ನವಭಾರತದ ಶಕ್ತಿ ಮಂತ್ರ ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ’ - ಗಾಂಧೀಜಿ ತತ್ವಗಳಿಗೆ ನೂರರ ಸತ್ವ

| Published : Jan 19 2025, 12:26 PM IST

bhatak mian

ಸಾರಾಂಶ

ನವಭಾರತದ ಶಕ್ತಿ ಮಂತ್ರ ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ’ । ಸಂವಿಧಾನ ರಕ್ಷಣೆ ಸಂಕಲ್ಪಕ್ಕೆ 21ರಂದು ಬೆಳಗಾವಿ ಸಮಾವೇಶ

-ಡಿ.ಕೆ.ಶಿವಕುಮಾರ್

-ಅಧ್ಯಕ್ಷರು

-ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ

ಬಾಪು ಅವರ ಪ್ರತಿಮೆ ನಿರ್ಮಾಣಕ್ಕೆ ಸುಮಾರು 20 ಟನ್‌ ಕಂಚು ಬಳಸಲಾಗಿದೆ. ಇದು ನೆಲಮಟ್ಟದಿಂದ ಸುಮಾರು 37 ಅಡಿ ಎತ್ತರದಲ್ಲಿದೆ. ಪೀಠದ ಎತ್ತರವೇ 12 ಅಡಿಯಿದ್ದು, ಪ್ರತಿಮೆಯು 17.40 ಅಡಿ ಅಗಲ ಮತ್ತು 14 ಅಡಿ ಉದ್ದವಿದೆ. ಒಟ್ಟು 25 ಅಡಿ ಎತ್ತರದ ಪ್ರತಿಮೆ ಇದಾಗಿದೆ. ಪೀಠದ ಸುತ್ತಲೂ ಅವರ ಸಂದೇಶಗಳನ್ನು ಬರೆಯಲಾಗಿದೆ.

‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ’. ಈ ಮೂರು ಪದಗಳು ನವ ಭಾರತದ ಶಕ್ತಿಮಂತ್ರಗಳು. ಈ ನೆಲದ ಜನಸಾಮಾನ್ಯನ ಶ್ರೀ ಮಂತ್ರಗಳು. ಭಾರತದ ಸ್ವಾಭಿಮಾನವನ್ನು ಬಡಿದೆಬ್ಬಿಸಿದ್ದೇ ಈ ಮೂರು ತತ್ವಗಳು, ಸತ್ವಗಳು. ಈ ಕಾರಣಕ್ಕೆ ಗಾಂಧೀಜಿ ಅವರು ಕರ್ನಾಟಕ ಎನ್ನುವ ಸದಭಿಮಾನದ ಗೂಡಿನಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಕಹಳೆ ಮೊಳಗಿಸಿದ 100 ವರ್ಷಗಳ ಸಂಭ್ರಮಾಚರಣೆಗೆ ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ’ ಎಂದು ನಾಮಕರಣ ಮಾಡಲಾಗಿದೆ. ಇದು ಕೇವಲ ಶತಮಾನೋತ್ಸವದ ಆಚರಣೆಯಲ್ಲ, ನವಭಾರತ ನಿರ್ಮಾಣದ ಮುನ್ನುಡಿಯ ಮಹಾಯಜ್ಞ.

ಗಾಂಧೀಜಿ ಅವರು ‘ಈ ದೇಶಕ್ಕೆ ಸ್ವಾತಂತ್ರ್ಯ ಸಿಗುವವರೆಗೂ ಯಾರೂ ವಿರಮಿಸಬಾರದು. ಸ್ವಾತಂತ್ರ್ಯ ಪಡೆಯುವುದೇ ನಮ್ಮ ಗುರಿ’ ಎಂದು 1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಪ್ರತಿಪಾದಿಸಿದ್ದರು. ಹೌದು, ಈ ಮಾತನ್ನು ನಾವು ಎಂದೆದಿಗೂ ಕಾಪಿಟ್ಟುಕೊಳ್ಳಬೇಕಿದೆ. ಗಾಂಧೀಜಿ ಅವರ ತತ್ವ, ಸಿದ್ಧಾಂತಗಳ ಬಗ್ಗೆ ಮುಂದಿನ ಪೀಳಿಗೆಗೆ ಅರಿವು ಮೂಡಿಸುವುದರ ಜತೆಗೆ ನಮ್ಮ ಸಂವಿಧಾನ ರಕ್ಷಣೆಯ ಸಂಕಲ್ಪಕ್ಕೆ 2025ರ ಜ.21ರಂದು ಬೆಳಗಾವಿಯಲ್ಲಿ ನಡೆಯಲಿರುವ ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ’ ಸಮಾವೇಶವನ್ನು ಮುನ್ನುಡಿಯಾಗಿಸಬೇಕಿದೆ.

