ಸಾರಾಂಶ
ಬೆಂಗಳೂರು : ಮಕರ ಸಂಕ್ರಾಂತಿ ಹಬ್ಬದ ಆಚರಣೆಗೆ ನಗರ ಸಜ್ಜಾಗಿದ್ದು, ವಿವಿಧ ಮಾರುಕಟ್ಟೆಗಳಲ್ಲಿ ಎಳ್ಳುಬೆಲ್ಲ, ಕಬ್ಬು, ಅವರೆ, ಹೂವುಗಳ ವ್ಯಾಪಾರ ಜೋರಾಗಿದೆ. ಗವಿಗಂಗಾಧರೇಶ್ವರ ಸೇರಿ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗೆ ಸಜ್ಜು ಮಾಡಲಾಗುತ್ತಿದೆ.
ಧನುರ್ಮಾಸದ ಕಡೆಯ ದಿನವಾದ ಮಂಗಳವಾರ ಸಂಕ್ರಾಂತಿ ಬಂದಿದೆ. ಎರಡು ದಿನ ಮುಂಚಿತವಾಗಿಯೇ ಕೆ.ಆರ್.ಮಾರುಕಟ್ಟೆ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಲ್ಲಿ ಕಪ್ಪು, ಕೆಂಪು ಕಬ್ಬು ರಾಶಿ ಕಂಡುಬಂದಿದೆ. ಎಲ್ಲ ಬಡಾವಣೆಗಳಲ್ಲೂ ಕಬ್ಬಿನ ಜಲ್ಲೆ, ಗೆಣಸು, ಕಡಲೆಕಾಯಿ, ಅವರೆಕಾಯಿ ರಾಶಿ, ಎಲಚೆ ಹಣ್ಣು, ನೆಲ್ಲಿಕಾಯಿ, ಸೇರಿ ಹಬ್ಬದ ಪರಿಕರಗಳು ವ್ಯಾಪಾರ ಭರಾಟೆ ನಡೆದಿದೆ. ಬೆಂಗಳೂರು ಸುತ್ತಮುತ್ತಲ ರೈತರು ಕಬ್ಬನ್ನು ಲಾರಿಗಳಲ್ಲಿ ತಂದು ಕೆ.ಆರ್. ಮಾರುಕಟ್ಟೆ ಸುತ್ತಮುತ್ತ ರಾಶಿ ಹಾಕಿಕೊಂಡು ಮಾರಾಟ ಮಾಡುತ್ತಿದ್ದಾರೆ. ಭಾನುವಾರ ಗಾಂಧೀ ಬಜಾರ್‌ನಲ್ಲಿ ಮಹಿಳೆಯರು ಸಂಕ್ರಾಂತಿ ಎಳ್ಳುಬೆಲ್ಲ, ಅಲಂಕೃತ ಪುಟ್ಟ ಮಡಿಕೆ,ಕುಡಿಕೆ ಕೊಳ್ಳುವಲ್ಲಿ ನಿರತರಾಗಿದ್ದು ಕಂಡುಬಂತು.
ಮಲ್ಲೇಶ್ವರ, ಗಾಂಧೀ ಬಝಾರ್, ಯಶವಂತಪುರ, ರಾಜಾಜಿನಗರ, ಜಯನಗರ, ಚಾಮರಾಜಪೇಟೆ, ಚಿಕ್ಕಪೇಟೆಗಳ ಬೀದಿಗಳಲ್ಲಿ ಸಂಕ್ರಾಂತಿಗಾಗಿ ಮಳಿಗೆಗಳು ತೆರೆದುಕೊಂಡಿವೆ. 100 ಗ್ರಾಂ ನಿಂದ ಹಿಡಿದು 2 ಕೇಜಿವರೆಗೆ ಎಳ್ಳು, ಬೆಲ್ಲ, ಪುಟಾಣಿ ಕೊಬ್ಬರಿ ಮಿಶ್ರಿತ ಪೊಟ್ಟಣ ಮಾರಾಟವಾಗುತ್ತಿದೆ. ಇದಕ್ಕೆ 275 - 300 ವರೆಗೆ ಬೆಲೆಯಿದೆ. ಸಕ್ಕರೆ, ಬೆಲ್ಲದ ಅಚ್ಚುಗಳನ್ನು ಮಾರಾಟ ಮಾಡಲಾಗುತ್ತಿದೆ.
ಕಡಲೆಕಾಯಿ ಕೇಜಿಗೆ ₹60- ₹80 ದರವಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಕಬ್ಬಿಗೆ ಬೇಡಿಕೆ, ಬೆಲೆ ಹೆಚ್ಚಾಗಿದೆ. ಮಳೆ ಸೇರಿದಂತೆ ಇತರೆ ಕಾರಣದಿಂದ ಮಾರುಕಟ್ಟೆಯಲ್ಲಿ ಕಬ್ಬಿನ ಪ್ರಮಾಣ ಕಡಿಮೆಯಾಗಿದ್ದು, ಒಂದು ಕಬ್ಬಿನ ಬೆಲೆಯೇ ₹80-100 ಆಗಿದೆ.
