ಪರಾಮರ್ಶನ- ಪ್ರೊ.ಹಂಪನಾ ಅವರ ಬಿಡಿ ಲೇಖನಗಳು, ವ್ಯಕ್ತಿಚಿತ್ರಗಳ ಸಂಕಲನ

| Published : Jul 25 2024, 01:19 AM IST

ಸಾರಾಂಶ

ಪ್ರೊ.ಹಂಪನಾ ಕೃತಿ ಮಾಲಿಕೆಯಲ್ಲಿ ಸಂಪುಟ-1 ರಲ್ಲಿ ‘ಪರಾಮರ್ಶನ’ ಗ್ರಂಥವನ್ನು ಡಾ.ಎಸ್.ಪಿ. ಪದ್ಮಪ್ರಸಾದ್ ಸಂಪಾದಿಸಿದ್ದಾರೆ. ಇದು ಹಂಪನಾ ಅವರು ಬೇರೆ ಬೇರೆ ಸಂದರ್ಭಗಳಲ್ಲಿ ಬರೆದ ಬಿಡಿ ಲೇಖನಗಳು ಹಾಗೂ ವ್ಯಕ್ಚಿಚಿತ್ರಗಳ ಸಂಕಲನ.

ಕನ್ನಡಪ್ರಭ ವಾರ್ತೆ ಮೈಸೂರು

ಪ್ರೊ.ಹಂಪನಾ ಕೃತಿ ಮಾಲಿಕೆಯಲ್ಲಿ ಸಂಪುಟ-1 ರಲ್ಲಿ ‘ಪರಾಮರ್ಶನ’ ಗ್ರಂಥವನ್ನು ಡಾ.ಎಸ್.ಪಿ. ಪದ್ಮಪ್ರಸಾದ್ ಸಂಪಾದಿಸಿದ್ದಾರೆ. ಇದು ಹಂಪನಾ ಅವರು ಬೇರೆ ಬೇರೆ ಸಂದರ್ಭಗಳಲ್ಲಿ ಬರೆದ ಬಿಡಿ ಲೇಖನಗಳು ಹಾಗೂ ವ್ಯಕ್ಚಿಚಿತ್ರಗಳ ಸಂಕಲನ.

ಕುವೆಂಪು, ಡಿ.ಎಲ್. ನರಸಿಂಹಾಚಾರ್, ತೀನಂ ಶ್ರೀಕಂಠಯ್ಯ ಅಂಥವರ ಗರಡಿಯಲ್ಲಿ ಬೆಳೆದು, ಡಾ.ಆ.ನೇ. ಉಪಾಧ್ಯೆ ಅಂಥವರ ಸಹಚರದಲ್ಲಿ ತಮ್ಮ ವಿದ್ವತನ್ನು ಹರಿತವಾಗಿಸಿಕೊಂಡು ಪಕ್ವವಾಗುತ್ತಾ ನಡೆದವರು, ಎಂಭತ್ತೇಳರ ಇಳಿವಯಸ್ಸಿನಲ್ಲಿಯೂ ಬರೆಯುತ್ತಿರುವ ಹಂಪನಾ ಅವರ ಬರೆದ ಬಿಡಿ ಲೇಖನಗಳು, ವ್ಯಕ್ತಿಚಿತ್ರಗಳು ಎಲ್ಲೆಲ್ಲೋ ಚದುರಿ ಹೋಗಿವೆ. ಅವೆಲ್ಲವೂ ಒಂದಲ್ಲ ಒಂದು ಕಾರಣಕ್ಕೆ ಅಧ್ಯಯನಕ್ಕೆ, ಪರಾಮರ್ಶಗೆ ಬೇಕಾದವು. ಅವುಗಳನ್ನು ಸಂಗ್ರಹಿಸಿ, ವರ್ಗೀಕರಿಸಿ, ಸಂಕಲಿಸಿ ಪ್ರಕಟಣೆಗೆ ಅಣಿಗೊಳಿಸುವ ಕಾರ್ಯವನ್ನು ಡಾ.ಎಸ್.ಪಿ. ಪದ್ಮಪ್ರಸಾದ್ ಕೈಗೆತ್ತಿಕೊಂಡಿದ್ದು, ಅದರ ಮೊದಲ ಸಂಪುಟವೇ ಇದಾಗಿದೆ.

