ಸಾರಾಂಶ
- ಗೋಪಾಲ್ ನಾಯಕ್ ಮತ್ತು ಕೀರ್ತನಾ ಕೃಷ್ಣನ್
73ನೇ ತಿದ್ದುಪಡಿಯಲ್ಲಿ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಸ್ವಾಯತ್ತ ಸ್ಥಾನಮಾನ ದಕ್ಕಿದೆ. ಆದರೂ ಇನ್ನೂ ಕೂಡ ಗ್ರಾಮೀಣ ಸ್ಥಳೀಯ ಸಂಸ್ಥೆಗಳು ತಮ್ಮದೇ ಆದ ಸ್ವತಂತ್ರ ಸಂಪನ್ಮೂಲಗಳನ್ನು ಸಂಗ್ರಹಿಸಲು ಹಿಂದೇಟು ಹಾಕುತ್ತಿವೆ. ಅದರಿಂದ ಆಗಬೇಕಾದ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ಸ್ಥಳೀಯ ಸಂಸ್ಥೆಗಳು ಕೇಂದ್ರ ಮತ್ತು ರಾಜ್ಯ ಅನುದಾನಗಳಿಗೆ ಕಾಯುವುದರಿಂದ ಅಭಿವೃದ್ಧಿ ವಿಚಾರಗಳಲ್ಲಿ ಹಿನ್ನಡೆ ಆಗಿದೆ. ಈ ಸಮಸ್ಯೆಯನ್ನು ಪರಿಹರಿಸಲು ಒದಗಿಬಂದಿರುವುದೇ ಜಲ ಜೀವನ ಅಭಿಯಾನ.
ಈ ಜಲ ಜೀವನ ಅಭಿಯಾನವು ಜನರ ತೊಡಗಿಸಿಕೊಳ್ಳುವಿಕೆ ಮತ್ತು ಬೇಡಿಕೆಗೆ ತಕ್ಕಂತೆ ಶುದ್ಧ ಕುಡಿಯುವ ನೀರಿನ ಪೂರೈಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸ್ವಾವಲಂಬನೆ ಸಾಧಿಸುವ ಒಂದು ಅತ್ಯುತ್ತಮ ಮಾದರಿಯಾಗಿದೆ. ಜಲ ಜೀವನ ಅಭಿಯಾನವು ನೀರು ಸರಬರಾಜು ವ್ಯವಸ್ಥೆಯನ್ನು ನಿರ್ವಹಿಸುವ ಮತ್ತು ಸೂಕ್ತ ರೀತಿಯಲ್ಲಿ ಜರುಗುವಂತೆ ಮಾಡುವ ಜವಾಬ್ದಾರಿಯನ್ನು ಕುಟುಂಬಗಳೇ ತೆಗೆದುಕೊಳ್ಳಲು ಪ್ರೇರೇಪಿಸುತ್ತದೆ. ಆ ಮೂಲಕ ಸ್ವಾವಲಂಬನೆ ಸಾಧಿಸಲು ಉತ್ತೇಜಿಸುತ್ತದೆ. ಜನರ ಅಗತ್ಯಗಳಿಗೆ ತಕ್ಕಂತೆ ಹಣ ವೆಚ್ಚ ಮಾಡುವುದಕ್ಕೆ ಈ ವಿಧಾನವು ನೆರವಾಗುತ್ತದೆ. ಜಲಜೀವನ ಅಭಿಯಾನವನ್ನು ಯಶಸ್ವಿಯಾಗಿ ಅನುಷ್ಠಾನ ಮಾಡುವುದರಿಂದ ಸಾರ್ವಜನಿಕರ ಅಗತ್ಯಗಳ ಕುರಿತು ಅರಿಯುವುದಕ್ಕೆ ಮತ್ತು ಆ ನಿಟ್ಟಿನಲ್ಲಿ ಆದ್ಯತೆ ನೀಡುವುದಕ್ಕೆ ಸಾಧ್ಯವಾಗಲಿದೆ. ಜೊತೆಗೆ ಬಳಕೆದಾರರ ಶುಲ್ಕ ನಿರ್ಣಯ ಮಾಡಲು, ವಿವೇಕಯುಕ್ತವಾಗಿ ವೆಚ್ಚ ಮಾಡಲು ಮತ್ತು ಆರ್ಥಿಕ ಸ್ವಾತಂತ್ರ್ಯ ಸಾಧಿಸಲು ಸಾಧ್ಯವಾಗಲಿದೆ. ಈ ವಿಧಾನವನ್ನು ಇನ್ನಿತರ ಚಟುವಟಿಕೆಗಳಿಗೂ ಅನ್ವಯಿಸುವುದರಿಂದ ಸ್ಥಳೀಯ ಸಂಸ್ಥೆಗಳು ಸಾರ್ವಜನಿಕ ಸೇವೆಯನ್ನು ಉತ್ತಮಗೊಳಿಸಬಹುದು ಮತ್ತು ಸಾರ್ವಜನಿಕ ಕಲ್ಯಾಣಕ್ಕೆ ದುಡಿಯಬಹುದಾಗಿದೆ.
