ಬುಕ್ ಬ್ರಹ್ಮ ಸಂಸ್ಥೆ ಕಾದಂಬರಿಯ ಹಸ್ತಪ್ರತಿಗೆ ನೀಡುವ ಪ್ರತಿಷ್ಠಿತ ಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಾದಂಬರಿ ಪುರಸ್ಕಾರ ಈ ಸಲ ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಮಹೇಶ್ ಅರಬಳ್ಳಿ ಅವರ ಚೊಚ್ಛಲ ಕಾದಂಬರಿ ‘ನೀರವ’ ಕೃತಿಗೆ ಸಂದಿದೆ
ಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಾದಂಬರಿ ಪುರಸ್ಕಾರ ವಿಜೇತ ಲೇಖಕರ ಸಂದರ್ಶನ
ಬುಕ್ ಬ್ರಹ್ಮ ಸಂಸ್ಥೆ ಕಾದಂಬರಿಯ ಹಸ್ತಪ್ರತಿಗೆ ನೀಡುವ ಪ್ರತಿಷ್ಠಿತ ಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಾದಂಬರಿ ಪುರಸ್ಕಾರ ಈ ಸಲ ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಮಹೇಶ್ ಅರಬಳ್ಳಿ ಅವರ ಚೊಚ್ಛಲ ಕಾದಂಬರಿ ‘ನೀರವ’ ಕೃತಿಗೆ ಸಂದಿದೆ. ಈ ಕೃತಿಯನ್ನು ಶೀಘ್ರದಲ್ಲಿಯೇ ಕನ್ನಡದ ಅತ್ಯಂತ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಮನೋಹರ ಗ್ರಂಥಮಾಲೆ ಪ್ರಕಟಿಸಲಿದೆ. ಪ್ರಶಸ್ತಿ ಘೋಷಣೆಯಾದ ಈ ಸಂದರ್ಭದಲ್ಲಿ ಮಹೇಶ್ ಅರಬಳ್ಳಿ ಅವರ ಸಂದರ್ಶನ.
- ಜೋಗಿ
ನೀವು ಬರವಣಿಗೆಯನ್ನು ತಡವಾಗಿ ಆರಂಭಿಸಿದ್ದೀರಿ. ಇಷ್ಟು ವರ್ಷಗಳ ನಂತರ ಬರೆಯಬೇಕು ಎಂಬ ಅಗತ್ಯ ನಿಮಗೆ ಯಾವ ಕ್ಷಣದಲ್ಲಿ ಅನಿಸಿತು?
ಬರೆಯಬೇಕು ಅನ್ನೋದು ದಿಢೀರನೆ ತಗೊಂಡ ನಿರ್ಧಾರ ಅಲ್ಲ. ಆಫೀಸ್, ಪ್ರಾಜೆಕ್ಟ್ ಅಂತ ಓಡುತ್ತಿದ್ದ ರೊಟೀನ್ ಆಚೆಗೆ ನನ್ನದೇ ಆದ ಒಂದು ಸ್ಪೇಸ್ ಬೇಕಿತ್ತು.
ಒಳಗಿದ್ದ ತುಮುಲಗಳು, ಯಾರಿಗೂ ಹೇಳಿಕೊಳ್ಳಲಾಗದ ಸೋಲುಗಳು ಮತ್ತು ಗೊಂದಲಗಳನ್ನು ಎಲ್ಲಾದರೂ ಹೊರಹಾಕಲೇಬೇಕಾದ ‘ಸೈಲೆಂಟ್ ಪ್ರೆಶರ್’ ಶುರುವಾಗಿತ್ತು. ಲೇಖಕನಾಗಬೇಕು ಅಂತ ನಾನು ಬರೆಯಲು ಕೂರಲಿಲ್ಲ. ಸುಮ್ಮನೆ ನನ್ನ ಗೊಂದಲಗಳನ್ನು ಬಿಡಿಸಿಕೊಳ್ಳುತ್ತಾ ಹೋದೆ, ಆ ಪ್ರಕ್ರಿಯೆ ತಾನಾಗಿಯೇ ಬರವಣಿಗೆಯಾಯ್ತು.
