ಈ ಸಲ ಮಾವು ಬೆಲೆ ದುಬಾರಿ

| Published : Mar 26 2024, 01:47 AM IST / Updated: Mar 26 2024, 08:52 AM IST

Mango

ಸಾರಾಂಶ

ರಾಜ್ಯದಲ್ಲಿ ಬಿಸಿಲಿನ ತಾಪದಿಂದ ಈ ವರ್ಷ ಮಾವಿನ ಉತ್ಪಾದನೆಯಲ್ಲಿ ಶೇ.60-70ರಷ್ಟು ಕುಸಿತವಾಗಲಿದೆ. ಇದು ಬಂಪರ್‌ ಬೆಳೆಯ ನಿರೀಕ್ಷೆಯಲ್ಲಿದ್ದ ಮಾವು ಬೆಳೆಗಾರರನ್ನು ಸಂಕಷ್ಟಕ್ಕೆ ಸಿಲುಕಿಸುವ ಸಾಧ್ಯತೆಯಿದೆ.

ಸಂಪತ್‌ ತರೀಕೆರೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ಬಿಸಿಲಿನ ತಾಪದಿಂದ ಈ ವರ್ಷ ಮಾವಿನ ಉತ್ಪಾದನೆಯಲ್ಲಿ ಶೇ.60-70ರಷ್ಟು ಕುಸಿತವಾಗಲಿದೆ. ಇದು ಬಂಪರ್‌ ಬೆಳೆಯ ನಿರೀಕ್ಷೆಯಲ್ಲಿದ್ದ ಮಾವು ಬೆಳೆಗಾರರನ್ನು ಸಂಕಷ್ಟಕ್ಕೆ ಸಿಲುಕಿಸುವ ಸಾಧ್ಯತೆಯಿದೆ.

ಈ ಬಾರಿಯ ಮಾವು ಹಂಗಾಮಿನ ಆರಂಭದಲ್ಲಿ 14ರಿಂದ 16 ಲಕ್ಷ ಮೆಟ್ರಿಕ್‌ ಟನ್‌ ಮಾವು ಉತ್ಪಾದನೆಯಾಗಲಿದೆ ಎಂದು ಅಂದಾಜಿಸಲಾಗಿತ್ತು. ಹಾಗಾಗಿ ಮಾವು ಬೆಳೆಗಾರರು ಸಂತಸದಲ್ಲಿದ್ದರು. ಆದರೆ ಹವಾಮಾನ ವೈಪರೀತ್ಯದಿಂದಾಗಿ ಮಾವು ಬೆಳೆಯ ಶಾರೀರಿಕ ಸ್ಥಿತ್ಯಂತರದಲ್ಲಿ ಭಾರಿ ಬದಲಾವಣೆ ಉಂಟಾಗಿದೆ. 

ಮಾವಿನ ಗಿಡಗಳು ಅಕಾಲಿಕವಾಗಿ ಚಿಗುರೊಡೆದು ಹೂವು, ಕಾಯಿಗಳನ್ನು ಉದುರಿಸುತ್ತಿವೆ. ಹೀಗಾಗಿ ಶೇ.70ರಷ್ಟು ಫಸಲು ನಾಶವಾಗಲಿದೆ. ತೋಟಗಳಲ್ಲಿರುವ ಮಾವನ್ನು ಸ್ವಲ್ಪ ಮಟ್ಟಿಗೆ ನೀರು ಹರಿಸುವ ಮೂಲಕ ಕಾಪಾಡಿಕೊಳ್ಳಬೇಕು. 

ಕೀಟಬಾಧೆಗಳು ಎದುರಾದರೆ ಅವುಗಳನ್ನೂ ತಕ್ಷಣಕ್ಕೆ ನಿವಾರಣೆ ಮಾಡಿಕೊಂಡು ಮಾವು ಬೆಳೆಗೆ ರಕ್ಷಣೆ ಒದಗಿಸಬೇಕು ಎನ್ನುತ್ತಾರೆ ತಜ್ಞರು.

ರಾಮನಗರ ಹೊರತುಪಡಿಸಿ ಕೋಲಾರ, ಚಿಕ್ಕಬಳ್ಳಾಪುರ, ಧಾರವಾಡದಲ್ಲೂ ಉತ್ಪಾದನೆ ಕಡಿಮೆಯಿದೆ. ಎಲ್ಲೆಡೆ ವಾತಾವರಣದಲ್ಲಿ ಶುಷ್ಕತೆಯ ಪ್ರಮಾಣ ಹೆಚ್ಚಾಗಿದ್ದು, ಭೂಮಿಯಲ್ಲಿ ತೇವಾಂಶವಿಲ್ಲದೆ ಅತಿಯಾದ ಬಿಸಿಲಿಗೆ ಮಾವು ಎರಡು ಬಾರಿ ಚಿಗುರೊಡೆದಿದೆ. 

