ಏರೋ ಇಂಡಿಯಾದಲ್ಲಿ 5ನೇ ತಲೆಮಾರಿನ ಯುದ್ಧ ವಿಮಾನಗಳ ಜುಗಲ್ ಬಂದಿ ಪ್ರದರ್ಶನ : ಬಾಂಬರ್ ಅಬ್ಬರ

| N/A | Published : Feb 14 2025, 02:04 AM IST / Updated: Feb 14 2025, 04:49 AM IST

ಸಾರಾಂಶ

ಈ ಬಾರಿಯ ಏರೋ ಇಂಡಿಯಾದಲ್ಲಿ 5ನೇ ತಲೆಮಾರಿನ ಯುದ್ಧ ವಿಮಾನಗಳಾದ ಅಮೆರಿಕದ ‘ಎಫ್-35’ ಹಾಗೂ ರಷ್ಯಾದ ಎಸ್‌ಯು-57 ಜುಗಲ್ ಬಂದಿ ಪ್ರದರ್ಶನ ಹೊಸ ಮೆರಗು ತಂದಿತು.

 ಬೆಂಗಳೂರು : ಈ ಬಾರಿಯ ಏರೋ ಇಂಡಿಯಾದಲ್ಲಿ 5ನೇ ತಲೆಮಾರಿನ ಯುದ್ಧ ವಿಮಾನಗಳಾದ ಅಮೆರಿಕದ ‘ಎಫ್-35’ ಹಾಗೂ ರಷ್ಯಾದ ಎಸ್‌ಯು-57 ಜುಗಲ್ ಬಂದಿ ಪ್ರದರ್ಶನ ಹೊಸ ಮೆರಗು ತಂದಿತು.

ರಷ್ಯಾದ ಎಸ್‌ಯು-57 ಆಗಸದೆತ್ತರದಲ್ಲಿ ತನ್ನ ಕಸರತ್ತು ತೋರಿಸಿದರೆ, ಅಮೆರಿಕದ ಎಫ್-35 ನೆಲಮಟ್ಟದಿಂದ ಕನಿಷ್ಠ ಎತ್ತರದಲ್ಲಿ ಹಾರಾಟ ನಡೆಸಿತು. ತಾಂತ್ರಿಕತೆಯಲ್ಲಿ ಈ ಯುದ್ದ ವಿಮಾನಗಳು ತಮ್ಮದೇ ಆದ ಶಕ್ತಿ ಹೊಂದಿದ್ದರೂ ಯಲಹಂಕದ ವಾಯು ನೆಲೆಯಲ್ಲಿ ರಷ್ಯಾದ ಎಸ್ಯು-57 ನೋಡುಗರನ್ನು ರಂಜಿಸುವಂತೆ ಒಂದು ಕೈ ಮೇಲಿತ್ತು ಎಂದರೆ ತಪ್ಪಾಗಲಾರದು. ಅದರಲ್ಲೂ ಆಗಸದ ತುತ್ತತುದಿಗೆ ಹಾರಿ ಅಲ್ಲಿ ಒಂದು ಕ್ಷಣ ತಟಸ್ಥಗೊಂಡಂತೆ ನಿಂತು, ಗಾಳಿಯಲ್ಲಿ ತೇಲುವ ಹಾಳೆಯಂತೆ ಬೀಳುವಂತಾಗುವ ಭಾಸವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಇನ್ನು ಅತಿ ಕಡಿಮೆ ರನ್ ವೇ ಬಳಸುವ ಎಫ್-35ಗೆ ನೋಡುಗರು ಶಹಭಾಷ್ ಎಂದಿದ್ದು, ಸುಳ್ಳಲ್ಲ.

