ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೇಲುಕಾಮನಹಳ್ಳಿ ಸಮೀಪದ ಅರಣ್ಯ ಇಲಾಖೆ ಜಾಗದಲ್ಲಿ ಅತ್ಯಾಧುನಿಕ ಶ್ವಾನದಳ ತರಬೇತಿ ಕೇಂದ್ರ ಶುರುವಾಗಿದೆ. 2024ರ ನವೆಂಬರ್‌ನಲ್ಲಿ ಮೊದಲ ಬ್ಯಾಚಿನ ತರಬೇತಿ ಶುರುವಾಗಿ, ಇದೀಗ 10 ಶ್ವಾನಗಳು ರಾಜ್ಯದ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿವೆ.

 ವಿನೋದ್ ಕುಮಾರ್ ಬಿ.ನಾಯ್ಕ್

ಕಾಡುಗಳ್ಳರೇ,,ಕಳ್ಳಬೇಟೆಗಾರರೇ..ಎಚ್ಚರ…ಎಚ್ಚರ…ನಿಮ್ಮನ್ನು ಪತ್ತೆ ಹಚ್ಚಿ ಜೈಲಿಗೆ ಅಟ್ಟಲು ಅರಣ್ಯ ಇಲಾಖೆಯಲ್ಲಿ ಸಿದ್ಧವಾಗುತ್ತಿದೆ ಅತ್ಯಂತ ಸದೃಢ ಶ್ವಾನದಳ. ನಮ್ಮ ದೇಶದ ಅರಣ್ಯ ಕಾನೂನುಗಳು ಬಹಳ ಕಠಿಣ. ವನ್ಯಜೀವಿ ಪ್ರಕರಣಗಳಲ್ಲಿ ಸಿಕ್ಕಿಬಿದ್ದರೆ ಮುಗಿಯಿತು, ಆತನಿಗೆ ನರಕದರ್ಶನ ಗ್ಯಾರಂಟಿ. ನಮ್ಮ ಅದೆಷ್ಟೋ ನಟರು ವನ್ಯಜೀವಿ ಪ್ರಕರಣಗಳಲ್ಲಿ ಸಿಕ್ಕಿಹಾಕಿಕೊಂಡು ದಶಕಗಳಿಂದ ಈಗಲೂ ಕೋರ್ಟಿಗೆ ಅಲೆಯುತ್ತಿದ್ದಾರೆ. ಇಂತಹ ಬಿಗಿ ಕಾನೂನುಗಳ ಜೊತೆಗೆ ಈಗ ಅರಣ್ಯ ಇಲಾಖೆಯಲ್ಲಿ ಮತ್ತೊಂದು ಪ್ರಬಲ ಪಡೆ ತಯಾರಾಗುತ್ತಿದೆ. ಸದ್ಯದಲ್ಲಿಯೇ ರಾಜ್ಯದ ಕಾಡುಗಳನ್ನು ಕಾಯಲು ಹೈ ಟೆಕ್‌ ತರಬೇತಿ ಪಡೆದ 50 ಶ್ವಾನಗಳ ಪಡೆ ತಯಾರಾಗುತ್ತಿದ್ದು, ಕಳ್ಳಕಾಕರಿಗೆ ಮೈ ನಡುಕ ಉಂಟು ಮಾಡಿದೆ.