ಟೆಕ್ಕಿಯಾಗಿ ಬದುಕಿದ ನಿಮ್ಮ ವೃತ್ತಿಜೀವನಕ್ಕೂ, ಲೇಖಕರಾಗಿ ನಿಮ್ಮೊಳಗೆ ಹುಟ್ಟಿಕೊಂಡ ಜಗತ್ತಿಗೂ ಏನು ಸಂಬಂಧವಿದೆ? ಒಂದರಿಂದ ಇನ್ನೊಂದನ್ನು ಏನಾದರೂ ಕಲಿತಿದ್ದೀರಾ?
ಸಾಫ್ಟ್‌ವೇರ್‌ನಲ್ಲಿ ಯಾವುದೇ ಸಮಸ್ಯೆಗೂ ಲಾಜಿಕ್ ಬಳಸಿ ಒಂದು ‘ಫಿಕ್ಸ್’ ಹುಡುಕಬಹುದು. ಆದರೆ ನಮ್ಮ ಒಳಗಿನ ಗೊಂದಲಗಳಿಗೆ ಯಾವ ಲಾಜಿಕ್ಕೂ ಕೆಲಸ ಮಾಡುವುದಿಲ್ಲ. ಆ ಪರಿಹಾರವೇ ಇಲ್ಲದ ಜಾಗದಿಂದಲೇ ನನ್ನ ಬರವಣಿಗೆ ಶುರುವಾಗುತ್ತದೆ.
ಬರವಣಿಗೆಗೆ ಬೇಕಾದ ಶಿಸ್ತು ನನಗೆ ಸಿಕ್ಕಿದ್ದು ಇದೇ ವೃತ್ತಿಯಿಂದ. ಒಂಟಿಯಾಗಿ ಗಂಟೆಗಟ್ಟಲೆ ಸ್ಕ್ರೀನ್ ಮುಂದೆ ಕೂರುವ ರೂಢಿ ಮತ್ತು ತಾಳ್ಮೆ ನನಗೆ ಕೋಡಿಂಗ್‌ನಿಂದಲೇ ಬಂದದ್ದು. ಕಥೆ ಅಥವಾ ತಲ್ಲಣಗಳು ನನ್ನ ಒಳಗಿನಿಂದ ಬಂದರೆ, ಅದನ್ನೊಂದು ಕಡೆ ಕೂತು ಅಕ್ಷರಕ್ಕಿಳಿಸುವ ಶಿಸ್ತು ಕೊಟ್ಟಿದ್ದು ನನ್ನ ವೃತ್ತಿ.
ನಿಮ್ಮ ಬರಹಗಳಲ್ಲಿ ನಿಮ್ಮದೇ ಬದುಕಿನ ಅನುಭವಗಳು, ನೆನಪುಗಳು ಮತ್ತು ಜೀವನದ ಘಟನೆಗಳು ಕಾಣಿಸಿಕೊಳ್ಳುತ್ತವೆ. ಸ್ವಂತ ಬದುಕನ್ನು ಸಾಹಿತ್ಯವಾಗಿಸುವಾಗ ಸತ್ಯವನ್ನು ಎಷ್ಟು ಮಟ್ಟಿಗೆ ಹಾಗೆಯೇ ಉಳಿಸಿಕೊಳ್ಳುತ್ತೀರಿ?
ಅನುಭವಗಳನ್ನು ಕಾದಂಬರಿಗೆ ಬಳಸುವಾಗ, ನಡೆದ ಘಟನೆಗಳನ್ನು ಹಾಗೇ ಇಡುವುದಕ್ಕಿಂತ ಆ ಸಂದರ್ಭದಲ್ಲಿ ಉಂಟಾದ ಭಾವನೆಗಳನ್ನು ಉಳಿಸಿಕೊಳ್ಳುವುದು ಮುಖ್ಯವಾಗುತ್ತದೆ. ಬರೆಯುವಾಗ ನನ್ನ ಅಹಂ, ಒಂಟಿತನ ಮತ್ತು ಮುಖವಾಡಗಳನ್ನು ಕಳಚಿಟ್ಟುಕೊಳ್ಳಬೇಕಾಯಿತು. ಘಟನೆಗಳು ಕಲ್ಪನೆಯಾಗಿ ಬದಲಾಗಬಹುದು, ಆದರೆ ಒಳಗಿನ ನೋವು ಮತ್ತು ಪ್ರಾಮಾಣಿಕತೆ ಮಾತ್ರ ಬದಲಾಗುವುದಿಲ್ಲ. ಸತ್ಯವನ್ನು ಯಥಾವತ್ತಾಗಿ ಇಡುವುದಕ್ಕಿಂತ, ಅದು ಓದುಗನಿಗೆ ತಲುಪುವಾಗ ಕಥೆಯ ಜೀವವಾಗಿ ಉಳಿಯುವುದು ಮುಖ್ಯ.