1993ರಲ್ಲಿ ಸಂವಿಧಾನದ 73ನೇ ತಿದ್ದುಪಡಿ ಜಾರಿಗೆ ಬಂದಿತ್ತು. ಆಗ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸ್ಥಾಪಿಸುವ ಮೂಲಕ ಗ್ರಾಮ ಮಟ್ಟದ ಸ್ವ-ಆಡಳಿತ ಸಂಸ್ಥೆಗಳಿಗೆ ಅಧಿಕಾರ ವಿಕೇಂದ್ರೀಕರಣ ಮಾಡಲಾಗಿತ್ತು. ಈ ಕ್ರಮದ ಮೂಲಕ ಸಾರ್ವಜನಿಕ ಸೇವೆಯನ್ನು ಉತ್ತಮಗೊಳಿಸುವ, ಅಗತ್ಯಕ್ಕೆ ತಕ್ಕಂತೆ ಜವಾಬ್ದಾರಿಯುತವಾಗಿ ಪಾರದರ್ಶಕ ಸೇವೆ ಒದಗಿಸುವ ಉದ್ದೇಶವನ್ನು ಹೊಂದಲಾಗಿತ್ತು.
ಗ್ರಾಮೀಣ ಸ್ಥಳೀಯ ಸಂಸ್ಥೆಗಳು ತಮ್ಮ ಸ್ವಾಯತ್ತತೆಯನ್ನು ಬಳಸಿಕೊಂಡು ಬೇಡಿಕೆ ಆಧರಿತ ಬಜೆಟ್‌ಗಳನ್ನು ರೂಪಿಸಬೇಕಿದೆ. ಅಂದಾಜು ವೆಚ್ಚಗಳ ರೂಪುರೇಷೆ ಹಾಕಿಕೊಳ್ಳುವ ಮೂಲಕ ಮತ್ತು ಯೋಜನೆಗಳಿಗೆ ಆದ್ಯತೆ ನೀಡುವ ಮೂಲಕ ಅಗತ್ಯಕ್ಕೆ ತಕ್ಕಂತಹ ಬಜೆಟ್ ಅನ್ನು ಮಾಡಬಹುದಾಗಿದೆ. ಈ ವಿಧಾನದ ಮೂಲಕ ಆದಾಯ ಮೂಲಗಳನ್ನು ತಿಳಿಯಬಹುದು, ಕೆಲಸಕ್ಕೆ ತಕ್ಕ ಬೆಲೆ ನಿರ್ಧರಿಸಬಹುದು ಮತ್ತು ಒಟ್ಟು ಆದಾಯವನ್ನು ಅಂದಾಜು ಮಾಡಬಹುದಾಗಿದೆ. ಆದಾಯದ ದೊಡ್ಡ ಪಾಲನ್ನು ಸ್ಥಳೀಯವಾಗಿ ತೆರಿಗೆ, ಬಳಕೆದಾರರ ಶುಲ್ಕ, ಸೇವಾ ಶುಲ್ಕ ಮತ್ತು ಆಸ್ತಿ ಶುಲ್ಕ ಸಂಗ್ರಹಿಸುವ ಮೂಲಕ ಗಳಿಸಬಹುದಾಗಿದೆ. ಅದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುದಾನದಿಂದ ನಡೆಸಲು ಸಾಧ್ಯವಾಗದ ಪ್ರಮುಖ ಯೋಜನೆಗಳಿಗೆ ಉಂಟಾಗುವ ವೆಚ್ಚಗಳನ್ನು ನಿಭಾಯಿಸಬಹುದಾಗಿದೆ. ಹಾಗಿದ್ದೂ ಹಣದ ಕೊರತೆ ಉಂಟಾದರೆ ಹೆಚ್ಚುವರಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುದಾನಗಳ ಮೂಲಕ ಅಥವಾ ಲಭ್ಯವಿರುವ ಸಿಎಸ್ಆರ್ ಫಂಡ್ ಮೂಲಕ ನಿಭಾಯಿಸಬಹುದು.
