ನೇರಳೆ ಬೆಳೆದು ಮಾದರಿಯಾದ ರೈತ ಮಹಿಳೆ
KannadaprabhaNewsNetwork | Published : Oct 18 2023, 01:00 AM IST
ನೇರಳೆ ಬೆಳೆದು ಮಾದರಿಯಾದ ರೈತ ಮಹಿಳೆ
ಸಾರಾಂಶ
ಮಹಿಳೆ ಮನಸು ಮಾಡಿದರೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತನ್ನ ಸಾಧನೆಯ ಹೆಜ್ಜೆ ಗುರುತಗಳನ್ನು ಮೂಡಿಸಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ಎರಡೂವರೆ ಎಕರೆ ಪ್ರದೇಶದಲ್ಲಿ ನೇರಳೆ ಗಿಡಗಳನ್ನು ಹಾಕಿ ಅದನ್ನು ಅತ್ಯಂತ ಅಕ್ಕರೆಯಿಂದ ಬೆಳೆಸಿ ಸುತ್ತಮುತ್ತಲಿನ ರೈತರಿಗೆ ಮಾದರಿಯಾಗಿರುವ ಕಥನವಿದು.
-ಗಂ.ದಯಾನಂದ ಕುದೂರು ಕನ್ನಡಪ್ರಭ ವಾರ್ತೆ ಕುದೂರು ಮಹಿಳೆ ಮನಸು ಮಾಡಿದರೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತನ್ನ ಸಾಧನೆಯ ಹೆಜ್ಜೆ ಗುರುತಗಳನ್ನು ಮೂಡಿಸಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ಎರಡೂವರೆ ಎಕರೆ ಪ್ರದೇಶದಲ್ಲಿ ನೇರಳೆ ಗಿಡಗಳನ್ನು ಹಾಕಿ ಅದನ್ನು ಅತ್ಯಂತ ಅಕ್ಕರೆಯಿಂದ ಬೆಳೆಸಿ ಸುತ್ತಮುತ್ತಲಿನ ರೈತರಿಗೆ ಮಾದರಿಯಾಗಿರುವ ಕಥನವಿದು. ಮಾಗಡಿ ತಾಲೂಕು ಕುದೂರು ಹೋಬಳಿ ವೀರಾಪುರದ ನರಸಿಂಹಯ್ಯನಪಾಳ್ಯ ಬಳಿಯ ತೋಟದಲ್ಲಿ ಮಮತಾ ರಮೇಶ್ ಎಂಬ ಮಹಿಳೆ ತನ್ನ ಎರಡೂವರೆ ಎಕರೆ ಪ್ರದೇಶದಲ್ಲಿ ರತ್ನಗಿರಿ ಎಂಬ ತಳಿಯ ಜುಂನೇರಳೆ ಹಣ್ಣಿನ ಮರಗಳನ್ನು ಸೊಂಪಾಗಿ ಬೆಳೆಸಿದ್ದಾರೆ. ವ್ಯವಸಾಯವನ್ನೇ ನಂಬಿ ರೈತ ಕಷ್ಟಕ್ಕೆ ಸಿಲುಕಬಾರದು ಎಂದು ನಾನು ನೇರಳೆ ಬೆಳೆಯನ್ನು ಆಯ್ಕೆ ಮಾಡಿಕೊಂಡೆ. ಎರಡು ಎಕರೆ ಪ್ರದೇಶದಲ್ಲಿ ನೂರಿಪ್ಪತ್ತು ನೇರಳೆ ಗಿಡಗಳನ್ನು ಹಾಕಿದೆ. ಇದರ ನಡುವೆ ರಾಗಿ, ಹುರುಳಿಯಂತಹ ಪರ್ಯಾಯ ಬೆಳೆಗಳನ್ನು ಬೆಳೆದೆ. ಈಗ ನೇರಳೆ ಬರುವ ಬೇಸಿಗೆಗೆ ಫಲ ಕೊಡಲು ಆರಂಭಿಸುತ್ತದೆ. ಒಂದು ಕೆಜಿ ನೇರಳೆಗೆ ಮುನ್ನೂರು ರು.