌ ಸಂಭ್ರಮ ಎಷ್ಟಿರುತ್ತೆ ಅಂದರೆ ಹೊಸ ದಿರಿಸು, ಆಭರಣ ಖರೀದಿಸುವುದರಲ್ಲೇ ರಂಜಾನಿನ ಬಹುತೇಕ ದಿನಗಳನ್ನು ಕಳೆಯುವವರೂ ಇದ್ದಾರೆ.

ಹೀಗಿದೆ ನನ್ನ ಈದ್‌

ಮುಂಜಾನೆ 5, 6 ಗಂಟೆಯಾಗುತ್ತಲೇ 9 ಗಂಟೆ ಆಯ್ತು ಎಂದು ಅಮ್ಮ ಕೂಗುವ ಶಬ್ದವೇ ನನ್ನ ಈದ್‌ನ ಆರಂಭ. ಎದ್ದು, ಹೊಸ ವಸ್ತ್ರ ಧರಿಸಿ ಮಸೀದಿ ಕಡೆ ಹೊರಟು ನಿಲ್ಲುವ ಕ್ಷಣದ ಸಂಭ್ರಮ ವರ್ಣಿಸಲಸಾಧ್ಯ. ಊರ ಗಡಿ ದಾಟಿ ಬೆಂಗಳೂರು, ಸೌದಿ, ದುಬೈ ಅಂತೆಲ್ಲಾ ಚದುರಿ ನಿಂತಿರುವ ಕುಟುಂಬಸ್ಥರು, ಸ್ನೇಹಿತರು, ನೆರೆಹೊರೆಯ ಆಪ್ತ ಜೀವಗಳೆಲ್ಲಾ ಈದ್‌ ದಿನ ಮಸೀದಿಯಲ್ಲಿ ಹಾಜರಿರುವುದು ನೋಡುವುದೇ ಕಣ್ಣಿಗೆ ಹಬ್ಬ. ತುಂಬಿ ತುಳುಕುವ ಮಸೀದಿಯಲ್ಲಿ ಈದ್‌ನ ವಿಶೇಷ ನಮಾಝ್‌ ಮುಗಿಸಿದ ಬಳಿಕ ಆರ್ಥಿಕ, ಸಾಮಾಜಿಕ, ಇನ್ಯಾವುದರ ಭೇದವಿಲ್ಲದೇ ಎಲ್ಲರೂ ಪರಸ್ಪರ ಶುಭಾಶಯ ಕೋರಿ, ಕೈಕುಲುಕಿ, ಆಲಿಂಗಿಸುವುದು ಹಬ್ಬದ ವಿಶೇಷತೆ. ಸಹೋದರರು, ಕುಟುಂಬಸ್ಥರು, ಅಕ್ಕ-ಪಕ್ಕದ ಮನೆಯವರಲ್ಲಿ ಎಂದಾದರೂ ಘಟಿಸಿರಬಹುದಾದ ಮುನಿಸು, ದ್ವೇಷ ಮರೆತು ಒಂದಾಗುವ ಅಪೂರ್ವ ಸಂಗಮಕ್ಕೆ ಈದ್‌ ಸಾಕ್ಷಿಯಾಗುತ್ತದೆ.

ಆ ಬಳಿಕ ಮನೆಗೆ ಬಂದು ತಂದೆ-ತಾಯಿ, ಸಹೋದರಿಯರಿಗೂ ಶುಭಾಶಯ ಕೋರಿ, ಸಣ್ಣ-ಪುಟ್ಟ ಮಕ್ಕಳಿಗೆಲ್ಲಾ ‘ಈದಿ’ ಹೆಸರಲ್ಲಿ ಒಂದಿಷ್ಟು ಹಣ ಕೊಟ್ಟು ಮನೆಯಿಂದ ಹೊರಟು ನಿಲ್ಲುವುದು ನೇರ ದಫನ ಭೂಮಿ ಕಡೆಗೆ. ಅಗಲಿದ ಕುಟುಂಬಸ್ಥರು, ಸ್ನೇಹಿತರು, ಊರವರ ಸಮಾಧಿ ದರ್ಶಿಸಿ, ಅವರಿಗಾಗಿ ಪ್ರಾರ್ಥಿಸುವುದು ವಾಡಿಕೆ. ಹಬ್ಬದ ಸಂಭ್ರಮದಲ್ಲಿ ಮಿಂದೇಳುವಾಗಲೂ ಅಗಲಿದ ಜೀವಗಳನ್ನು ಮರೆಯದೆ ನೆನಪಿಸಿಕೊಳ್ಳುವ, ಅವರಿಗಾಗಿ ಪ್ರಾರ್ಥಿಸುವ ಸಂಪ್ರದಾಯವೇ ಒಂದು ವಿಶೇಷ.