ಒಂದು ಅನುಭವದ ಆಳವನ್ನು ಮುಟ್ಟದೆ, ಅಥವಾ ಅದರ ತೀವ್ರತೆ ನನ್ನನ್ನು ಅಲುಗಾಡಿಸದೆ ಹೋದರೆ, ಅಂಥದನ್ನು ಕಾಗದಕ್ಕಿಳಿಸುವುದರಲ್ಲಿ ನನಗೆ ಯಾವ ಅರ್ಥವೂ ಕಾಣಿಸುವುದಿಲ್ಲ.
ನಮ್ಮ ಬದುಕಿನಲ್ಲಿ ನಡೆದ ಘಟನೆ ಮತ್ತು ಅದನ್ನು ನಾವು ವರ್ಷಗಳ ನಂತರ ನೆನಪಿಸಿಕೊಳ್ಳುವ ರೀತಿಯಲ್ಲಿ ವ್ಯತ್ಯಾಸ ಇರುತ್ತದೆ. ನಿಮ್ಮ ಕಥೆಗಳಲ್ಲಿ ‘ನೆನಪು’ ಎಷ್ಟು ಮುಖ್ಯ ಪಾತ್ರ ವಹಿಸುತ್ತದೆ?
ಹಿಂದೆ ನಡೆದ ಯಾವುದೋ ಸಂಗತಿ ಈಗ ನೆನಪಾದಾಗ ಅದರ ಅಸಲಿ ತೀವ್ರತೆ ಇರುವುದಿಲ್ಲ. ಅದು ನಮ್ಮ ಇಂದಿನ ಮನಸ್ಥಿತಿಗೆ ತಕ್ಕಂತೆ ಬದಲಾಗಿರುತ್ತದೆ.ನನ್ನ ಕಥೆಗಳಲ್ಲಿ ನೆನಪು ಎಂದರೆ ಹಳೇ ದಿನಗಳನ್ನು ಮೆಲುಕು ಹಾಕುವುದು ಅಲ್ಲ. ಅಂದು ನಮಗೆ ಅರ್ಥವಾಗದೆ ಕೈಜಾರಿ ಹೋದ ಸಂಗತಿಗಳು, ವರ್ಷಗಳ ಬಳಿಕ ನಮ್ಮನ್ನು ಕಾಡುವ ವಿಚಿತ್ರ ಬಗೆ ಅದು.ಆ ನೆನಪುಗಳು ನಮ್ಮ ಗಾಯಗಳನ್ನು ಒಣಗಿಸಬಹುದು ಅಥವಾ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಬಹುದು. ಅಂತಹ ನೆನಪುಗಳೆಡೆಗಿನ ಒಡನಾಟವೇ ನನ್ನ ಬರಹಕ್ಕೆ ದಾರಿ ಮಾಡಿಕೊಡುತ್ತದೆ.
ಟೆಕ್ನಾಲಜಿ ಮನುಷ್ಯನ ಬದುಕನ್ನು ದಾಖಲಿಸುವ ಸಾಮರ್ಥ್ಯವನ್ನು ಹೆಚ್ಚಿಸಿದೆ. ಆದರೆ ಸಾಹಿತ್ಯ ಮಾತ್ರ ಮನುಷ್ಯನ ಒಳಗಿನ ಬದುಕನ್ನು ದಾಖಲಿಸುತ್ತದೆ. ಈ ಎರಡರ ನಡುವೆ ನೀವು ಕಾಣುವ ವ್ಯತ್ಯಾಸವೇನು?