ಸಂಪನ್ಮೂಲಗಳ ವಿವೇಚನಾಯುಕ್ತ ಬಳಕೆಯ ಅರಿವಿನ ಕೊರತೆಯೂ ಹಿನ್ನೆಡೆಗೆ ಕಾರಣವಾಗಿದೆ. ಒಂದು ಉದಾಹರಣೆಯನ್ನು ಇಲ್ಲಿ ಗಮನಿಸಬಹುದು. ನಾವು ಕ್ಷೇತ್ರಾಧ್ಯಯನದಲ್ಲಿ ಒಂದು ಶಾಲೆಗೆ ಹೋಗಿದ್ದೆವು. ಅಲ್ಲಿ ಗ್ರಾಮ ಪಂಚಾಯತಿಯು ಆ ಶಾಲೆಯಲ್ಲಿ ಕಾಲಾನುಕ್ರಮದಲ್ಲಿ ಮೂರು ವಿಭಿನ್ನ ಶೌಚಾಲಯ ಕಟ್ಟಡಗಳನ್ನು ನಿರ್ಮಿಸಿದೆ. ಅದರಲ್ಲಿ ಹೊಸತಾಗಿ ನಿರ್ಮಿಸಲಾದ ಒಂದು ಶೌಚಾಲಯ ಮಾತ್ರ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ. ಉಳಿದ ಇನ್ನೆರಡು ಹಳೆಯ ಶೌಚಾಲಯಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸದಿರುವುದರಿಂದ ಅದನ್ನು ಬಳಕೆ ಮಾಡುತ್ತಿಲ್ಲ.
ಇಲ್ಲಿ ಗ್ರಾಮಪಂಚಾಯಿತಿಯು ಹಳೆಯ ಶೌಚಾಲಯ ಕಟ್ಟಡವನ್ನು ಕಡಿಮೆ ಖರ್ಚಿನಲ್ಲಿ ನವೀಕರಿಸುವ ಬದಲು ಹೊಸ ಎರಡು ಶೌಚಾಲಯಗಳನ್ನು ನಿರ್ಮಿಸಿದೆ. ಆ ಎರಡು ಕಟ್ಟಡಗಳು ಶಾಲಾ ಆವರಣದಲ್ಲಿ ವ್ಯರ್ಥವಾಗಿ ಬಿದ್ದಿವೆ. ಶಾಲೆಯ ಜಾಗವೂ ವ್ಯರ್ಥವಾಗಿದೆ. ಈ ರೀತಿಯ ಹತ್ತಾರು ಉದಾಹರಣೆಗಳನ್ನು ನಾವು ನೋಡಬಹುದಾಗಿದೆ. ಇಂಥಾ ಅಸಡ್ಡೆಯ ಕಾರ್ಯವಿಧಾನಗಳಿಂದ ಆರ್ಥಿಕ ಅಶಿಸ್ತು ಉಂಟಾಗುತ್ತದೆ ಮತ್ತು ಹಣದ ಅಸಮರ್ಪಕ ಬಳಕೆಗೆ ಕಾರಣವಾಗುತ್ತದೆ. ಒಂದು ವೇಳೆ ಗ್ರಾಮ ಪಂಚಾಯಿತಿಗಳೇ ಆದಾಯ ಸಂಗ್ರಹಿಸುವ ಸವಾಲನ್ನು ಕೈಗೊಂಡಿದ್ದರೆ ಇಂತಹ ಹಣದ ದುರುಪಯೋಗ ಆಗುತ್ತಿರಲಿಲ್ಲ.