ಕಳೆದ ವರ್ಷದ ಡಿ.27ರಂದು ಇಡೀ ದೇಶವೇ ಐತಿಹಾಸಿಕ ಸಮಾವೇಶಕ್ಕೆ ಸಾಕ್ಷಿಯಾಗುತ್ತಿದ್ದ ವೇಳೆಯಲ್ಲಿಯೇ ಅನಿರೀಕ್ಷಿತವಾಗಿ ಈ ದೇಶದ ಮಾಜಿ ಪ್ರಧಾನಿ ಡಾ। ಮನಮೋಹನ್ ಸಿಂಗ್ ಅವರು ಇಹಲೋಕ ತ್ಯಜಿಸಿದರು. ಈ ಕಾರಣಕ್ಕಾಗಿ ‘ಗಾಂಧಿ ಭಾರತ’ ಕಾರ್ಯಕ್ರಮವನ್ನು ಮುಂದೂಡಲಾಯಿತು. ಈ ದೇಶದ ಪ್ರಧಾನಿಯಾಗಿ ಗ್ರಾಮೀಣ ಭಾಗದ ಜನರ ಬದುಕನ್ನು ಹಸನುಗೊಳಿಸಲು ಮಹಾತ್ಮ ಗಾಂಧೀಜಿ ಅವರ ಹೆಸರಿನಲ್ಲಿ ನರೇಗಾ ಯೋಜನೆ ರೂಪಿಸಿದವರು ಅವರು. ‘ಇತಿಹಾಸ ನನ್ನನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತದೆ’ ಎಂದು ಟೀಕೆಗಳಿಗೆ ಉತ್ತರಿಸಿದವರು. ‘ದೇಶವೇ ಮೊದಲು’ ಎನ್ನುವ ಗಾಂಧೀಜಿಯವರ ಆಶಯದೊಂದಿಗೆ ಬದುಕಿದ ಮನಮೋಹನ್ ಸಿಂಗ್ ಸಿಂಗ್ ಅವರನ್ನು ಲೇಖನದ ಹಾದಿಯಲ್ಲಿಯೇ ನೆನೆಯುವುದು ನನ್ನ ಕರ್ತವ್ಯ.