2012-13ರಲ್ಲಿ ಟ್ರಾಫಿಕ್‌ ಇಂಡಿಯಾ ಸಂಸ್ಥೆ ದೇಶದಲ್ಲೇ ಮೊದಲ ಬಾರಿಗೆ ವನ್ಯಜೀವಿ ಅಪರಾಧಗಳ ಪತ್ತೆಗೆ ಶ್ವಾನದಳ ರಚಿಸುವ ಕೆಲಸಕ್ಕೆ ಕೈ ಹಾಕಿತು. ಹರ್ಯಾಣದಲ್ಲಿ ತರಬೇತಿ ನಂತರ ಕರ್ನಾಟಕಕ್ಕೆ 2 ನಾಯಿಗಳನ್ನು ಕಳಿಸಲಾಯಿತು. ನಂತರದ ದಿನಗಳಲ್ಲಿ ಮತ್ತೆ ಶ್ವಾನದಳ ನಿಷ್ಕ್ರಿಯಗೊಂಡಿತು. ಇದಾದ ನಂತರ 2024 ರಲ್ಲಿ ರಾಜ್ಯದ ಅಂದಿನ ವನ್ಯಜೀವಿ ವಿಭಾಗದ ಪಿಸಿಸಿಎಫ್‌ ಸುಭಾಷ್‌ ಮಾಲ್ಕೆಡೆ ಮತ್ತು ಈಗಿನ ಪಿಸಿಸಿಎಫ್‌ ಕುಮಾರ್‌ ಪುಷ್ಕರ್‌ ನಮ್ಮದೇ ಆದ ಪ್ರತ್ಯೇಕ ಶ್ವಾನ ತರಬೇತಿ ಕೇಂದ್ರ ಹೊಂದುವ ಯೋಜನೆ ರೂಪಿಸಿದರು. ಈಗಿನ ಈ ಪಡೆ ಅವರ ಕನಸಿನ ಕೂಸಿದು. ತರಬೇತಿಗೆ ಸೂಕ್ತ ಸ್ಥಳ, ತರಬೇತುದಾರ ಮತ್ತು ಶ್ವಾನಪಡೆ ಸಿಬ್ಬಂದಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆ ಅಲ್ಲಿಂದ ಶುರುವಾಯಿತು. ಇದೀಗ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೇಲುಕಾಮನಹಳ್ಳಿ ಸಮೀಪದ ಅರಣ್ಯ ಇಲಾಖೆ ಜಾಗದಲ್ಲಿ ಅತ್ಯಾಧುನಿಕ ಶ್ವಾನದಳ ತರಬೇತಿ ಕೇಂದ್ರ ಶುರುವಾಗಿದೆ. 2024ರ ನವೆಂಬರ್‌ನಲ್ಲಿ ಮೊದಲ ಬ್ಯಾಚಿನ ತರಬೇತಿ ಶುರುವಾಗಿ, ಇದೀಗ 10 ಶ್ವಾನಗಳು ರಾಜ್ಯದ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿವೆ. ಇದೇ ಫೆಬ್ರವರಿಯಿಂದ 2ನೇ ಬ್ಯಾಚ್‌ ಶುರುವಾಗಿದ್ದು, ಈ ತಂಡದಲ್ಲಿರುವ 10 ಶ್ವಾನಗಳಿಗೆ ಮಾನವ-ವನ್ಯಜೀವಿ ಸಂಘರ್ಷ ಸಂಬಂಧಿತ ತರಬೇತಿಯನ್ನೇ ನೀಡಲಾಗುತ್ತಿದೆ. ಇದು ಕರ್ನಾಟಕಕ್ಕೆ ಇಡೀ ದೇಶದಲ್ಲೇ ಸ್ವತಂತ್ರ ಶ್ವಾನಪಡೆಯನ್ನು ಹೊಂದಿರುವ ಮೊದಲ ರಾಜ್ಯ ಎನ್ನುವ ಹಿರಿಮೆ ತಂದುಕೊಟ್ಟಿದೆ.

ಶ್ವಾನದಳದ ಸಾಧನೆ

೧. ಬಂಡೀಪುರದಲ್ಲಿ ಸೇನಾಧಿಕಾರಿಯೊಬ್ಬ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ವನ್ಯಜೀವಿ ಉತ್ಪನ್ನಗಳನ್ನ ಪತ್ತೆ

೨. ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೇಟೆಗಾರನೊಬ್ಬನನ್ನು ಆತನ ಚಪ್ಪಲಿ ಸಾಕ್ಷ್ಯದ ಆಧಾರದ ಮೇಲೆ

ಹುಡುಕಿಕೊಟ್ಟಿದೆ

೩. ಪ್ರಾಣಿಗಳಿಗೆ ಉರುಳು ಹಾಕುತ್ತಿದ್ದ ಬೇಟೆಗಾರ ಮತ್ತು ಆತನ ಮನೆಯನ್ನು ಪತ್ತೆ ಹಚ್ಚಿಕೊಟ್ಟಿದೆ.

೪. ದಾಂಡೇಲಿ, ಚಿಕ್ಕಮಗಳೂರಿನಲ್ಲಿ ವನ್ಯಜೀವಿ ಬೇಟೆ ಪ್ರಕರಣ ಪತ್ತೆ ಹಚ್ಚಿ ಕೊಟ್ಟಿದೆ

ಅರಣ್ಯ ಇಲಾಖೆಯ ಈ ವಿಶೇಷ ಶ್ವಾನಪಡೆಯ ತರಬೇತಿ ಜವಾಬ್ದಾರಿಯನ್ನು ಅಂತಾರಾಷ್ಟ್ರೀಯ ಖ್ಯಾತಿ ಶ್ವಾನಮನೋವಿಜ್ಞಾನಿ ಡಾ. ಅಮೃತ್‌ ಹಿರಣ್ಯ ವಹಿಸಿಕೊಂಡಿದ್ದಾರೆ. ಎಲ್ಲ ತಳಿಯ ನಾಯಿಗಳನ್ನು ಪರಿಶೀಲಿಸಿದ ನಂತರ ಅರಣ್ಯ ಇಲಾಖೆಯ ಅತ್ಯಂತ ಕಠಿಣ ಕೆಲಸಗಳಿಗೆ ಬೆಲ್ಜಿಯಂ ಶೆಫರ್ಡ್‌ ಮಾತ್ರ ಹೊಂದುತ್ತದೆ ಎನ್ನುವುದನ್ನು ಖಚಿತಪಡಿಸಿಕೊಂಡು, ಇದೀಗ ಈ ತಳಿಯ ನಾಯಿಗಳನ್ನೇ ತರಬೇತಿ ಆಯ್ಕೆ ಮಾಡಿಕೊಳ್ಳಲಾಗಿದೆ. ಈಗಾಗಲೇ 10 ಬೆಲ್ಜಿಯಂ

ಶೆಫರ್ಡ್‌ ನಾಯಿಗಳು ರಾಜ್ಯದ ಹುಲಿ ಸಂರಕ್ಷಿತ ಪ್ರದೇಶಗಳು ಮತ್ತು ಇತರೆ ಪ್ರಮುಖ ವನ್ಯಜೀವಿಧಾಮಗಳಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿವೆ. ವಸ್ತುವಿನ ಮೂಲಕ ಮನುಷ್ಯನನ್ನು ಪತ್ತೆ ಹಚ್ಚುವುದು, ವಸ್ತುವಿನಿಂದ ವಸ್ತುವಿನ ಪತ್ತೆ ಮತ್ತು ವಸ್ತುವಿನಿಂದ ಪ್ರಾಣಿಗಳನ್ನು ಪತ್ತೆ ಹಚ್ಚುವಂತೆ ಇವುಗಳಿಗೆ ತರಬೇತಿ ನೀಡಲಾಗಿದೆ.

ಎರಡನೇ ಬ್ಯಾಚಿನ ಶ್ವಾನಗಳಿಗೆ ಮಾನವ-ವನ್ಯಜೀವಿ ಸಂಘರ್ಷ ತಡೆ ತರಬೇತಿ ನೀಡಲಾಗುತ್ತಿವೆ. ಈ ಶ್ವಾನಗಳು ಹುಲಿ, ಆನೆ ಸೇರಿದಂತೆ ಎಲ್ಲ ಬಗೆಯ ಪ್ರಾಣಿಗಳ ಜಾಡು ಹಿಡಿದು, ಅವುಗಳನ್ನು ಪತ್ತೆ ಹಚ್ಚುವಲ್ಲಿ ನೆರವಾಗಲಿವೆ. ಅಂದರೆ, ಕಾಡಿನಿಂದ ನಾಡಿಗೆ ಬರುವ ಆನೆ, ಹುಲಿಗಳನ್ನು ಪತ್ತೆ ಹಚ್ಚುವಲ್ಲಿ ಈ ಶ್ವಾನಪಡೆ ಅತ್ಯಂತ ಭಿನ್ನವಾಗಿ ಕಾರ್ಯಾಚರಣೆಗೆ ನೆರವಾಗಲಿದೆ. ಈ ಶ್ವಾನಗಳಿಗೆ 12 ತಿಂಗಳ ಅವಧಿಯ ತರಬೇತಿ ನೀಡಲಾಗುತ್ತಿದೆ. ಇನ್ನೊಂದು ವಿಶೇಷವೇನೆಂದರೆ, ಈ ದಳದಲ್ಲಿ ಎಲ್ಲವೂ ಹೆಣ್ಣು ನಾಯಿಗಳನ್ನೇ ಆಯ್ಕೆ ಮಾಡಲಾಗಿದೆ. ಇವುಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಲಾಗಿರುತ್ತದೆ.

