ಏಪ್ರಿಲ್‌ 24 ರಿಂದ ಮೇ 4ರವರೆಗಿನ ವಾರಫಲ

| Published : Apr 28 2024, 01:26 AM IST / Updated: Apr 28 2024, 05:46 AM IST

ಸಾರಾಂಶ

ವೃಷಭ ರಾಶಿಗೆ ಹಠಾತ್‌ ಪ್ರಯಾಣ ಸಾಧ್ಯತೆ, ಕಟಕ ಮತ್ತು ವೃಶ್ಚಿಕ ರಾಶಿಗೆ ಗುರುಬಲ. ನಿಮ್ಮ ರಾಶಿ ಫಲ ಹೇಗಿದೆ?

(28-04-24 ರಿಂದ 4-05-24)

ಮೇಷರಾಶಿ :  ಮನೆಯಲ್ಲಿ ಸಂತಸ ಸಂಭ್ರಮದ ವಾತಾವರಣ ಇರುತ್ತದೆ. ಮನಸ್ಸಿಗೂ ಆಹ್ಲಾದ. ಮನೆಯಲ್ಲಿ ಶುಭಕಾರ್ಯಗಳು ನಡೆಯುತ್ತವೆ. ಅವಿವಾಹಿತರಿಗೆ ಕಂಕಣ ಬಲ ಕೂಡಿ ಬರುತ್ತದೆ. ಹಣದ ಬಗ್ಗೆ ಚಿಂತಿಸಬೇಕಿಲ್ಲ. ಯಾವುದಕ್ಕೂ ಕಡಿಮೆಯಾಗದಂತೆ ಹಣದ ಹರಿವು ಉತ್ತಮವಾಗಿದೆ.‌ ಉದ್ಯೋಗದಲ್ಲೂ ಉತ್ತಮ ಸಾಧ್ಯತೆಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. ಕೆಲಸ ಇಲ್ಲದವರಿಗೂ ಇದೀಗ ಹೊಸ ಕೆಲಸ ಹುಡುಕಿಕೊಳ್ಳಲು ಸಕಾಲ.

ವೃಷಭರಾಶಿ: ನಿಮ್ಮ ಕುಟುಂಬದ ಹಿರಿಯ ಸದಸ್ಯರ ಆರೋಗ್ಯದ ಬಗ್ಗೆ ನೀವು ಚಿಂತಿತರಾಗಬಹುದು. ಹಠಾತ್ ದೂರ ಪ್ರಯಾಣದ ಸಾಧ್ಯತೆ ಇರುತ್ತದೆ. ಆಫೀಸ್‌, ಮನೆಯಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲರೂ ಸಹಕರಿಸುತ್ತಾರೆ ಮತ್ತು ಬೆಂಬಲಿಸುತ್ತಾರೆ. ಸ್ನೇಹವು ಪ್ರೀತಿಯಾಗಿ ಬದಲಾಗಬಹುದು. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.ಆದರೆ ಈ ವಾರ ಖರ್ಚು ಹಾಗೂ ಒತ್ತಡಗಳು ಇರುತ್ತದೆ. ಆದರೆ ರಾಹುಬಲ ಸರಾಗವಾಗಿ ನಿಭಾಯಿಸಿ ಮುಂದಕ್ಕೆ ಹೋಗುತ್ತೀರಿ.

ಮಿಥುನರಾಶಿ: ವೃತ್ತಿ, ವ್ಯವಹಾರದ ದೃಷ್ಟಿಯಿಂದ ನಿಮ್ಮ ಟೈಮ್‌ ಚೆನ್ನಾಗಿದೆ. ಆದರೆ ಗುರು ವ್ಯಯಸ್ಥಾನಕ್ಕೆ ಬಂದಿರುವುದರಿಂದ ಶುಭಕಾರ್ಯಕ್ಕೆ ಖರ್ಚುಗಳು ಇರುತ್ತದೆ. ವ್ಯಾಪಾರಸ್ಥರು ಯಾವುದೇ ದೊಡ್ಡ ವ್ಯವಹಾರವನ್ನು ಮಾಡುವಾಗ ತಮ್ಮ ಹಿತೈಷಿಗಳಿಂದ ಸಲಹೆಯನ್ನು ಪಡೆಯಬೇಕು. ವಿಶೇಷವಾಗಿ ಅಲ್ಪಾವಧಿಯ ಲಾಭಗಳಲ್ಲಿ ದೀರ್ಘಾವಧಿಯ ನಷ್ಟದ ಅಪಾಯವನ್ನು ತಪ್ಪಿಸಬೇಕು. ವೃತ್ತಿಜೀವನಕ್ಕೆ ಸಂಬಂಧಿಸಿದ ಹಾಗೆ ಒಂದು ಬದಲಾವಣೆ ಇದೆ.