ಸುಮಾರು ವರ್ಷಗಳ ಬಳಿಕ ಅಮೆರಿಕದ ವಾಯುಪಡೆಯ ಬಿ-1ಬಿ ಬಾಂಬರ್ ವಿಮಾನವು ಈ ಬಾರಿ ಏರೋ ಇಂಡಿಯಾದಲ್ಲಿ ಗುರುವಾರ ಮೊದಲ ಬಾರಿಗೆ ಹಾರಾಟ ನಡೆಸಿತು. ವಾಯು ಪ್ರದರ್ಶನದ 2ನೇ ಅವಧಿಯ ಆರಂಭದಲ್ಲಿ ಒಟ್ಟು 6 ನಿಮಿಷಗಳ ಕಾಲ ಆಗಸದಲ್ಲಿ ಹಾರಾಟ ನಡೆಸಿದ ಈ ವಿಮಾನ, ಪ್ರೇಕ್ಷಕರ ಮುಂದೆ ಕೇವಲ ಎರಡು ಬಾರಿಯಷ್ಟೇ ಕಾಣಿಸಿಕೊಂಡಿತು. ವಿಶೇಷ ಎಂದರೆ, ಈ ವಿಮಾನಕ್ಕೆ ದೊಡ್ಡ ರನ್ವೇ ಅಗತ್ಯವಾಗಿದ್ದರಿಂದ ಗುರುವಾರ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಅಫ್ ಆಗಿ ಏರೋ ಇಂಡಿಯಾದ ವಾಯುನೆಲೆಯಲ್ಲಿ ಪ್ರದರ್ಶನ ನೀಡಿ ಪುನಃ ಅಲ್ಲಿಯೇ ವಾಪಸ್ ಹೋಗಿ ಲ್ಯಾಂಡ್ ಆಗಿದೆ.2021ರ ಏರೋ ಇಂಡಿಯಾದಲ್ಲಿ ಭಾಗವಹಿಸುವುದಕ್ಕೆ ಮೊದಲ ಬಾರಿಗೆ ಭಾರತಕ್ಕೆ ಆಗಮಿಸಿದ್ದ ಈ ಬಾಂಬರ್ ವಿಮಾನ, ಭಾರತದ ಹೆಮ್ಮೆಯ ಸ್ವದೇಶಿ ನಿರ್ಮಿತ ತೇಜಸ್ ಯುದ್ದ ವಿಮಾನದೊಂದಿಗೆ ಜೊತೆಗೂಡಿ ‘ಫ್ಲೈ ಬೈ’ ಮಾಡಿತ್ತು. 146 ಅಡಿ ಉದ್ದ, 34 ಅಡಿ ಎತ್ತರವಿರುವ ಈ ಬೃಹತ್ ಸೂಪರ್ಸಾನಿಕ್ ಬಾಂಬರ್, ಬೇರೆ ಯಾವುದೇ ಯುದ್ಧ ವಿಮಾನ ಮತ್ತು ಬಾಂಬರ್‌ಗಳಲ್ಲಿ ಇಲ್ಲದ ವಿಶೇಷ ರೆಕ್ಕೆಯನ್ನು (ವೇರಿಯೇಬಲ್ ಜಿಯೊಮೆಟ್ರಿ ವಿಂಗ್) ಹೊಂದಿದೆ. ಅಗತ್ಯಕ್ಕೆ ತಕ್ಕಂತೆ ಶತ್ರು ರಾಷ್ಟ್ರಗಳ ರೇಡಾರ್ ಗಳಿಂದ ತಪ್ಪಿಸಿಕೊಳ್ಳಲು ಅತಿ ವೇಗದಲ್ಲಿ ಹಾರಾಡಲು ಈ ರೆಕ್ಕೆಗಳು ಹಿಂದಕ್ಕೆ ಹಾಗೂ ಮುಂದಕ್ಕೆ ಚಲಿಸುವ ಸಾಮರ್ಥ್ಯ ಹೊಂದಿವೆ.

