ಸಚಿವ ಸ್ಥಾನ ಆಕಾಂಕ್ಷಿಯಲ್ಲ, ಅವಕಾಶ ಬಂದ್ರೆ ನೋಡೋಣ - ಸ್ಪೀಕರ್‌ ಆಗಿ ಇಲ್ಲಿ ತೃಪ್ತ : ಖಾದರ್‌

| Published : Dec 19 2024, 12:24 PM IST

UT Khader

ಸಾರಾಂಶ

ರಾಜಕೀಯ ಗುರಿಗಳ ಬಗ್ಗೆ ಕಲಾಪದ ನಡುವೆಯೇ ''ಕನ್ನಡಪ್ರಭ'' ಜತೆ ಮುಖಾಮುಖಿ ಉತ್ತರಿಸಿದ್ದಾರೆ ಸ್ಪೀಕರ್‌ ಯು.ಟಿ.ಖಾದರ್‌

 ಶ್ರೀಕಾಂತ್‌ ಎನ್‌.ಗೌಡಸಂದ್ರ

ಕರ್ನಾಟಕ ವಿಧಾನಸಭೆಯ ಮೊದಲ ಮುಸ್ಲಿಂ ಸ್ಪೀಕರ್‌ ಯು.ಟಿ.ಖಾದರ್‌. ಕನ್ನಡ ಉಚ್ಚರಣೆ ಸಮಸ್ಯೆ, ಮೃದು ಸ್ವಭಾವ ಸೇರಿ ಹಲವು ಕಾರಣಗಳಿಗೆ ಈ ಸ್ಥಾನಕ್ಕೆ ಖಾದರ್ ಸೂಕ್ತ ಆಯ್ಕೆಯಲ್ಲ ಎಂಬ ಟೀಕೆ ವ್ಯಕ್ತವಾಗಿತ್ತು. ಸ್ಪೀಕರ್‌ ಆಗಿ ಒಂದೂವರೆ ವರ್ಷದಲ್ಲಿ ತಮ್ಮ ಬಗೆಗಿನ ತಪ್ಪು ಅಭಿಪ್ರಾಯಗಳನ್ನು ಸುಳ್ಳಾಗಿಸಿದ ಅವರು, ಸುಗಮ ಹಾಗೂ ಕರಾರುವಕ್ಕಾಗಿ ಕಲಾಪ ನಡೆಸುವ ಜತೆಗೆ ಹಲವು ಮೊದಲುಗಳಿಗೆ ಮುನ್ನುಡಿ ಬರೆದು ಪ್ರತಿಪಕ್ಷಗಳ ಸದಸ್ಯರಿಂದಲೂ ಬೆನ್ನು ತಟ್ಟಿಸಿಕೊಂಡಿದ್ದಾರೆ.

 ಸಾವರ್ಕರ್‌ ಫೋಟೋ ತೆಗೆಯಲು ನಿರಾಕರಣೆ, ಸಭಾಧ್ಯಕ್ಷರ ಹೊಸ ಪೀಠ ಅಳವಡಿಕೆ, ಅನುಭವ ಮಂಟಪ ತೈಲಚಿತ್ರ ಅನಾವರಣ, ಗಣ್ಯರ ಭಾವಚಿತ್ರಗಳ ಅಳವಡಿಕೆ ಮೂಲಕ ಆಡಳಿತ ಮತ್ತು ಪ್ರತಿಪಕ್ಷಗಳ ಮೆಚ್ಚುಗೆಗೆ ಪಾತ್ರರಾದ ಅ‍ವರು, ಬೆಳಗಾವಿ ಅಧಿವೇಶನ ಅನಿವಾರ್ಯ ಕಾರಣಗಳಿಗೆ ಎರಡು ದಿನ ಕಡಿತಗೊಂಡರೂ ಹಗಲು-ರಾತ್ರಿ ಕಲಾಪ ನಡೆಸಿ ಉತ್ತರ ಕರ್ನಾಟಕದ ಚರ್ಚೆ ಸೇರಿ ಎಲ್ಲಾ ಕಾರ್ಯಕಲಾಪಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಬೆಳಗಾವಿ ಅಧಿವೇಶನದ ಯಶಸ್ಸು, ಉತ್ತರ ಕರ್ನಾಟಕದ ಚರ್ಚೆ, ಮುಂದಿನ ರಾಜಕೀಯ ಗುರಿಗಳ ಬಗ್ಗೆ ಕಲಾಪದ ನಡುವೆಯೇ ''ಕನ್ನಡಪ್ರಭ'' ಜತೆ ಮುಖಾಮುಖಿ ಉತ್ತರಿಸಿದ್ದಾರೆ.

