ವರ್ಗಾವಣೆಗೊಂಡ ಶಿಕ್ಷಕನಿಗೆ ಪಲ್ಸರ್ ಬೈಕ್ ಕೊಡುಗೆ ನೀಡಿದ ಗ್ರಾಮಸ್ಥರು!

| Published : Jan 12 2024, 01:45 AM IST / Updated: Jan 12 2024, 05:13 PM IST

ಸಾರಾಂಶ

ವಳೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ೧೬ ವರ್ಷಗಳ ಕಾಲ ಶಿಕ್ಷರಾಗಿ ಸೇವೆಸಲ್ಲಿಸಿದ್ದ ಸಂತೋಷ್ ಕಾಂಚಣ್‌ಗೆ ಗ್ರಾಮಸ್ಥರು ಹಾಗೂ ಹಿರಿಯ ವಿದ್ಯಾರ್ಥಿ ಗಳು ಅವರಿಗಾಗಿ ಶಾಲೆಯಲ್ಲಿ ಹೃದಯಸ್ಪರ್ಶಿ ಬೀಳ್ಕೊಡುಗೆ ಸಮಾರಂಭ ಆಯೋಜಿಸಿ, ಪಲ್ಸರ್ ಬೈಕ್ ಉಡುಗೊರೆಯಾಗಿ ನೀಡಿ ಆತ್ಮೀಯವಾಗಿ ಬೀಳ್ಕೊಟ್ಟರು.

ಕನ್ನಡಪ್ರಭವಾರ್ತೆ ಸಾಗರ

ವರ್ಗಾವಣೆಗೊಂಡ ಶಿಕ್ಷಕರೊಬ್ಬರಿಗೆ ಗ್ರಾಮಸ್ಥರು, ಹಿರಿಯ ವಿದ್ಯಾರ್ಥಿಗಳು ಪಲ್ಸರ್ ಬೈಕ್ ಉಡುಗೊರೆಯಾಗಿ ನೀಡಿ ಆತ್ಮೀಯವಾಗಿ ಬೀಳ್ಕೊಟ್ಟ ಅಪರೂಪದ ಘಟನೆ ತಾಲ್ಲೂಕಿನ ಕುಗ್ರಾಮವಾದ ವಳೂರಿನಲ್ಲಿ ನಡೆದಿದೆ.

ಗ್ರಾಮದ ಸರ್ಕಾರಿ ಶಾಲೆಯಲ್ಲಿ ೧೬ವರ್ಷಗಳ ಕಾಲ ಶಿಕ್ಷರಾಗಿ ಸೇವೆಸಲ್ಲಿಸಿದ್ದ ಸಂತೋಷ್ ಕಾಂಚನ್ ಕುಂದಾಪುರಕ್ಕೆ ವರ್ಗಾವಣೆಗೊಂಡಿದ್ದರು. ಗ್ರಾಮಸ್ಥರು ಹಾಗೂ ಹಿರಿಯ ವಿದ್ಯಾರ್ಥಿಗಳು ಅವರಿಗಾಗಿ ಶಾಲೆಯಲ್ಲಿ ಹೃದಯಸ್ಪರ್ಶಿ ಬೀಳ್ಕೊಡುಗೆ ಸಮಾರಂಭ ಆಯೋಜಿಸಿತ್ತು. ಸಮಾರಂಭದಲ್ಲಿ ಮೆಚ್ಚಿನ ಶಿಕ್ಷಕ ಸಂತೋಷ್ ಅವರಿಗೆ ಬೈಕ್ ನೀಡಿ ಸಂಭ್ರಮಿಸಿದರು.

