ಬೆಂಗಳೂರು : ಡಾ.ರಾಜ್‌ಕುಮಾರ್‌ಗೆ ಸಾಟಿ ಆದ ನಟರಿಲ್ಲ - ಸಿಎಂ ಸಿದ್ದರಾಮಯ್ಯ ಅಭಿಪ್ರಾಯ

| N/A | Published : Jan 25 2025, 01:48 AM IST / Updated: Jan 25 2025, 09:22 AM IST

ಸಾರಾಂಶ

ಡಾ.ರಾಜ್‌ಕುಮಾರ್‌ ಅವರ ವಿನಯ, ಸಭ್ಯತೆ, ಸರಳತೆ ಇಡೀ ಮನುಷ್ಯ ಕುಲಕ್ಕೆ ಮಾದರಿ. ಅವರಿಗೆ ಸಾಟಿ ಆಗಬಲ್ಲಂತ ನಟರು ಯಾರು ಬಂದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

 ಬೆಂಗಳೂರು : ಡಾ.ರಾಜ್‌ಕುಮಾರ್‌ ಅವರ ವಿನಯ, ಸಭ್ಯತೆ, ಸರಳತೆ ಇಡೀ ಮನುಷ್ಯ ಕುಲಕ್ಕೆ ಮಾದರಿ. ಅವರಿಗೆ ಸಾಟಿ ಆಗಬಲ್ಲಂತ ನಟರು ಯಾರು ಬಂದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ನಗರದ ರವೀಂದ್ರ ಕಲಾ ಕ್ಷೇತ್ರದಲ್ಲಿ ಶುಕ್ರವಾರ ಕನ್ನಡ ಸೇನಾನಿ ಸಾ.ರಾ.ಗೋವಿಂದು ಅವರ ಅಭಿನಂದನ ಕಾರ್ಯಕ್ರಮದಲ್ಲಿ ಗೋವಿಂದು ಅವರನ್ನು ಸನ್ಮಾನಿಸಿ ಮಾತನಾಡಿ, ಸಾ.ರಾ.ಗೋವಿಂದು ಅವರು ರಾಜ್ ಕುಮಾರ್ ಸಂಘದ ಅಧ್ಯಕ್ಷರಾಗಿ ಕನ್ನಡ ಪರವಾದ ಹೋರಾಟಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ. ಅವರ ಹೋರಾಟದ ಫಲವಾಗಿ ಕನ್ನಡ ಚಿತ್ರರಂಗದ ಅಡಿಪಾಯ ಗಟ್ಟಿ ಆಯಿತು ಎಂದು ಶ್ಲಾಘಿಸಿದರು.

ನಾನು ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷನಾದಾಗ ಸಾ.ರಾ.ಗೋವಿಂದು ಮತ್ತು ಹಿರಿಯ ಪತ್ರಕರ್ತ ವೆಂಕಟೇಶ್ ಅವರ ಪರಿಚಯ ಮೊದಲ ಬಾರಿ ಆಯಿತು. ಇವರ ಕನ್ನಡ ಪರ ಹೋರಾಟದ ಬಗ್ಗೆ ಆಗಲೇ ನನಗೆ ಅಭಿಮಾನವಿತ್ತು. ಬೇರೆ ಧರ್ಮ ಮತ್ತು ಇತರೆ ಭಾಷೆಗಳ ಬಗ್ಗೆ ಸಹಿಷ್ಣತೆ ಇರಬೇಕು. ತಾಯಿ ಭಾಷೆ, ತಾಯಿ ನೆಲದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದರು.

ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ಡಾ.ರಾಜ್‌ಕುಮಾರ್‌ ಅಭಿಮಾನಿ ಸಂಘವನ್ನು ನಡೆಸುವುದು ಗುರುತರವಾದ ಜವಾಬ್ದಾರಿ. ಬಹುಶಃ ಇಡೀ ದೇಶದಲ್ಲಿ ಚಲನಚಿತ್ರ ಕಲಾವಿದರೊಬ್ಬರಿಗೆ 100ಕ್ಕೂ ಹೆಚ್ಚು ಪುಸ್ತಕಗಳು ಪ್ರಕಟಗೊಂಡಿದ್ದರೆ ಅದು ರಾಜ್‌ಕುಮಾರ್‌ ಅವರದ್ದಾಗಿದೆ ಎಂದರು.

ಕುವೆಂಪು ಅವರು ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಪಟ್ಟವರು ಆಗಿದ್ದರೂ ಸಾಹಿತ್ಯ ಕ್ಷೇತ್ರವನ್ನು ಮೀರಿದ ಸಾಂಸ್ಕೃತಿಕ ರಾಯಭಾರಿ. ಹಾಗೆಯೇ ರಾಜಕುಮಾರ್‌ ಅವರು ಸಿನಿಮಾ ಕ್ಷೇತ್ರಕ್ಕೆ ಸೇರಿದವರಾಗಿದ್ದರೂ ಅದಕ್ಕೆ ಮೀರಿದ ಸಾಂಸ್ಕೃತಿಕ ರಾಯಭಾರಿ ಆಗಿದ್ದರು. ಇವರಿಬ್ಬರೂ ನಮಗೆ ನಿಜವಾದ ಆದರ್ಶದ ಮಾದರಿಗಳು. ಇಷ್ಟೆಲ್ಲಾ ಸಾಧನೆ ಸುಮ್ಮನೆ ಬಂದಿದ್ದಲ್ಲ. ಅದರ ಹಿಂದೆ ಶ್ರಮ, ಸಂಕಲ್ಪ. ಬದ್ಧತೆ, ಛಲದಿಂದ ಬಂದದ್ದು ಎಂದು ಬರಗೂರು ಹೇಳಿದರು.

ಅಭಿನಂದನೆ ಸ್ಮೀಕರಿಸಿ ಮಾತನಾಡಿದ ಸಾ.ರಾ.ಗೋವಿಂದು, ಪರಭಾಷಿಕ ಚಲನಚಿತ್ರಗಳ ಪ್ರದರ್ಶನದ ಟಿಕೆಟ್‌ ದರ ಸಾವಿರಾರು ರು. ಮಾರಾಟವಾಗುತ್ತಿದೆ. ಇದರಿಂದ ಕನ್ನಡ ಚಿತ್ರರಂಗ ಉಳಿಯುವುದು ಕಷ್ಟವಾಗುತ್ತಿದೆ. ಆದ್ದರಿಂದ ಟಿಕೆಟ್‌ ದರ ನಿಯಂತ್ರಣಕ್ಕೆ ಕಾನೂನು ಮಾಡಿ ಚಿತ್ರರಂಗ ಉಳಿಸುವಂತೆ ಮನವಿ ಮಾಡಿದರು.

ಸಾಹಿತಿ ಹಂಪ ನಾಗರಾಜಯ್ಯ ಅಧ್ಯಕ್ಷತೆ ವಹಿಸಿದ್ದರು. ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಗೊ.ರು.ಚನ್ನಬಸಪ್ಪ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ವಿಧಾನಸಭೆ ಮುಖ್ಯ ಸಚೇತಕ ಅಶೋಕ್ ಪಟ್ಟಣ್, ಹಿರಿಯ ಪತ್ರಕರ್ತ ವೆಂಕಟೇಶ್ ಉಪಸ್ಥಿತರಿದ್ದರು.