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಉದ್ದೇಶ ಈಡೇರುತ್ತಿದೆಯೇ?

ಬೆಳಗಾವಿ ಅಧಿವೇಶನ ಉತ್ತರ ಕರ್ನಾಟಕಕ್ಕೆ ಸೀಮಿತವಿಲ್ಲ. ಇದು ಕರ್ನಾಟಕದ ಸ್ವಾಭಿಮಾನದ ಕಿರೀಟ. ಉತ್ತರ ಕರ್ನಾಟಕದ ಚರ್ಚೆಗೆ ಇಲ್ಲಿ ವಿಶೇಷ ಪ್ರಾಶಸ್ತ್ಯ ನೀಡಲಾಗುತ್ತದೆದೆ ನಿಜ. ಆದರೆ ಇಲ್ಲಿನ ಚರ್ಚೆ ರಾಜ್ಯಾದ್ಯಂತ ಅನ್ವಯವಾಗುವಂಥದ್ದು. ಈ ಭಾಗದಲ್ಲಿ ಅಧಿವೇಶನ ಆರಂಭವಾದ ಬಳಿಕ ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಹೋಟೆಲ್‌ ಉದ್ಯಮ ಸೇರಿ ವಿವಿಧ ಉದ್ಯಮ ಬೆಳೆದ ರೀತಿ ಗಮನಿಸಿ. ಬೆಳಗಾವಿ ಎರಡನೇ ರಾಜಧಾನಿ ಎಂಬ ಭಾವನೆ ಬಂದಿದೆ. ಅಧಿವೇಶನ ನಡೆಯುವುದು ಕೇವಲ 10-15 ದಿನ ಮಾತ್ರ, ಆದರೆ ಇದರಿಂದ ವರ್ಷವಿಡೀ ಈ ಭಾಗದ ಅಭಿವೃದ್ಧಿಗೆ ನೇರ ಹಾಗೂ ಪರೋಕ್ಷವಾಗಿ ನೆರವಾಗುತ್ತಿರುತ್ತದೆ.

ಈ ವರ್ಷವಾದರೂ ಉತ್ತರ ಕರ್ನಾಟಕ ಚರ್ಚೆ ಫಲಪ್ರದವಾಗುವ ನಿರೀಕ್ಷೆಯಿದೆಯೇ?

ಚರ್ಚೆ ಅತ್ಯುತ್ತಮವಾಗಿ ನಡೆಯುತ್ತಿದೆ. ಸರ್ಕಾರವೂ ಉತ್ತರ ಭಾಗದ ಅಭಿವೃದ್ಧಿ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಅಧಿವೇಶನದ ಚರ್ಚೆಯಿಂದ ಹೆಚ್ಚಿನ ವೇಗ ದೊರೆಯಲಿದೆ. ಸಚಿವ ಸಂಪುಟ ಸಭೆಯಲ್ಲೂ ಸರ್ಕಾರ ಹಲವು ತೀರ್ಮಾನ ಮಾಡಿದೆ. ಉಳಿದದ್ದು ಸರ್ಕಾರಕ್ಕೆ ಬಿಟ್ಟದ್ದು.

ಚರ್ಚೆ ನಡೆಯುತ್ತದೆ, ಆದರೆ ಪರಿಹಾರ ಸಿಗುವುದಿಲ್ಲ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರಲ್ಲ?

ನನ್ನ ಜವಾಬ್ದಾರಿ ಸದನ ನಡೆಸುವುದು ಮಾತ್ರ. ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದು, ಇಲ್ಲಿನ ಸಮಸ್ಯೆಗಳಿಗೆ ಪರಿಹಾರವಾಗಿ ಘೋಷಣೆಗಳನ್ನು ಮಾಡುವುದು ಸರ್ಕಾರದ ಕೆಲಸ. ನೀಡಿದ ಭರವಸೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ನಾನು ಸಲಹೆ ನೀಡಬಹುದು ಅಷ್ಟೇ.