ಬಳಿಕ ಕುಟುಂಬ ಸವಾರಿ. ಕುಟುಂಬಸ್ಥರು, ಸಹೋದರರು, ಸ್ನೇಹಿತರ ಮನೆ ಮನೆಗೆ ತೆರಳಿ ಹಬ್ಬದ ಶುಭಾಶಯ ಕೋರುವ ವಿಶೇಷ ಕಾರ್ಯಕ್ರಮ. ತಿಂಗಳು, ವರ್ಷಗಳ ಕಾಲ ಮಾತಾಡದೇ ಇರುವ ಜೀವಗಳೊಂದಿಗೂ ಮಾತನಾಡುವಾಗ ಮುಖದಲ್ಲಿ ನಗು ಅರಳುತ್ತದೆ. ಸೋಶಿಯಲ್‌ ಮೀಡಿಯಾದ ಕಾಲದಲ್ಲೂ ವಾಟ್ಸಾಪ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಂನ ಆಚೆಗೂ ಒಂದು ಜಗತ್ತಿದೆ ಎಂದು ತೋರಿಸಿಕೊಡುವಲ್ಲಿ ಹಬ್ಬಗಳು ಮತ್ತೆ ಮತ್ತೆ ಯಶಸ್ವಿಯಾಗುತ್ತದೆ. ಒಂದಷ್ಟು ಮನೆಯಲ್ಲಿ ಶೀರ್‌ಕುರ್ಮಾ, ಪಾಯಸ ಕುಡಿದರೆ, ಮತ್ತಷ್ಟು ಮನೆಗಳಲ್ಲಿ ಬಿರಿಯಾನಿ ಘಮಘಮ. ಬಳಿಕ ದರ್ಗಾಗಳಿಗೆ ತೆರಳಿ ಪ್ರಾರ್ಥಿಸುವುದೂ, ಸಂಜೆಯಾಗುತ್ತಲೇ ವಿವಿಧ ಪ್ರವಾಸಿ ತಾಣಗಳಿಗೆ ತೆರಳುವುದೂ ಇದೆ.

ಸಾಮಾಜಿಕ‌ ಕಾಳಜಿಯ ಝಕಾತ್

ಈದ್‌ಗೂ ಝಕಾತ್‌(ಕಡ್ಡಾಯ ದಾನ)ಗೂ ಅವಿನಾಭವ ಸಂಬಂಧ. ಇಸ್ಲಾಮಿನ 5 ಕಡ್ಡಾಯ ಕರ್ಮಗಳಲ್ಲಿ ಈ ಝಕಾತ್ ಕೂಡಾ ಒಂದು. ಈದ್ ದಿನ ಧಾನ್ಯಗಳನ್ನು ದಾನ ಮಾಡಲೇಬೇಕು.‌ ಬಟ್ಟೆ, ಹಣವನ್ನೂ ಕೊಡುವ ಪರಿಪಾಠವಿದೆ. ಈ ಮೂಲಕ ಬಡವರು, ನಿರ್ಗತಿಕರು, ಅನಾಥರನ್ನು ವಿಶೇಷವಾಗಿ ಪರಿಗಣಿಸಲಾಗುತ್ತದೆ‌. ತಮ್ಮ ಆಸ್ತಿಯಲ್ಲಿ ಶೇ.2.5ರಷ್ಟನ್ನು ಶ್ರೀಮಂತನು ಈದ್ ದಿನ ಅರ್ಹರಿಗೆ ಕೊಡಲೇಬೇಕಾಗುತ್ತದೆ. ಸಮಾಜದ ಯಾರೊಬ್ಬರೂ ಹಸಿವಿನಿಂದ ಇರಬಾರದು ಎಂಬುದೇ ಝಕಾತ್‌ನ ಉದ್ದೇಶ. ಈ ಮೂಲಕ ಹಬ್ಬ ಎಂಬುದು ಉಳ್ಳವನ ಸಂತೋಷ ಮಾತ್ರವಲ್ಲ ಎಂದು ಕಲಿಸಿಕೊಡುವ ಪ್ರವಾದಿ ಮುಹಮ್ಮದರು, ಹಬ್ಬದ ಸಂತೋಷದಲ್ಲಿ ಬಡ, ನಿರ್ಗತಿಕನನ್ನೂ ಪರಿಗಣಿಸಬೇಕೆಂಬ ಸಂದೇಶ ಸಾರುತ್ತಾರೆ.

- ನಾಸಿರ್‌ ಸಜಿಪ, ಬೆಂಗಳೂರು.