‘ದಿನಕ್ಕೆ ನೂರು ರೂಪಾಯಿ ಖರ್ಚಾದರೆ ಅದೇನು ಮಹಾ?’ ಎಂದು ನಾವೆಲ್ಲರೂ ಅಂದುಕೊಳ್ಳುವುದು ಸಹಜ. ಆಫೀಸ್ ದಾರಿಯಲ್ಲಿ ಕುಡಿಯುವ ಎರಡು ಕಪ್ ಕಾಫಿ, ಸಂಜೆಯ ಬೇಕರಿ ಸ್ನ್ಯಾಕ್ಸ್, ಇಲ್ಲವೇ ಆನ್‌ಲೈನ್‌ನಲ್ಲಿ ಆರ್ಡರ್ ಮಾಡುವ ಕೂಲ್ ಡ್ರಿಂಕ್ಸ್ -ಇವೆಲ್ಲವೂ ನಮ್ಮ ಗಮನಕ್ಕೇ ಬರದಂತೆ ಜೇಬಿನಿಂದ ಜಾರುವ ಚಿಲ್ಲರೆ ಕಾಸುಗಳು. ದಿನಕ್ಕೆ ₹100ರಷ್ಟು ಖರ್ಚು ಮಾಡಿಸುವ ಸಣ್ಣ ಚಟಗಳು ದೀರ್ಘಾವಧಿಯಲ್ಲಿ ನಮ್ಮಿಂದ ಒಂದು ಕೋಟಿ ರೂಪಾಯಿಗೂ ಮೀರಿದ ನಿಧಿಯನ್ನು ಕಸಿದುಕೊಳ್ಳುತ್ತಿವೆ ಎಂದರೆ ನಂಬುತ್ತೀರಾ?
ಲ್ಯಾಟೆ ಫ್ಯಾಕ್ಟರ್
ಜಾಗತಿಕ ಹಣಕಾಸು ತಜ್ಞ ಡೇವಿಡ್ ಬ್ಯಾಚ್ ಈ ಗೊತ್ತಿಲ್ಲದೆ ಆಗುವ ಖರ್ಚುಗಳ ಪ್ರವೃತ್ತಿಯನ್ನು ‘ದಿ ಲ್ಯಾಟೆ ಫ್ಯಾಕ್ಟರ್’ ಎಂದು ಕರೆಯುತ್ತಾರೆ. ದೈನಂದಿನ ಬದುಕಿನಲ್ಲಿ ನಮಗೆ ಅಷ್ಟಾಗಿ ಅನಿವಾರ್ಯವಲ್ಲದ, ಆದರೆ ಕೇವಲ ಅಭ್ಯಾಸವಾಗಿಬಿಟ್ಟಿರುವ ಇಂತಹ ಸಣ್ಣಪುಟ್ಟ ಖರ್ಚುಗಳು ದಿನಕ್ಕೆ ₹100 ವ್ಯರ್ಥವಾದರೆ, ಅದು ತಿಂಗಳಿಗೆ ₹3,000 ಮತ್ತು ವರ್ಷಕ್ಕೆ ಬರೋಬ್ಬರಿ ₹36,000 ಆಗುತ್ತದೆ. ಮೇಲ್ನೋಟಕ್ಕೆ ವರ್ಷಕ್ಕೆ ₹36,000 ದೊಡ್ಡ ಮೊತ್ತವಲ್ಲ ಎನಿಸಬಹುದು. ಆದರೆ ಈ ಮೊತ್ತವನ್ನು ಖರ್ಚು ಮಾಡುವ ಬದಲು ಶಿಸ್ತುಬದ್ಧವಾಗಿ ಹೂಡಿಕೆ ಮಾಡಿದರೆ ಅದು ಸೃಷ್ಟಿಸುವ ಸಂಪತ್ತು ಅದ್ಭುತ.