ಮಧ್ಯರಾತ್ರಿವರೆಗೆ ಕಲಾಪ ನಡೆಸುವ ಕಾರಣವೇನು?

ನನಗೆ ನಿತ್ಯವೂ ತಡರಾತ್ರಿವರೆಗೆ ಕಲಾಪ ನಡೆಸುವ ಉದ್ದೇಶವಿದೆ. ಯಾಕೆಂದರೆ ಅಜೆಂಡಾ ಮುಗಿಸಬೇಕಿದೆ. ಅದಷ್ಟೇ ನನ್ನ ಮುಖ್ಯ ಉದ್ದೇಶ. ಎರಡು ಅನಿವಾರ್ಯ ಕಾರಣಗಳಿಂದ ಅಧಿವೇಶನ ಎರಡು ದಿನ ಕಡಿತಗೊಂಡಿದೆ. ಜತೆಗೆ ಮಂಗಳವಾರ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ಹಿನ್ನೆಲೆ ನಿಗದಿತ ವೇಳೆಗೆ ಬಿಡಬೇಕಾಗಿತ್ತು. ಆದರೆ ಗಮನ ಸೆಳೆಯುವ ಸೂಚನೆ ಸೇರಿ ತುಂಬಾ ವಿಷಯಗಳು ಬಾಕಿ ಉಳಿದಿದ್ದವು. ಹೀಗಾಗಿ ಸೋಮವಾರ ತಡರಾತ್ರಿವರೆಗೆ ಕಲಾಪ ನಡೆಸಬೇಕಾಯಿತು.

ತಡರಾತ್ರಿವರೆಗೆ ಕಲಾಪ ನಡೆಯುತ್ತದೆ ಸರಿ. ಶಾಸಕರ ಹಾಜರಾತಿ ಕಥೆಯೇನು?

ಹಾಜರಾತಿ ಖಂಡಿತ ಹೆಚ್ಚಾಗಿದೆ. ಜತೆಗೆ ಖುಷಿ ಖುಷಿಯಿಂದ ಸದನಕ್ಕೆ ಬರುತ್ತಿದ್ದಾರೆ. ಎಲ್ಲದಕ್ಕಿಂತಲೂ ಮುಖ್ಯವಾಗಿ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವಿನ ದ್ವೇಷದ ವಾತಾವರಣ ಹೋಗಿ ಬಾಂಧವ್ಯದ ವಾತಾವರಣ ಸೃಷ್ಟಿಯಾಗಿದೆ.

ಸಭಾಧ್ಯಕ್ಷರು ಹಾಗೂ ಸಭಾಪತಿಗಳ ನಡುವೆ ಭಿನ್ನಾಭಿಪ್ರಾಯಗಳಿವೆ ಎಂದು ಪರಿಷತ್‌ನಲ್ಲಿ ಚರ್ಚೆಯಾಗಿದೆ?

ನಮ್ಮ ನಡುವೆ ಭಿನ್ನಾಭಿಪ್ರಾಯ ಇಲ್ಲ. ಭೋಜೇಗೌಡರಿಗೆ ತಪ್ಪಾಭಿಪ್ರಾಯ ಆಗಿದೆ. ಸಭಾಪತಿಗಳ ಕೆಲಸ ಅವರು ಮಾಡುತ್ತಿದ್ದಾರೆ, ಸಭಾಧ್ಯಕ್ಷರ ಕೆಲಸ ನಾನು ಮಾಡುತ್ತಿದ್ದೇನೆ. ವಿಧಾನಮಂಡಲದ ವಿಚಾರವಾಗಿ ತೀರ್ಮಾನ ಮಾಡುವಾಗ ಒಟ್ಟಾಗಿ ಮಾಡುತ್ತಿದ್ದೇವೆ. ಬೆಳಗಾವಿ ಅಧಿವೇಶನದ ಯಶಸ್ಸಿನಲ್ಲಿ ನನಗಿಂತ ಹೆಚ್ಚು ಪಾಲು ಸಭಾಪತಿ (ಹೊರಟ್ಟಿ) ಅವರದ್ದು ಇದೆ.

