ಸಾರಾಂಶ
ಅರಣ್ಯ ಇಲಾಖೆ ಸರಣಿ-1
ಮಯೂರ್ ಹೆಗಡೆ
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದ ಹಲವು ಇಲಾಖೆಗಳ ಹೊರಗುತ್ತಿಗೆ ಸಿಬ್ಬಂದಿ ಕಾಯಮಾತಿಗಾಗಿ ಹೋರಾಡುತ್ತಿದ್ದಾರೆ. ಆದರೆ, ಅರಣ್ಯ ಇಲಾಖೆಯ ಹೊರ ಗುತ್ತಿಗೆ ನೌಕರರು ಸದ್ಯಕ್ಕಂತೂ ಕಾಯಂ ಬಗ್ಗೆ ಚಕಾರ ಎತ್ತುತ್ತಿಲ್ಲ. ಏಕೆಂದರೆ, ಅವರಿಗೆ ಸಂಬಳವೇ ಸರಿಯಾಗಿ ಬರುತ್ತಿಲ್ಲ.
ಹೀಗಾಗಿ ಹೊರಗುತ್ತಿಗೆ ಅರಣ್ಯ ವೀಕ್ಷಕರ ಬೇಡಿಕೆ- ಸಮಯಕ್ಕೆ ಸರಿಯಾಗಿ ಸಂಬಳ ಕೊಡಿ ಸ್ವಾಮಿ ಎಂಬುದು ಮಾತ್ರ. ದಶಕಗಳಿಂದ ಈ ಸಮಸ್ಯೆ ಅನುಭವಿಸುತ್ತಿರುವ ಹೊರಗುತ್ತಿಗೆ ಅರಣ್ಯ ವೀಕ್ಷಕರ ಈ ಕೂಗು ಅರಣ್ಯರೋದನವಾಗಿದೆ.
ಕಳೆದ ಅಕ್ಟೋಬರ್ ಬಳಿಕ ರಾಜ್ಯದ ಅರಣ್ಯ ಇಲಾಖೆಯ ಹಲವು ವಿಭಾಗಗಳ ಹೊರಗುತ್ತಿಗೆ ಸಿಬ್ಬಂದಿಗೆ ವೇತನವಾಗಿಲ್ಲ. ಇದಕ್ಕೂ ಮುನ್ನ ಆರು ತಿಂಗಳವರೆಗೆ ಸಂಬಳವಾಗದ ಉದಾಹರಣೆಯೂ ಇದೆ. ಇಲಾಖೆಯ ‘ಎ, ಬಿ, ಸಿ’ ಹಂತದ ಅಧಿಕಾರಿಗಳು ಒಂದು ದಿನ ಸಂಬಳ ವಿಳಂಬವಾದರೂ ಸುಮ್ಮನಿರಲ್ಲ. ಆದರೆ, ಕೆಳಹಂತದ ಸಿಬ್ಬಂದಿಯ ಸಂಬಳದ ಕಡತವನ್ನೇ ಮರೆತುಬಿಡುತ್ತಾರೆ ಎಂಬ ಆರೋಪವಿದೆ.
ಇಲಾಖೆಯಲ್ಲಿ ‘ಸಿ’ ಗ್ರೂಪ್ 368, ‘ಡಿ’ ಗ್ರೂಪ್‌ನಲ್ಲಿ 2471 ದಿನಗೂಲಿ ನೌಕರರಿದ್ದಾರೆ. ಇದರಲ್ಲಿ ಗಸ್ತು ನಿರ್ವಾಹಕರು, ನಿಸ್ತಂತು ನಿರ್ವಾಹಕ, ಕಂಪ್ಯೂಟರ್ ಆಪರೇಟರ್, ವಾಹನ ಚಾಲಕರು ಸೇರಿದ್ದಾರೆ. ಜೊತೆಗೆ 6 ಹುಲಿ ಸಂರಕ್ಷಿತ ಪ್ರದೇಶ, 13 ವನ್ಯಜೀವಿ ಅಭಯಾರಣ್ಯಗಳಲ್ಲಿ ಕಳ್ಳಬೇಟೆ ತಡೆ ವಿಶೇಷ ಕಾರ್ಯಾಚರಣೆಗಿರುವ 1600ಕ್ಕೂ ಹೆಚ್ಚಿನ ಅರಣ್ಯ ವೀಕ್ಷಕ ದಿನಗೂಲಿ ನೌಕರರಿಗೆ ಸಂಬಳ ಅನಿಶ್ಚಿತವಾಗಿದೆ.
