ಸಾರಾಂಶ
ಬೆಂಗಳೂರು : ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯಲ್ಲಿರುವ ಗ್ಯಾಲರಿ ಜಿಯಲ್ಲಿ ಮಾ.31ರವರೆಗೆ ದ ಮಾಸ್ಟರ್ಸ್ & ದ ಮಾಡರ್ನ್: ಸೌತ್ ಎಡಿಷನ್ ಎಂಬ ಚಿತ್ರಕಲಾ ಪ್ರದರ್ಶನವನ್ನು ಆಯೋಜಿಸಲಾಗಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.
ತಮಿಳುನಾಡು, ಕರ್ನಾಟಕ, ಕೇರಳ ಮತ್ತು ಆಂಧ್ರಪ್ರದೇಶ ಮತ್ತು ತೆಲಂಗಾಣ ಕಲಾವಿದರ ಕಲಾಕೃತಿಗಳು ಇಲ್ಲಿ ಪ್ರದರ್ಶನಗೊಳ್ಳಲಿವೆ. ತಂಜಾವೂರ್ ಮತ್ತು ಮೈಸೂರು ಶೈಲಿಯ ನವೀನ ಕಲಾಕೃತಿಗಳನ್ನು ಈ ಪ್ರದರ್ಶನದಲ್ಲಿ ವೀಕ್ಷಿಸಬಹುದು.
ಈ ಪ್ರದರ್ಶನದಲ್ಲಿ ದೇವಾಲಯ ಶಿಲ್ಪಗಳಿಂದ ಪ್ರಭಾವಿತವಾದ ಆಧುನಿಕ ಕೃತಿಗಳನ್ನು ಕಾಣಬಹುದು. ಮದ್ರಾಸ್ ಆರ್ಟ್ ಮೂವ್ಮೆಂಟ್‌ನ ಕಲಾವಿದರು ತಮ್ಮ ಕಲಾಕೃತಿ ಪ್ರದರ್ಶನ ಮಾಡಲಿದ್ದಾರೆ.ಕೆಎಂ ಅಡಿಮೂಲಂ, ಕೆ.ಕೆ ಹೆಬ್ಬಾರ್, ಎಸ್.ಜಿ ವಾಸುದೇವ್ ಅವರಂತಹ ದಕ್ಷಿಣ ಭಾರತದ ಖ್ಯಾತ ಕಲಾವಿದರ ಕಲಾಕೃತಿಗಳು ಇಲ್ಲಿ ಪ್ರದರ್ಶನಗೊಳ್ಳಲಿವೆ.
ಜಿತೇಶ್ ಕಲಾತ್, ಅವಿನಾಶ್ ವೀರರಾಘವನ್, ಗುರುದಾಸ್ ಶೆಣೈ ಮತ್ತು ಬಾರಾ ಭಾಸ್ಕರನ್ ಮುಂತಾದ ಪ್ರಸಿದ್ಧ ಕಲಾವಿದರ ಇನ್ನೂ ಪ್ರದರ್ಶನಗೊಳ್ಳದ ಕೆಲವು ಕೃತಿಗಳು ಮೊದಲ ಬಾರಿಗೆ ಪ್ರದರ್ಶನಗೊಳ್ಳಲಿವೆ. ಉದಯೋನ್ಮುಖ ದಕ್ಷಿಣ ಭಾರತೀಯ ಕಲಾವಿದರಾದ ಕೆಪಿ ಲಿಯೋನ್, ಹಿಮಾ ಹರಿಹರನ್ ಮತ್ತು ಆನಂದ್ ಬೆಕ್ವಾಡ್ ಅವರ ಕಲಾಕೃತಿಗಳೂ ಪ್ರಸ್ತುತಗೊಳ್ಳಲಿವೆ.