ಭಾರತದ ಆದರ್ಶವೇ ಸಂವಿಧಾನದ ಆತ್ಮ! ಸಂವಿಧಾನದ ಬಗ್ಗೆ ಅಪನಂಬಿಕೆ ಸೃಷ್ಟಿಸಿರುವವರಿಗೆ ರಚನಾಕಾರರ ಚರ್ಚೆಯೇ ಉತ್ತರ

| N/A | Published : Jan 26 2025, 11:34 AM IST

Constitution's Preamble
ಭಾರತದ ಆದರ್ಶವೇ ಸಂವಿಧಾನದ ಆತ್ಮ! ಸಂವಿಧಾನದ ಬಗ್ಗೆ ಅಪನಂಬಿಕೆ ಸೃಷ್ಟಿಸಿರುವವರಿಗೆ ರಚನಾಕಾರರ ಚರ್ಚೆಯೇ ಉತ್ತರ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ ಎನ್ನುವುದು ವೇದ, ಪುರಾಣ, ಮಹಾಭಾರತ, ರಾಮಾಯಣ, ದರ್ಶನಗಳು ಎಲ್ಲವೂ ದಾಖಲೆಗಳ ಗುಚ್ಛ. ಈ ಎಲ್ಲಾ ದಾಖಲೆಗಳು ಕಾನೂನಿನ ಕಣ್ಣಿನಿಂದಲೂ ಅಂಗೀಕೃತ ಮಾನ್ಯತೆ ಪಡೆದಿವೆ.

 

-ಡಾ। ಸುಧಾಕರ ಹೊಸಳ್ಳಿ.

ಸರ್ವಾಧಿಕಾರದ ನಂತರದ ಕಾಲಘಟ್ಟದಲ್ಲಿ ವಿಫುಲವಾದ, ಹಕ್ಕುಗಳೊಟ್ಟಿಗೆ ಪ್ರಜೆಗಳ ವ್ಯಕ್ತಿ ಸ್ವಾತಂತ್ರ್ಯ ಗೌರವಿಸುವ ಸ್ವಂತ ಸಂವಿಧಾನ ಸೃಜಿಸಿಕೊಳ್ಳುವ ವಿಶೇಷ ಹೂಣಿಗಾರಿಕೆ, ಸಂವಿಧಾನ ರಚನಾಕಾರರ ಮೇಲೆ ಒತ್ತಡ ಪೂರಕವಾಗಿ ಇತ್ತು, ಅಂತಹ ಒತ್ತಡವನ್ನೆಲ್ಲ ಸಹಿಸಿ ಸ್ವೀಕರಿಸಿ ರಚಿಸಿಕೊಂಡ ಸಂವಿಧಾನಕ್ಕೆ ಈಗ 75ರ ಸಂಭ್ರಮ. ಈ ಹೊತ್ತಿನಲ್ಲೂ ಸಂವಿಧಾನದ ಕುರಿತು ಅಸ್ಪಷ್ಟತೆ, ಗೊಂದಲ, ನಕರಾತ್ಮಕ ನಿರೂಪಣೆಗಳನ್ನು ಭಾರತ ಹೊಂದಿರುವುದು ವಿಪರ್ಯಾಸ.

ಭಾರತ ಸಂವಿಧಾನವನ್ನು ಭಾರತ ಬಿಟ್ಟು ಕಲ್ಪಿಸಿಕೊಳ್ಳುವುದು, ಭಾರತವನ್ನು ಹೊರತುಪಡಿಸಿ ಕಟ್ಟಿಕೊಡುವುದು, ಸಂವಿಧಾನ ಎಂಬುದು ಭಾರತಕ್ಕಿಂತ ತೀರ ಭಿನ್ನವಾದದ್ದು ಎಂಬ ನಕರಾತ್ಮಕ ನಿರೂಪಣೆಗಳನ್ನು 75 ವರ್ಷಗಳಿಂದಲೂ ಸಮಾಜದ ಮಧ್ಯೆ ಗಟ್ಟಿಯಾಗಿ ರೂಪಿಸಲಾಗಿದೆ ಮತ್ತು ಮುಂದುವರಿಸಿಕೊಂಡು ಬರಲಾಗಿದೆ.

ಸಂವಿಧಾನ ಅಸ್ತಿತ್ವಕ್ಕೆ ಬಂದ ನಂತರ ಭಾರತ ಎಂಬುದು ಅಸ್ತಿತ್ವವನ್ನೇ ಕಳೆದುಕೊಳ್ಳುತ್ತದೆ, ಎಲ್ಲವನ್ನು ಸಂವಿಧಾನದ ದೃಷ್ಟಿಯಲ್ಲಿ, ಕಾನೂನಿನ ಕಣ್ಣಿನಲ್ಲಿ ಮಾತ್ರ ನೋಡಬೇಕು ಎಂಬ ನಕರಾತ್ಮಕ ಅನುಸಂಧಾನ ಸಂವಿಧಾನಿಕವಾದುದ್ದೆ ಎಂದು ನಂಬಿಸಲಾಗಿದೆ.

ಹಾಗಾದರೆ ಸಂವಿಧಾನ ರಚನಾಕಾರರು ಸಂವಿಧಾನ ರಚನಾ ಸಭೆಯು ಭಾರತವನ್ನು ಹೊರತುಪಡಿಸಿ, ಭಾರತದ ಆದರ್ಶಗಳನ್ನು ಹೊರತುಪಡಿಸಿ, ಈ ನೆಲಮೂಲದ ಸಂಸ್ಕೃತಿಯನ್ನು ಹೊರಗಿಟ್ಟು ಸಂವಿಧಾನವನ್ನು ರಚನೆ ಮಾಡಲಾಗಿತ್ತಾ ಎಂದು ಪರಾಮರ್ಶಿಸಿದರೆ, ‘ಸಂವಿಧಾನದ ಆತ್ಮವೇ ಭಾರತವಾಗಿತ್ತು. ಈ ನೆಲದ ಪರಂಪರೆ ಹಾಗೂ ಆದರ್ಶವನ್ನೇ ಸಂವಿಧಾನದ ಚೌಕಟ್ಟನ್ನಾಗಿ ಮಾಡಬೇಕು ಎಂಬ ಆಗ್ರಹ ಸಂವಿಧಾನ ಸಭೆಯಲ್ಲಿ ಅಗ್ರವಾಗಿತ್ತು’ ಎಂಬುದಕ್ಕೆ ಸಿದ್ಧ ದಾಖಲೆಗಳು ಲಭ್ಯವಿವೆ.

ಭಾರತ ಎನ್ನುವುದು ವೇದ, ಪುರಾಣ, ಮಹಾಭಾರತ, ರಾಮಾಯಣ, ದರ್ಶನಗಳು ಎಲ್ಲವೂ ದಾಖಲೆಗಳ ಗುಚ್ಛ. ಈ ಎಲ್ಲಾ ದಾಖಲೆಗಳು ಕಾನೂನಿನ ಕಣ್ಣಿನಿಂದಲೂ ಅಂಗೀಕೃತ ಮಾನ್ಯತೆ ಪಡೆದಿವೆ.