ಅಧಿವೇಶನದ ಸಮಯದಲ್ಲಿ ಮಾತ್ರ ಸುವರ್ಣಸೌಧ ಉಪಯೋಗಿ. ಉಳಿದ ಸಮಯದಲ್ಲಿ ಖಾಲಿ ಬಂಗಲೆ ಅಂತಾರಲ್ಲ!

ಸುವರ್ಣಸೌಧವನ್ನು ವರ್ಷ ಪೂರ್ತಿ ಪ್ರತಿ ಶನಿವಾರ, ಭಾನುವಾರ ಸುತ್ತಮುತ್ತಲಿನ ಜನರಿಗೆ ಪ್ರವಾಸಿ ತಾಣವನ್ನಾಗಿ ಮಾಡಲು ಪ್ರಸ್ತಾವನೆ ಸಿದ್ಧಪಡಿಸಿದ್ದೇವೆ. ಇಲ್ಲಿ ಉದ್ಯಾನ, ಮಕ್ಕಳ ಆಟದ ಮೈದಾನ ಮಾಡುವ ಯೋಚನೆ ಇದೆ. ಜತೆಗೆ ಕೆಎಸ್‌ಟಿಡಿಸಿ ಜತೆ ಸೇರಿ ದೊಡ್ಡಮಟ್ಟದ ಹೋಟೆಲ್ ನಿರ್ಮಾಣ ಮಾಡಲಿದ್ದೇವೆ. ಇವೆಲ್ಲವೂ ಕೈಗೂಡಿದರೆ ಈ ಸ್ಥಳಕ್ಕೆ ವರ್ಷವಿಡೀ ಜೀವಂತಿಕೆ ಬರುತ್ತದೆ.

ಸುವರ್ಣಸೌಧ ಬಳಿ ಹೋಟೆಲ್‌ ನಿರ್ಮಾಣ ಮಾಡುವ ಪ್ರಸ್ತಾಪನೆ ನಿಂತಲ್ಲೇ ನಿಂತಿದೆ?

ನಾನು ಸ್ಪೀಕರ್‌ ಆಗಿ ವಿಧಾನಸಭೆಯಲ್ಲಿ ಯಾವುದೇ ತೀರ್ಮಾನ ಮಾಡಬಹುದು. ಹೊರಗೆ ಮಾಡುವುದು ಕಷ್ಟ. ಹೋಟೆಲ್‌ ಕುರಿತು ಗ್ರಾಮೀಣಾಭಿವೃದ್ಧಿ, ಲೋಕೋಪಯೋಗಿ ಇಲಾಖೆ ಸೇರಿ ಮಾಡಬೇಕು. ಸಲಹೆ, ಪ್ರಸ್ತಾವನೆ ನೀಡುವುದು ನನ್ನ ಕೆಲಸ. ನನ್ನ ಕೆಲಸ ನಾನು ಮಾಡಿದ್ದೇನೆ.

ಬೆಂಗಳೂರು ವಿಧಾನಸೌಧಕ್ಕಾಗಿ ಪ್ರತ್ಯೇಕ ಯೋಜನೆಯಿದೆಯೇ?

ಬೇರೆ ದೇಶಗಳ ಸಂಸತ್‌ ಭವನಗಳನ್ನು ನೋಡಿದಾಗ ಹೊಳೆದಿದ್ದನ್ನು ಇಟ್ಟುಕೊಂಡು ಪ್ರಸ್ತಾವನೆ ಸಿದ್ಧಪಡಿಸಿದ್ದೇವೆ. ಬೆಂಗಳೂರಿನ ವಿಧಾನಸೌಧವನ್ನೂ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಮಾಡಬೇಕು. ಬೆಂಗಳೂರು ವಿಧಾನಸೌಧದಲ್ಲಿ ಸಣ್ಣ ಪಾರ್ಕ್‌ ಬಿಟ್ಟು ಏನೂ ಇಲ್ಲ. ಅದನ್ನು ಮೈಸೂರು ಅರಮನೆ ರೀತಿ ನಿರ್ವಹಣೆ ಮಾಡಬೇಕಿದೆ. ಮುಂದಿನ 50 ವರ್ಷಕ್ಕೂ ಇದೇ ಸ್ಥಿತಿಯಲ್ಲಿರುವಂತೆ ಮಾಡಲು ಹಾಗೂ ಪ್ರವಾಸಿಗಳಿಗೆ ಹತ್ತಿರವಾಗಿಸಲು ಕೆಲ ಸಲಹೆ-ಸೂಚನೆ ನೀಡಿದ್ದೇವೆ. ಅದನ್ನು ಅವರು (ಸರ್ಕಾರ) ಮಾಡಬೇಕು.