ನನ್ನ ದೈನಂದಿನ ವೃತ್ತಿಯಲ್ಲಿ ಟೆಕ್ನಾಲಜಿಯೇ ಎಲ್ಲವೂ. ಅದು ಪ್ರತಿ ಸೆಕೆಂಡ್‌ನ ಮೆಟ್ರಿಕ್ಸ್‌ಗಳನ್ನು ಕರಾರುವಕ್ಕಾಗಿ ಹಿಡಿದಿಡುತ್ತದೆ. ಆದರೆ, ನಾನೊಬ್ಬ ಮನುಷ್ಯನಾಗಿ ಆ ಸ್ಕ್ರೀನ್ ಹಿಂದೆ ಅನುಭವಿಸುವ ತಲ್ಲಣವನ್ನಾಗಲಿ, ಕಚೇರಿಯಿಂದ ಮನೆಗೆ ಬಂದ ಮೇಲೆ ಕಾಡುವ ನಿರ್ವಾತವನ್ನಾಗಲಿ ಆ ಟೆಕ್ನಾಲಜಿಯಿಂದ ಅಳೆಯಲು ಸಾಧ್ಯವಿಲ್ಲ.
ಬಾಹ್ಯ ಜಗತ್ತಿಗೆ ನಾವು ಸಿಂಕ್ ಆಗಿದ್ದೇವೆ, ಅಪ್‌ಡೇಟ್ ಆಗಿದ್ದೇವೆ. ಆದರೆ ಒಳಗಡೆ ನಾವು ದಿನಾ ಸಾಯುತ್ತಿದ್ದೇವೆ, ಮುಗಿದುಹೋಗುತ್ತಿದ್ದೇವೆ. ಆ ಆಳದ ಕತ್ತಲನ್ನು, ಯಾರೂ ಇಲ್ಲದ ಒಂಟಿತನವನ್ನು ಸೆರೆಹಿಡಿಯುವ ಶಕ್ತಿ ಇರುವುದು ಕೇವಲ ಸಾಹಿತ್ಯಕ್ಕೆ ಮಾತ್ರ. ಟೆಕ್ನಾಲಜಿ ನನ್ನ ಬದುಕಿನ ಹೊರಮೈಯನ್ನು ತೋರಿಸಿದರೆ, ಬರವಣಿಗೆ ನನ್ನ ಮೈಮೇಲಿನ ಗಾಯದ ಗುರುತನ್ನು ಎತ್ತಿ ತೋರಿಸುತ್ತದೆ.
ತಡವಾಗಿ ಬರವಣಿಗೆಗೆ ಬಂದಿರುವುದರಿಂದ ನಿಮಗೆ ಯಾವುದಾದರೂ ವಿಶೇಷವಾದ ಅನುಕೂಲ ಸಿಕ್ಕಿದೆಯೇ? ಬದುಕಿನ ಅನುಭವ ಹೆಚ್ಚಾದ ನಂತರ ಬರೆಯುವುದರಿಂದ ನಿಮ್ಮ ದೃಷ್ಟಿಕೋನ ಬದಲಾಗಿದೆಯೇ?
ಖಂಡಿತವಾಗಿಯೂ ಈ ಹಾದಿ ನನಗೆ ಕರಾರುವಕ್ಕಾಗಿ ಗೊತ್ತಿದೆ ಎಂದು ಹೇಳಲಾರೆ. ಆದರೆ, ಈ ಬರವಣಿಗೆಯ ಸುದೀರ್ಘ ಪಯಣದಲ್ಲಿ ನಾನು ಅನುಭವಿಸಿದ ಆಳವಾದ ಒಳನೋಟಗಳು ಮತ್ತು ನನ್ನೊಳಗಿನ ಮೌನವನ್ನು ಅನ್ವೇಷಿಸಿದ ಅನುಭವವೇ ಅಪಾರವಾದದ್ದು. ಬರೆಯುವಾಗ ಸಿಕ್ಕ ಆ ರೋಮಾಂಚನ ಮತ್ತು ತಲ್ಲಣ ನನ್ನ ದೃಷ್ಟಿಕೋನವನ್ನೇ ಬದಲಿಸಿದೆ.
