ಪರಿಸರ ಪ್ರವಾಸೋದ್ಯಮ ಪ್ರವಾಸಿಗರಿಗೆ ಖುಷಿ ಮತ್ತು ಜ್ಞಾನ ನೀಡುವುದರ ಜೊತೆಗೆ ಕಾಡಂಚಿನ ಗ್ರಾಮಗಳ ನೂರಾರು, ಸಾವಿರಾರು ಜನರಿಗೆ ನೇರ ಉದ್ಯೋಗ ಮತ್ತು ಆರ್ಥಿಕ ಭದ್ರತೆಯನ್ನೂ ಒದಗಿಸಿಕೊಟ್ಟಿದೆ. ಕಾಡು ನಮ್ಮ ಸಮಾಜಕ್ಕೆ, ನಮ್ಮ ಜನರಿಗೆ ನೇರವಾಗಿ ನೀಡಬಹುದಾದ ಪರಿಸರ ಸೇವೆಗಳಲ್ಲಿ ಇದು ಸಹ ಒಂದು.
ರಾಜ್ಯದಲ್ಲಿ ಪರಿಸರ ಪ್ರವಾಸೋದ್ಯಮದಿಂದ ನಡೆಯುತ್ತದೆ ಸುಮಾರು 150 ಕೋಟಿ ರೂಪಾಯಿಗಳ ವಾರ್ಷಿಕ ವಹಿವಾಟು
ಪರಿಸರ ಪ್ರವಾಸೋದ್ಯಮ ಪ್ರವಾಸಿಗರಿಗೆ ಖುಷಿ ಮತ್ತು ಜ್ಞಾನ ನೀಡುವುದರ ಜೊತೆಗೆ ಕಾಡಂಚಿನ ಗ್ರಾಮಗಳ ನೂರಾರು, ಸಾವಿರಾರು ಜನರಿಗೆ ನೇರ ಉದ್ಯೋಗ ಮತ್ತು ಆರ್ಥಿಕ ಭದ್ರತೆಯನ್ನೂ ಒದಗಿಸಿಕೊಟ್ಟಿದೆ. ಕಾಡು ನಮ್ಮ ಸಮಾಜಕ್ಕೆ, ನಮ್ಮ ಜನರಿಗೆ ನೇರವಾಗಿ ನೀಡಬಹುದಾದ ಪರಿಸರ ಸೇವೆಗಳಲ್ಲಿ ಇದು ಸಹ ಒಂದು.
ವೀಕೆಂಡ್ ಬಂತೆಂದರೆ ಸಾಕು ನಗರದ ಜನ ಕಾಡಿನ ಕಡೆಗೆ ಮುಖ ಮಾಡಿಬಿಡುತ್ತಾರೆ. ಎಲ್ಲರಿಗೂ ಈಗ ನೆಮ್ಮದಿ ಅಂತಾ ಸಿಗುತ್ತಿರುವುದು ಕಾಡಿಗೆ, ಬೆಟ್ಟ ಗುಡ್ಡಗಳಿಗೆ, ನದಿ, ತೊರೆ, ಸಾಗರದ ಕಿನಾರೆಗಳಿಗೆ ಕೈಗೊಳ್ಳುವ ಪ್ರವಾಸದಿಂದ. ಒಂದೆರಡು ದಿನಗಳ ಕಾಲ ಕಾಡಿನಲ್ಲಿ ವಾಸ್ತವ್ಯ ಮಾಡಿ ಬರೋದಷ್ಟೇ ಅಲ್ಲ, ಸಫಾರಿಗೆ ಹೋಗಿ ಗಿಡ, ಮರ, ಪಕ್ಷಿ ಪ್ರಾಣಿಗಳನ್ನೂ ಕಣ್ತುಂಬಿಕೊಂಡು ಬರುವುದು ಈಗ ಹೊಸ ಟ್ರೆಂಡ್. ಉಳಿದೆಲ್ಲ ಕ್ಷೇತ್ರಗಳನ್ನು ಹಿಂದಿಕ್ಕಿ ಈಗ ಪರಿಸರ ಪ್ರವಾಸೋದ್ಯಮ ಬಹಳಷ್ಟು ಮುಂಚೂಣಿಗೆ ಬಂದಿದೆ.