ಸಚಿವ ಸ್ಥಾನ ತೃಪ್ತಿ ನೀಡಿತ್ತಾ ಅಥವಾ ಸಭಾಧ್ಯಕ್ಷರ ಸ್ಥಾನವೋ?

ಸಚಿವ ಸ್ಥಾನದಲ್ಲಿದ್ದಾಗ ಅಲ್ಲಿ ತೃಪ್ತಿಯಾಗಿದ್ದೆ. ಇಲ್ಲಿದ್ದಾಗ ಇಲ್ಲಿ ತೃಪ್ತನಾಗಿದ್ದೇನೆ. ಸ್ಪೀಕರ್‌ ಕೆಲಸವನ್ನು ಅತ್ಯಂತ ಆತ್ಮತೃಪ್ತಿಯಿಂದ ಮಾಡುತ್ತಿದ್ದೇನೆ. ಚಿಂತೆ ಮಾಡುವ ಬದಲು ದೇವರು ಕೊಟ್ಟ ಅವಕಾಶ ಬಳಸಿಕೊಂಡು ಉತ್ತಮ ಕೆಲಸ ಮಾಡಬೇಕಷ್ಟೇ.

ನೀವು ಈಗ ಸಚಿವ ಸ್ಥಾನಾಕಾಂಕ್ಷಿಯಂತೆ?

ನಾನು ಆಕಾಂಕ್ಷಿಯಲ್ಲ. ಬಂದಾಗ ನೋಡೋಣ ಎಂಬುದಷ್ಟೇ ನನ್ನ ಉದ್ದೇಶ. ಇಲ್ಲಿಯವರೆಗೆ ಯಾವುದನ್ನೂ ನಾನು ಕೇಳಿ ಪಡೆದಿಲ್ಲ. ಜನರ ಆಶೀರ್ವಾದದ ಮೇಲೆ ದೇವರು ಕೊಟ್ಟಿದ್ದಾರೆ. ಯಾವುದೇ ಹುದ್ದೆಗಾಗಿ ಆರೋಗ್ಯ ಹಾಗೂ ಮನಸ್ಸು ಹಾಳು ಮಾಡಿಕೊಳ್ಳುವುದಿಲ್ಲ.

ಸ್ಪೀಕರ್‌ ಹುದ್ದೆ ನಿಮ್ಮನ್ನು ಜನರಿಂದ ದೂರ ಮಾಡಿಲ್ಲವೇ?

ಶುರುವಲ್ಲಿ ಆ ಭಾವನೆ ಇತ್ತು. ಆದರೆ, ನಾನು ಜನರಿಗೆ ದೂರವಾಗುವ ಅವಕಾಶ ಕೊಡದೆ ಜನರ ಮಧ್ಯೆಯೇ ಇದ್ದೇನೆ. ಪ್ರೊಟೋಕಾಲ್‌ ನಡುವೆಯೂ ನಾನು ಜನರೊಂದಿಗೆ ಇರಲು ಹಿಂದೆ ಬಿದ್ದಿಲ್ಲ.

ಸ್ಪೀಕರ್‌ ಆದವರು ನಂತರದ ಚುನಾವಣೆಯಲ್ಲಿ ಸೋಲುತ್ತಾರೆ ಎಂಬ ಆತಂಕ ನಿಮಗೂ ಇದೆಯೇ?

ನನ್ನ ಕ್ಷೇತ್ರದ ಜನರು ಅದನ್ನು ಸುಳ್ಳಾಗಿಸುತ್ತಾರೆ. ನಾನು ಜನರೊಂದಿಗೆ ಇದ್ದೇನೆ. ಹೀಗಾಗಿ ನನಗೆ ಆ ಆತಂಕವಿಲ್ಲ.