ಕಟಕ ರಾಶಿ: ಮುಂದುವರೆಯದೆ ಸ್ಥಗಿತಗೊಂಡಿದ್ದ ಕೆಲಸ ಕಾರ್ಯಗಳು ಈಗ ಚಾಲನೆ ಪಡೆದುಕೊಳ್ಳುತ್ತದೆ. ವೃತ್ತಿಯಲ್ಲಿ ಬಡ್ತಿ, ಯಶಸ್ಸು ಇದೆ. ಕೌಟುಂಬಿಕ ಶಾಂತಿ‌ ಸೌಹಾರ್ದತೆ ಇದೆ. ಆದರೆ ವ್ಯವಹಾರದ ವಿಚಾರಕ್ಕೆ ಬಂದರೆ ಎಚ್ಚರಿಕೆ ಅಗತ್ಯ. ಚಿಂತಿಸದೇ, ಅನುಭವಿಗಳ ಅಭಿಪ್ರಾಯ ಪಡೆಯದೇ ಯಾವ ನಿರ್ಧಾರಕ್ಕೂ ಬರಬೇಡಿ. ನಿಮ್ಮ ಸ್ವಭಾವದಲ್ಲಿರುವ ಆತುರದ ಮನೋಭಾವವನ್ನು ನಿಗ್ರಹಿಸಿ ಸಮಾಧಾನದ ಸ್ಥಿತಿಯಲ್ಲಿ ಯೋಚಿಸಿ. ಅವಿವಾಹಿತರಿಗೆ ವಿವಾಹಯೋಗ ಇದೆ.‌ ಧನಲಾಭ ಉಂಟಾಗಬಹುದು.

ಸಿಂಹರಾಶಿ: ಸಿಟ್ಟು, ಅಹಂಕಾರ, ಸರ್ವಾಧಿಕಾರಿ ಧೋರಣೆ ಬೇಡ. ಈ ಮನೋಭಾವವೇ ವೃತ್ತಿಯಲ್ಲೂ ಸಾಂಸಾರಿಕವಾಗಿಯೂ ನಿಮ್ಮ ನೆಮ್ಮದಿ ಕೆಡಿಸಬಹುದು. ಕೆಲಸದ ಸ್ಥಳದಲ್ಲಿ ಹಿರಿಯರು ಮತ್ತು ಕಿರಿಯರಿಂದ ಬೆಂಬಲವು ನಿರೀಕ್ಷೆಗಿಂತ ಕಡಿಮೆ ಇರುತ್ತದೆ. ನೌಕರಿಯ ಜಾಗದಲ್ಲಿ ಏನೇ ಏರಿಳಿತ ಆದರೂ ಸಂಭಾಳಿಸಿಕೊಳ್ಳಿ. ಯಾರೊಂದಿಗೂ ಜಗಳ‌ ವಾದ ವಾಗ್ವಾದ ಬೇಡ. ಆರೋಗ್ಯದಲ್ಲಿ ಏರುಪೇರು ಕಾಣಬಹುದು. ನಿಮ್ಮ ಅಭ್ಯಾಸಗಳ ಮೇಲೆ ನಿಗಾ ಇರಲಿ. ಆತಂಕ ಒತ್ತಡಗಳು ಇರುತ್ತದೆ.

ಕನ್ಯಾರಾಶಿ: ಮೊಂಡುತನದಿಂದ ದೊಡ್ಡ ನಷ್ಟ ಉಂಟಾಗಬಹುದು. ಸಮಸ್ಯೆಗೆ ಪರಿಹಾರವನ್ನು ಹುಡುಕಲು ಪ್ರಯತ್ನಿಸುವಾಗ ಕೋಪ ಮತ್ತು ಅಹಂಕಾರ ಬೇಡ. ಉಳಿದಂತೆ ನಿಮಗೀಗ ಸಮಯ ಬಹಳ ಚೆನ್ನಾಗಿದೆ. ನೀವು ಉತ್ತುಂಗಕ್ಕೇರುವಿರಿ. ನಿಂತು ಹೋಗಿದ್ದ ಕೆಲಸಗಳಿಗೆ ಈಗ ಮರುಚಾಲನೆ ಸಿಕ್ಕಿ ನಿಮ್ಮ ಉತ್ಸಾಹ ಹೆಚ್ಚಬಹುದು. ನೌಕರಿಯಲ್ಲಿ ಬಡ್ತಿ ಸಿಗುತ್ತದೆ. ಮದುವೆ, ಮನೆ ಕಟ್ಟುವುದು, ಕೊಳ್ಳುವುದು ಮುಂತಾದ ಸಂಗತಿಗಳು ನಡೆಯುತ್ತದೆ. ಜನ ನಿಮ್ಮ ಮಾತಿಗೆ ಗೌರವ ಕೊಡುತ್ತಾರೆ. ರಾಜಕೀಯ ರಂಗದವರಿಗೆ ಗೆಲುವು ಸಿಗುತ್ತದೆ.

