ಕನ್ನಡಪ್ರಭ ವಾರ್ತೆ ಅಥಣಿ
ಮಕ್ಕಳಿಗೆ ಕೇವಲ ಹೆಚ್ಚು ಅಂಕಗಳಿಸುವ ಶಿಕ್ಷಣ ನೀಡಿದರೇ ಸಾಲದು, ಅವರಿಗೆ ಒಳ್ಳೆಯ ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಕಲಿಸುವುದರ ಜೊತೆಗೆ ಅವರಲ್ಲಿರುವ ಕೌಶಲ್ಯ ಗುರುತಿಸಿ, ಪ್ರೋತ್ಸಾಹಿಸಿದಾಗ ಸಾಧಕರಾಗಿ ಹೊರಹೊಮ್ಮಲು ಸಾಧ್ಯ ಎಂದು ಐಪಿಎಸ್ ಅಧಿಕಾರಿ ರವೀಂದ್ರ ಗಡಾದೆ ಹೇಳಿದರು.ಇಲ್ಲಿನ ಶಿವಣಗಿ ಸಾoಸ್ಕೃತಿಕ ಭವನದಲ್ಲಿ ಚಲವಾದಿ (ಬಲಗೈ) ಸಮುದಾಯ ನೌಕರರ ಸಂಘದಿಂದ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಅಂಕ ಗಳಿಕೆ ಮಾನದಂಡವಲ್ಲ, ಮುಖ್ಯವಾಗಿ ಅಂಕಗಳ ಜೊತೆಗೆ ಜ್ಞಾನ, ಸಂಸ್ಕಾರ ಮತ್ತು ಸಮಾಜದ ಬಗ್ಗೆ ಕಾಳಜಿ ಬೆಳೆಸಿಕೊಳ್ಳಬೇಕು. ಶಿಕ್ಷಣವು ನಮ್ಮ ಬದುಕನ್ನು ಮಾತ್ರವಲ್ಲ ಇಡೀ ಸಮಾಜವನ್ನು ಬದಲಾಯಿಸುವ ಶಕ್ತಿ ಹೊಂದಿದೆ. ಡಾ.ಬಿ.ಆರ್.ಅಂಬೇಡ್ಕರ್ ಹೇಳಿದಂತೆ ಶಿಕ್ಷಣ ಸಂಘಟನೆ ಹೋರಾಟ ಈ ಮೂರು ಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯಾವುದೇ ಗುರಿ ಮುಟ್ಟಲು ಸಾಧ್ಯ ಎಂದು ತಿಳಿಸಿದರು.ಚಲವಾದಿ ಸಮುದಾಯ ನೌಕರರ ಸಂಘದಿಂದ ಹಮ್ಮಿಕೊಂಡಿದ್ದ ಹಮ್ಮಿಕೊಂಡಿರುವ ಈ ಪ್ರತಿಭಾ ಪುರಸ್ಕಾರ ಅನೇಕ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಲಿದೆ. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ಸಮುದಾಯದ ಮಕ್ಕಳು ಕೇವಲ ನೌಕರರಾಗದೆ ಆಡಳಿತಗಾರರಾಗಬೇಕು. ಇದಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಗಮನ ಹರಿಸಿ ನಿಮ್ಮ ಯಶಸ್ಸು ಇಡೀ ಸಮಾಜಕ್ಕೆ ಮಾದರಿಯಾಗುತ್ತದೆ. ಪೋಷಕರು ಮಕ್ಕಳಿಗೆ ಒತ್ತಡ ಹೇರದೆ ಅವರ ಆಸಕ್ತಿಗೆ ಬೆಂಬಲ ನೀಡಬೇಕು ಎಂದು ಸಲಹೆ ನೀಡಿದರು.ಬೆಂಗಳೂರಿನ ಅಕ್ಕ ಐಎಎಸ್ ಅಕಾಡೆಮಿಯ ನಿರ್ದೇಶಕ ಡಾ.ಶಿವಕುಮಾರ ಮಾತನಾಡಿ, ವಿದ್ಯಾರ್ಥಿಗಳು ಪ್ರತಿದಿನ 6 ಗಂಟೆ ಶ್ರದ್ಧೆಯಿಂದ ಅಭ್ಯಾಸ ಮಾಡಿ ಡಾ.