ಅಂದು 1949, ನವೆಂಬರ್ 18ರ ದಿವಸ ಭಾರತಕ್ಕಾಗಿ ಯಾವ ಸ್ವರೂಪದ ಸರ್ಕಾರ ಇರಬೇಕು ಅನ್ನುವ ಚರ್ಚೆಯಲ್ಲಿ ಪಾಲ್ಗೊಂಡ ಪಂಡಿತ್ ಭಾರ್ಗವ ಹೀಗೆ ಹೇಳುತ್ತಾರೆ, ಪ್ರಪಂಚದ ಜನರು ನಮ್ಮನ್ನು ಇಂಡಿಯಾ ಎಂಬ ಹೆಸರಿನಿಂದ ಯಾವಾಗಲೂ ಕರೆಯುತ್ತಾರೆ. ಆದರೆ ನಮಗೆ ಸಂಬಂಧಿಸಿದಂತೆ ನಮ್ಮ ಹೃದಯ ಮತ್ತು ಆತ್ಮದಲ್ಲಿ ನಮ್ಮ ದೇಶ ಯಾವಾಗಲೂ ಭಾರತ ಆಗಿರುತ್ತದೆ. ಆದುದರಿಂದ ಇಂಡಿಯಾ ಮತ್ತು ಭಾರತ ಎಂಬ ಪದಗಳಿಗೆ ಆವರಣ ಚಿಹ್ನೆ ಹಾಕಲಾಗಿದೆ. ಇದರಿಂದ ನಮ್ಮ ದೇಶದ ಜನತೆಯ ಹಾಗೂ ಹೊರಗಿನವರ ವ್ಯವಹಾರದ ಅಗತ್ಯತೆಗಳನ್ನು ಪೂರೈಸಬಹುದು, ಪ್ರಪಂಚ ನಮ್ಮನ್ನು ಇಂಡಿಯಾ ಎಂದು ಕರೆದರೂ ನಮ್ಮಷ್ಟಕ್ಕೆ ನಾವು ಭಾರತ ಎಂದೇ ಕರೆಯುತ್ತೇವೆ’ ಎನ್ನುವಾಗ ಸಂವಿಧಾನ ರಚನಾ ಸಭೆಯು ಸಂವಿಧಾನ ಕಾರ್ಯದಲ್ಲಿ ಭಾರತವನ್ನು ಹೃದಯದಲ್ಲಿ ಇಟ್ಟುಕೊಂಡೆ ಮುನ್ನಡೆದಿತ್ತು ಎಂಬುದನ್ನು ಅರ್ಥೈಸಿಕೊಳ್ಳಬಹುದು.

ಸದಸ್ಯರೊಬ್ಬರ ಪ್ರಶ್ನೆಗೆ ಉತ್ತರಿಸುತ್ತ ಅಂಬೇಡ್ಕರರು, ‘ಈ ಸಂವಿಧಾನ ರಚನಾ ಸಭೆಯು ತನ್ನ ಕಾರ್ಯ ಆರಂಭ ಮಾಡುವ ಮೊದಲೇ ಬ್ರಿಟನ್ ಸಂಸತ್ತಿನ ನಿರ್ದೇಶನಗಳನ್ನೆಲ್ಲ ತಿರಸ್ಕರಿಸಿಯಾಗಿದೆ, ಬ್ರಿಟನ್ ನಿರ್ದೇಶಸುವ ಯಾವುದೇ ವಿಷಯ ಸಂಗತಿಗಳು ಈ ಸಂವಿಧಾನದ ಭಾಗವಾಗಲು ನನ್ನನ್ನು ಒಳಗೊಂಡಂತೆ ಇಲ್ಲಿರುವ ಯಾವುದೇ ಸದಸ್ಯರು ಅವಕಾಶ ನೀಡುವುದಿಲ್ಲ’. ಹೀಗೆ ಘಂಟಾಘೋಷವಾಗಿ ಸಾರಿದ್ದರ ಹಿನ್ನೆಲೆ ಭಾರತೀಯತೆಯ, ರಾಷ್ಟ್ರೀಯತೆಯ ಪರಾಕಾಷ್ಠೆ.

‘ಭಾರತದ ಪ್ರಜೆಗಳಾದ ನಾವು’ ಎನ್ನುವಂತೆ ಸಂವಿಧಾನ ಪ್ರಾರಂಭವಾದ್ದು ಅಂಬೇಡ್ಕರರ ಒಳಗೆ ಇದ್ದ ರಾಷ್ಟ್ರೀಯತೆಯ ಜಾಗೃತ ಜ್ಯೋತಿ ದ್ಯೋತಕವಾಗಿದೆ. ಕೆ.ವಿ.ಕಾಮತ್ ‘ಭಾರತಕ್ಕಾಗಿ ರಚನೆಯಾಗುವ ಈ ಸಂವಿಧಾನ ತಾಯಿ ಭಾರತೀಯ ಹೆಸರಿನಲ್ಲೇ, ಪ್ರಾರಂಭವಾಗಬೇಕು, ಹಾಗಾಗಿ ಅವಳ ಮಕ್ಕಳಾದ ನಾವು ಎಂದು ಪ್ರಸ್ತಾವನೆ ಆರಂಭವಾಗಲಿ’ ಎಂಬ ಆಶಯವನ್ನು ವ್ಯಕ್ತಪಡಿಸಿದ್ದರು.

