ಕನ್ನಡಪ್ರಭ ವಾರ್ತೆ ಅರಸೀಕೆರೆ
ರಾಜ್ಯಮಟ್ಟದಲ್ಲಿ ಯೋಜನೆಗಳನ್ನು ತರುವ ಸಾಮರ್ಥ್ಯ ಹೊಂದಿರುವ ಕ್ಷೇತ್ರದ ಶಾಸಕರೇ ಇದ್ದರೂ, ತಾಲೂಕಿನ ಒಂದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಒಂದು ಕೊಠಡಿಯಲ್ಲಿ 5 ತರಗತಿಗಳು ನಡೆಯುತ್ತಿರುವುದು ಶಿಕ್ಷಣ ವ್ಯವಸ್ಥೆಯ ವಿಪರ್ಯಾಸಕ್ಕೆ ಸಾಕ್ಷಿಯಾಗಿದೆ.ತಾಲೂಕಿನ ರಂಗಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಹಟ್ಟಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸ್ಥಿತಿ ನೋಡಿದರೆ, ಗ್ರಾಮೀಣ ಭಾಗದ ಶಿಕ್ಷಣಕ್ಕೆ ಇನ್ನೂ ಎಷ್ಟು ಮೂಲಭೂತ ಸೌಕರ್ಯಗಳ ಕೊರತೆ ಇದೆ ಎಂಬುದು ಸ್ಪಷ್ಟವಾಗುತ್ತದೆ. ಶಾಲೆಯಲ್ಲಿ ಕ್ರಿಯಾಶೀಲ ಶಿಕ್ಷಕರಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸುತ್ತಿದ್ದಾರೆ. ಪೋಷಕರು ಸಹ ಶಿಕ್ಷಕರ ಮೇಲೆ ವಿಶ್ವಾಸವಿಟ್ಟು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ. ಆದರೆ, ಒಂದೇ ಕೊಠಡಿಯಲ್ಲಿ ಐದು ತರಗತಿಗಳನ್ನು ನಡೆಸುವ ಪರಿಸ್ಥಿತಿ ಶಿಕ್ಷಕರಿಗೂ ಮಕ್ಕಳಿಗೂ ದೊಡ್ಡ ಸವಾಲಾಗಿ ಪರಿಣಮಿಸಿದೆ.ಎಲ್ಲರೂ ಒಟ್ಟಿಗೆ ಕುಳಿತು ಪಾಠ ಕೇಳಬೇಕಾದ ಅನಿವಾರ್ಯತೆ ಉಂಟಾಗಿದ್ದು, ಇದರಿಂದ ಕಲಿಕೆಯ ಗುಣಮಟ್ಟಕ್ಕೂ ಹಿನ್ನಡೆಯಾಗುವ ಆತಂಕ ವ್ಯಕ್ತವಾಗಿದೆ. ಎಲ್ಲ ತರಗತಿಯ ಮಕ್ಕಳೂ ಒಂದೇ ಜಾಗದಲ್ಲಿ ಕೂತು ಪಾಠ ಆಲಿಸುವ ಪರಿಸ್ಥಿತಿಯಲ್ಲಿ, ಮಕ್ಕಳನ್ನು ಅಷ್ಟಾವಧಾನಿಗಳು ಎಂದುಕೊಂಡೇ ಬೋಧನೆ ನಡೆಸಬೇಕಾದಂತಾಗಿದೆ ಎಂಬುದು ಗ್ರಾಮಸ್ಥರ ಬೇಸರ.ಇನ್ನೊಂದು ವಿಪರ್ಯಾಸವೆಂದರೆ, ಈ ಶಾಲೆ ವಿಸ್ತಾರವಾದ ಆವರಣವನ್ನು ಹೊಂದಿದ್ದರೂ, ಅಗತ್ಯ ಕೊಠಡಿಗಳ ಕೊರತೆಯಿಂದ ಬಳಲುತ್ತಿದೆ. ಶಾಲಾ ಆವರಣದಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಉದ್ಯಾನವನಕ್ಕಾಗಿ ಲಕ್ಷಾಂತರ ರು.ವೆಚ್ಚ ಮಾಡಲಾಗಿದೆ ಎನ್ನಲಾಗುತ್ತಿದ್ದು, ಅಲ್ಲಿ ಫಲಕವೊಂದನ್ನು ಬಿಟ್ಟರೆ ಪ್ರಾಯೋಗಿಕವಾಗಿ ಯಾವುದೇ ಅಭಿವೃದ್ಧಿ ಕಂಡುಬರುವುದಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.