ಬಾಪು ಭಾರತ ಈ ಕಾಲದ ತುರ್ತು

ಅಹಿಂಸೆ, ಉಪವಾಸ, ಸತ್ಯಾಗ್ರಹದ ಹೊಸ ಹೋರಾಟದ ಅಸ್ತ್ರಗಳನ್ನು ಜಗತ್ತಿಗೆ ತೋರಿಸಿಕೊಟ್ಟವರು ಗಾಂಧೀಜಿ. ‘The future depends on what we do in the present’ ಅಂದರೆ, ನಾವು ವರ್ತಮಾನದಲ್ಲಿ ಏನು ಮಾಡುತ್ತೇವೆ ಎಂಬುದರ ಮೇಲೆ ನಮ್ಮ ಭವಿಷ್ಯ ನಿಂತಿರುತ್ತದೆ ಎನ್ನುವ ಮಾತನ್ನು ಬಲವಾಗಿ ಪ್ರತಿಪಾದಿಸುತ್ತಿದ್ದರು. ಈ ದೇಶದ ಆತ್ಮದಂತೆ ಬದುಕಿದ ಗಾಂಧೀಜಿಯವರ ಎದೆಗೆ ಗುಂಡಿಟ್ಟವರು ನಿಧಾನವಾಗಿ ಸಂವಿಧಾನದ ಆಶಯಗಳಿಗೂ ಕೊಳ್ಳಿ ಇಡುವುದಕ್ಕೆ ಮುಂದಾಗಿದ್ದಾರೆ. ಗಾಂಧೀಜಿ ಹಾಗೂ ಅಂಬೇಡ್ಕರ್ ಅವರನ್ನು ಒಟ್ಟಾಗಿ ಉಳಿಸಿಕೊಳ್ಳುವ ಗುರುತರವಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಗಾಂಧೀಜಿಯವರ ಆಶಯಗಳ ಜೊತೆಗೆ ಭಾರತದ ಹೊಸ ಕನಸುಗಳ ಸಾಕಾರಕ್ಕೆ ಸಂವಿಧಾನ ಉಳಿಸುವ ಸಮ್ಮಿಲನವೇ ಈ ಬೆಳಗಾವಿ ಅಧಿವೇಶನ. ಈ ಕಾಲದ ಅಗತ್ಯಗಳಿಗೆ ಉತ್ತರ ಹುಡುಕುವ ಅಭಿಯಾನ ಇದು.

ಕಿತ್ತೂರ ನೆಲದಲ್ಲಿ, ಪ್ರತಿಮೆಯ ರೂಪದಲ್ಲಿ ಹಿರಿವಂತನ ಬೆಳಕು

ಗಾಂಧಿ ಅವರು ಬಿಟ್ಟು ಹೋದ ಸಾವಿರಾರು ನೆನಪುಗಳು, ಹೋರಾಟದ ಸ್ಪೂರ್ತಿ ನಮ್ಮ ಮುಂದಿದೆ. ಇದಕ್ಕಾಗಿ ಶಾಸಕಾಂಗದ ದಿವ್ಯ ದೇಗುಲ ಸುವರ್ಣ ಸೌಧದ ಮುಂಭಾಗದಲ್ಲಿ ಗಾಂಧೀಜಿ ಅವರ ಪ್ರತಿಮೆಯನ್ನು ಉದ್ಘಾಟಿಸಲಾಗುತ್ತಿದೆ. ಸುವರ್ಣಸೌಧದ ಆವರಣದಲ್ಲಿ ಈಗಾಗಲೇ ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್‌ ಅವರ ಪ್ರತಿಮೆಗಳಿವೆ. ಬೆಂಗಳೂರಿನ ವಿಧಾನಸೌಧ ಆವರಣದಲ್ಲಿ ಗಾಂಧೀಜಿ ಅವರ ಪ್ರತಿಮೆ ಇದೆ. ಆದರೆ, ಬೆಳಗಾವಿಯಲ್ಲಿ ರಾಷ್ಟ್ರಪಿತನ ಪ್ರತಿಮೆ ಸ್ಥಾಪಿಸಿ ಎನ್ನುವುದು ಸಾರ್ವಜನಿಕರ ಒತ್ತಾಸೆಯಾಗಿತ್ತು. ಪ್ರತಿಮೆ ಸ್ಥಾಪನೆಗೆ ಇಂತಹ ಸುಸಂದರ್ಭ ಒದಗಿ ಬರಲಿದೆ ಎಂದು ನಾವ್ಯಾರೂ ಎಣಿಸಿಯೇ ಇರಲಿಲ್ಲ.

