ಸಾರಾಂಶ
ಕನ್ನಡಪ್ರಭ ವಾರ್ತೆ ಕಾಗವಾಡ
ಸಮಾಜ ಸೇವೆ ಬದುಕಿನಲ್ಲಿ ನೆಮ್ಮದಿ ನೀಡುವ ಕಾರ್ಯವಾಗಿದೆ. ಹಾಗಾಗಿ ಗಳಿಸಿದ ಅಲ್ಪ ಭಾಗವನ್ನು ಸೇವಾ ಕಾರ್ಯಗಳಿಗೆ ಮೀಸಲಿಡುವ ಮೂಲಕ ಸಮಾಜದ ಋಣ ತೀರಿಸುವ ಕಾರ್ಯ ಮಾಡುತ್ತಿದ್ದೇನೆ ಎಂದು ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನ ರಜತ ಸಾಧಕರು ಪ್ರಶಸ್ತಿ ಪುರಸ್ಕೃತರಾದ ಮಹಾವೀರ ಪಡನಾಡ ಹೇಳಿದರು.ಪಟ್ಟಣದ ಆಚಾರ್ಯ ಶ್ರೀ 108 ವಿದ್ಯಾಸಾಗರ ಶಾಲೆಗೆ ₹25 ಲಕ್ಷ ದೇಣಿಗೆ ಹಾಗೂ ದೀಪಾವಳಿ ಉಡೂಗೊರೆ ಸಮಾರಂಭದಲ್ಲಿ ಮಾತನಾಡಿದ ಅವರು, ಗಳಿಸಿದ್ದೇಲ್ಲವನ್ನು ನಮ್ಮ ಕುಟುಂಬಕ್ಕೆ ಮಾತ್ರ ಸೀಮಿತವಾಗಿಟ್ಟುಕ್ಕೊಳ್ಳದೇ ವಿಶ್ವವೇ ನಮ್ಮ ಕುಟುಂಬದ ಕಲ್ಪನೆ ನಮ್ಮದಾಗಿಸಿಕೊಂಡು ನೊಂದವರ ನೋವಿನಲ್ಲಿ ಭಾಗಿಗಳಾಗಬೇಕು. ಆಗ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ. ಈ ನಿಟ್ಟಿನಲ್ಲಿ ತಮ್ಮ ತಂದೆ ದಿವಂಗತ ಬಾಬುರಾವ ಪಡನಾಡರವರು ಮಾಡುತ್ತಿದ್ದರು. ಸಮಾಜ ಸೇವೆಯನ್ನು ಮುಂದುವರಿಸಿರುವುದಾಗಿ ತಿಳಿಸಿದರು.
ಜೈನ ಸಮಾಜದ ಮುಖಂಡ ಜಿ.ಆರ್,ಕಿಲ್ಲೇದಾರ ಮಾತನಾಡಿ, ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಜೀವನವೀಡಿ ಸಂಪಾದಿಸುತ್ತಾನೆ. ಆದರೆ, ತನ್ನ ಸಂಪಾದನೆಯನ್ನು ಸಮಾಜದ ಶೋಷಿತರ, ಶಿಕ್ಷ ಸಂಸ್ಥೆಗಳಿಗೆ, ಬಡವರ ಮತ್ತು ದುರ್ಬಲ ಸಮುದಾಯದೊಂದಿಗೆ ಹಂಚಿಕೊಂಡು ತನ್ನ ಬದುಕನ್ನು ಸಾರ್ಥಕ ಪಡಿಸಿಕೊಳ್ಳುತ್ತಾನೆ. ಈ ಸಾರ್ಥಕತೆಯಲ್ಲಿ ಮಹಾವೀರ ಪಡನಾಡರ ಬದುಕು ನಿದರ್ಶನ ಎಂದರು.ತಾವು ಸಂಪಾದಿಸಿದನ್ನು ದಾನ ರೂಪದಲ್ಲಿ ಸಮುದಾಯದೊಂದಿಗೆ ಹಂಚಿಕೊಳ್ಳುವುದು ಇತ್ತೀಚಿನ ಸಮಾಜಕ್ಕೆ ಮಾದರಿಯಾಗಿದ್ದಾರೆ. ದಾನ, ಸನ್ಮಾನ ಹಾಗೂ ಪ್ರಶಸ್ತಿ ಪ್ರದಾನಗಳ ಮೂಲಕ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಮಹಾವೀರ ಪಡನಾಡ ಹಾಗೂ ಕಲ್ಪನಾತಾಯಿ ಪಡನಾಡ ದಂಪತಿ ಮಾದರಿ ಬದುಕನ್ನು ರೂಪಿಸಿಕೊಂಡಿದ್ದು ಪ್ರಶಂಸನೀಯ ಎಂದರು. ಇಂದಿನ ಸಂದರ್ಭದಲ್ಲಿ ಬೆಳ್ಳಿ, ಬಂಗಾರ, ವಸ್ತ್ರ, ಧನ, ಧಾನ್ಯ ದಾನ ಮಾಡುವುದು ಅಪರೂಪ. ಇಂದು ಬಾಚಿಕೊಳ್ಳುವ ಸಂಸ್ಕೃತಿ ಬೆಳೆಯುತ್ತಿದೆ. ಇಂತಹದರಲ್ಲಿ ಅಪರೂಪದ ಕಾರ್ಯ ಮಾಡಿ ತಮ್ಮ ತಂದೆ-ತಾಯಿಯ ಮರಣಾ ನಂತರ ಈ ಸೇವೆಯನ್ನು ಮುಂದುವರೆಸಿಕೊಂಡು ಬಂದು ತಂದೆ-ತಾಯಿಯ ಋಣ ತೀರಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.ಐನಾಪುರದ ಶಿಕ್ಷಣ ಪ್ರೇಮಿ ರವೀಂದ್ರ ಬನಜವಾಡ ಮಾತನಾಡಿ, ಮಹಾವೀರ ಪಡನಾಡ ಅವರು ಐನಾಪುರ, ಉಗಾರ, ಶಿರಗುಪ್ಪಿ,ಕಾಗವಾಡ ಸೇರಿದಂತೆ ಕರ್ನಾಟಕ ಹಾಗೂ ಮಹಾರಾಷ್ಟ್ರದ ಹಲವಾರು ಶಿಕ್ಷಣ ಸಂಸ್ಥೆಗಳಿಗೆ ಲಕ್ಷಾಂತರ ರುಪಾಯಿ ದೇಣಿಗೆ ನೀಡುವ ಮೂಲಕ ಈ ಯುಗದ ಕಲಿಯುಗದ ಕರ್ಣ ಎನಿಸಿಕೊಂಡಿದ್ದಾರೆ. ಅವರ ಈ ಸೇವಾ ಕಾರ್ಯ ಹೀಗೆ ಮುಂದುವರೆಯಲ್ಲಿ ಎಂದು ಹಾರೈಸಿದರು.
ಈ ವೇಳೆ ಸಂಸ್ಥೆಯ ಅಧ್ಯಕ್ಷ ಡಾ,ಪಿ.ಬಿ.ಮಗದುಮ್ ಅವರಿಗೆ ದೇಣಿಗೆಯ ಚೆಕ್‌ನ್ನು ಮಹಾವೀರ ಪಡನಾಡ ದಂಪತಿ ವಿತರಿಸಿದರು. ನಿರ್ಮಲಾ ಮಗದುಮ್, ದಾದಾ ಮಾನಗಾಂವೆ, ವಿದ್ಯಾಸಾಗರ ಚೌಗುಲೆ, ಜೆ,ಎನ್.ನಾಂದಣಿ, ಮಹೇಂದ್ರ ಉಪಾಧ್ಯೆ, ಎಸ್.ಎಸ್.ಜಮಖಂಡಿ ಸೇರಿದಂತೆ ಅನೇಕರು ಇದ್ದರು.ಕರ್ನಾಟಕ ಹಾಗೂ ಮಹಾರಾಷ್ಟ್ರದ ಗ್ರಾಮಗಳ ಬಡ ಕುಟುಂಬದ ಪುರುಷರು, ಮಹಿಳೆಯರು ಮತ್ತು ವಿದ್ಯಾರ್ಥಿಗಳಿಗೆ ವಸ್ತ್ರಾಭರಣ ಬಂಗಾರ, ಬೆಳ್ಳಿ ಆಭರಣಗಳನ್ನು ಉಡುಗೊರೆ ಮತ್ತು 108 ಅರ್ಚಕರಿಗೆ ಸಹಾಯಧನ ನೀಡಿ ಸನ್ಮಾನಿಸಿದರು.ಕೋಟ್..
ಗಳಿಸಿದ್ದೇಲ್ಲವನ್ನು ನಮ್ಮ ಕುಟುಂಬಕ್ಕೆ ಮಾತ್ರ ಸೀಮಿತವಾಗಿಟ್ಟುಕ್ಕೊಳ್ಳದೇ ವಿಶ್ವವೇ ನಮ್ಮ ಕುಟುಂಬದ ಕಲ್ಪನೆ ನಮ್ಮದಾಗಿಸಿಕೊಂಡು ನೊಂದವರ ನೋವಿನಲ್ಲಿ ಭಾಗಿಗಳಾಗಬೇಕು. ಆಗ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ. ಈ ನಿಟ್ಟಿನಲ್ಲಿ ತಮ್ಮ ತಂದೆ ದಿವಂಗತ ಬಾಬುರಾವ ಪಡನಾಡರವರು ಮಾಡುತ್ತಿದ್ದರು. ಸಮಾಜ ಸೇವೆಯನ್ನು ಮುಂದುವರಿಸಿರುವೆ.-ಮಹಾವೀರ ಪಡನಾಡ, ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನ ರಜತ ಸಾಧಕರು ಪ್ರಶಸ್ತಿ ಪುರಸ್ಕೃತರು.