ನಿಮ್ಮ ಬರಹದಲ್ಲಿ ‘ನಾನು’ ಎಂಬ ವ್ಯಕ್ತಿ ಮಾತ್ರವಲ್ಲದೆ, ನಿಮ್ಮ ಸುತ್ತಲಿನ ಜನರು, ಸಂಬಂಧಗಳು ಮತ್ತು ಕಾಲವೂ ದಾಖಲಾಗುತ್ತದೆ. ನೀವು ಬರೆಯುವಾಗ ನಿಮ್ಮ ಕಥೆಯನ್ನು ಬರೆಯುತ್ತಿದ್ದೀರೋ, ಒಂದು ಕಾಲಘಟ್ಟದ ಕಥೆಯನ್ನು ಬರೆಯುತ್ತಿದ್ದೀರೋ?
ನನ್ನ ಮೈಕ್ರೋ ಕಥೆಯ ಹಿಂದೆ ದೊಡ್ಡದೊಂದು ಕಾಲಘಟ್ಟ ಕೆಲಸ ಮಾಡುತ್ತಿರುತ್ತದೆ. ನಮ್ಮ ಆಸೆ, ನಿರಾಸೆ, ಸೋಲು ಮತ್ತು ಒತ್ತಡಗಳು ಕೇವಲ ನನ್ನ ಸ್ವಂತದ್ದಲ್ಲ, ಈ ಕಾಲದ ಜನರೆಲ್ಲರೂ ಒಟ್ಟಿಗೆ ಉಸಿರಾಡುತ್ತಿರುವ ತಲ್ಲಣ. ನಾನು ನನ್ನ ಕಥೆಯನ್ನು ಬಿಡಿಸಿಡುತ್ತಿದ್ದೇನೆ ಎಂದುಕೊಂಡರೂ, ಕೊನೆಗೆ ಅದು ಈ ಕಾಲದ ಮನುಷ್ಯರು ಹೇಗೆ ನಲುಗಿದರು ಎಂಬುದರ ಸಣ್ಣದೊಂದು ಸಾಕ್ಷ್ಯವಾಗಿ ಉಳಿದುಬಿಡುತ್ತದೆ.
ಒಬ್ಬ ಟೆಕ್ಕಿಯ ಜೀವನ ಸಾಮಾನ್ಯವಾಗಿ ತರ್ಕ, ಡೇಟಾ ಮತ್ತು ಪರಿಹಾರಗಳ ಸುತ್ತ ನಡೆಯುತ್ತದೆ. ಸಾಹಿತ್ಯದಲ್ಲಿ ಮಾತ್ರ ಪ್ರಶ್ನೆಗಳಿಗೆ ಉತ್ತರಗಳಿಗಿಂತ ಪ್ರಶ್ನೆಗಳೇ ಮುಖ್ಯವಾಗುತ್ತವೆ. ಈ ಬದಲಾವಣೆ ನಿಮ್ಮನ್ನು ಹೇಗೆ ರೂಪಿಸಿತು?
ನಮ್ಮನ್ನು ನಾವು ಸೇಫ್ ಆಗಿ ಇಟ್ಟುಕೊಂಡು, ಯಾರಿಗೂ ನೋವಾಗದಂತೆ ಬರೆಯಬೇಕು ಅಂದುಕೊಂಡರೆ ಅಲ್ಲಿ ಸಾಹಿತ್ಯ ಹುಟ್ಟುವುದಿಲ್ಲ. ಯಾರು ಹೇಗೆ ಜಡ್ಜ್ ಮಾಡುತ್ತಾರೆ ಎಂಬ ಲೆಕ್ಕಾಚಾರದಲ್ಲಿ ಕೂತರೆ ಒಂದಕ್ಷರವೂ ಮೂಡುವುದಿಲ್ಲ.