ಆರ್ಥಿಕ ಸಂಪನ್ಮೂಲಗಳ ಮಹತ್ವವನ್ನು ಅರ್ಥಮಾಡಿಕೊಳ್ಳಬೇಕಾದರೆ ಸಂಪನ್ಮೂಲಗಳನ್ನು ಸಂಗ್ರಹಿಸುವುದು ಬಹಳ ಮುಖ್ಯ. ಅದು ಸಾಧ್ಯವಾಗದೇ ಇದ್ದರೆ ಗ್ರಾಮ ಪಂಚಾಯತ್‌ಗಳು ಅವರು ನಿರ್ವಹಣೆ ಮಾಡುವ ಫಂಡ್ ಗಳ ಪ್ರಾಮುಖ್ಯತೆಯನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳುವುದು ಸಾಧ್ಯವಾಗುವುದಿಲ್ಲ.
ಸಾರ್ವಜನಿಕರ ಅಗತ್ಯಗಳಿಗೆ ತಕ್ಕಂತೆ ಕಾರ್ಯನಿರ್ವಹಿಸಲು ಹೀಗೆ ಸಂಪನ್ಮೂಲ ಸಂಗ್ರಹಿಸುವುದು ಅವಶ್ಯ ಮತ್ತು ಅನಿವಾರ್ಯವೇ ಆಗಿದೆ. ತಮ್ಮದೇ ಆದ ಸಂಪನ್ಮೂಲ ಇದ್ದಾಗ ಸಂಸ್ಥೆಗಳು ಆದ್ಯತೆಯ ಯೋಜನೆಗಳನ್ನು ಮೊದಲು ಕೈಗೆತ್ತಿಕೊಳ್ಳುತ್ತವೆ ಮತ್ತು ಯೋಜನೆಗಳ ವೆಚ್ಚವನ್ನು ನಿಖರವಾಗಿ ಅಂದಾಜು ಮಾಡುತ್ತವೆ. ವಿಶೇಷವಾಗಿ ವೆಚ್ಚವನ್ನು ಕಡಿಮೆ ಮಾಡಲು ದಾರಿ ಹುಡುಕುತ್ತವೆ. ಬಜೆಟ್ ಅನ್ನು ಸೂಕ್ತ ರೀತಿಯಲ್ಲಿ ಪರಿಶೀಲನೆ ಮಾಡುವುದರಿಂದ ಕಡಿಮೆ ಇರುವ ಸಂಪನ್ಮೂಲಗಳ ಕುರಿತು ತಿಳಿಯಬಹುದು. ಕೇಂದ್ರ ಮತ್ತು ರಾಜ್ಯ ಅನುದಾನಗಳ ಹೊರತಾಗಿ ಎಷ್ಟು ಸಂಪನ್ಮೂಲ ಬೇಕು ಎಂಬುದನ್ನು ತಿಳಿಯಲು ಸಾಧ್ಯವಾಗುತ್ತದೆ.ಸಾಮಾನ್ಯವಾಗಿ ಸ್ಥಳೀಯ ಸಂಸ್ಥೆಗಳಿಗೆ ಸಾರ್ವಜನಿಕರ ಅಗತ್ಯಗಳ ಕುರಿತು ಸೂಕ್ತ ಮಾಹಿತಿ ಇರುತ್ತದೆ.