ಹಂಪಿ ಕನ್ನಡ ವಿಶ್ವವಿದ್ಯಾಲಯ ಏರ್ಪಡಿಸಿದ್ದ ಶಿಖರೋಪನ್ಯಾಸ, ವಿಚಾರ ಸಂಕಿರಣ, ಇದೇ ವಿವಿಯಲ್ಲಿ ಮಾಡಿದ ಆಶಯ ಭಾಷಣಗಳು, ಇದೇ ವಿವಿಯ ಪ್ರಸಾರಾಂಗ ಪ್ರಕಟಿಸಿರುವ, ಡಾ.ಬಿ.ಎಂ. ಪುಟ್ಟಯ್ಯ ಸಂಪಾದಿಸಿರುವ ವಡ್ಡಾರಾದನೆ- ಸಾಂಸ್ಕೃತಿಕ ಮುಖಾಮುಖಿ, ಸಾಲಿಗ್ರಾಮ ಜೈನ ಮಿತ್ರ ಮಂಡಲಿಯ ಶ್ರೇಯೋಭದ್ರ ಸ್ಮರಣ ಸಂಚಿಕೆ, ಡಾ.ಕೆ.ಆರ್. ಗಣೇಶ್ ಅಭಿಂದನಾ ಗ್ರಂಥ- ಕೈದಾಳ, ಮಾತೃಶ್ರೀ ರತ್ನಮ್ಮ ಹೆಗ್ಗಡೆ ಅಭಿಂದನಾ ಗ್ರಂಥ- ರತ್ನಶ್ರೀ, ಶ್ರವಣಬೆಳಗೊಳದ ಯುಗಯಾತ್ರೀ, ಡಾ.ಎಸ್.ಪಿ. ಪಾಟೀಲ ಸಂಪಾದಿಸಿರುವ ತೀರ್ಥವಂದನೆ- ಸ್ಮರಣ ಸಂಚಿಕೆ, ಡಾ.ಸಾ.ಶಿ. ಮರುಳಯ್ಯ ಅವರ ಅಭಿನಂದನಾ ಗ್ರಂಥ- ಅಭಿಜ್ಞ, ಡಿ.ಎಲ್. ನರಸಿಂಹಾಚಾರ್ ಗೌರವ ಗ್ರಂಥ- ಉಪಾಯನ, ಪ್ರೊ.ಜಿ.ಎಸ್. ಸಿದ್ದಲಿಂಗಯ್ಯಅವರ ಅಭಿನಂದನಾ ಗ್ರಂಥ- ನಿಸ್ಸೀಮ, ಡಿ.ಎನ್. ಅಕ್ಕಿ ಅವರ ಅಭಿನಂದನಾ ಗ್ರಂಥ- ಧವಳಕ್ಕೆ ಬರೆದಿರುವ ಲೇಖನಗಳು ಇಲ್ಲಿವೆ.

ತಾಯಿನುಡಿ- ಮಾಸಪತ್ರಿಕೆಯ ವಿಶೇಷ ಸಂಚಿಕೆ, ಆ.ನೇ. ಉಪಾಧ್ಯೆ ಅವರ ಕನ್ನಡ ವಾಜ್ಮಯ, ಭುಜಬಲಿ ಶಾಸ್ತ್ರಿಗಳ ಸಂಸ್ಕೃತ ವಾಜ್ಮಯಕ್ಕೆ ಜೈನಕವಿಗಳ ಕಾಣಿಗೆ ಗ್ರಂಥ, ಡಾ.ಎಚ್.ಎ. ಪಾರ್ಶ್ವನಾಥ್ ಅಭಿನಂದನಾ ಗ್ರಂಥ ರತ್ನಕರಂಡಕ್ಕೆ ಬರೆದ ಕವಿತೆ ಅಲ್ಲದೇ ಪಾಟೀಲ ಪುಟ್ಟಪ್ಪ, ಬುದ್ದಣ್ಣ ಹಿಂಗಮಿರೆ, ಬಾಳೇಶ ಅವರನ್ನು ಕುರಿತು ಬರೆದ ಕವಿತೆಗಳಿವೆ.