ಬಾಪು ಅವರ ಪ್ರತಿಮೆ ನಿರ್ಮಾಣಕ್ಕೆ ಸುಮಾರು 20 ಟನ್‌ ತೂಕ ಕಂಚು ಬಳಸಲಾಗಿದೆ. ಇದು ನೆಲಮಟ್ಟದಿಂದ ಸುಮಾರು 37 ಅಡಿ ಎತ್ತರದಲ್ಲಿದೆ. ಪೀಠದ ಎತ್ತರವೇ 12 ಅಡಿಯಿದ್ದು, ಪ್ರತಿಮೆಯು 17.40 ಅಡಿ ಅಗಲ ಮತ್ತು 14 ಅಡಿ ಉದ್ದವಿದೆ. ಒಟ್ಟು 25 ಅಡಿ ಎತ್ತರದ ಪ್ರತಿಮೆ ಇದಾಗಿದೆ. ಪೀಠದ ಸುತ್ತಲೂ ಅವರ ಸಂದೇಶಗಳನ್ನು ಬರೆಯಲಾಗಿದೆ. ಪ್ರಭು ಶ್ರೀರಾಮನ ಆದರ್ಶಗಳನ್ನು ಅನುಸರಿಸುತ್ತಿದ್ದ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಯನ್ನು ಅಯೋಧ್ಯೆಯ ಬಾಲರಾಮನ ಮೂರ್ತಿ ಕಡೆದಿದ್ದ ಶಿಲ್ಪಿ ಅರುಣ್ ಯೋಗಿರಾಜ್ ಅವರೇ ಕಡೆದಿರುವುದು ಕಾಕತಾಳೀಯವೇ ಸರಿ.

ಗಾಂಧೀಜಿಯೇ ಶಕ್ತಿ, ಗಾಂಧಿಯೇ ಸ್ಫೂರ್ತಿ

ಬಾಪು ಅವರೇ ಹೇಳುವಂತೆ ‘ತನ್ನ ಕರ್ತವ್ಯವನ್ನು ಸರಿಯಾಗಿ ಮಾಡುತ್ತಿರುವವನಿಗೆ ಜಗತ್ತು ಎಂದಿಗೂ ಬೇಸರ ಎನಿಸುವುದಿಲ್ಲ’. ಗಾಂಧೀಜಿ ಅವರ ಈ ಮಾತೇ ನನ್ನ ಅನೇಕ ಕೆಲಸಗಳಿಗೆ ಪ್ರೇರಣೆ. ನಾನು ಕೆಪಿಸಿಸಿ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ಮೇಲೆಯೂ ಇದೇ ಹಾದಿಯಲ್ಲಿ ನಡೆದಿದ್ದೇನೆ, ಕಾರ್ಯಕ್ರಮಗಳನ್ನು ರೂಪಿಸಿದ್ದೇನೆ. ಮೇಕೆದಾಟು ಪಾದಯಾತ್ರೆ, ಸ್ವಾತಂತ್ರ್ಯ ನಡಿಗೆ ಸೇರಿದಂತೆ ಅನೇಕ ಪಾದಯಾತ್ರೆಗಳ ಹಿಂದಿರುವ ಶಕ್ತಿಯೇ ಬಾಪು. ಅಲ್ಲದೇ ನಮ್ಮ ಸರ್ಕಾರ ನೀಡುತ್ತಿರುವ ಐದು ಗ್ಯಾರಂಟಿ ಯೋಜನೆಗಳಿಗೆ ಗಾಂಧಿವಾದವೇ ಪ್ರೇರಣೆ. 2010ರಲ್ಲಿ ಕೈಗೊಂಡ ಬಳ್ಳಾರಿ ಪಾದಯಾತ್ರೆ, ಸೋನಿಯಾ ಗಾಂಧಿಯವರ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ 2022ರಲ್ಲಿ ನಡೆಸಿದ ಭಾರತ್ ಜೋಡೋ ಯಾತ್ರೆಗೆ ಮಹಾತ್ಮನ ಹೋರಾಟದ ಹಾದಿಯೇ ಬಲ.

ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲಾ, ಕಾಲೇಜುಗಳಲ್ಲಿ ಧ್ಯಾನಸ್ಥ ಸ್ಥಿತಿಯಲ್ಲಿರುವ ಗಾಂಧೀಜಿಯವರ ಭಾವಚಿತ್ರ ಹಾಗೂ ಅವರು ಹೇಳಿದ ಏಳು ಸಾಮಾಜಿಕ ಪಾಪಗಳ ಪದ ಫಲಕ ಅಳವಡಿಸುವುದನ್ನು ನಮ್ಮ ಸರ್ಕಾರ ಕಡ್ಡಾಯ ಮಾಡಿದೆ. ಜೊತೆಗೆ ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ಈ ಭಾವಚಿತ್ರ ಹಾಕಬೇಕು ಎಂದು ಸೂಚನೆ ನೀಡಲಾಗಿದೆ.