ಅದರಿಂದ ಸೂಕ್ತ ರೀತಿಯ ಬಜೆಟ್ ಹಾಕಿಕೊಳ್ಳಬಹುದಾಗಿರುತ್ತದೆ ಮತ್ತು ಸೂಕ್ತ ರೀತಿಯಲ್ಲಿ ಸಂಪನ್ಮೂಲ ಬಳಸಬಹುದಾಗಿರುತ್ತದೆ. ಅವರವರೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾದರೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಅವರ ಗ್ರಾಮದ ಕಾರ್ಯನಿರ್ವಹಣೆಗಳಿಗೆ ಅವರೇ ಜವಾಬ್ದಾರರಾಗುತ್ತಾರೆ. ಹೀಗೆ ಅಧಿಕಾರ ವಿಕೇಂದ್ರೀಕರಣ ಮಾಡುವುದರ ಯಶಸ್ಸು ನಿಂತಿರುವುದು ಸಾಮರ್ಥ್ಯ ಮತ್ತು ಸಂಪನ್ಮೂಲಗಳ ಆಧಾರದಲ್ಲಿ. ಉದಾಹರಣೆಗೆ ನೋಡುವುದಾದರೆ ಬ್ರೆಜಿಲ್ ನಲ್ಲಿ ಆರೋಗ್ಯ ಸೇವಾ ಸಂಸ್ಥೆಗಳನ್ನು ವಿಕೇಂದ್ರೀಕರಣಗೊಳಿಸಲಾಗಿತ್ತು. ಆಗ ಅಲ್ಲಿನ ಪೋರ್ಟೋ ಅಲೆಗ್ರೆ ಎಂಬ ಪ್ರದೇಶದಲ್ಲಿ ಆರೋಗ್ಯ ಸೇವೆ ಉತ್ತಮಗೊಂಡಿತು ಮತ್ತು ಆಡಳಿತ ಸೇವೆ ಹೆಚ್ಚು ಪಾರದರ್ಶಕವಾಗಿ ನಡೆಯುವಂತಾಯಿತು.
ಅದೇ ಥರ ಇಂಡೋನೇಷ್ಯಾದಲ್ಲಿ ಶಿಕ್ಷಣ ಮತ್ತು ಆರೋಗ್ಯ ಸೇವೆ ವಿಕೇಂದ್ರೀಕರಣ ನಡೆಯಿತು. ಅದರಿಂದ ಉತ್ತಮ ಸೇವೆ ದೊರಕುವಂತಾಯಿತು. ಆದರೂ ಸ್ಥಳೀಯ ಆಡಳಿತಕ್ಕೆ ತಕ್ಕಂತೆ ಸೇವಾ ಗುಣಮಟ್ಟ ಬದಲಾಗುತ್ತದೆ. ಜಲ ಜೀವನ ಅಭಿಯಾನವು ಸಾರ್ವಜನಿಕರ ತೊಡಗಿಸಿಕೊಳ್ಳುವ, ಸ್ಥಳೀಯ ಮಾಲೀಕತ್ವ ಮತ್ತು ಬೇಡಿಕೆಗೆ ತಕ್ಕಂತೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಕ್ರಮಗಳಿಗೆ ಹಾಗೂ ಮತ್ತು ಆಡಳಿತ ವಿಕೇಂದ್ರೀಕರಣಕ್ಕೆ ಒತ್ತು ನೀಡುತ್ತದೆ. ಈ ವಿಧಾನದಲ್ಲಿ ಕುಟುಂಬಗಳಿಗೆ ಹೊಣೆಗಾರಿಕೆ ಹೊರೆಸಲಾಗುತ್ತದೆ. ನೀರಿನ ಶುಲ್ಕವನ್ನು ವಹಿಸಿಕೊಳ್ಳುವ ಮೂಲಕ ಗ್ರಾಮಸ್ಥರೇ ನೀರು ಸರಬರಾಜು ವ್ಯವಸ್ಥೆಯನ್ನು ನಿರ್ವಹಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳುವಂತೆ ನೋಡಿಕೊಳ್ಳಲಾಗುತ್ತದೆ.