ಅಂಬೇಡ್ಕರರು, ‘ನಾನು ಪ್ರಬಲ ಕೇಂದ್ರ ಸರ್ಕಾರವನ್ನು ಬೆಂಬಲಿಸುತ್ತೇನೆ, 1935ರ ಭಾರತ ಸರ್ಕಾರ ಕಾಯ್ದೆ ಸೃಜಿಸಿದ ಕೇಂದ್ರ ಸರ್ಕಾರಕ್ಕಿಂತ ಹತ್ತು ಪಟ್ಟು ಹೆಚ್ಚು ಬಲಿಷ್ಠ ಕೇಂದ್ರ ಸರ್ಕಾರವನ್ನು ನಾನು ಮಾನ್ಯ ಮಾಡುತ್ತೇನೆ’ ಎಂಬ ಅವರ ಅಚಲವಾದ ನಿಲುವು ಐಕ್ಯ ಭಾರತದ ಕಲ್ಪನೆಯನ್ನು ವೃಷ್ಟಿಕರಿಸುತ್ತದೆ. ಈ ಸಂವಿಧಾನ ರಚನಾ ಕಾರ್ಯವು ಯಾವುದೋ ಒಬ್ಬ ವ್ಯಕ್ತಿಯನ್ನು ಅಥವಾ ಒಂದು ಪಕ್ಷವನ್ನು ಅಧಿಕಾರದ ಗದ್ದುಗೆ ಏರಿಸಲು ಸಾಗುವ ಪ್ರಕ್ರಿಯೆಯಲ್ಲ, ದೇಶದ ಗುರಿಯನ್ನು ನಿರ್ಧಾರ ಮಾಡುವಾಗ ಜನರ ಘನತೆಗಳು, ನಾಯಕರ ಘನತೆಗಳು ಮತ್ತು ಪಕ್ಷದ ಘನತೆಗಳು ಗಣನೆಗೆ ಬರುವುದಿಲ್ಲ, ದೇಶದ ಗುರಿಯನ್ನೇ ಪ್ರತಿಯೊಂದಕ್ಕೂ ಪರಿಗಣಿಸಬೇಕು ಎನ್ನುವ ಅವರ ಆಶಯವನ್ನು ಪೂರ್ಣ ಸಂವಿಧಾನದ ರಚನಾ ಕಾರ್ಯದಲ್ಲಿ ಪ್ರತಿಪಾದಿಸುತ್ತಲೇ ಬಂದರು, ನಿಯಮಗಳನ್ನು ರೂಪಿಸುವಾಗಲು ಈ ತತ್ವವನ್ನು ಅಳವಡಿಸಿಕೊಂಡರು.

23 ನವೆಂಬರ್, 1948ರಂದು ಏಕರೂಪ ನಾಗರಿಕ ಸಮಿತಿಯ ಅನುಷ್ಠಾನದ ವಿರುದ್ಧ ಮಹಮ್ಮದ್ ಇಸ್ಮಾಯಿಲ್ ಎಂಬ ಸಂವಿಧಾನ ರಚನಾ ಸಭೆಯ ಸದಸ್ಯರು ಮಂಡಿಸಿದ ತಿದ್ದುಪಡಿಯನ್ನು ಕುರಿತು ಮಾತನಾಡಿದ್ದ ಅಂಬೇಡ್ಕರರು ‘ಈ ತಿದ್ದುಪಡಿಯನ್ನು ನಾನು ಒಪ್ಪಿಕೊಳ್ಳಲಾರೆ, ಇಂತಹ ವಿಶಾಲವಾದ ದೇಶಕ್ಕೆ ಸಮಾನವಾದ ಕಾನೂನು, ಸಂಹಿತೆಯನ್ನು ಹೊಂದಲು ಸಾಧ್ಯವೇ?’ ಎಂದು ಪ್ರಶ್ನಿಸಿದ್ದಾರೆ, ಮಾನವ ಸಂಬಂಧದ ಎಲ್ಲ ಸ್ಥರಗಳನ್ನು ಒಳಗೊಳ್ಳುವ ಏಕರೂಪದ ಕಾನೂನು ನಾವು ಹೊಂದಿದ್ದೇವೆ ಎನ್ನುವ ಸರಳ ಸತ್ಯ ಗೊತ್ತಿದ್ದರೂ, ಅವರ ಮಾತು ಕೇಳಿ ಆಶ್ಚರ್ಯ ಚಿಕಿತನಾಗಿದ್ದೇನೆ ಎಂದು ನಾನು ಒಪ್ಪಿಕೊಳ್ಳಲೇಬೇಕು.