ಎಡರು- ತೊಡರುಗಳಿಗೆ ಗಾಂಧಿವಾದವೇ ಉಸಿರು

ಸತ್ಯಾಗ್ರಹದ ಕಲ್ಪನೆ, ಮಹಿಳೆಯರಿಗೆ ಸಮಾನ ಗೌರವ, ಹಿಂದೂ- ಮುಸಲ್ಮಾನರ ಭಾವೈಕ್ಯತೆ, ಪರಿಶಿಷ್ಟರ ಉದ್ದಾರ, ಮದ್ಯಪಾನ ನಿಷೇಧ ಹಾಗೂ ಖಾದಿಗೆ ಉತ್ತೇಜನ ಕುರಿತು ಗಾಂಧೀಜಿ ಅವರು ಅಂದಿನ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ವಿವರಿಸಿದ್ದರು. ಜೊತೆಗೆ, ಭಾಷಾವಾರು ಪ್ರಾಂತ್ಯ ರಚನೆ ಹಾಗೂ ಕರ್ನಾಟಕ ಏಕೀಕರಣಕ್ಕೆ ಈ ಸಮಾವೇಶದಲ್ಲಿ ಹೊಸ ದಿಕ್ಕು ದೊರೆತಿತ್ತು.

ಈ ಶತಮಾನೋತ್ಸವ ಆಚರಣೆ ನಮಗೆ ಇತಿಹಾಸ ಮೆಲುಕು ಹಾಕಲು, ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು, ಸುವರ್ಣಾವಕಾಶ ಕಲ್ಪಿಸಿದೆ. ಗಾಂಧೀಜಿಯವರ ಆದರ್ಶಗಳನ್ನು ಇನ್ನಷ್ಟು ಗಾಢವಾಗಿ ಯುವ ಪೀಳಿಗೆಗೆ ಪರಿಚಯಿಸಲು, ಒಂದೊಳ್ಳೆ ಅವಕಾಶ ದೊರೆತಿದೆ. ಈ ನಿಟ್ಟಿನಲ್ಲಿ ಒಂದು ವರ್ಷಗಳ ಕಾಲ ‘ಗಾಂಧಿ ಭಾರತ’ ಎಂಬ ಹೆಸರಿನಡಿ ಹಲವಾರು ಕಾರ್ಯಕ್ರಮಗಳ ಜೊತೆಗೆ ಮುಂದಿನ ಒಂದು ವರ್ಷದಲ್ಲಿ ಒಟ್ಟು 40 ಕಾರ್ಯಕ್ರಮಗಳನ್ನು ನಡೆಸುವುದು ನಮ್ಮ ಗುರಿ.

ಈ ದೇಶಕ್ಕಾಗಿ ತ್ಯಾಗ, ಬಲಿದಾನ, ಹೋರಾಟದ ಬಹುದೊಡ್ಡ ಪರಂಪರೆಯನ್ನು ಬೆನ್ನಿಗೇರಿಸಿಕೊಂಡಿರುವ ಕಾಂಗ್ರೆಸ್‌, ಬೆಳಗಾವಿ ನೆಲದಲ್ಲಿ ಮತ್ತೊಮ್ಮೆ ಹೋರಾಟದ ದೀಕ್ಷೆ ಪಡೆಯಲು ಸನ್ನದ್ಧವಾಗಿದೆ. ಅಂದು ಸಹ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಬೆಳಗಾವಿ ಅಧಿವೇಶನದ ನೊಗ ಹೊತ್ತುಕೊಂಡಿತ್ತು. ಅಂದಿನ ಅಧಿವೇಶನವನ್ನು ಹಗಲು ರಾತ್ರಿ ಕಷ್ಟಪಟ್ಟು ರೂಪಿಸಿದವರು ಕರ್ನಾಟಕ ಕೇಸರಿ ಗಂಗಾಧರರಾವ್ ದೇಶಪಾಂಡೆಯವರು. ಈಗ ಇದೇ ಜವಾಬ್ದಾರಿಯ ನೊಗ ಕನ್ನಡಿಗರಾದ ನಮ್ಮ ಹೆಗಲ ಮೇಲೆ ಮತ್ತೆ ಬಂದಿದೆ. ಅಂದು ಗಾಂಧೀಜಿಯವರು ಆಸೀನರಾಗಿದ್ದ ಅಧ್ಯಕ್ಷೀಯ ಪೀಠದಲ್ಲಿ ಕನ್ನಡಿಗರಾದ ಮಲ್ಲಿಕಾರ್ಜುನ ಖರ್ಗೆಯವರು ಕೂತಿದ್ದಾರೆ ಎಂಬುದೇ ನಮಗೆಲ್ಲ ಹೆಮ್ಮೆಯ ವಿಚಾರ.

