ಕನ್ನಡಪ್ರಭ ವಾರ್ತೆ ಸಕಲೇಶಪುರ
ತಾಲೂಕಿನ ಕುದರಂಗಿ ಶ್ರೀ ವೀರಭದ್ರೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಪುಷ್ಪ ಹಾಗೂ ಬ್ರಹ್ಮರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು.ಮಲೆನಾಡಿನ ಸುಂದರ ಪರಿಸರದಲ್ಲಿ ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರಾ ಮಹೋತ್ಸವದಲ್ಲಿ ಜಿಲ್ಲೆಯಷ್ಟೇ ಅಲ್ಲದೆ, ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಜನರು ಭಾಗವಹಿಸಿದ್ದರು. ಸೋಮವಾರದಿಂದ ಆರಂಭವಾದ ಜಾತ್ರಾ ಮಹೋತ್ಸವದ ಮೊದಲ ದಿನ ರುದ್ರಾಭಿಷೇಕ, ಹೋಮ-ಹವನ ಹಾಗೂ ರಥಗಳಿಗೆ ಕಳಶಾರೋಹಣ ಕಾರ್ಯಕ್ರಮಗಳು ನಡೆದವು.ಮಂಗಳವಾರ ಬೆಳಗಿನ ಜಾವದಿಂದಲೇ ದೇವಸ್ಥಾನದಲ್ಲಿ ಪೂಜಾ ವಿಧಿವಿಧಾನಗಳು ಆರಂಭಗೊಂಡವು. ಮಹಾಮಂಗಳಾರತಿ, ಉತ್ಸವ ಮೂರ್ತಿಗಳಿಗೆ ವಿಶೇಷ ಅಲಂಕಾರ ಹಾಗೂ ದೇವಸ್ಥಾನದ ಪ್ರದಕ್ಷಿಣೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ಜರುಗಿದವು. ಬೆಳಿಗ್ಗೆ 9 ಗಂಟೆ ಸುಮಾರಿಗೆ ಶ್ರೀ ವೀರಭದ್ರೇಶ್ವರ ಸ್ವಾಮಿ ಹಾಗೂ ಭದ್ರಕಾಳಿ ದೇವಿಯ ಉತ್ಸವ ಮೂರ್ತಿಗಳನ್ನು ಪುಷ್ಪರಥದಲ್ಲಿ ಪ್ರತಿಷ್ಠಾಪಿಸಿ, ಭಕ್ತರ ಜಯಘೋಷಗಳ ನಡುವೆ ರಥವನ್ನು ಎಳೆಯುವ ದೃಶ್ಯ ಮನಮೋಹರವಾಗಿತ್ತು. ಬಳಿಕ ಬೆಳಿಗ್ಗೆ 11 ಗಂಟೆಗೆ ರಾಜ್ಯೋತ್ಸವ, ಕಲ್ಯಾಣ ಮಹೋತ್ಸವ ಹಾಗೂ ಬಲಿಪೂಜೆ ನಡೆದವು. ಮಧ್ಯಾಹ್ನ 1 ಗಂಟೆಗೆ ನಡೆದ ಬ್ರಹ್ಮರಥೋತ್ಸವವು ಜಾತ್ರೆಯ ಪ್ರಮುಖ ಆಕರ್ಷಣೆಯಾಗಿದ್ದು, ಭಕ್ತರು ರಥವನ್ನು ಎಳೆದು ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಈ ವೇಳೆ ಭಕ್ತರು ರಥದ ಮೇಲೆ ಬಾಳೆಹಣ್ಣುಗಳನ್ನು ಎಸೆದು ಹರಕೆ ತೀರಿಸಿದರು.ಜಾತ್ರೆಗೆ ಆಗಮಿಸಿದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ದಿನಪೂರ್ತಿ ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ಹಿನ್ನೆಲೆಯಲ್ಲಿ ಕೆಎಸ್ಆರ್‌ಟಿಸಿಯಿಂದ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸ್ ಇಲಾಖೆಯು ಬಿಗಿ ಭದ್ರತಾ ವ್ಯವಸ್ಥೆ ಕೈಗೊಂಡಿತ್ತು. ವಾಹನ ಸಂಚಾರ ನಿಯಂತ್ರಣ ಹಾಗೂ ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು.pಈ ಜಾತ್ರೆಯ ಅತ್ಯಂತ ವಿಶಿಷ್ಟ ಸಂಪ್ರದಾಯವೆಂದರೆ ಪುಷ್ಪರಥ ಹಾಗೂ ಬ್ರಹ್ಮರಥವನ್ನು ಬೆತ್ತದಿಂದ ಎಳೆಯುವುದು. ಪಶ್ಚಿಮಘಟ್ಟದ ದಟ್ಟ ಅರಣ್ಯಗಳಲ್ಲಿ ಅಲೆದಾಡಿ ಉದ್ದನೆಯ ಬೆತ್ತವನ್ನು ಸಂಗ್ರಹಿಸಿ ತರುವ ಪದ್ಧತಿ ಇಂದಿಗೂ ಜೀವಂತವಾಗಿದೆ. ಕಾಮನಹಳ್ಳಿ ಗ್ರಾಮಸ್ಥರು ಪ್ರತಿಬಾರಿ ಜಾತ್ರೆಗೆ ಬೆತ್ತವನ್ನು ತರುವ ಜವಾಬ್ದಾರಿಯನ್ನು ಭಕ್ತಿಯಿಂದ ನಿರ್ವಹಿಸುತ್ತಿದ್ದಾರೆ.ಅರೆಕೆರೆ ಮಂದೆಯಿಂದ ಸಾಮೂಹಿಕ ಆಚರಣೆ:ಕುದರಂಗಿ, ಸುಳ್ಳಕ್ಕಿ, ಅರೆಕೆರೆ, ಬ್ಯಾಕರವಳ್ಳಿ, ನಲ್ಲೂಲ್ಲಿ, ಕಾಮನಹಳ್ಳಿ, ನಡಹಳ್ಳಿ ಸೇರಿ ಸುತ್ತಮುತ್ತಲಿನ ಗ್ರಾಮಗಳ ಜನರು ಒಟ್ಟಾಗಿ ಈ ಜಾತ್ರೆಯನ್ನು ಆಚರಿಸುವುದು ಇಲ್ಲಿನ ವಿಶೇಷ. ದೇವಸ್ಥಾನವು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದ್ದರೂ, ಅಗತ್ಯ ಅನುದಾನ ಸಿಗದ ಕಾರಣ ದಾನಿಗಳ ನೆರವಿನಿಂದ ಜಾತ್ರಾ ಮಹೋತ್ಸವವನ್ನು ವಿಜೃಂಭಣೆಯಿಂದ ನಡೆಸಲಾಗುತ್ತಿದೆ.
ಇಂದು ಜಾತ್ರೆ ಸಂಪನ್ನಬುಧವಾರ ಬೆಳಿಗ್ಗೆ 11 ಗಂಟೆಗೆ ಪಲ್ಲಕ್ಕಿ ಉತ್ಸವ ಹಾಗೂ ಮಧ್ಯಾಹ್ನ ಈಡುಗಾಯಿ ಸೇವೆ ನಡೆಯಲಿದೆ. ಏ.8 ರಂದು ರಾತ್ರಿ 9 ಗಂಟೆಗೆ ಅವಭೃತ ಸ್ನಾನದೊಂದಿಗೆ ಜಾತ್ರಾ ಮಹೋತ್ಸವವು ಅಧಿಕೃತವಾಗಿ ಸಂಪನ್ನಗೊಳ್ಳಲಿದೆ.