ಬರೆಯುವ ಸಮಯದಲ್ಲಿ ನನ್ನ ದೌರ್ಬಲ್ಯಗಳನ್ನು, ಕೊಳಕನ್ನು ನಾನೇ ಅತ್ಯಂತ ನಿರ್ದಯವಾಗಿ ಎದುರಿಸಿದ ಮೇಲೆ, ಬೇರೆಯವರು ಏನಂದುಕೊಳ್ಳುತ್ತಾರೆ ಎಂಬ ಭಯ ತಾನಾಗಿಯೇ ಸತ್ತುಹೋಗುತ್ತದೆ. ನನ್ನನ್ನು ನಾನು ಕಾಪಾಡಿಕೊಳ್ಳುವ ಉಸಾಬರಿಗೆ ಹೋದರೆ, ಆ ಬರಹದಲ್ಲಿ ಜೀವವೇ ಇರುವುದಿಲ್ಲ.
ಬರೆಯಲು ಆರಂಭಿಸಿದಾಗ ‘ನಾನು ಬರಹಗಾರನಾಗಬೇಕು’ ಎಂಬ ಆಸೆ ಇತ್ತೇ, ಅಥವಾ ನಿಮ್ಮ ಅನುಭವಗಳನ್ನು ಹೇಳಿಕೊಳ್ಳುತ್ತಾ ಹೋದಂತೆ ಬರಹಗಾರ ನಿಮ್ಮೊಳಗೆ ಹುಟ್ಟಿಕೊಂಡನೇ?
‘ಬರಹಗಾರನಾಗಬೇಕು’ ಅನ್ನೋ ಯಾವ ಪ್ಲಾನ್ ಕೂಡ ನನಗಿರಲಿಲ್ಲ. ಆರಂಭದಲ್ಲಿ ನಾನು ಬರೆಯೋಕೆ ಶುರುಮಾಡಿದ್ದು ಯಾರಿಗೋ ಕಥೆ ಹೇಳಬೇಕು ಅಂತಲ್ಲ. ತಲೆಯೊಳಗಿದ್ದ ವಿಪರೀತ ಗದ್ದಲವನ್ನು ಸುಮ್ಮನೆ ಎದುರಿಗಿರುವ ಸ್ಕ್ರೀನ್ ಮೇಲೆ ಇಳಿಸಿಟ್ಟು, ಸ್ವಲ್ಪ ನಿರಾಳವಾಗುವುದಷ್ಟೇ ನನ್ನ ಉದ್ದೇಶವಾಗಿತ್ತು.
ಆದರೆ ದಿನ ಕಳೆದಂತೆ, ಸುಮ್ಮನೆ ತೋಚಿದ್ದನ್ನು ಗೀಚುವ ಬದಲು, ಆ ಯೋಚನೆಗಳಿಗೆ ಒಂದು ನಿಖರವಾದ ಆಕಾರ ಕೊಡುವ ಕಡೆಗೆ ನನ್ನ ಗಮನ ಹೋಯಿತು. ನನ್ನ ಅನುಭವಗಳನ್ನು ‘ಹೀಗೆಯೇ ಹೇಳಬೇಕು’ ಅನ್ನೋ ಸ್ಪಷ್ಟತೆ ಶುರುವಾಯಿತು. ಬೇರೆಯವರು ಓದುತ್ತಾರೆ ಅನ್ನೋ ಲೆಕ್ಕಾಚಾರ ಇಲ್ಲದೆ, ನನ್ನಷ್ಟಕ್ಕೆ ನಾನು ಆ ಕೆಲಸವನ್ನು ಗಂಭೀರವಾಗಿ ತೆಗೆದುಕೊಳ್ಳಲು ಶುರುಮಾಡಿದಾಗ, ನನ್ನ ಅರಿವಿಗೆ ಬಾರದಂತೆ ಆ ಬರವಣಿಗೆಯ ಪ್ರಕ್ರಿಯೆ ನನ್ನನ್ನು ಸಂಪೂರ್ಣವಾಗಿ ಆವರಿಸಿಕೊಂಡಿತು.
ಬುಕ್ ಬ್ರಹ್ಮ ಪ್ರಶಸ್ತಿ ನಿಮ್ಮ ಬರವಣಿಗೆಯ ಪಯಣಕ್ಕೆ ಸಿಕ್ಕಿರುವ ಒಂದು ದೊಡ್ಡ ಮಾನ್ಯತೆ. ಈ ಪ್ರಶಸ್ತಿಯ ನಂತರ ನಿಮ್ಮಿಂದ ನೀವು ಇನ್ನೇನು ನಿರೀಕ್ಷಿಸುತ್ತೀರಿ -ಇನ್ನಷ್ಟು ಬರೆಯುವುದೋ, ಇನ್ನಷ್ಟು ಓದುತ್ತಾ ಬದುಕನ್ನು ನೋಡುವುದೋ?