ಆರೋಗ್ಯ ಸಮಸ್ಯೆ ಎದುರಾದಾಗ, ಹಬ್ಬ ಹರಿದಿನಗಳಲ್ಲಿ, ಮಕ್ಕಳ ವಿದ್ಯಾಭ್ಯಾಸ ಸೇರಿ ಕೊನೆಗೆ ಊಟಕ್ಕೂ ಆರ್ಥಿಕ ಸಂಕಷ್ಟ ಎದುರಿಸಿದ ಅನುಭವ ಇವರಿಗಿದೆ. ಪ್ರತಿನಿತ್ಯದ ಗಸ್ತಿನ ಜೊತೆಗೆ ಫೈರ್ ಲೈನ್, ಕಾಡ್ಗಿಚ್ಚು ತಡೆ, ಹುಲಿ-ಆನೆ ಸೆರೆಯಂಥ ಅಪಾಯಕಾರಿ ಕಾರ್ಯಾಚರಣೆಯಲ್ಲಿ ಸದಾ ತೊಡಗಿರುವ ಇವರು ಅತ್ತಾಗ ಮಾತ್ರ ಸರ್ಕಾರ ಒಂದಿಷ್ಟು ತುಪ್ಪ ಸವರಿ ಮತ್ತೆ ಕೈಕಟ್ಟುತ್ತಿದೆಯೇ ವಿನಃ ಶಾಶ್ವತ ಪರಿಹಾರಕ್ಕೆ ಮುಂದಾಗಿಲ್ಲ ಎಂದು ಪರಿಸರ ಪ್ರೇಮಿಗಳು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಸಾಲವೇ ಗತಿ: ಸಂಬಳ ಆಗದಿದ್ದಾಗ ವಲಯ ಅರಣ್ಯಾಧಿಕಾರಿಗಳು ತಮ್ಮ ಕೈಯಿಂದ, ಎನ್‌ಜಿಒ ನೆರವಿಂದ ಹಣ ಕೊಡಿಸುವುದುಂಟು. ಎಲ್ಲಿಯೂ ಸಿಕ್ಕದಿದ್ದಾಗ ಸಿಬ್ಬಂದಿ ಕೈಸಾಲ, ಮೀಟರ್ ಸಾಲದ ಮೊರೆ ಹೋಗುತ್ತಾರೆ. ಶೇ.10, 12 ಬಡ್ಡಿದರಕ್ಕೆ ಕೈಗಡ ಸಾಲ ಪಡೆಯುತ್ತಾರೆ. ದಿನದ 24 ಗಂಟೆ ದುಡಿವ ಇವರಿಗೆ ತಿಂಗಳಿಡೀ ಸಂಬಳವೂ ಸಿಗಲ್ಲ. 30 ದಿನಗಳ ಪೈಕಿ ಇವರು 26 ದಿನಗಳಿಗೆ ಮಾತ್ರ ವೇತನ ಪಡೆಯುತ್ತಾರೆ.
ಟೈಗರ್ ಫೌಂಡೇಶನ್ ಹಣ: ಐದು ಹುಲಿ ಅರಣ್ಯ ಸಂರಕ್ಷಿತ ಪ್ರದೇಶದ ಸಫಾರಿ ಆದಾಯವನ್ನು ಅಗತ್ಯ ಇಲ್ಲದಿದ್ದರೂ ಸಿವಿಲ್ ಕಾಮಗಾರಿಗೆ ಬಳಸಲಾಗುತ್ತದೆ. ಸಂಬಳ ಆಗದೆ ಇದ್ದಾಗ ಫೌಂಡೇಶನ್‌ನ ಈ ಹಣವನ್ನು ಸಂಬಳಕ್ಕೆ ಕೊಡುವ ಅವಕಾಶ ಇದ್ದರೂ ಹಲವು ವೇಳೆ ಇದು ಬಟವಾಡೆ ಆಗುವುದೇ ಇಲ್ಲ.
18,600 ರು.ವರೆಗೂ ಸಂಬಳ: ಆರನೇ ವೇತನ ಆಯೋಗದ ಶಿಫಾರಸಿನಂತೆ ಡಿ ಗ್ರೂಪ್‌ನವರಿಗೆ ₹17600, ಸ್ಪೆಷಲ್ ಸ್ಕೇಲ್‌ನಲ್ಲಿ ಬರುವ ಅರಣ್ಯ ವೀಕ್ಷಕರಿಗೆ ₹18600 ನಷ್ಟು ಸಂಬಳವಿದೆ. ಇದರಲ್ಲಿ ಇಪಿಎಫ್, ಗ್ರಾಚ್ಯುಟಿಗಳೆಲ್ಲ ಕಡಿತಗೊಂಡು ಕೈಗೆ ₹12-14 ಸಾವಿರ ಸಿಗುತ್ತದೆ. ಆದರೆ, ನಿಗದಿತವಾಗಿ ತಿಂಗಳಿಗೆ ಸಂಬಳ ಆಗುತ್ತಿಲ್ಲ.