ಹೂವು ಬಿಟ್ಟ ನಂತರ ಚಳಿಯ ವಾತಾವರಣವಿದ್ದರೆ ಕಾಯಿಗಳು ಬರುತ್ತವೆ. ಆದರೆ ಈ ಬಾರಿ ಬಿಸಿಯ ವಾತಾವರಣವಿದ್ದು, ಹೂವು ಬಿಟ್ಟಿದ್ದ ಮಾವು ಚಿಗುರೊಡೆಯಲು ಆರಂಭಿಸಿದೆ. 

ಇದರಿಂದ ಹೂವುಗಳಿಗೆ ತಲುಪಬೇಕಾದ ಸಾರವೆಲ್ಲಾ ಚಿಗುರು ಎಲೆಗಳ ಪಾಲಾಗುತ್ತಿದ್ದು, ಅದರ ಪರಿಣಾಮ ಹೂವು, ಕಾಯಿಗಳ ಮೇಲೆ ಉಂಟಾಗಿ ಇಳುವರಿ ಕುಸಿತವಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಸಿ.ಜಿ.ನಾಗರಾಜ್ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಸಂಕಷ್ಟದಲ್ಲಿ ಬೆಳೆಗಾರರು: ಹೂವು, ಮಿಡಿ ಬರುವ ಸಮಯದಲ್ಲಿ ಚಿಗುರು ಬಂದಿರುವುದರಿಂದ ರಸ ಹೀರುವ ಕೀಟಗಳು, ನುಸಿ ಕಾಟ ಜಾಸ್ತಿಯಾಗಿದೆ. ಹೀಗಾಗಿ ಮಾವಿನ ಮಿಡಿಗಳು ಸಹ ಉದುರುತ್ತಿದೆ. 

ಜನವರಿಯಲ್ಲಿ ಹೂವು ಬಿಟ್ಟು ಕಾಯಿ ಕಟ್ಟಿದ ಫಸಲು ಶೇ.10ರಿಂದ 15ರಷ್ಟು ಉಳಿಯುವ ನಿರೀಕ್ಷೆಯಿದೆ. ಕಳೆದ ಜುಲೈನಿಂದ ಈವರೆಗೂ ಮಳೆಯಾಗಿಲ್ಲ. ಫಸಲು ಕೊಯ್ಲಿನ ನಂತರ ಮಳೆ ಬರಬೇಕು. 

ಆ ನಂತರ ಚಿಗುರು ಬಂದು, ಹೂವು ಬಿಟ್ಟು, ಕಾಯಿ ಕಟ್ಟಿದ ನಂತರ ಬಿಸಿಲು ಬಂದರೆ ಫಸಲು ಚೆನ್ನಾಗಿರುತ್ತದೆ. ಆದರೆ ವರ್ಷದಿಂದ ಮಳೆಯೇ ಇಲ್ಲ. 

ಈಗ ಉಷ್ಣಾಂಶವೂ ಜಾಸ್ತಿಯಾಗಿದ್ದು, ರೈತರು ಕೈಸುಟ್ಟುಕೊಳ್ಳುವಂತ ಪರಿಸ್ಥಿತಿ ಇದೆ ಎಂದು ಕೋಲಾರ ಜಿಲ್ಲಾ ಮಾವು ಬೆಳಗಾರರ ಸಂಘದ ನೀಲಟೂರು ಚಿನ್ನಪ್ಪರೆಡ್ಡಿ ಅಲವತ್ತುಕೊಂಡರು.

ರಾಜ್ಯದಲ್ಲಿ 1.48 ಲಕ್ಷ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಏರು ಹಂಗಾಮಿನಲ್ಲಿ ಸರಾಸರಿ 14ರಿಂದ 16 ಲಕ್ಷ ಮೆಟ್ರಿಕ್‌ ಟನ್‌ ಮಾವು ಇಳುವರಿ ಸಿಗುತ್ತದೆ. 

ಇಳಿ ಹಂಗಾಮಿನಲ್ಲಿ 7ರಿಂದ 9 ಲಕ್ಷ ಮೆಟ್ರಿಕ್‌ ಟನ್‌ ಮಾವು ಉತ್ಪಾದನೆಯಾಗುತ್ತದೆ. ರಾಜ್ಯದಲ್ಲಿ ಮಾವು ಬೆಳೆಯುವ ಒಟ್ಟು 1.48 ಲಕ್ಷ ಹೆಕ್ಟೇರ್‌ ಪೈಕಿ ಕೋಲಾರ 45,568, ರಾಮನಗರ 27,722, ತುಮಕೂರು 16,616, ಬೆಳಗಾವಿ 2908, ಚಿಕ್ಕಬಳ್ಳಾಪುರ 9881, ಹಾವೇರಿ 5010, ಮಂಡ್ಯದಲ್ಲಿ 1806 ಹೆಕ್ಟೇರ್‌ನಲ್ಲಿ ಮಾವು ಬೆಳೆಯಾಗುತ್ತಿದೆ.