ರಾಜ್ಯದಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಹೊಸ ಆಯಾಮ ಕೊಟ್ಟಿದ್ದು ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ (JLR). ಕರ್ನಾಟಕದ ಕಾಡುಗಳಲ್ಲಿ ಅತ್ಯುತ್ತಮ ಗುಣಮಟ್ಟದ ವಾಸ್ತವ್ಯದ ಜೊತೆಗೆ ವಿಶಿಷ್ಟ ಸಫಾರಿ ಅನುಭವವನ್ನು ಶುರು ಮಾಡಿದ್ದೇ ಈ ಸಂಸ್ಥೆ. ಸರ್ಕಾರಿ ಸಂಸ್ಥೆಯೊಂದು ಜಾಗತಿಕ ಮಟ್ಟದ ಪರಿಸರ ಪ್ರವಾಸೋದ್ಯಮ ಸೇವೆ ನೀಡುತ್ತಿರುವುದು ದೇಶದಲ್ಲೇ ಮೊದಲು. ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ ಪ್ರವಾಸೋದ್ಯಮ ಇಲಾಖೆ ಅಧೀನದಲ್ಲಿ ಬಂದರೆ, ಅರಣ್ಯ ಇಲಾಖೆ ಸಹ ತಮ್ಮದೇ ಕಾಟೇಜುಗಳು ಮತ್ತು ಸಫಾರಿಯ ನಿರ್ವಹಣೆ ಮಾಡುತ್ತಿದೆ.
ಬಂಡೀಪುರ, ನಾಗರಹೊಳೆ, ಭದ್ರಾ, ಬಿಆರ್‌ಟಿ ಮತ್ತು ಕಾಳಿ ಹುಲಿ ಸಂರಕ್ಷಿತ ಪ್ರದೇಶಗಳು ರಾಜ್ಯದಲ್ಲೇ ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಅರಣ್ಯ ಪ್ರದೇಶಗಳು. ಈ ಅರಣ್ಯ ವಿಹಾರ ತಾಣಗಳಲ್ಲಿ ವಾಸ್ತವ್ಯಕ್ಕೆ ರೂಮು ಸಿಗುವುದು ಮತ್ತು ಸಫಾರಿಗೆ ಸೀಟು ಸಿಗುವುದು ಬಹಳ ಕಷ್ಟ, ಅಂದರೆ, ಅದೆಷ್ಟು ಸಾವಿರ ಪ್ರವಾಸಿಗರು ಇಲ್ಲಿಗೆ ಲಗ್ಗೆ ಇಡಬಹುದು ಎನ್ನುವುದನ್ನು ಊಹಿಸಿಕೊಳ್ಳಿ. ಜನರಿಗೆ ಈಗ ಕಾಡುಗಳೇ ಹೀಲಿಂಗ್ ಸೆಂಟರ್‌ಗಳು. ಇದಕ್ಕಾಗಿಯೇ ಇವು ನೆಚ್ಚಿನ ತಾಣಗಳಾಗಿವೆ.
ರಾಜ್ಯದಲ್ಲಿ ಒಟ್ಟು 11 ಕಡೆ ಸಫಾರಿ ಕೇಂದ್ರಗಳಿವೆ. ಬಂಡೀಪುರ, ನಾಗರಹೊಳೆ ಮಾತ್ರವಲ್ಲ, ರಾಣೆಬೆನ್ನೂರಿನಲ್ಲಿ ಕೃಷ್ಣಮೃಗ ವೀಕ್ಷಿಸಲು, ದರೋಜಿ ವನ್ಯಧಾಮದಲ್ಲಿ ಕರಡಿ ಸಫಾರಿ ಸಹ ಇದೆ. ಇಲ್ಲಿ ವಸತಿ ಜೊತೆಗೆ ಕಾಡಿನಲ್ಲಿ ಸಫಾರಿ ಮಾಡಲು ಪ್ರವಾಸಿಗರು ಬರುತ್ತಾರೆ. ದಾಂಡೇಲಿ ಸಮೀಪದ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ಜತೆಗೆ ರಿವರ್ ರಾಫ್ಟಿಂಗ್ ಸಹ ಇದೆ. ಕಾಳಿ ನದಿಯಲ್ಲಿ ಓಲಾಡುವ ರಾಫ್ಟಿಂಗ್ ಮಾಡೋ ಮಜಾನೇ ಬೇರೆ.