ಸಂತೋಷ್ ಅವರು ಮಕ್ಕಳಿಗೆ ಶಾಲೆ ಅವಧಿ ಮಾತ್ರವಲ್ಲದೆ ಹಗಲು ರಾತ್ರಿ ಪಾಠ ಮಾಡುತ್ತಿದ್ದರು. ಈ ಮೂಲಕ ಗ್ರಾಮದ ಶೈಕ್ಷಣಿಕ ಪ್ರಗತಿಗೆ ಕಾರಣ ರಾಗಿದ್ದರು. ಅಲ್ಲದೆ ತುರ್ತು ಸಂದರ್ಭಗಳಲ್ಲಿ ಗ್ರಾಮಸ್ಥರಿಗು ಸಂತೋಷ್ ನೆರವಾಗಿದ್ದರು. 

ಹೀಗಾಗಿ ಇವರು ವಿದ್ಯಾರ್ಥಿಗಳ ಮತ್ತು ಗ್ರಾಮಸ್ಥರ ಮನ ಗೆದ್ದಿದ್ದರು. ಈ ಕಾರಣದಿಂದ ಅವರ ವರ್ಗಾವಣೆ ಗ್ರಾಮಸ್ಥರ ಹೃದಯವನ್ನು ಭಾರಗೊಳಿಸಿತ್ತು. ಮೆಚ್ಚಿನ ಶಿಕ್ಷಕಗೆ ಕೇವಲ ಹಾರ, ಶಾಲು ಹಾಕಿ ಸನ್ಮಾನಿಸಿದರೆ ಸಾಲದೆಂದು ಪಲ್ಸರ್ ಬೈಕನ್ನೇ ಕೊಡುಗೆಯಾಗಿ ನೀಡಿದರು. 

ಶಿಕ್ಷಕ ಸಮತೋಷ್ ಪತ್ನಿ ಜೊತೆ ಬೈಕ್ ಏರಿ ಶಾಲೆ ಬಳಿ ಒಂದು ಸುತ್ತು ಬಂದಾಗ ಮಕ್ಕಳು ಗ್ರಾಮಸ್ಥರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ವಳೂರು ಸಾಗರ ತಾಲೂಕು ಕೇಂದ್ರದಿಂದ ೮೦ ಕಿ.ಮೀ. ದೂರದಲ್ಲಿರುವ ಗ್ರಾಮ. 

ದಟ್ಟಕಾಡಿನ ಮಧ್ಯದಲ್ಲಿ, ಯಾವುದೇ ಸೌಲಭ್ಯಗಳಿಲ್ಲದ ಗ್ರಾಮದ ಶಾಲೆಗೆ ೨೦೦೭ರಲ್ಲಿ ಸಂತೋಷ್ ಕಾಂಚನ್ ಶಿಕ್ಷಕರಾಗಿ ಬಂದರು. ಶಾಲೆಯಲ್ಲೇ ಉಳಿದುಕೊಂಡು ಮಕ್ಕಳಿಗೆ ಪಾಠ ಮಾಡುತ್ತಿದ್ದರು. 

ಕೇವಲ ಬೆಲ್ಲು ಬಿಲ್ಲಿಗಾಗಿ ಕೆಲಸ ಮಾಡದೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಇನ್ನಿಲ್ಲದಂತೆ ಸೇವೆ ಸಲ್ಲಿಸಿದ್ದರು. ಹಾಗಾಗಿ ಇಲ್ಲಿ ಓದಿದವರು ವಿವಿಧೆಡೆ ಉನ್ನತ ವ್ಯಾಸಂಗಕ್ಕೆ ತೆರಳಿದ್ದಾರೆ. ಈ ಕಾರಣ ದಿಂದಲೇ ಅವರು ವರ್ಗಾವಣೆಗೊಂಡಾಗ ಬೇಸರದಿಂದಲೇ ಗ್ರಾಮಸ್ಥರು ಬೀಳ್ಕೊಟ್ಟಿದ್ದಾರೆ. ಅವರಿಗೆ ಗ್ರಾಮದ ನೆನಪು ಸದಾ ಇರಲಿ ಎಂದು ಬೈಕನ್ನು ಕೊಡುಗೆಯಾಗಿ ನೀಡಿದ್ದಾರೆ.