ಬಿಯರ್ ಅಂಬೇಡ್ಕರ್ ಅವರಂತೆ ವಿಶೇಷ ಸಾಧನೆ ಮಾಡಿದಾಗ ಅವರಿಗೆ ನಾವು ನಿಜವಾದ ಗೌರವ ಸಲ್ಲಿಸಿದಂತೆ. ಅಂಬೇಡ್ಕರ್ ಹೇಳಿರುವ ಶೈಕ್ಷಣಿಕ ವಿಚಾರಧಾರೆಗಳನ್ನು ಅರಿತುಕೊಂಡು ಪ್ರತಿಯೊಬ್ಬರೂ ಶಿಕ್ಷಣ ಪಡೆಯಲು ಮುಂದಾಗಬೇಕು. ಪಾಲಕರು ಸಹ ತಮ್ಮ ಮಕ್ಕಳ ವಿದ್ಯಾಭ್ಯಾಸದ ಕಡೆ ವಿಶೇಷ ಗಮನ ಹರಿಸಬೇಕು. ಅಂಬೇಡ್ಕರ್ ಅವರನ್ನು ಕೇವಲ ಮೆರವಣಿಗೆಯಲ್ಲಿ ಕಾಣದೆ ಬರವಣಿಗೆಯಲ್ಲಿ ಕಾಣಬೇಕು. ಪುತ್ತಳಿಯಲ್ಲಿ ಕಾಣದೆ ಪುಸ್ತಕದಲ್ಲಿ ಕಾಣಬೇಕು ಎಂದು ತಿಳಿಸಿದರು.ಚಲವಾದಿ ಸಮುದಾಯದ ನೌಕರ ಸಂಘದ ಅಧ್ಯಕ್ಷ ಪ್ರಸ್ತಾವಿಕವಾಗಿ ಮಹಾಲಿಂಗ ಮೇತ್ರಿ ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಪ್ರತಿಭಾ ಪುರಸ್ಕಾರ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಸಹಾಯ ಸಹಕಾರ ನೀಡಿದ ಸಂಘದ ಎಲ್ಲ ಸದಸ್ಯರಿಗೆ ಮತ್ತು ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಇದೇ ಸಂದರ್ಭದಲ್ಲ ಶೇ.80 ಕ್ಕಿಂತ ಅಧಿಕ ಪ್ರತಿಶತ ಪಡೆದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳನ್ನು ಸನ್ಮಾನ ಮಾಡಿ ಸತ್ಕರಿಸಿದರು.ಈ ಸಂದರ್ಭದಲ್ಲಿ ಬಂತೇಜೀ ಪ್ರಜ್ಞಾಭೋಧಿ ಥೆರೋ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ವಿಲಾಸ ಕಾಂಬಳೆ, ಚಲವಾದಿ ಸಮುದಾಯ ನೌಕರರ ಸಂಘದ ಕಾರ್ಯದರ್ಶಿ ಮಹಾಂತೇಶ ಕಾಂಬಳೆ, ಅಪ್ಪಾಸಾಬ ಸೂರ್ಯವಂಶಿ, ಖಜಾಂಚಿ ನಾಗರಾಜ ಕಾಂಬಳೆ, ಸದಸ್ಯರಾದ ಭರತ ಕಾಂಬಳೆ, ಶಿವಾನಂದ ಮೇಲ್ಗಡೆ, ಸಂಜಯ ಸಾಗರ, ಮಲ್ಲೇಶ ಗೊಂದಳೆ, ಉಮೇಶ ಪಾಂಗಿ, ಅಜೀತ ಕುಟಗೊಳಿ, ಕುಮಾರ ಸತ್ತಿಕರ, ವಿಜಯ ಕನಾಳ ಸೇರಿದಂತೆ ತಾಲೂಕಿನ ದಲಿತಪರ ಸಂಘಟನೆಗಳು ಹಾಗೂ ವಿದ್ಯಾರ್ಥಿಗಳು ಪಾಲಕರು ಉಪಸ್ಥಿತರಿದ್ದರು. ಮಹಾಲಿಂಗ ಮೇತ್ರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾಲಿಂಗ ಮೇತ್ರಿ ಸ್ವಾಗತಿಸಿದರು. ಶಿವಾನಂದ ಮೇಲ್ಗಡೆ ನಿರೂಪಿಸಿ, ವಂದಿಸಿದರು.