ಜಂಗಲ್ ಲಾಡ್ಜಸ್ ಕಾಡಿನಲ್ಲಿ ಸಫಾರಿ ಜೊತೆಗೆ ದೋಣಿ ವಿಹಾರ ಕೇಂದ್ರಗಳನ್ನೂ ನಡೆಸುತ್ತಿದೆ. ಅಷ್ಟೇ ಅಲ್ಲ, ಸಮುದ್ರ ಕಿನಾರೆಗಳ ರೆಸಾರ್ಟ್ ಸಹ ಹೊಂದಿದೆ. ಅತ್ಯಂತ ಉತ್ಕಷ್ಟ ದರ್ಜೆಯ ವಸತಿ ಮತ್ತು ಸಫಾರಿ ಅನುಭವ ನೀಡುವುದರಲ್ಲಿ ಜೆಎಲ್‌ಆರ್ ಮುಂಚೂಣಿಯಲ್ಲಿದೆ. ಅರಣ್ಯ ಇಲಾಖೆ ಮತ್ತು ಜೆಎಲ್‌ಆರ್ ನಡೆಸುವ ಎಲ್ಲ ಸಫಾರಿ ವಾಹನಗಳ ಚಾಲಕರು ಅದೆಷ್ಟು ನುರಿತವರಿದ್ದಾರೆಂದರೆ, ಕಾಡಿನಲ್ಲಿ ಪಕ್ಷಿಗಳ ಜಾಡಿನಿಂದ ಹಿಡಿದು, ಹುಲಿಯನ್ನು ಕೇವಲ ಹೆಜ್ಜೆ ಗುರುತು, ಅದರ ಘರ್ಜನೆಯಿಂದ ಅಥವಾ ಬೇರೆ ಪ್ರಾಣಿಗಳ ಎಚ್ಚರಿಕೆಯ ಕೂಗುಗಳಿಂದಲೇ ಎಲ್ಲವನ್ನೂ ಗ್ರಹಿಸಿ ಪತ್ತೆ ಹಚ್ಚುವ ಸಾಮರ್ಥ್ಯ ಹೊಂದಿದ್ದಾರೆ.
ಸಫಾರಿ ರೋಮಾಂಚಕಾರಿ
ಈ ವಾಹನಗಳಲ್ಲಿ ಮಾಡುವ ಎರಡೂವರೆ ಗಂಟೆಗಳ ಸಫಾರಿ ಅದೆಷ್ಟು ರೋಮಾಂಚಕಾರಿಯಾಗಿರುತ್ತದೆ ಎಂದರೆ, ನೀವು ಹೊಸದೊಂದು ಲೋಕವನ್ನೇ ಹೊಕ್ಕಿ ಬಂದಂತಾಗುತ್ತದೆ. ಕೇವಲ ಪ್ರಾಣಿ ಪಕ್ಷಿಗಳನ್ನು ನೋಡಿ ಖುಷಿಪಡುವುದಷ್ಟೇ ಅಲ್ಲ, ನೀವು ಎರಡೂವರೆ ಗಂಟೆಗಳಲ್ಲಿ ವನ್ಯಜೀವಿ ವಿಜ್ಞಾನದ ಹೊಸ ಅಧ್ಯಾಯವನ್ನೇ ಓದಿಕೊಂಡು ಬಂದಂತಾಗುತ್ತದೆ. ಅರಣ್ಯ ಇಲಾಖೆ ಮತ್ತು ಜೆಎಲ್‌ಆರ್ ರಾಜ್ಯದಲ್ಲಿ ನಡೆಸುತ್ತಿರುವ ಪರಿಸರ ಪ್ರವಾಸೋದ್ಯಮದಿಂದ ಸುಮಾರು 150 ಕೋಟಿ ರೂಪಾಯಿಗಳ ವಾರ್ಷಿಕ ವಹಿವಾಟು ನಡೆಯುತ್ತಿದೆ. ಸಫಾರಿ ಶುಲ್ಕ, ಕ್ಯಾಮೆರಾ ಶುಲ್ಕ, ಪ್ರವೇಶ ಶುಲ್ಕ, ಗೇಟ್ ಕಲೆಕ್ಷನ್ ಮತ್ತು ವಸತಿಗೃಹಗಳ ಶುಲ್ಕ ಎಲ್ಲವನ್ನೂ ಹಸಿರು ಆದಾಯ ಎಂದು ಪರಿಗಣಿಸಲಾಗುತ್ತದೆ. ಈ ಎಲ್ಲ ಪ್ರವಾಸಿ ಕೇಂದ್ರಗಳಲ್ಲಿ ಸ್ಥಳೀಯರೇ ಕೆಲಸ ನಿರ್ವಹಿಸುವುದು ಇನ್ನೊಂದು ವಿಶೇಷ.