₹3,000 ಅನ್ನು ಬೆಳೆಸುವುದು ಹೇಗೆ
ಈ ದಿನದ ₹100 ಅಥವಾ ತಿಂಗಳ ₹3,000 ಉಳಿತಾಯವನ್ನು ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ ಎಸ್‌ಐಪಿ ಮೂಲಕ ಹೂಡಿಕೆ ಮಾಡುತ್ತಾ ಬಂದರೆ, ವಾರ್ಷಿಕ ಸರಾಸರಿ ಶೇ.12 ರಷ್ಟು ಆದಾಯದ ಅಂದಾಜಿನಲ್ಲಿ ಚಕ್ರಬಡ್ಡಿಯ ಶಕ್ತಿ ಹೇಗೆ ಕೆಲಸ ಮಾಡುತ್ತದೆ ಎಂಬುದು ರೋಚಕ. ಹತ್ತು ವರ್ಷಗಳ ಅವಧಿಯಲ್ಲಿ ನೀವು ಹೂಡುವ ₹3.6 ಲಕ್ಷದ ಅಸಲು ಸುಮಾರು ₹6.97 ಲಕ್ಷವಾಗಿ ಬೆಳೆಯುತ್ತದೆ. ಇಪ್ಪತ್ತು ವರ್ಷಗಳಲ್ಲಿ ನಿಮ್ಮ ₹7.2 ಲಕ್ಷದ ಅಸಲು ₹30 ಲಕ್ಷದ ನಿಧಿಯಾಗುತ್ತದೆ. ಅದೇ ಹೂಡಿಕೆಯನ್ನು ಮೂವತ್ತು ವರ್ಷಗಳವರೆಗೆ ಮುಂದುವರಿಸಿದರೆ, ನಿಮ್ಮ ಒಟ್ಟು ₹10.8 ಲಕ್ಷದ ಅಸಲು ಬರೋಬ್ಬರಿ ₹1.06 ಕೋಟಿ ರೂಪಾಯಿಗೂ ಅಧಿಕ ಮೊತ್ತವಾಗಿ ಬದಲಾಗುತ್ತದೆ. ಕೇವಲ ದಿನದ ನೂರು ರೂಪಾಯಿ ಚಿಲ್ಲರೆ ಕಾಸು ನಿಮ್ಮನ್ನು ಕೋಟ್ಯಧಿಪತಿಯನ್ನಾಗಿ ಮಾಡಬಲ್ಲ ಶಕ್ತಿ ಹೊಂದಿದೆ.
ದಿನದ ₹100 ಹೇಗೆ ಪೋಲಾಗುತ್ತಿದೆ?
ಆನ್‌ಲೈನ್‌ನಲ್ಲಿ ತರಿಸುವ ಆಹಾರ, ಡೆಲಿವರಿ ಹಾಗೂ ಪ್ಲಾಟ್‌ಫಾರ್ಮ್ ಶುಲ್ಕಗಳು, ವೀಕ್ಷಿಸದೇ ಇರುವ ಓಟಿಟಿ ಆ್ಯಪ್‌ಗಳ ಚಂದಾದಾರಿಕೆ ಹಣ, ₹500 ಕ್ಕೆ ₹50 ರಿಯಾಯಿತಿ ಸಿಗುತ್ತದೆ ಎಂಬ ಕಾರಣಕ್ಕೆ ಅಗತ್ಯವಿಲ್ಲದಿದ್ದರೂ ಮಾಡುವ ಆನ್‌ಲೈನ್ ಶಾಪಿಂಗ್ಇ -ವೆಲ್ಲವೂ ನಮ್ಮ ಉಳಿತಾಯಕ್ಕೆ ಕನ್ನ ಹಾಕುತ್ತಿವೆ.
ಆಸೆಗಳನ್ನು ಕೊಲ್ಲಬೇಕಿಲ್ಲ, ಬೇಕಿರುವುದು ಜಾಣ್ಮೆ
ಹಾಗೆಂದು ಜೀವನದ ಸಣ್ಣಪುಟ್ಟ ಸಂತೋಷಗಳನ್ನು ಕೊಲ್ಲಬೇಕೆಂದಿಲ್ಲ. ಬೇಕಿರುವುದು ಕೇವಲ ಹಣಕಾಸಿನ ಜಾಣ್ಮೆ. ಮೊಬೈಲ್‌ನ ಯುಪಿಐ ವಹಿವಾಟುಗಳನ್ನು ವಾರಕ್ಕೊಮ್ಮೆ ಗಮನಿಸಿ ಅನಗತ್ಯ ಸಣ್ಣ ಖರ್ಚುಗಳನ್ನು ಗುರುತಿಸುವುದು, ಸಂಬಳವಾದ ಮೊದಲ ದಿನವೇ ₹2,000 ದಿಂದ ₹3,000 ಮೊತ್ತವನ್ನು ಹೂಡಿಕೆಗೆ ಆಟೋ-ಡೆಬಿಟ್ ಆಗುವಂತೆ ಮಾಡುವುದು ಮತ್ತು ಮನೆಯಿಂದಲೇ ಕಾಫಿ ಕೊಂಡೊಯ್ಯುವಂತಹ ಸಣ್ಣಪುಟ್ಟ ಬದಲಾವಣೆಗಳನ್ನು ರೂಢಿಸಿಕೊಂಡರೆ ಸಾಕು.
