ಬೆಂಗಳೂರು ನಗರದಲ್ಲಿ ಫೆಬ್ರವರಿಯಲ್ಲೇ ಬಿಸಿಲ ಬೇಗೆ ಹೆಚ್ಚಳ ! 34 ಡಿಗ್ರಿ ಸೆಲ್ಸಿಯಸ್‌ ದಾಟಿದೆ ತಾಪ

| N/A | Published : Feb 21 2025, 01:47 AM IST / Updated: Feb 21 2025, 05:05 AM IST

ಸಾರಾಂಶ

ನಗರದಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸತತ ಎರಡನೇ ವರ್ಷ ಬೆಂಗಳೂರಿನಲ್ಲಿ ಫೆಬ್ರವರಿಯಲ್ಲಿ ಬೇಸಿಗೆಯ ಬಿಸಿ 34 ಡಿಗ್ರಿ ಸೆಲ್ಸಿಯಸ್‌ ದಾಟಿದೆ.

 ಬೆಂಗಳೂರು : ನಗರದಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸತತ ಎರಡನೇ ವರ್ಷ ಬೆಂಗಳೂರಿನಲ್ಲಿ ಫೆಬ್ರವರಿಯಲ್ಲಿ ಬೇಸಿಗೆಯ ಬಿಸಿ 34 ಡಿಗ್ರಿ ಸೆಲ್ಸಿಯಸ್‌ ದಾಟಿದೆ.

ಅಧಿಕೃತವಾಗಿ ಮಾರ್ಚ್‌ನಿಂದ ಬೇಸಿಗೆ ಆರಂಭವಾಗಬೇಕು, ಚಳಿಗಾಲ ಮುಗಿದು ಬೇಸಿಗೆ ಆರಂಭದ ಹಂತದಲ್ಲಿ ಬಿಸಿಲಿನ ಬೇಗೆ ಹೆಚ್ಚಾಗುತ್ತದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇದೇ ವಾತಾವರಣ ನಿರ್ಮಾಣಗೊಂಡಿದ್ದು, ಗರಿಷ್ಠ ಉಷ್ಣಾಂಶದಲ್ಲಿ ಏರಿಕೆ ಕಂಡು ಬರುತ್ತದೆ.

ಬುಧವಾರ ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 34.4 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದ್ದು, ಇದು ಬೆಂಗಳೂರಿನ ಪಾಲಿಗೆ ವಾಡಿಕೆಗಿಂತ 3 ಡಿ.ಸೆ. ಅಧಿಕವಾಗಿದೆ. ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ 30.7 ಡಿ.ಸೆ. ಗರಿಷ್ಠ ಉಷ್ಣಾಂಶ ಇರಬೇಕು. ಆದರೆ, ಕಳೆದ ಹಲವು ವರ್ಷದಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದ ಬಿಸಿಲು ದಾಖಲಾಗುತ್ತಿದೆ.

2024ರ ಫೆಬ್ರವರಿ 24ರಂದು ತಿಂಗಳ ಅತ್ಯಧಿಕ ಗರಿಷ್ಠ ಉಷ್ಣಾಂಶ 34.5 ಡಿ.ಸೆ. ದಾಖಲಾಗಿತ್ತು. ಇದು ವಾಡಿಕೆ ಪ್ರಮಾಣಕ್ಕಿಂತ 3.1 ಡಿ.ಸೆ. ಹೆಚ್ಚು. ಈ ಬಾರಿಯೂ ಅದೇ ಪ್ರಮಾಣದಲ್ಲಿ ಬಿಸಿಲು ದಾಖಲಾಗುತ್ತಿದ್ದು, ಫೆಬ್ರವರಿ ತಿಂಗಳು ಪೂರ್ಣಗೊಳ್ಳಲು ಇನ್ನೂ ಒಂದು ವಾರ ಬಾಕಿ ಇದೆ. ಕಳೆದ ವರ್ಷಕ್ಕಿಂತ ಹೆಚ್ಚಿನ ಬಿಸಿಲು ದಾಖಲಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಹವಾಮಾನ ಇಲಾಖೆಯ ಪ್ರಕಾರ ಬೆಂಗಳೂರಿನಲ್ಲಿ 2005ರ ಫೆಬ್ರವರಿ 17ರಂದು 35.9 ಡಿ.ಸೆ. ಗರಿಷ್ಠ ಉಷ್ಣಾಂಶ ದಾಖಲಾಗಿತ್ತು. ಅದು ಈವರೆಗೆ ಬೆಂಗಳೂರಿನಲ್ಲಿ ಫೆಬ್ರವರಿಯಲ್ಲಿ ದಾಖಲಾದ ಅತ್ಯಧಿಕ ಗರಿಷ್ಠ ಉಷ್ಣಾಂಶವಾಗಿದೆ. ಗುರುವಾರ ಸಹ ಬೆಂಗಳೂರು ನಗರದಲ್ಲಿ ಗರಿಷ್ಠ ಉಷ್ಣಾಂಶ 33.2 ಡಿ.ಸೆ ದಾಖಲಾಗಿದೆ.

ಕಳೆದ 15 ವರ್ಷದಲ್ಲಿ ಫೆಬ್ರವರಿಯಲ್ಲಿದಾಖಲಾದ ಗರಿಷ್ಠ ಉಷ್ಣಾಂಶ ವಿವರ

ವರ್ಷಗರಿಷ್ಠ ಉಷ್ಣಾಂಶ

2024  34.5

2023  33.2

2022  33.4

2021  34.1

2020  33.1

2019  35.5

2018  33.0

2017  35.5

2016  35.5

201533.6

2014  32.7

2013  33.4

2012  35.4

2011  32.2

2010  34.4