ಈ ಅನುಚ್ಛೇದವನ್ನು ಕುರಿತಾಗಿ ಮಾತನಾಡಿದ ನನ್ನೆಲ್ಲ ಸ್ನೇಹಿತರು ಬಹುಶಃ 1935ರವರೆಗೆ ವಾಯುವ್ಯ ಗಡಿಯ ಪ್ರಾಂತ್ಯಗಳು ಶರಿಯುತ್ ಕಾನೂನಿಗೆ ಒಳಪಟ್ಟಿರಲಿಲ್ಲ ಎಂಬುದನ್ನು ಮರೆತಿರಬೇಕು ಎಂದು ಮೂದಲಿಸಿದ್ದರು.

ಕೃಷಿ ಮತ್ತು ಪಶುಸಂಗೋಪನೆಯ ಸಂಘಟನೆ, 48ನೇ ವಿಧಿ ಇದು ಕೂಡ ಹಿಂದೂ ಧರ್ಮದ ಆಚರಣೆಯೇ ಆಗಿದೆ. ಗ್ರಾಮ ಪಂಚಾಯಿತಿ 40ನೇ ವಿಧಿ ಇದು ಹಿಂದೂ ಜನಜೀವನದ ಭಾಗ, ಸಂವಿಧಾನದಲ್ಲಿ ಇಂದು ಅಸ್ತಿತ್ವದಲ್ಲಿರುವ ಸ್ಥಳೀಯ ಆಡಳಿತಕ್ಕೆ ಮೂಲ ಅದು ಭಾರತದ ಗ್ರಾಮೀಣ ಜೀವನ ಪದ್ಧತಿಯೇ, ಸಂಘಟನೆ ಗ್ರಾಮೀಣ ಜೀವನದ ಪದ್ಧತಿಯು ನಿಸ್ಸಂದೇಹವಾಗಿ ಈ ನೆಲಮೂಲದ ಆಚರಣೆಯೇ ಆಗಿದೆ.

38ನೇ ವಿಧಿಯ ಜನಕಲ್ಯಾಣ ಮತ್ತು ಸಾಮಾಜಿಕ ವ್ಯವಸ್ಥೆ ಹಿಂದೂ ಧರ್ಮದ ವಸುದೈವ ಕುಟುಂಬಕಂ ಕಲ್ಪನೆಯೇ ಆಗಿದೆ. ಸಂವಿಧಾನದ 74ನೇ ವಿಧಿ ರಾಷ್ಟ್ರಪತಿಗಳ ನೆರವಿಗಾಗಿ ಮಂತ್ರಿಮಂಡಲ ಇದ್ದು, ಐತಿಹಾಸಿಕ ಭಾರತದ ರಾಜ ಪರಂಪರೆ ಪ್ರತೀಕ. ಹೀಗೆ ಸಂವಿಧಾನದ ಅನೇಕ ಭಾಗಗಳು ರಾಷ್ಟ್ರೀಯತೆಯ ಭಾರತೀಯತೆಯ ತತ್ವಗಳನ್ನು ದರ್ಶಿಸುತ್ತವೆ.