ಗಳಂತೆ ಬೆಲೆ ಸಿಗುತ್ತದೆ. ಎರಡು ಎಕರೆ ಪ್ರದೇಶದಲ್ಲಿ ಐದಾರು ಲಕ್ಷ ರು. ಸಂಪಾದಿಸಬಹುದು. ಖರ್ಚು ಕಡಿಮೆ, ಹೆಚ್ಚು ಲಾಭ ತರುವಂತಹ ಬೆಳೆ ನೇರಳೆ ಎಂಬುದನ್ನು ನಾವು ಅರಿತು ಕೃಷಿ ಆರಂಭಿಸಿದೆವು ಎಂದು ಮಮತ ತಮ್ಮ ಕೃಷಿಯ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ರೋಗಗಳು ಬರದಂತೆ ಜೀವಾಮೃತ ಬಳಕೆ : ನೇರಳೆ ಬೆಳೆಗೆ ಕೀಟಗಳ ಕಾಟ ಕಡಿಮೆ. ಅಥವ ಇಲ್ಲವೇ ಇಲ್ಲ ಎನ್ನಬಹುದು. ಅದಕ್ಕಾಗಿ ನಮ್ಮ ತೋಟದಲ್ಲಿನ ಅಡಿಕೆ, ತೆಂಗು ಹಾಗೂ ಇತರೆ ಬೆಳೆಗಳಿಗೆ ರೋಗಗಳು ಬರದಂತೆ ಗಂಜಲ, ಸಗಣಿ, ಬೆಲ್ಲ ಇಂತಹವುಗಳನ್ನು ಬಳಸಿ ಜೀವಾಮೃತವನ್ನು ತಯಾರಿಸಿ ಅದನ್ನು ಗಿಡಕ್ಕೆ ಹಾಕುವುದರಿಂದ ಮಣ್ಣಿನಲ್ಲಿನ ಸತ್ವ ಸಾಯದೆ ಫಲವತ್ತಾಗಿರುತ್ತದೆ. ಮಮತಾರವರ ಪತಿ ರಮೇಶ್ ವೃತ್ತಿಯಲ್ಲಿ ವ್ಯವಸಾಯದ ಶಿಕ್ಷಕರಾಗಿರುವುದರಿಂದ ಹೆಂಡತಿಯ ಈ ವ್ಯವಸಾಯ ಪ್ರೀತಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿರುವುದರಿಂದ ಇಂತಹ ಪ್ರಯೋಗಗಳನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಮಮತ ವಿವರಿಸುತ್ತಾರೆ. ಹಳ್ಳಿಯ ಹೆಸರೊಂದು ಉತ್ತಮ ತಳಿಯ ನೇರಳೆ ಹಣ್ಣಿಗಿದೆ : ಮಾವಿನ ಹಣ್ಣಿನಲ್ಲಿ ವಿವಿಧ ತಳಿಗಳು ಇರುವಂತೆ ಜಂಬುನೇರಳೆ ಹಣ್ಣಿನಲ್ಲಿಯೂ ರತ್ನಗಿರಿ, ಧೂಪ್ರಾಲ್ ನೇರಳೆ ಅತ್ಯಂತ ಹೆಚ್ಚು ಪ್ರಖ್ಯಾತವಾಗಿವೆ. ಬೆಳಗಾವಿ ಜಿಲ್ಲೆಯ ಧೂಪ್ರಾಲ್ ಎಂಬ ಗ್ರಾಮದಲ್ಲಿ ಬೆಳೆದಿರುವ ನೇರಳೆ ಹಣ್ಣಿನ ಗಿಡಗಳನ್ನು ಕಸಿ ಮಾಡಿ ರೈತರಿಗೆ ಸಿಗುವಂತೆ ಮಾಡಿದ್ದಾರೆ. ಧೂಪ್ರಾಲ್ ನೇರಳೆ ಹೆಚ್ಚು ರುಚಿಯಾಗಿರುತ್ತದೆ ಮತ್ತು ಅದರಲ್ಲಿ ಬೀಜಗಳು ಸಣ್ಣಗಿರುತ್ತದೆ. ಜನರು ಈ ಹಣ್ಣನ್ನು ಹೆಚ್ಚು ಇಷ್ಟ ಪಡುವುದರಿಂದ ರೈತರಿಗೆ ಹೆಚ್ಚು ಲಾಭವೂ ತರುತ್ತದೆ. ಎಂದು ನೂತನ ಕೃಷಿ ಪದ್ಧತಿಯನ್ನು ತಾಲೂಕಾದ್ಯಂತ ಪಸರಿಸುತ್ತಿರುವ ಕನ್ನಡ ಕುಮಾರ್ ವಿವರಿಸುತ್ತಾರೆ. 3 - 7 ವರ್ಷದೊಳಗೆ ನೇರಳೆ ಹಣ್ಣನ್ನು ಪಡೆಯಬಹುದು. ಹಣ್ಣುಗಳೂ ಪಕ್ವವಾಗುವ ತನಕ ಮರದಲ್ಲೇ ಹಣ್ಣುಗಳನ್ನು ಬಿಡುವ ಅವಶ್ಯಕತೆ ಇರುವುದಿಲ್ಲ. ಅದು ದ್ವಾರಗಾಯಿ ಇರುವಾಗಲೆ ಗೊಂಚಲು ಗೊಂಚಲಾಗಿ ಇಳಿಸಿದರೆ ಎರಡು ದಿನಗಳಲ್ಲಿ ಹಣ್ಣಾಗುತ್ತದೆ. ರತ್ನಗಿರಿ ಎಂಬ ಹೆಸರಿನ ನೇರಳೆ ಹಣ್ಣಿನ ಮರಗಳು ಒಂದು ಬಾರಿಗೆ 20-30 ಕೇಜಿ ಹಣ್ಣು ಕೊಡುತ್ತದೆ. ಒಂದು ಕೆಜಿಗೆ ಮುನ್ನೂರು ರು.ಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ದೊರೆಯುತ್ತಿದೆ. ಒಂದು ಮರ 6 ಸಾವಿರದಂತೆ ನೂರು ಮರಗಳಿಂದ 6 ಲಕ್ಷ ರು. ಸಂಪಾದಿಸಬಹುದಾಗಿದೆ ಎಂಬುದನ್ನು ವಿವರಿಸುತ್ತಾರೆ. ಕೋಲಾರ ಜಿಲ್ಲೆಯ ರೈತನೊಬ್ಬ ಎರಡು ಎಕರೆ ಪ್ರದೇಶದಲ್ಲಿ ಬೆಳೆದ ನೇರಳೆ ಹಣ್ಣಿನಿಂದ ಅರವತ್ತು ಲಕ್ಷ ರು.ಗಳನ್ನು ಸಂಪಾದಿಸಿದ್ದನ್ನು ಕಂಡು ನಾನು ಖುದ್ದಾಗಿ ಆತನನ್ನು ಭೇಟಿ ಮಾಡಿ ಆತನ ವ್ಯವಸಾಯ ಪದ್ದತಿಯನ್ನು ನೋಡಿದ ನಂತರ ಮಾಗಡಿ ತಾಲೂಕಿನ ರೈತರಿಗೂ ನೇರಳೆ ಹಣ್ಣಿನ ಬೇಸಾಯದ ವಿವರಗಳನ್ನು ತಿಳಿಸಿ ಈ ಬೆಳೆ ಬೆಳೆಯುವಂತೆ ಪ್ರೇರೇಪಿಸಬೇಕು ಎಂದು ನಿರ್ಧರಿಸಿ ಕೆಲಸ ಮಾಡುತ್ತಿರುವೆ ಎಂದು ಕನ್ನಡ ಕುಮಾರ್ ವಿವರಿಸುತ್ತಾರೆ. 16 ಕೆಆರ್ ಎಂಎನ್ 3,4,5.ಜೆಪಿಜಿ