ಏನನ್ನೂ ಫೋರ್ಸ್ ಮಾಡಿ ಬರೆಯುವ ಆತುರವಿಲ್ಲ. ಆದರೆ ಮುಂದೊಮ್ಮೆ ಬರೆಯಲು ಕೂತಾಗ, ಮೊದಲಿಗಿಂತ ಇನ್ನಷ್ಟು ಪ್ರಾಮಾಣಿಕವಾಗಿರಬೇಕು ಅನ್ನೋ ಒಂದೇ ಒಂದು ನಿರೀಕ್ಷೆ ನನ್ನ ಮೇಲಿದೆ. ಓದು ಮತ್ತು ಬರಹದ ನಡುವೆ ನಿರ್ದಿಷ್ಟವಾದ ಯಾವ ಗೆರೆಯನ್ನೂ ಎಳೆಯದೆ, ಯಾವ ನಿರೀಕ್ಷೆಯ ಭಾರವೂ ಇಲ್ಲದೆ ನನ್ನ ಪಾಡಿಗೆ ನಾನು ಸೈಲೆಂಟ್ ಆಗಿ ಮುಂದುವರಿಯುವ ಯೋಚನೆಯಲ್ಲಿದ್ದೇನೆ.
ಮಹೇಶ್ ಅರಬಳ್ಳಿ ಪರಿಚಯ
ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್. ಇನ್‌ಫೋಸಿಸ್ ಸಂಸ್ಥೆಯಲ್ಲಿ ಹಿರಿಯ ಉದ್ಯೋಗಿ. ಊರು ಮೈಸೂರು. ಪ್ರಸ್ತುತ ವಾಸ ಬೆಂಗಳೂರು. ಮಿತಭಾಷಿ. ಅದ್ಭುತ ಓದುಗ. ಅತಿ ಸೂಕ್ಷ್ಮ ಗ್ರಹಿಕೆ, ವಿಸ್ತಾರವಾದ ಓದು, ತಂತ್ರಜ್ಞಾನದ ಬಲ, ಸಂಯಮಶೀಲತೆ ಅವರ ಶಕ್ತಿ. ಅಭ್ಯಾಸದಲ್ಲಿ, ಪ್ರಕ್ರಿಯೆಯಲ್ಲಿ, ಶ್ರಮದಲ್ಲಿ, ಶ್ರದ್ಧೆಯಲ್ಲಿ ನಂಬಿಕೆ ಇಟ್ಟಿರುವ ಅವರು ಅಳತೆಗೆ ತಕ್ಕಷ್ಟೇ ಬರೆಯುವಲ್ಲಿ ಪರಿಣತರು. ತಂದೆಯ ಜೊತೆಗಿನ ಒಡನಾಟದ ಕುರಿತು ಬರೆದಿರುವ ‘ನೆನಪಿನ ಡಬ್ಬಿ’ ಅವರ ಮೊದಲ ಕೃತಿ. ಇದೀಗ ‘ನೀರವ’ ಕಾದಂಬರಿ ಮೂಲಕ ಸಾಹಿತ್ಯ ಲೋಕಕ್ಕೆ ಅಚ್ಚರಿದಾಯಕ ರೀತಿಯಲ್ಲಿ ಪ್ರವೇಶಿಸಿದ್ದಾರೆ.
ಈ ಕಾದಂಬರಿಗಾಗಿ ನಾನು ಎಂಟುನೂರರಿಂದ ಸಾವಿರ ಪುಟಗಳಷ್ಟು ಬರೆದಿರಬಹುದು. ಆಗ ನನಗೆ ಏನು ಬರೆಯಬಾರದು ಅನ್ನುವುದು ತಿಳಿಯಿತು. ಕೊನೆಗೆ ಈ ಕಾದಂಬರಿಯನ್ನು ಸುಮಾರು 150 ಪುಟಕ್ಕೆ ಇಳಿಸಿದೆ.