ಡಿ ಗ್ರೂಪ್‌ನಡಿಯ ಇವರ ಸಂಬಳದಲ್ಲಿ ಇಎಸ್‌ಐ, ಪಿಎಫ್ ಹಣವನ್ನು ಗುತ್ತಿಗೆ ಏಜೆನ್ಸಿಗಳು ನಿರ್ವಹಿಸುತ್ತವೆ. ಏಜೆನ್ಸಿ ಬದಲಾದಾಗ ಇಎಸ್‌ಐ, ಪಿಎಫ್ ಖಾತೆ ಹೊಸ ಏಜೆನ್ಸಿಗೆ ಲಿಂಕ್ ಆಗಲ್ಲ. ಇಪಿಎಫ್ ನಂಬರ್ ಸಿಬ್ಬಂದಿಗೆ ಸಿಗುವುದೇ ಇಲ್ಲ. ವಿಭಾಗವಾರು ಗುತ್ತಿಗೆ ಏಜೆನ್ಸಿಗಳಿದ್ದು, ನಾವು ಯಾವ ಏಜೆನ್ಸಿಯಡಿ ಕೆಲಸ ಮಾಡುತ್ತಿದ್ದೇವೆ ಎಂಬುದೇ ನೌಕರರಿಗೆ ತಿಳಿಯುತ್ತಿಲ್ಲ. ಸಂಬಳದಲ್ಲಿ ಎಷ್ಟು ಹಣ, ಯಾವಾಗ, ಯಾವುದಕ್ಕೆ ಕಡಿತವಾಗಿದೆ ಎಂಬ ಮಾಹಿತಿಯೇ ಇರುವುದಿಲ್ಲ.
ಅಕ್ಟೋಬರ್ ತಿಂಗಳವರೆಗಿನ ಸಂಬಳ ಆಗಿದೆ. ಅನುದಾನದ ಕೊರತೆ ಇಲ್ಲ. ಆದರೆ ಬಳಕೆ ಬಗ್ಗೆ ಕೆಲ ತಾಂತ್ರಿಕ ಸಮಸ್ಯೆಗಳಿದ್ದವು. ಮುಖ್ಯ ಕಾರ್ಯದರ್ಶಿ ಜೊತೆಗೆ ಸಭೆ ನಡೆಸಿ ಶೀಘ್ರವೇ ಬಾಕಿ ಸಂಬಳ ಬಿಡುಗಡೆ ಮಾಡಲಾಗುವುದು ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥ ಬ್ರಿಜೇಶ್ ಕುಮಾರ್ ತಿಳಿಸಿದರು.
ನಿಗದಿತವಾಗಿ ಸಂಬಳ ಕೊಡುವಂತೆ 2007ರಲ್ಲಿ ಸರ್ಕಾರಕ್ಕೆ ಪತ್ರ ಬರೆದಿದ್ದೆವು. ಆದರೆ, ಪರಿಸ್ಥಿತಿ ಇಂದಿಗೂ ಹಾಗೆಯೇ ಇದೆ. ಕೈಸಾಲದಲ್ಲಿ ಸಿಬ್ಬಂದಿ ಬದುಕು ನಡೆಸಬೇಕಾಗಿದೆ ಎಂದು ಪರಿಸರ ಕಾರ್ಯಕರ್ತ ಜೋಸೆಫ್ ಹೂವರ್ ತಿಳಿಸಿದರು.
ಹದಿನಾಲ್ಕು ವರ್ಷದಿಂದ ಇದೇ ಕೆಲಸ ಮಾಡುತ್ತಿದ್ದೇನೆ. ಆರಂಭದಲ್ಲಿ ಯಾವ ಪರಿಸ್ಥಿತಿ ಇತ್ತೋ ಈಗಲೂ ಹಾಗೇ ಇದೆ. ಹಲವರು ಕೆಲಸ ಬಿಡುವ ಮಾತನಾಡುತ್ತಾರೆ. ಆದರೆ ಅನಿವಾರ್ಯತೆ ನಮ್ಮನ್ನು ಇಲ್ಲಿ ಮುಂದುವರಿಯುವಂತೆ ಮಾಡಿದೆ ಎಂದು ದಿನಗೂಲಿ ಅರಣ್ಯ ವೀಕ್ಷಕ (ಬಿಆರ್‌ಟಿ) ತಮ್ಮ ಪರಿಸ್ಥಿತಿಯನ್ನು ಹಂಚಿಕೊಂಡರು.