What you do is of little significance, but it is very important that you do it. ಅಂದರೆ ನೀವು ಈಗ ಮಾಡುತ್ತಿರುವ ಕೆಲಸ ಕಡಿಮೆ ಮಹತ್ವದ್ದು ಅನಿಸಬಹುದು. ಆದರೆ, ಬಹಳ ಮುಖ್ಯವಾದುದು ಎಂಬುದನ್ನು ಮರೆಯಬಾರದು ಎನ್ನುವ ಮಹಾತ್ಮನ ಮಾತಿನಂತೆ ಸಿಕ್ಕಿರುವ ಈ ಅವಕಾಶವನ್ನು ನಾವು ಸಂಪೂರ್ಣವಾಗಿ ಬಳಸಿಕೊಳ್ಳಬೇಕಿದೆ. ಅಂದು ಕನ್ನಡಿಗರು ಗಾಂಧೀಜಿಯವರ ಬರುವಿಕೆಯನ್ನು ಸಂಭ್ರಮಿಸಿದಂತೆ ಇಂದು ಸಹ ಶತಮಾನೋತ್ಸವವನ್ನು ಸಂಭ್ರಮಿಸುತ್ತಿದ್ದಾರೆ. ಗಾಂಧೀಜಿ ಅವರ ಆಶಯಗಳ ಅನುಷ್ಠಾನದ ಹಾದಿಗೆ ಸಾಕ್ಷಿಯಾಗುತ್ತಿದ್ದೇವೆ. ಈ ಕಾರ್ಯಕ್ರಮದ ಮೂಲಕ ‘ಗಾಂಧಿ’ ಬೋಧಿ ವೃಕ್ಷದ ಕೆಳಗೆ ನಿಂತಿರುವ ನಮಗೆಲ್ಲಾ ಹೋರಾಟದ ಆಮ್ಲಜನಕ ಹೆಚ್ಚು ಪೂರೈಕೆಯಾಗಲಿ. ‘ಸತ್ಯವಾಗಿರಿ, ಸೌಮ್ಯವಾಗಿರಿ, ನಿರ್ಭಯವಾಗಿರಿ’ ಎನ್ನುವ ಬಾಪುವಿನ ಮಾತು ಸ್ಫೂರ್ತಿಯಾಗಲಿ.

ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,

ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀಚರಣ

ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮುಕುಟ

ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ ಕೂಡಲಸಂಗಮದೇವಯ್ಯಾ

ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ.

ಜಗಜ್ಯೋತಿ ಬಸವಣ್ಣನವರ ಈ ವಚನದಂತೆ ಗಾಂಧೀಜಿ ಎನ್ನುವ ಅಗೋಚರ ಶಕ್ತಿ ನಮ್ಮೆಲ್ಲರ ಮಸ್ತಕಕ್ಕೆ ಬಂದು ಇಳಿಯಲಿ. ಅಸಂಖ್ಯಾ ಹುತಾತ್ಮರ ಬಲಿದಾನ ಭವ್ಯ ಭಾರತ ನಿರ್ಮಾಣಕ್ಕೆ ಪ್ರೇರಕ ಶಕ್ತಿಯಾಗಲಿ.