ಸಾರಾಂಶ
ಕನ್ನಡಪ್ರಭವಾರ್ತೆ ಬೆಂಗಳೂರು
ಮಹಿಳೆಯರನ್ನು ಸಬಲೀಕರಣಗೊಳಿಸಲು ಮತ್ತು ಆಟೋಮೋಟಿವ್ ಉದ್ಯಮದಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಹೆಚ್ಚಿಸಲು ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಶ್ರಮಿಸುತ್ತಿದೆ. ಆ ಪ್ರಯತ್ನದ ಭಾಗವಾಗಿಯೇ ಕಂಪನಿಯು ಇತ್ತೀಚೆಗೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಎರಡು ವಿಶಿಷ್ಟ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿದೆ.ಟಿಕೆಎಂನ ಬಿಡದಿಯ ಉತ್ಪಾದನಾ ಘಟಕದಲ್ಲಿ ನಡೆದ ಈ ಕಾರ್ಯಕ್ರಮಗಳಲ್ಲಿ 700ಕ್ಕೂ ಹೆಚ್ಚು ಮಹಿಳಾ ಉದ್ಯೋಗಿಗಳು ಉತ್ಸಾಹದಿಂದ ಭಾಗವಹಿಸಿದರು. ಈ ಎರಡು ಕಾರ್ಯಕ್ರಮಗಳು ಮಹಿಳಾ ಪ್ರತಿಭೆಗಳನ್ನು ಬೆಳೆಸುವ ಮತ್ತು ಕೆಲಸ ಹಾಗೂ ಬದುಕಿನ ಸಮತೋಲನವನ್ನು ಕಾಪಾಡಿಕೊಳ್ಳಲು ಅವರಿಗೆ ನೆರವಾಗುವ ಟಿಕೆಎಂನ ಪ್ರಯತ್ನಗಳಿಗೆ ಪುರಾವೆಯಂತೆ ಮೂಡಿಬಂದಿತು.
ಒಂದು ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿ ಮತ್ತು ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕರಾದ ಶ್ರೀಮತಿ ಆರ್. ಲತಾ (ಐಎಎಸ್) ಮುಖ್ಯ ಅತಿಥಿಯಾಗಿ ಭಾಗವಹಿಸಿ ತಮ್ಮ ವೈಯಕ್ತಿಕ ಕತೆಯನ್ನು ಹೇಳಿ ನೆರೆದವರಿಗೆ ಸ್ಫೂರ್ತಿ ನೀಡಿದರು. ಅವರು ತಾವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವೃತ್ತಿಜೀವನ ಆರಂಭಿಸಿದ್ದರಿಂದ ಹಿಡಿದು ಯಶಸ್ವೀ ಐಎಎಸ್ ಅಧಿಕಾರಿಯಾಗಿ ರೂಪುಗೊಳ್ಳುವವರೆಗಿನ ಪ್ರಯಾಣದ ಅನುಭವಗಳನ್ನು ಹಂಚಿಕೊಂಡರು.ಈ ಸಂದರ್ಭದಲ್ಲಿ ಶ್ರೀಮತಿ ಆರ್. ಲತಾ (ಐಎಎಸ್) ಅವರು, ‘ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯು ಒಳಗೊಳ್ಳುವಿಕೆಯ ಸಂಸ್ಕೃತಿಯನ್ನು ಸೃಷ್ಟಿಸುವ ವಿಚಾರದಲ್ಲಿ ಮುಂಚೂಣಿಯಲ್ಲಿದ್ದು, ಆಟೋಮೋಟಿವ್ ಉದ್ಯಮಕ್ಕೆ ಮಾದರಿಯಾಗಿದೆ ಎಂದು ತಿಳಿದು ನನಗೆ ಸಂತೋಷವಾಗಿದೆ. ಇಂತಹ ಯೋಜನೆಗಳು ಮಹಿಳೆಯರನ್ನು ವೃತ್ತಿಪರವಾಗಿ ಸಶಕ್ತಗೊಳಿಸುವುದರ ಜೊತೆಗೆ ಸಮಾಜಕ್ಕೆ ಸಕಾರಾತ್ಮಕ ಕೊಡುಗೆ ನೀಡುತ್ತವೆ’ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಟಿಕೆಎಂನ ಪ್ರತಿಭಾವಂತ ಮಹಿಳಾ ಉದ್ಯೋಗಿಗಳು ಸಾಂಸ್ಕೃತಿಕ ಪ್ರದರ್ಶನಗಳನ್ನೂ ನೀಡಿದರು. ಮಹಿಳಾ ಉದ್ಯೋಗಿಗಳ ಗಾಯನ, ನೃತ್ಯ ಮತ್ತು ಕರಾವಳಿ ಕರ್ನಾಟಕದ ಸಾಂಪ್ರದಾಯಿಕ ಕಲೆಯಾದ ಯಕ್ಷಗಾನ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತವಾಯಿತು. ಈ ಸಂದರ್ಭದಲ್ಲಿ ಮಾತನಾಡಿರುವ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ನ ಫೈನಾನ್ಸ್ ಮತ್ತು ಆಡಳಿತ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಶ್ರೀ ಜಿ. ಶಂಕರ್ ಅವರು, ‘2030ರ ವೇಳೆಗೆ ಶೇ.30ರಷ್ಟು ಮಹಿಳಾ ಪ್ರಾತಿನಿಧ್ಯವನ್ನು ಸಾಧಿಸುವ ನಮ್ಮ ಗುರಿಯತ್ತ ಮುನ್ನಡೆಯಲು ಈ ಕಾರ್ಯಕ್ರಮಗಳು ನಮಗೆ ಪ್ರೇರಣೆ ನೀಡಿವೆ. ಮಹಿಳಾ ಸ್ನೇಹಿ ಕೆಲಸದ ವಾತಾವರಣ ಸೃಷ್ಟಿ, ವೃತ್ತಿ ವಿರಾಮದ ಬಳಿಕ ಮರಳುವ ಮಹಿಳೆಯರಿಗೆ ಮರುನೇಮಕಾತಿ ನೀತಿಗಳು, ರಿಮೋಟ್ ಕೆಲಸದ ಅವಕಾಶಗಳು ಮುಂತಾದ ನಮ್ಮ ಯೋಜನೆಗಳ ಮೂಲಕ ನಾವು ಒಳಗೊಳ್ಳುವಿಕೆಯ ಕೆಲಸದ ವಾತಾವರಣವನ್ನು ರೂಪಿಸಲು ಸದಾ ಬದ್ಧರಾಗಿದ್ದೇವೆ” ಎಂದು ಹೇಳಿದರು.