ಈ ಕೃತಿಯು ಎರಡು ಭಾಗಗಳಲ್ಲಿದೆ. ಸಂಕೀರ್ಣದಲ್ಲಿ ಪ್ರಾಕೃತ- ಕನ್ನಡಃ ಪ್ರೇರಣೆ, ಪ್ರಭಾವ, ಪರಿಕಲ್ಪನೆ, ಕರಾವಳಿ ಕರ್ನಾಟಕದ ಜೈನ ಅರಸು ಮನೆತನಗಳು, ಜೈನ ವಾಸ್ತು ಶಿಲ್ಪ, ವಿನ್ಯಾಸ, ಕವಿ ಕಲ್ಯಾಣಕೀರ್ತಿಯ ಕೃತಿಗಳು, ಗೋಸಾಲ ಮತ್ತು ಅದ್ದ, ಬಸದಿಗಳು, ಕಟವಪ್ರ, ಜಿನಸೇವಾಚಾರ್ಯರ ಮಹಾಪುರಾಣ, ಕವಿ ಬಂಧುವರ್ಮನ ಇತಿವೃತ್ತ, ವಡ್ಡಾರಾಧನೆ- ಚಾರಿತ್ರಿಕ ಹಾಗೂ ಸಾಂಸ್ಕೃತಿಕ ಪ್ರಜ್ಞೆ, ಬಾಹುಬಲಿ- ರೂಪ, ಸ್ವರೂಪ, ವಿಶ್ವರೂಪ, ಕರ್ನಾಟಕದಲ್ಲಿ ಶ್ವೇತಾಂಬರ ಜೈನ ಸಮಾಜ, ಶಾಸನಗಳಲ್ಲಿ ನುನ್ನವಂಶ, ಬಿಚ್ಚಳಿಸು, ಪ್ರೊ.ಜಿ.ಎಸ್. ಸಿದ್ದಲಿಂಗಯ್ಯನವರ ಎರಡು ಕೃತಿಗಳು, ರಾಷ್ಟ್ರಕೂಟರ ಕಾಲದ ಪ್ರಾಚೀನ ಜಿನಾಲಯ ಸಂಶೋಧನೆ ಕುರಿತ ಲೇಖನಗಳಿವೆ.

ಎರಡನೇ ಭಾಗದಲ್ಲಿ ಡಿ. ದೇವರಾಜ ಅರಸು, ಡಾ.ಆ.ನೆ. ಉಪಾಧ್ಯೆ, ಪಂಡಿತ ಕೆ. ಭುಜಬಲಿ ಶಾಸ್ತ್ರಿಗಳು, ಡಾ.ಎಚ್.ಎ. ಪಾರ್ಶ್ವನಾಥ್, ಕನ್ನಡ ಕೋಟೆ ಕಾಪು ಪಾಪು, ಸೃಜನ ಸಾಮರ್ಥ್ಯಕ್ಕೆ ಮಣಿಹ, ಮುಗ್ಧ ಬಾಳೇಶ ಅವರನ್ನು ಕುರಿತ ವ್ಯಕ್ತಿಚಿತ್ರಗಳಿವೆ. ಸಾಹಿತ್ಯಾಸಕ್ತರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳಿಗೆ ಉಪಯುಕ್ತ ಪರಾಮರ್ಶನ ಗ್ರಂಥ ಇದಾಗಿದೆ.

ಮೈಸೂರಿನ ಸಂವಹನ ಪ್ರಕಾಶಕರು ಈ ಕೃತಿಯನ್ನು ಪ್ರಕಟಿಸಿದ್ದು, ಆಸಕ್ತರು ಡಿ.ಎನ್. ಲೋಕಪ್ಪ, ಮೊ. 99026 39593 ಸಂಪರ್ಕಿಸಬಹುದು.

28ರಂದು ಬಿಡುಗಡೆ:

ಪ್ರೊ.ಹಂಪನಾ ಕೃತಿ ಮಾಲಿಕೆ ಪರಾಮರ್ಶನ ಪುಸ್ತಕವನ್ನು ಜು.28 ರಂದು 10.30ಕ್ಕೆ ಜೆಎಲ್ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಹಂಪಿ ಕನ್ನಡ ವಿವಿ ವಿಶ್ರಾಂತ ಕುಲಪತಿ ಡಾ.ಹೀ.ಚಿ. ಬೋರಲಿಂಗಯ್ಯ ಬಿಡುಗಡೆ ಮಾಡುವರು. ಕುವೆಂಪು ಭಾಷಾ ಭಾರತಿ ಅಧ್ಯಕ್ಷ ಚನ್ನಪ್ಪ ಕಟ್ಟಿ ಅಧ್ಯಕ್ಷತೆ ವಹಿಸುವರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರೊ.ಸಿ.ನಾಗಣ್ಣ, ಚಾಮುಂಡರಾಯ ಪ್ರಶಸ್ತಿ ಪುರಸ್ಕೃತ ಪ್ರೊ.ಪ್ರೀತಿ ಶುಭಚಂದ್ರ ಅವರನ್ನು ಸನ್ಮಾನಿಸಲಾಗುವುದು.ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ ಮುಖ್ಯಅತಿಥಿಯಾಗಿರುವರು. ಸಂವಹನ ಪ್ರಕಾಶಕ ಡಿ.ಎನ್. ಲೋಕಪ್ಪ ಉಪಸ್ಥಿತರಿರುವರು. ಕನ್ನಡ ಸಾಹಿತ್ಯ ಕಲಾಕೂಟ ಅಧ್ಯಕ್ಷ ಎಂ. ಚಂದ್ರಶೇಖರ್ ಆಶಯ ಭಾಷಣ ಮಾಡುವರು.