ಪರಿಸರ ಪ್ರವಾಸೋದ್ಯಮ ರಾಜ್ಯದಲ್ಲಿ ವಿಶೇಷ ಉದ್ಯೋಗ ವಲಯವನ್ನೇ ಸೃಷ್ಟಿಸಿದೆ. ಕಾಡಂಚಿನ ರೆಸಾರ್ಟುಗಳು, ಹೋಮ್ ಸ್ಟೇ, ಸಫಾರಿ ಮತ್ತು ಇನ್ನಿತರ ಚಟುವಟಿಕೆಗಳನ್ನು ಸೇರಿಸಿದರೆ, ಬರೋಬ್ಬರಿ 5 ರಿಂದ 7 ಸಾವಿರ ಜನರಿಗೆ ನೇರ ಉದ್ಯೋಗ ಸೃಷ್ಟಿಸಿದೆ. ಇದರ ಜೊತೆಗೆ ಇವೆಲ್ಲರೂ ಸ್ಥಳೀಯರಿಂದಲೇ ತಮಗೆ ಅಗತ್ಯವಾದ ವಸ್ತುಗಳನ್ನು ಖರೀದಿಸುವುದರಿಂದ ಗ್ರಾಮೀಣ ಮಟ್ಟದಲ್ಲಿ ಅತ್ಯಂತ ಸುಭದ್ರ ಆರ್ಥಿಕ ಅಭಿವೃದ್ಧಿಯ ಬುನಾದಿಯನ್ನೇ ಹಾಕಲಾರಂಭಿಸಿದೆ.
ಪರಿಸರ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಇನ್ನೂ ವಿಫುಲ ಅವಕಾಶಗಳು ಕರ್ನಾಟಕದಲ್ಲಿವೆ. ನಮ್ಮ ಅತ್ಯದ್ಭುತ ಹಿನ್ನೀರು ಪ್ರದೇಶಗಳು, ಕರಾವಳಿ ತೀರ ಪ್ರದೇಶಗಳು ಮತ್ತು ಬಯಲು ಸೀಮೆ ಪ್ರದೇಶಗಳಲ್ಲೂ ಹೊಸ ಚಟುವಟಿಕೆಗಳನ್ನು ಶುರು ಮಾಡಬಹುದು. ಇವುಗಳ ಜೊತೆಗೆ ಚಾರಣ ಸಹ ಇತ್ತೀಚಿನ ಟ್ರೆಂಡ್. ಅನೇಕ ಜನರು ರಾಜ್ಯದ ನಾನಾ ಕಡೆ ಟ್ರಕ್ಕಿಂಗ್ ಹೋಗಲು ಅತೀವ ಆಸಕ್ತಿಯನ್ನು ತೋರುತ್ತಿದ್ದಾರೆ. ರಾಜ್ಯದ 41 ಚಾರಣ ಪಥಗಳಲ್ಲಿ ಕಳೆದ ವರ್ಷ ಸರಿ ಸುಮಾರು 6 ಲಕ್ಷ ಜನ ಟ್ರಕ್ಕಿಂಗ್ ಮಾಡಿದ್ದಾರೆ. ಇದರ ಶುಲ್ಕವೂ ಸಹ ಇಲಾಖೆಯ ಆದಾಯಕ್ಕೆ ಸೇರುತ್ತಿದೆ.