ಇನ್ನು, ಸಂಕ್ರಾಂತಿ ಪ್ರಯುಕ್ತ ನಗರದ ವಿವಿಧೆಡೆ ಗೋಪೂಜೆ, ದೇವರ ಆರಾಧನೆ, ಮಹಿಳೆಯರಿಗೆ ರಂಗೋಲಿ ಸ್ಪರ್ಧೆ , ಮಕ್ಕಳಿಗಾಗಿ ಕ್ರೀಡಾ ಚಟುವಟಿಕೆಗಳನ್ನು ಏರ್ಪಡಿಸಲಾಗಿದೆ. ಸಾಮೂಹಿಕವಾಗಿ ಬೆಂಗಳೂರಲ್ಲಿ ತಮಿಳು ಸಂಸ್ಕೃತಿಯ ಪೊಂಗಲ್ ಮಾಡುವ ಆಚರಣೆ ನಡೆಯಲಿದೆ. ಜೊತೆಗೆ ಜಯನಗರದ ಕನಕನಪಾಳ್ಯ, ಗವಿಪುರ ಗುಟ್ಟಳ್ಳಿ ಸೇರಿ ವಿವಿಧೆಡೆ ಗೋವಿನ ಪೂಜೆ, ಕಿಚ್ಚು ಹಾಯಿಸುವ ಸಂಪ್ರದಾಯ ಆಚರಣೆಯಾಗಲಿದೆ.
ನಗರದ ಮಲ್ಲೇಶ್ವರದ ಕಾಡು ಮಲ್ಲಿಕಾರ್ಜುನ, ಬಸವನಗುಡಿ ದೊಡ್ಡಗಣಪತಿ ದೇವಸ್ಥಾನ, ಗಾಳಿ ಆಂಜನೇಯ, ಕೋಟೆ ವೆಂಕಟರಮಣ ದೇವಸ್ಥಾನ, ಹಲಸೂರು ಸೋಮೇಶ್ವರ ದೇವಸ್ಥಾನ, ಬೇಗೂರು ನಾಗನಾಥೇಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಲಿದೆ.
ಹೂವಿನ ದರ ಹೆಚ್ಚು:
ಈ ಬಾರಿ ವಿಪರೀತ ಚಳಿ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಬೇಡಿಕೆಯಷ್ಟು ಹೂವು ಬರುತ್ತಿಲ್ಲ. ಹೀಗಾಗಿ ದರ ಹೆಚ್ಚಾಗಿದೆ ಎಂದು ಕೆ.ಆರ್.ಮಾರುಕಟ್ಟೆ ಹೂವಿನ ವರ್ತಕ ನಾಗರಾಜ್ ತಿಳಿಸಿದರು. ಕೇಜಿ ಸುಗಂಧರಾಜಕ್ಕೆ ₹200, ರೋಜಾ ₹200, ಸೇವಂತಿಗೆ ₹250 - 300, ಗುಲಾಬಿ ₹300, ಕನಕಾಂಬರ ₹1600, ಮಲ್ಲಿಗೆ ಮೊಗ್ಗು ₹2000 ದರವಿದೆ ಎಂದು ಅವರು ತಿಳಿಸಿದರು. ಮಂಜಿನ ಕಾರಣದಿಂದ ಹೂವು ಬೆಳೆಯುತ್ತಿಲ್ಲ. ಹೀಗಾಗಿ ಹೂವಿನ ಬೆಲೆ ಏರಿಕೆಯಾಗಿದೆ ಎಂದು ತಿಳಿಸಿದರು.
ಗವಿಗಂಗಾಧರನಿಗೆ ಸೂರ್ಯರಶ್ಮಿ ಸ್ಪರ್ಷ:
ಸಂಕ್ರಾಂತಿ ದಿನದಂದು ಬೆಳಗ್ಗೆ ಗವಿಗಂಗಾಧರೇಶ್ವರ ಸ್ವಾಮೀಜಿಗೆ ವಿಶೇಷ ಪೂಜೆ, ಅಭಿಷೇಕ ನಡೆಯಲಿದೆ. ಮಧ್ಯಾಹ್ನ 1ಕ್ಕೆ ದೇವಸ್ಥಾನ ಬಂದ್ ಆಗಲಿದೆ. ಸಂಜೆ 5.14ರಿಂದ 5.17 ನಿಮಿಷದವರೆಗೆ ಮೂರು ನಿಮಿಷ ನಂದಿಯ ಕೊಂಬುಗಳ ಮೂಲಕ ಹಾದು ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಷಿಸಿ ಪೂಜಿಸಲಿದೆ. ದೇವಸ್ಥಾನದ ಆವರಣದಲ್ಲಿ ಎಲ್‌ಇಡಿ ಪರದೆ ಮೂಲಕ ಬಿತ್ತರಿಸಲಾಗುವುದು. ಸೂರ್ಯರಶ್ಮಿ ಸ್ಪರ್ಷದ ವೇಳೆ ಶಿವಲಿಂಗಕ್ಕೆ ಕ್ಷೀರಾಭಿಷೇಕ ನೆರವೇರಿಸಲಾಗುವುದು. ಬಳಿಕ ಶಾಂತಿ ಅಭಿಷೇಕ ನಡೆಸಿ ಸಂಜೆ 6ರಿಂದ ಭಕ್ತರ ದರ್ಶನಕ್ಕೆ ಅನುವುಮಾಡಿಕೊಡಲಾಗುವುದು ಎಂದು ಪ್ರಧಾನ ಅರ್ಚಕರಾದ ಸೋಮಸುಂದರ ದೀಕ್ಷಿತರು ತಿಳಿಸಿದ್ದಾರೆ.