ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಅಂಧರು ಮತ್ತು ಅಂಗವಿಕಲರ ಪ್ರಯಾಣಕ್ಕೆ ನೆರವಾಗುವ ದೃಷ್ಟಿಯಿಂದ ಖಾಸಗಿ ಮತ್ತು ಸಾರ್ವಜನಿಕ ಸಾರಿಗೆ ಬಸ್ (ಸ್ಟೇಜ್ ಕ್ಯಾರೇಜ್)ಗಳಲ್ಲಿ ‘ಆಡಿಯೋ ಪ್ರಕಟಣಾ ವ್ಯವಸ್ಥೆ ಅಳವಡಿಸಲು, ಅಂಗವಿಕಲರಿಗೆ ಇಳಿಯಲು ಹಾಗೂ ಹತ್ತಲು ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು 2024ರ ಜೂ.30ರ ಕಾಲಮಿತಿ ಹಾಕಿಕೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.ಬೆಂಗಳೂರಿನ ಅಂಧ ಎನ್. ಶ್ರೇಯಸ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠಕ್ಕೆ ಸರ್ಕಾರ ಈ ಮಾಹಿತಿ ನೀಡಿದೆ.
ಪ್ರಮುಖವಾಗಿ ರಾಜ್ಯದಲ್ಲಿ ಎಲ್ಲ ಮಜಲು ವಾಹನಗಳಲ್ಲಿ (ಸ್ಟೇಜ್ ಕ್ಯಾರೇಜ್) ಅಂಗವಿಕಲರಿಗೆ ಅನುಕೂಲವಾಗುವಂತೆ ಆಡಿಯೋ ಪ್ರಕಟಣಾ ವ್ಯವಸ್ಥೆ ಮತ್ತು ಬಸ್ಸುಗಳಲ್ಲಿ ಇಳಿಯಲು-ಹತ್ತಲು ಅಗತ್ಯ ಸೌಲಭ್ಯವನ್ನು ಒದಗಿಸಲು 2024ರ ಜೂನ್ 30ರೊಳಗೆ ಕಡ್ಡಾಯವಾಗಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ನೋಂದಣಿ ಮತ್ತು ಅರ್ಹತಾ ಪತ್ರ ನವೀಕರಿಸುವ ಮೊದಲು ಈ ವ್ಯವಸ್ಥೆ ಅಳಡಿಸಿಕೊಂಡಿರುವ ಬಗ್ಗೆ ವಾಹನ ಮಾಲೀಕರು ಖಾತರಿಪಡಿಸಿಕೊಳ್ಳಬೇಕು. ಇದು ಸರ್ಕಾರಿ ಮತ್ತು ಖಾಸಗಿ ಬಸ್ಸುಗಳಿಗೆ ಅನ್ವಯವಾಗಲಿದೆ. ಇದಕ್ಕೆ ಸಂಬಂಧಿಸಿದ ಹೆಚ್ಚುವರಿ ಸುತ್ತೋಲೆಯನ್ನು ಸಹ ಹೊರಡಿಸಲಾಗುವುದು ಎಂದು ಸರ್ಕಾರ ಮಾಹಿತಿ ನೀಡಿದೆ.ಬಿಎಂಟಿಸಿ ಪರ ವಕೀಲರು ವಾದ ಮಂಡಿಸಿ, ನಿಗಮದಲ್ಲಿ ಶೇ.59ರಷ್ಟು ವಾಹನಗಳಲ್ಲಿ ಆಡಿಯೋ ಪ್ರಕಟಣಾ ವ್ಯವಸ್ಥೆಯಿದೆ. ಒಟ್ಟು ಬಸ್ಸುಗಳಲ್ಲಿ 2,562 ಬಸ್ಸುಗಳಲ್ಲಿ ಅಂತಹ ವ್ಯವಸ್ಥೆ ಇಲ್ಲ. ಅದರಲ್ಲಿ 1,145 ಬಸ್ಸುಗಳನ್ನು ಹಂತ-ಹಂತವಾಗಿ ಗುಜರಿಗೆ ಹಾಕಿ ಬದಲಿ ಬಸ್ಸುಗಳನ್ನು ಖರೀದಿಸಲಾಗುವುದು. ಹೊಸದಾಗಿ 921 ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಲು ತೀರ್ಮಾನಿಸಲಾಗಿದೆ. ಮೊದಲ ಹಂತದಲ್ಲಿ 430 ಬಸ್ಸುಗಳನ್ನು ಖರೀದಿಸಲಾಗುತ್ತದೆ. ಹೊಸ ಬಸ್ಸುಗಳಲ್ಲಿ ವಿಶೇಷಚೇತನರಿಗೆ ಬೇಕಾದ ಸೌಲಭ್ಯಗಳು ಇರಲಿವೆ. ನಿಗಮದ ಉಳಿದ ಬಸ್ಸುಗಳಲ್ಲಿ ಅಂತಹ ವ್ಯವಸ್ಥೆ ಅಳವಡಿಸಲು ಟೆಂಡರ್ ಕರೆದು, ಖರೀದಿ ಪ್ರಕ್ರಿಯೆ ಮತ್ತು ವ್ಯವಸ್ಥೆ ಅಳವಡಿಕೆಗೆ ಕಾಲಮಿತಿ ಹಾಕಿಕೊಳ್ಳಲಾಗಿದೆ ಎಂದು ವಿವರಿಸಿದರು. ಈಹೇಳಿಕೆಗಳನ್ನು ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನು 2024ರ ಏ.24ಕ್ಕೆ ಮುಂದೂಡಿತು.