ಸಂವಿಧಾನದ 239ನೇ ವಿಧಿ ಒಕ್ಕೂಟ ರಾಜ್ಯಗಳ ಆಡಳಿತ, 239ಎ ಉಪವಿಧಿ ಒಕ್ಕೂಟ ರಾಜ್ಯ ಕ್ಷೇತ್ರಗಳಿಗಾಗಿ ಸ್ಥಳೀಯ ವಿಧಾನ ಮಂಡಲ ಮತ್ತು ಮಂತ್ರಿಮಂಡಲವನ್ನು ಸೃಜಿಸುವ ಕೇಂದ್ರದ ಅಧಿಕಾರ, 240ನೇ ವಿಧಿಯ ಒಕ್ಕೂಟ ರಾಜ್ಯಗಳ ಮೇಲಿನ ರಾಷ್ಟ್ರಪತಿ ಅಧಿಕಾರ, ಹೆಚ್ಚುವರಿ ನ್ಯಾಯಾಲಯಗಳನ್ನು ಸ್ಥಾಪನೆ ಮಾಡಲು ಸಂಸತ್ತಿಗೆ 247ನೇ ವಿಧಿಯ ಅನ್ವಯ ಇರುವ ಅಧಿಕಾರ, 250ನೇ ವಿಧಿ ಅನುಸಾರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ರಾಜ್ಯ ಪಟ್ಟಿಯಲ್ಲಿರುವ ಯಾವುದೇ ವಿಷಯದ ಕುರಿತು ಕಾನೂನು ಮಾಡುವ ಸಂಸತ್ತಿನ ಅಧಿಕಾರ, 253ನೇ ವಿಧಿಯ ಅಂತಾರಾಷ್ಟ್ರೀಯ ಒಪ್ಪಂದಗಳನ್ನು ಮಾಡಿಕೊಳ್ಳುವ ಈ ಸಂಬಂಧ ಕಾನೂನು ಜಾರಿ ಮಾಡುವ ಕೇಂದ್ರದ ಅಧಿಕಾರ, 257ನೇ ವಿಧಿ ರಾಜ್ಯಗಳ ಮೇಲೆ ಕೇಂದ್ರದ ನಿಯಂತ್ರಣ ಅಧಿಕಾರ, 260ನೇ ವಿಧಿ ಭಾರತದವರೆಗಿನ ವ್ಯವಹಾರಗಳಲ್ಲಿ ಕೇಂದ್ರದ ಅಧಿಕಾರ ವ್ಯಾಪ್ತಿ, 51ಎ ಸಂವಿಧಾನಕ್ಕೆ ಬದ್ಧವಾಗಿರುವುದು ಹಾಗೂ ಅದರ ಆದರ್ಶಗಳನ್ನು ಮತ್ತು ಸಂಸ್ಥೆಗಳನ್ನು ರಾಷ್ಟ್ರಧ್ವಜವನ್ನು ಹಾಗೂ ರಾಷ್ಟ್ರ ಗೀತೆಯನ್ನು ಗೌರವಿಸುವುದು. 51ಬಿ ನಮ್ಮ ರಾಷ್ಟ್ರೀಯ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸ್ಪೂರ್ತಿದಾಯಕವಾಗಿದ್ದ ಉದಾತ್ತ ಆದರ್ಶಗಳನ್ನು, ಗೌರವಿಸುವುದಾಗಿದೆ.

ಒಟ್ಟಾರೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದ ಕರಡು ರಚನಾ ಸಮಿತಿ ಹಾಗೂ ಬಾಬು ರಾಜೇಂದ್ರ ಪ್ರಸಾದ್ ನೇತೃತ್ವದ ಸಂವಿಧಾನ ರಚನಾ ಸಭೆಯ ಒಟ್ಟು ಆಂತರ್ಯ ಈ ನೆಲ ಧರ್ಮದ ಸಂಸ್ಕೃತಿ ಪರಂಪರೆ ನಡವಳಿಕೆ ಆಚರಣೆ ಅಭಿಮತವನ್ನೇ ಕಾನೂನು ರೂಪವನ್ನಾಗಿಸಿ ಭಾರತೀಯರಿಗೆ ಅರ್ಪಿಸುವುದೇ ಆಗಿತ್ತು ಎಂಬುದು ಸಂವಿಧಾನದ ಆರಂಭ ಮತ್ತು ಅಂತ್ಯದಲ್ಲೂ ವೇದ್ಯವಾಗುತ್ತದೆ.

ಸಂವಿಧಾನ ರಚನಾ ಸಭೆಯ ಚರ್ಚೆಗಳು ಪುಟ 145 ರಿಂದ 151 ಸಂಪುಟ 1

ಪುಟ 733ರಿಂದ 742 ಸಂಪುಟ 3

ಪುಟ 405 ಮತ್ತು 406 ಸಂಪುಟ 10

ಸಂವಿಧಾನದ 4 ಭಾಗ 36 ರಿಂದ 51ನೇ ವಿಧಿಗಳು.)