ಇದರಿಂದಾಗಿ, ಈ ನಾಯಿಗಳ ಗಮನ ಬೇರೆ ಯಾವ ಕಡೆಗೂ ಹೋಗದೇ ಕೇವಲ ನಿಗದಿತ ಗುರಿಯತ್ತ ಮಾತ್ರ ಇರಲಿದೆ ಎನ್ನುತ್ತಾರೆ ಶ್ವಾನ ಮನೋವಿಜ್ಞಾನಿ ಹಾಗೂ ತರಬೇತುದಾರ ಡಾ. ಅಮೃತ್‌ ಹಿರಣ್ಯ. ಕಳೆದ ಎರಡು ವರ್ಷಗಳಲ್ಲಿ ಈ ಶ್ವಾನಪಡೆ ಅನೇಕ ಪ್ರಮುಖ ವನ್ಯಜೀವಿ ಅಪರಾಧಗಳನ್ನು ಪತ್ತೆ ಹಚ್ಚಿದೆ. ಇಡೀ ದೇಶದಲ್ಲಿಯೇ ಅರಣ್ಯ ಇಲಾಖೆಯ ಮೊದಲ ಸ್ವತಂತ್ರ ಶ್ವಾನಪಡೆ ಇದಾಗಿರುವುದರಿಂದ ಈಗಾಗಲೇ ಇದರ ಖ್ಯಾತಿಯೂ ಎಲ್ಲಾ ಕಡೆ ಹರಡಿದೆ. ನೆರೆಯ ಕೇರಳ, ತಮಿಳುನಾಡು ಮತ್ತು ಉತ್ತರದ ರಾಜ್ಯಗಳೂ ಸಹ ಈ ಪಡೆಯ ಶ್ವಾನಗಳಿಗೆ ಬೇಡಿಕೆ ಇಡಲಾರಂಭಿಸಿವೆ. ಆದರೆ, ಸದ್ಯಕ್ಕೆ ನಮ್ಮಲ್ಲಿಯೇ 50 ಶ್ವಾನಗಳ ಬೃಹತ್‌ ಪಡೆ ಸನ್ನದ್ಧಗೊಳ್ಳುತ್ತಿರುವುದರಿಂದ ಬೇರೆ ಬೇಡಿಕೆಗಳತ್ತ ಗಮನಹರಿಸದಿರಲು ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಈ ಶ್ವಾನದಳವನ್ನು ಅರಣ್ಯ ಅಪರಾಧಗಳ ಪತ್ತೆಗೆ ನಿಯೋಜಿಸುವ ಜೊತೆಗೆ ಅರಣ್ಯವನ್ನು ಹಾದು ಹೋಗುವ, ಅಂತಾರಾಜ್ಯ ಗಡಿಯ ಗೇಟುಗಳಲ್ಲಿಯೂ ಗಸ್ತು ಕಾಯಲಿವೆ. ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಗೋವಾದ ಗಡಿಭಾಗಗಳಲ್ಲಿಯೂ ಈ ಶ್ವಾನದಳವನ್ನು ನಿಯೋಜಿಸಲು ಅರಣ್ಯ ಇಲಾಖೆ ನಿರ್ಧರಿಸಿದೆ. ಗಡಿಭಾಗದಲ್ಲಿ ಕಳ್ಳಸಾಗಣೆಯಾಗುವ ಮಾದಕವಸ್ತುಗಳು, ಅರಣ್ಯ ಉತ್ಪನ್ನಗಳು, ಮಾನವ ಕಳ್ಳಸಾಗಣೆ ಸೇರಿದಂತೆ ಇತರೆ ಅಕ್ರಮ ಮತ್ತು ಅಪರಾಧಗಳಿಗೂ ಇದರಿಂದ ಕಡಿವಾಣ ಬೀಳಲಿದೆ.

ಅರಣ್ಯ ಸಂರಕ್ಷಣೆ ಮತ್ತು ನಿರ್ವಹಣೆಯ ಅನೇಕ ವಿಚಾರಗಳಲ್ಲಿ ನಮ್ಮ ರಾಜ್ಯ ಮುಂಚೂಣಿಯಲ್ಲಿದೆ. ಇದೀಗ ವನ್ಯಜೀವಿ ಅಪರಾಧಗಳನ್ನು ಪತ್ತೆ ಹಚ್ಚುವ ನಮ್ಮ ಕ್ಷಮತೆ ಇನ್ನಷ್ಟು ಹೆಚ್ಚಿಸಿಕೊಳ್ಳಲು ಈ ಶ್ವಾನಪಡೆ ರಚಿಸಲಾಗಿದೆ. ಇವುಗಳಿಗೆ ಈಗ ಸಿಕ್ಕಿರುವ ಮತ್ತು ಸಿಗಲಿರುವ ತರಬೇತಿಯಿಂದಾಗಿ ಅರಣ್ಯ ಅಪರಾಧ ಪ್ರಕರಣಗಳು ತಗ್ಗಲಿವೆ. ನಮ್ಮ ವನ್ಯಸಂಪತ್ತಿನ ಸುರಕ್ಷತೆಗೆ ಮತ್ತು ಮಾನವ-ಪ್ರಾಣಿ ಸಂಘರ್ಷ ನಿಗ್ರಹಕ್ಕೂ ಸಹ ಇವು ವಿಶೇಷ ಕೊಡುಗೆ ನೀಡಲಿವೆ.

-ಕುಮಾರ್‌ ಪುಷ್ಕರ್‌, ಪಿಸಿಸಿಎಫ್‌(ವನ್ಯಜೀವಿ)