ಸಾರಾಂಶ
ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ಸಾರ್ವಜನಿಕರಿಗೆ ಸೂಚನೆ
ಕನ್ನಡಪ್ರಭ ವಾರ್ತೆ ಬೇಲೂರುಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ರಸ್ತೆ ಸುರಕ್ಷತೆಯ ಬಗ್ಗೆ ಪೊಲೀಸ್ ಇಲಾಖೆಯಿಂದ ಜಾಗೃತಿ ಮೂಡಿಸಲಾಯಿತು.
ಪಟ್ಟಣದ ನೆಹರೂ ನಗರ ಪೊಲೀಸ್ ಠಾಣೆಯಲ್ಲಿ ಲೋಕೋಪಯೋಗಿ ಇಲಾಖೆ ಹಾಗೂ ಪೊಲೀಸ್ ಇಲಾಖೆ,ಕೆ ಎಸ್ ಆರ್ ಟಿ ಸಿ ವಾಹನ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆ ಬಗ್ಗೆ ಮಾಹಿತಿ ನೀಡಿ ಮಾತನಾಡಿದ ವೃತ್ತ ನಿರೀಕ್ಷಕ ಶ್ರೀಕಾಂತ್, ಪೊಲೀಸ್ ಇಲಾಖೆ ನಿರ್ದೇಶನದಂತೆ ಸವಾರರು ರಸ್ತೆ ಸುರಕ್ಷತೆಯನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಈಗಾಗಲೇ ರಸ್ತೆ ಸುರಕ್ಷತೆಯ ಬಗ್ಗೆ ಹಾಗೂ ವಾಹನ ಸವಾರರ ಹಿತದೃಷ್ಟಿಯಿಂದ ಹತ್ತು ಹಲವಾರು ಜಾಗೃತಿ ಶಿಬಿರ ಮಾಡಿದರೂ ಅದು ಕೇವಲ ಜಾಗೃತಿಗೆ ಸೀಮಿತವಾಗುತ್ತಿರುವುದು ಬೇಸರದ ಸಂಗತಿ. ನಿಷೇದಿತ ಸ್ಥಳಗಳಲ್ಲಿ ವಾಹನ ನಿಲುಗಡೆ, ೧೮ ವರ್ಷದೊಳಗೆ ಇರುವ ಮಕ್ಕಳಿಗೆ ವಾಹನ ನೀಡುವುದು, ಹೆಲ್ಮೆಟ್ ಇಲ್ಲದೆ ವಾಹನದಲ್ಲಿ ಸಂಚರಿಸುವುದು, ಸರಿಯಾದ ದಾಖಲಾತಿ ಇಲ್ಲದೆ ವಾಹನ ಚಲಾಯಿಸುವುದು ಅಪರಾಧವಾಗಿದೆ. ಇಂತಹ ಅಪರಾಧಗಳಿಗೆ ದಂಡ ಹಾಗೂ ಕಾನೂನು ಚೌಕಟ್ಟಿನಲ್ಲಿ ಶಿಕ್ಷೆಗೆ ಒಳಪಡುವುದರಿಂದ ಕಡ್ಡಾಯವಾಗಿ ಎಲ್ಲರೂ ಕಾನೂನಿನ ಸುತ್ತೋಲೆಗಳನ್ನು ಪಾಲನೆ ಮಾಡಬೇಕು ಎಂದು ತಿಳಿಸಿದರು.ಪ್ರತಿನಿತ್ಯ ವಾಹನ ಸವಾರರಿಗೆ ಈಗಾಗಲೇ ನಿರ್ದಿಷ್ಟ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಹೋಗಲು ಅನುಮತಿಯಿದ್ದರೂ ಅಗತ್ಯಕ್ಕಿಂತ ಹೆಚ್ಚಾಗಿ ಪ್ರಯಾಣಿಕರನ್ನು ತುಂಬುವುದು ಅಪರಾಧವಾಗಿದ್ದು, ಅಂತಹ ವಾಹನಗಳು ಕಂಡುಬಂದರೆ ಅವುಗಳನ್ನು ಜಪ್ತಿ ಮಾಡಲಾಗುವುದು. ಸಾರ್ವಜನಿಕರು ಈಗಾಗಲೇ ಜೆಪಿ ನಗರದ ಬಳಿ ರಸ್ತೆ ಉಬ್ಬುಗಳನ್ನು ನಿರ್ಮಿಸಲು ನಮಗೆ ಮನವಿ ಸಲ್ಲಿಸಿದ್ದು, ಶಾಲೆಗಳ ಬಳಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಮುಂದಿನ ದಿನಗಳಲ್ಲಿ ಯಾವುದೇ ದ್ವಿಚಕ್ರ ವಾಹನ ಸವಾರರು ಸರಿಯಾದ ದಾಖಲಾತಿ ಹಾಗೂ ಮೂವರು ಸವಾರರನ್ನು ಕೂರಿಸಿಕೊಂಡು ವಾಹನ ಚಲಾಯಿಸಿದರೆ ಆ ವಾಹನದ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಆಟೋ ಹಾಗೂ ಟ್ಯಾಕ್ಸಿ ಚಾಲಕರು ಸಾರ್ವಜನಿಕರು ಮತ್ತು ಪ್ರವಾಸಿಗರ ಜೊತೆ ಸೌಜನ್ಯದಿಂದ ವರ್ತಿಸುವಂತೆ ಮನವಿ ಮಾಡಿದ್ದಲ್ಲದೆ ಹೊರ ರಾಜ್ಯಗಳಿಗೆ ಹೋಗುವ ಸಂದರ್ಭದಲ್ಲಿ ಇಲಾಖೆಗೆ ಮಾಹಿತಿ ನೀಡುವಂತೆಯೂ ಸೂಚಸಿದರು.ಪಿಎಸ್ಐ ಪ್ರವೀಣ್ ಕುಮಾರ್, ಶಂಕರಪ್ಪ, ಎಇಇ ಕಾಂಬಳಿ, ಪುರಸಭೆ ಸದಸ್ಯರಾದ ಫಯಾಜ್, ತೌಫಿಕ್, ಟ್ಯಾಕ್ಸಿ ಹಾಗೂ ವಾಹನ ಮಾಲೀಕರ ಸಂಘದ ಅಧ್ಯಕ್ಷ ಯಮಸಂಧಿ ಪಾಪಣ್ಣ ಸೇರಿದಂತೆ ಇತರರು ಹಾಜರಿದ್ದರು.