ಪ್ರಸ್ತುತ ಈ ಶಾಲೆಗೆ ಕನಿಷ್ಠ ಇನ್ನೂ ಎರಡು ಹೆಚ್ಚುವರಿ ಕೊಠಡಿಗಳ ಅಗತ್ಯವಿದೆ. ಬಿಸಿಲು ಹೆಚ್ಚಾದರೂ, ಮಳೆ ಬಂದರೂ ಮಕ್ಕಳನ್ನು ಸಮರ್ಪಕವಾಗಿ ಕುಳ್ಳಿರಿಸಿ ಪಾಠ ಮಾಡಲು ಶಿಕ್ಷಕರು ಹರಸಾಹಸ ಪಡಬೇಕಾಗಿದೆ. ಕೆಲವೊಮ್ಮೆ ಮಕ್ಕಳನ್ನು ಪಡಸಾಲೆಯಲ್ಲಿ ಕೂರಿಸಿಕೊಂಡೇ ಬೋಧನೆ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಮಳೆ ಬಂದರೆ ಮಕ್ಕಳನ್ನು ಒಳಗೆ ಕರೆದುಕೊಂಡು ಹೋಗಿ ಹೇಗಾದರೂ ಪಾಠ ಮುಂದುವರಿಸಬೇಕಾಗುತ್ತದೆ.ಗ್ರಾಮಸ್ಥರು ಹಲವು ಬಾರಿ ಮನವಿ ಸಲ್ಲಿಸಿದರೂ, ಇದುವರೆಗೆ ಯಾವುದೇ ರೀತಿಯ ಸ್ಪಂದನೆ ದೊರಕಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ. ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಇದೆ, ಶಿಕ್ಷಕರಲ್ಲಿ ಬೋಧನಾ ಉತ್ಸಾಹ ಇದೆ. ಆದರೆ ಕೊಠಡಿಗಳ ಕೊರತೆಯಿಂದಲೇ ಈ ಶಾಲೆಯ ಅಭಿವೃದ್ಧಿ ಕುಂಠಿತವಾಗಿದೆ ಎಂದು ಪೋಷಕರು ಅಭಿಪ್ರಾಯಪಡುತ್ತಿದ್ದಾರೆ.ಗ್ರಾಮೀಣ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿರುವಾಗ, ಇಲ್ಲಿ ಕೆಪಿಎಸ್ ಶಾಲೆಯಂತಹ ಹೊಸ ಚಿಂತನೆಗಿಂತಲೂ ತುರ್ತಾಗಿ ಬೇಕಿರುವುದು ಎರಡು ಕೊಠಡಿಗಳ ನಿರ್ಮಾಣ ಎಂಬುದು ಸಾರ್ವಜನಿಕರ ಒತ್ತಾಯ.
ಎಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳನ್ನು ಕ್ಷೇತ್ರಕ್ಕೆ ತರುವ ಸಾಮರ್ಥ್ಯ ಹೊಂದಿರುವ ಜನಪ್ರತಿನಿಧಿಗಳಿಗೆ, ಈ ಶಾಲಾ ಮಕ್ಕಳಿಗಾಗಿ ಎರಡು ಕೊಠಡಿಗಳನ್ನು ನಿರ್ಮಿಸಿಕೊಡುವುದು ಅಷ್ಟು ಕಷ್ಟವೇ? ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.ಶಾಸಕರು ಇಚ್ಛಾಶಕ್ತಿ ತೋರಿದರೆ, ಈ ಸಮಸ್ಯೆಗೆ ಶೀಘ್ರ ಪರಿಹಾರ ದೊರಕುವುದು ಅಸಾಧ್ಯವಲ್ಲ. ಬಿಸಿಲು-ಮಳೆಯಲ್ಲಿ ಓದುತ್ತಿರುವ ಈ ಮಕ್ಕಳಿಗೆ ಸುರಕ್ಷಿತವಾದ, ಸಮರ್ಪಕವಾದ ಕಲಿಕಾ ವಾತಾವರಣ ಒದಗಿಸುವುದು ಈಗ ತುರ್ತು ಅಗತ್ಯವಾಗಿದೆ. ಶಾಲೆಗೆ ಆದಷ್ಟು ಬೇಗ ಹೆಚ್ಚುವರಿ ಕೊಠಡಿಗಳು ನಿರ್ಮಾಣವಾಗಿ, ಮಕ್ಕಳಿಗೆ ಸುಭದ್ರ ಶಿಕ್ಷಣ ಸೌಲಭ್ಯ ದೊರಕಲಿ ಎಂಬುದು ಸಾರ್ವಜನಿಕರ ಆಶಯವಾಗಿದೆ.