ಕಾಂಗ್ರೆಸ್‌ನಲ್ಲಿ ಮುಸ್ಲಿಂ ನಾಯಕತ್ವ ಕೊರತೆ ಎದುರಾಗಿದೆ ಎಂದು ಕೈ ನಾಯಕರೇ ಆರೋಪಿಸುತ್ತಿದ್ದಾರಲ್ಲ?

ಕಾಂಗ್ರೆಸ್‌ ಎಂಬುದು ಜ್ಯಾತ್ಯತೀತ ಸಿದ್ಧಾಂತದ ಮೇಲೆ ನಿಂತಿರುವ ಪಕ್ಷ. ನಾಯಕತ್ವಕ್ಕಿಂತ ಸಿದ್ಧಾಂತ ಮುಖ್ಯ. ಕಾಂಗ್ರೆಸ್‌ ಪಕ್ಷದಿಂದ ಅಲ್ಲದಿದ್ದರೆ ನಾನು ಸ್ಪೀಕರ್ ಆಗುತ್ತಿದ್ದೆನೋ, ಇಲ್ಲವೋ ಗೊತ್ತಿಲ್ಲ. ಕಾಂಗ್ರೆಸ್‌ನಲ್ಲಿ ಜಮೀರ್‌, ಹ್ಯಾರಿಸ್‌ ಸೇರಿ ಹಲವು ನಾಯಕರಿದ್ದಾರೆ. ಕೆಲಸವೂ ಮಾಡುತ್ತಿದ್ದಾರೆ. ನಾಯಕತ್ವ ಇಲ್ಲ ಎಂದು ನನಗೆ ಅನಿಸುವುದಿಲ್ಲ ಇದು ರಾಜಕೀಯವಾಗಿ ಸುದ್ದಿ ಹಬ್ಬಿಸುವ ಪ್ರಯತ್ನವಷ್ಟೇ.

ದೈವಾರಾಧನೆ ಸೇರಿ ಹಿಂದೂ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿಮ್ಮ ನಡೆಗೆ ಪರ, ವಿರೋಧ ವ್ಯಕ್ತವಾಗಿದೆಯಲ್ಲ?

ನಮ್ಮ ಧರ್ಮ ಅಚ್ಚುಕಟ್ಟಾಗಿ ಆಚರಿಸುವ ಜತೆಗೆ ಎಲ್ಲಾ ಧರ್ಮದ ಆಚರಣೆಗಳನ್ನೂ ಗೌರವಿಸುತ್ತೇನೆ. ಇದಕ್ಕೆ ಶೇ.5 ರಷ್ಟು ಜನ ಟೀಕೆ ಮಾಡಬಹುದು. ಶೇ.5 ರಷ್ಟು ಜನ ಮನಸ್ಸಿನಲ್ಲಿ ಸರಿ ಎನಿಸಿದರೂ ರಾಜಕೀಯಕ್ಕಾಗಿ ಟೀಕಿಸಬಹುದು. ಆದರೆ ಶೇ.90 ರಷ್ಟು ಜನ ಇಷ್ಟಪಡುತ್ತಾರೆ. ಅವರಿಗಾಗಿ ನಾನು ಕೆಲಸ ಮಾಡುತ್ತೆನೆ.

ಆರಂಭದಲ್ಲಿ ನಿಮ್ಮ ಕನ್ನಡ ಉಚ್ಚಾರ ಬಗ್ಗೆ ಟ್ರೋಲ್‌ ಆಗುತ್ತಿತ್ತು?

ಶುರುವಲ್ಲಿ ಟ್ರೋಲ್‌ ಆಗುವುದು ಸ್ವಾಭಾವಿಕ. ಈಗ ನನ್ನ ಕನ್ನಡ ಕಲಿತು ಅರ್ಥ ಮಾಡಿಕೊಂಡು ಶಹಬ್ಬಾಸ್‌ಗಿರಿಯನ್ನೂ ನೀಡುತ್ತಿದ್ದಾರೆ. ಇದು ನನಗೆ ಸಂತೋಷ.