ಮುಂದುವರಿದ ಸೂರ್ಯಕಿರಣ್ ಅಬ್ಬರ:

ಎಂದಿನಂತೆ ಏರೋ ಇಂಡಿಯಾದ ಮುಖ್ಯ ಅಕರ್ಷಣೆಯನ್ನು ತನ್ನತ್ತ ಸೆಳೆಯುವಲ್ಲಿ ಸೂರ್ಯಕಿರಣ ಏರೋ ಬ್ಯಾಟಿಂಗ್ ತಂಡ ಯಶಸ್ವಿಯಾಯಿತು. ಆಗಸಕ್ಕೆ ಹಾರಿದ 9 ಸೂರ್ಯಕಿರಣ ತಂಡವು, ‘ವಿ’ ಅಕ್ಷರದ ಫಾರ್ಮೇಷನ್ ಮೂಲಕ ಪ್ರದರ್ಶನ ಆರಂಭಿಸಿತು. ಬಳಿಕ ಕೇಸರಿ, ಬಿಳಿ, ಹಸಿರು ತ್ರಿವರ್ಣದ ಧ್ವಜದ ಬಣ್ಣಗಳನ್ನು ಯಲಹಂಕ ವಾಯುನೆಲೆ ತುಂಬಾ ಹರಡಿದ ತಂಡ, ಬಳಿಕ ‘ಎ’ ಅಕ್ಷರದ ಮೂಲಕ ಏರೋಸ್ಪೇಸ್ ಕ್ಷೇತ್ರಕ್ಕೆ ಸೆಲ್ಯೂಟ್ ಮಾಡಿ ತಂಡವು ಒಂದೊಂದಾಗಿ ತನ್ನ ಸಿಗ್ನೇಚರ್ ವಿನ್ಯಾಸಗಳನ್ನು ಪ್ರದರ್ಶಿಸುತ್ತಾ ಜನರನ್ನು ಮಂತ್ರಮುಗ್ಧರನ್ನಾಗಿಸಿತು.ಆಗಸದಲ್ಲಿ ಪ್ರೇಮದ ಸಂಕೇತವಾಗಿ ಬಿಡಿಸುವ ದಿಲ್ ಮಾರ್ಕ್ಗೆ ದೊಡ್ಡ ಚಪ್ಪಾಳೆ ಮತ್ತು ಶಿಳ್ಳೆ ಕೇಳಿ ಬಂದವು. ಈ ಬಾರಿ ಹಲವು ಹೊಸ ವಿನ್ಯಾಸಗಳನ್ನು ಸೂರ್ಯಕಿರಣ ತಂಡ ಪ್ರದರ್ಶಿಸಿತು.

ಶಕ್ತಿ ಪ್ರದರ್ಶಿಸಿದ 10 ವಿಮಾನಗಳು:ಗುರುವಾರ ಒಟ್ಟು 10ಕ್ಕೂ ಅಧಿಕ ವಿಮಾನಗಳು ಆಗಸದಲ್ಲಿ ತಮ್ಮ ಕಸರತ್ತು ನಡೆಸಿದವು. ಪ್ರಮುಖವಾಗಿ ಎಚ್ಟಿಟಿ 40, ಎಚ್ಟಿ-2, ಐಜೆಟಿ, ಹಂಸ ಎನ್ಜಿ, ಡಾರ್ನಿಯರ್, ಬಿ-1ಬಿ, ಕೆಸಿ -135 ಏರ್ಕ್ರ್ಯಾಫ್ಟ್, ಎಫ್ 16, ಎಸ್ಯು-30 ಗಳಿದ್ದವು. ಇನ್ನು, ತುಮಕೂರಿನಲ್ಲಿ ಉತ್ಪಾದನೆಯಾದ ಎಲ್ಯುಎಚ್ ಹೆಲಿಕಾಪ್ಟರ್ ಟೇಲ್ ಅಪ್ ವಿನ್ಯಾಸ, ರಿವರ್ಸ್ ಸಂಚಾರದಂತಹ ಆಕರ್ಷಕ ವಿನ್ಯಾಸಗಳೊಂದಿಗೆ ರಂಜಿಸಿತು.

ಕೊನೆಯ ದಿನದ ಹಾರಾಟದ ಪ್ರಮುಖ ಲೋಹದ ಹಕ್ಕಿಗಳು:- ಅಮೆರಿಕದ ಎಫ್-35 - ರಷ್ಯಾದ ಎಸ್ಯು-57- ಭಾರತದ ತೇಜಸ್- ಅಮೆರಿಕದ ಎಫ್ - 16- ಎಸ್‌ಯು-30- ಸೂರ್ಯಕಿರಣ ಪ್ರದರ್ಶನ