ರಾಜಕೀಯ ಪಕ್ಷಗಳ ಉಚಿತ ಕೊಡುಗೆ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ : ಸುಪ್ರೀಂ ಕೋರ್ಟ್‌

| Published : Sep 19 2024, 01:46 AM IST / Updated: Sep 19 2024, 05:29 AM IST

ಸಾರಾಂಶ

ರಾಜಕೀಯ ಪಕ್ಷಗಳು ಚುನಾವಣಾ ಸಂದರ್ಭದಲ್ಲಿ ನೀಡುವ ಉಚಿತ ಘೋಷಣೆಗಳ ಕುರಿತು ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಆಲಿಸುವ ಭರವಸೆ ನೀಡಿದೆ. 

ನವದೆಹಲಿ: ಚುನಾವಣಾ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಉಚಿತಗಳ ಘೋಷಣೆ ಮಾಡುವ ವಿಷಯ ಬಹು ಮುಖ್ಯವಾದುದು ಎಂದಿರುವ ಸುಪ್ರೀಂ ಕೋರ್ಟ್‌, ಅವುಗಳ ವಿರುದ್ಧ ಸಲ್ಲಿಕೆಯಾದ ಅರ್ಜಿಗಳನ್ನು ಆಲಿಸುವುದಾಗಿ ಭರವಸೆ ನೀಡಿದೆ. 

ಈ ಕುರಿತ ಅರ್ಜಿಗಳು ದಿನದ ವ್ಯವಹಾರದ ಪಟ್ಟಿಯಲ್ಲಿ ಇದ್ದು, ಅವುಗಳನ್ನು ಆಲಿಸಬೇಕು ಎಂದು ಈ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ವಕೀಲ ಅಶ್ವಿನಿ ಉಪಾಧ್ಯಾಯ ಅವರು ಮುಖ್ಯ ನ್ಯಾ। ಡಿ.ವೈ. ಚಂದ್ರಚೂಡ್‌, ನ್ಯಾ। ಜೆ.ಬಿ. ಪರ್ದಿವಾಲ್‌ ಮತ್ತು ಮನೋಜ್‌ ಮಿಶ್ರಾ ಅವರ ಪೀಠಕ್ಕೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ, ‘ಅವುಗಳು ಮಹತ್ವದ್ದಾಗಿದ್ದು, ತಿರಸ್ಕರಿಸುವುದಿಲ್ಲ’ ಎಂಬ ಭರವಸೆ ನೀಡಿದ್ದಾರೆ.

‘ಚುನಾವಣಾ ಆಯೋಗ ತನ್ನ ಅಧಿಕಾರ ಬಳಸಿ ಉಚಿತಗಳನ್ನು ಘೋಷಿಸುವ ಪಕ್ಷಗಳ ಚಿಹ್ನೆಯನ್ನು ಸ್ಥಗಿತಗೊಳಿಸಿ ನೋಂದಣಿ ರದ್ದು ಮಾಡಬೇಕು. ಜನರನ್ನು ಒಲಿಸಿಕೊಳ್ಳಲು ತೆಗೆದುಕೊಳ್ಳಲಾಗುವ ಜನಪರ ಕ್ರಮಗಳು ಸಂವಿಧಾನವನ್ನು ಉಲ್ಲಂಘಿಸುವುದರಿಂದ ಅವುಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಈ ಪದ್ಧತಿಯು ಅಧಿಕಾರದಲ್ಲಿ ಉಳಿಯಲು ಜನರಿಗೆ ಲಂಚ ನೀಡಿದಂತೆ. ಪ್ರಜಾಪ್ರಭುತ್ವದ ತತ್ವ ಮತ್ತು ಆಚರಣೆಗಳನ್ನು ಸಂರಕ್ಷಿಸಲು ಇದನ್ನು ತಡೆಯಬೇಕು’ ಎಂದು ಉಪಾಧ್ಯಾಯ ಸಲ್ಲಿಸಿದ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.