ಈ ವಿಧಾನವು ಪೂರೈಕೆ ಆಧರಿತ ಮಾದರಿಯನ್ನು ಸಮುದಾಯದ ಬೇಡಿಕೆ ಆಧರಿತ ಮಾದರಿ ಜಾರಿಗೆ ಬರಲು ಕಾರಣವಾಗುತ್ತದೆ. ಸೇವಾ ವೆಚ್ಚವನ್ನು ಕಡಿಮೆ ಮಾಡಲು ಸೂಕ್ತ ರೀತಿಯಲ್ಲಿ ಹಣಕಾಸು ನಿರ್ವಹಣೆ ಮಾಡುವುದು ಬಹಳ ಮುಖ್ಯ. ಇದರಿಂದ ಅನುದಾನ ಹಂಚಿಕೆ ಉತ್ತಮಗೊಳ್ಳುವುದಷ್ಟೇ ಅಲ್ಲ, ಆರ್ಥಿಕ ಅಸ್ಥಿರತೆಯನ್ನು ತಪ್ಪಿಸಬಹುದು ಮತ್ತು ದೀರ್ಘಕಾಲದ ಸುಸ್ಥಿರತೆ ಸಾಧಿಸಬಹುದು. ಜಲ ಜೀವನ ಅಭಿಯಾನವು ಬಳಕೆದಾರರ ಶುಲ್ಕ ಸಂಗ್ರಹಣೆ ಮತ್ತು ಎಚ್ಚರಿಕೆಯಿಂದ ಖರ್ಚು ಮಾಡುವುದರ ಮಹತ್ವವನ್ನು ಸಮರ್ಥವಾಗಿ ತಿಳಿಸುತ್ತದೆ.
ಜೊತೆಗೆ ಆರ್ಥಿಕ ನಿರ್ವಹಣೆ ಮತ್ತು ಸಾರ್ವಜನಿಕರ ಭಾಗವಹಿಸುವಿಕೆಗೆ ಅತ್ಯುತ್ತಮ ಮಾದರಿಯಾಗಿದೆ.ಇತರ ಚಟುವಟಿಕೆಗಳಿಗೂ ಜಲ ಜೀವನ ಅಭಿಯಾನದ ವಿಧಾನಗಳನ್ನೇ ಅನ್ವಯಿಸುವುದರಿಂದ ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳಬಹುದು. ಸಾರ್ವಜನಿಕರ ಅಗತ್ಯಕ್ಕೆ ತಕ್ಕಂತೆ ಸಂಪನ್ಮೂಲಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬಹುದು. ಆದ್ದರಿಂದ ಜಲಜೀವನ ಅಭಿಯಾನದ ಯಶಸ್ವಿ ಅನುಷ್ಠಾನದಿಂದ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಸಾಮರ್ಥ್ಯ ವರ್ಧಿಸುತ್ತದೆ. ಸಾರ್ವಜನಿಕ ಸೇವೆಯನ್ನು ಉತ್ತಮಗೊಳಿಸುತ್ತದೆ. ಸಾರ್ವಜನಿಕ ಕಲ್ಯಾಣ ಮತ್ತು ದೀರ್ಘ ಕಾಲದ ಸುಸ್ಥಿರತೆ ಸಾಧ್ಯವಾಗಿಸುತ್ತದೆ. ವಿಶೇಷವಾಗಿ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಪ್ರಸ್ತುತ ಕಾರ್ಯನಿರ್ವಹಣೆಯ ವಿಧಾನವನ್ನೇ ಬದಲಾಯಿಸುತ್ತದೆ.
(ಈ ಲೇಖನದ ಬರಹಗಾರರಾದ ಪ್ರೊ. ಗೋಪಾಲ್ ನಾಯ್ಕ್ ಅವರು ಬೆಂಗಳೂರಿನ ಐಐಎಂನಲ್ಲಿ ಜಲ ಜೀವನ್ ಮಿಷನ್ (ಜಲ ಜೀವನ ಅಭಿಯಾನ) ವಿಭಾಗದ ಚೇರ್ ಪ್ರೊಫೆಸರ್ ಆಗಿದ್ದಾರೆ ಮತ್ತು ಶ್ರೀಮತಿ ಕೀರ್ತನಾ ಕೃಷ್ಣನ್ ಅವರು ಐಐಎಂಬಿಯಲ್ಲಿ ರಿಸರ್ಚ್ ಅಸೋಸಿಯೇಟ್ ಆಗಿದ್ದಾರೆ.)