ಪರಿಸರ ಪ್ರವಾಸೋದ್ಯಮ ಆದಾಯ
ಜೆಎಲ್‌ಆರ್ - ವಹಿವಾಟು-ಸುಮಾರು 111 ಕೋಟಿ, ಪ್ರವಾಸಿಗರು-1.6 ಲಕ್ಷ. ಅರಣ್ಯ ಇಲಾಖೆ – ವಹಿವಾಟು-ಸುಮಾರು 25 ಕೋಟಿ, ಪ್ರವಾಸಿಗರು-4 ಲಕ್ಷ .
ಸರಕಾರಿ ಸಂಸ್ಥೆಗಳ ಆದಾಯವೇ ಸುಮಾರು 125 ಕೋಟಿಯಷ್ಟಾದರೆ, ಇನ್ನು ಖಾಸಗಿ ರೆಸಾರ್ಟುಗಳು ಮತ್ತು ಹೋಮ್ ಸ್ಟೇ ವಹಿವಾಟು ಸಹ ಲೆಕ್ಕಕ್ಕೆ ತೆಗೆದುಕೊಂಡರೆ, ಸುಮಾರು 500 ಕೋಟಿಯವರೆಗೆ ವಹಿವಾಟು ನಡೆಯುತ್ತದೆ. ಸದ್ಯ ಇಡೀ ದೇಶದಲ್ಲೇ ಅತ್ಯುತ್ತಮ ಪರಿಸರ ಪ್ರವಾಸೋದ್ಯಮ ನಿರ್ವಹಣೆ ನಮ್ಮ ರಾಜ್ಯದಲ್ಲಿ ನಡೆಯುತ್ತಿದೆ. ನಿತ್ಯ ಇಂತಿಷ್ಟೇ ಜೀಪುಗಳನ್ನು ಕಾಡಿನೊಳಗೆ ಬಿಡುವುದು, ಇಂತಿಷ್ಟೇ ಸಮಯದ ಸಫಾರಿ ಹೀಗೆ ನಿಯಂತ್ರಿತ ವ್ಯವಸ್ಥೆಯಲ್ಲಿ ನಡೆಯುತ್ತಿದೆ. ಅಷ್ಟೇ ಅಲ್ಲ, ಬೇರೆ ರಾಜ್ಯಗಳಿಗೆ ಹೋಲಿಸಿಕೊಂಡರೆ, ನಮ್ಮಲ್ಲಿ ಸಫಾರಿಗೆ ಮುಕ್ತಗೊಳಿಸಿರುವ ಅರಣ್ಯ ಪ್ರದೇಶವೂ ಕಡಿಮೆ ಇದೆ. ಹೀಗಾಗಿ ನಮ್ಮ ಸುಸ್ಥಿರ ಪರಿಸರ ಪ್ರವಾಸೋದ್ಯಮ ನೀತಿಯನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಅತ್ಯಂತ ವೈಜ್ಞಾನಿಕ ಮತ್ತು ಸುಸ್ಥಿರ ಪ್ರವಾಸೋದ್ಯಮವನ್ನು ಹೀಗೆಯೇ ಮುಂದುವರಿಸಿಕೊಂಡು ಹೋದಲ್ಲಿ, ಎಲ್ಲರಿಗೂ ಅನೇಕ ಹೊಸ ಅವಕಾಶ ಮತ್ತು ಅನುಕೂಲಗಳನ್ನು ತೆರೆದಿಡಲಿದೆ.