ತುಲಾರಾಶಿ: ಕೆಲವು ಪ್ರಮುಖ ಅಗತ್ಯಗಳನ್ನು ಪೂರೈಸಲು ನೀವು ಕೂಡಿಟ್ಟ ಹಣ ಖರ್ಚು ಮಾಡಬೇಕಾಗಬಹುದು. ವಾರದ ಆರಂಭದಲ್ಲಿ ಕೆಲಸದ ಒತ್ತಡ ಹೆಚ್ಚಿರಬಹುದು. ಹೆಚ್ಚುವರಿ ಶ್ರಮ ಮತ್ತು ಪ್ರಯತ್ನವನ್ನು ಹಾಕಬೇಕಾಗುತ್ತದೆ. ಕೆಲಸ ನಿರ್ವಹಿಸಲು ಸಹೋದ್ಯೋಗಿಗಳಿಂದ ಬೆಂಬಲ ಸಿಗದೇ ನೋವು ಅನುಭವಿಸುವಿರಿ. ಇಲ್ಲಸಲ್ಲದ ತೊಂದರೆಗಳು ಮೈಮೇಲೆ ಬೀಳುತ್ತವೆ. ಆರೋಗ್ಯ ತೊಂದರೆ ಕಾಣಿಸಬಹುದು, ಕಾಲಿಗೆ ಪೆಟ್ಟಾಗುವ, ಮೂಳೆ ಮುರಿಯುವ ಆಪರೇಷನ್ ಆಗುವ ಸಾಧ್ಯತೆಗಳು ಇವೆ. ಜಾಗರೂಕರಾಗಿರಿ. 

ವೃಶ್ಚಿಕ ರಾಶಿ: ಕೆಲಸವನ್ನು ಬದಲಾಯಿಸಲು ನೀವು ಯೋಚಿಸುತ್ತಿದ್ದರೆ ಈ ಬಗ್ಗೆ ಪ್ರಯತ್ನ ಪಡಿ. ದೊಡ್ಡ ಸಂಸ್ಥೆಯಿಂದ ಅವಕಾಶ ಸಿಗಬಹುದು. ಉನ್ನತ ಶಿಕ್ಷಣವನ್ನು ಪಡೆಯಲು ಮಾಡಿದ ಪ್ರಯತ್ನಗಳು ಫಲಪ್ರದವಾಗುತ್ತವೆ. ಗುರುಬಲ‌ ಬರುವುದರಿಂದ ನಿಮ್ಮ ಕಷ್ಟಗಳೆಲ್ಲ ಪರಿಹಾರ ಕಾಣುತ್ತದೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ಮಕ್ಕಳಿಂದ ಮನಸ್ಸಿಗೆ ನೋವು‌ ಇದೆ. ಆದರೆ ಆರೋಗ್ಯ ಹಣಕಾಸು ಕೌಟುಂಬಿಕ ಸುಖಶಾಂತಿಗಳು ವೃದ್ಧಿಸಲಿದೆ. ಪ್ರೇಮ ಸಂಬಂಧಗಳಲ್ಲಿ ನಿರೀಕ್ಷೆಗೂ ಮೀರಿದ ಬೆಳವಣಿಗೆಗಳಾಗಬಹುದು.

ಧನಸ್ಸುರಾಶಿ: ಕೌಟುಂಬಿಕ ಶಾಂತಿ ಕದಡಬಹುದು. ರಾಜಕೀಯ ವ್ಯಕ್ತಿಗಳಿಗೆ ಅಧಿಕಾರ ಹೋಗಬಹುದು. ಆದರೆ ಶನಿಯ ಅನುಗ್ರಹದಿಂದ ಬೆಟ್ಟದ ಹಾಗೆ ಬಂದ ಕಷ್ಟಗಳು ಮಂಜಿನ ಹಾಗೆ ಕರಗುತ್ತದೆ. ನಾಲ್ಕನೇ ಮನೆಯಲ್ಲಿ ರಾಹು ಇರುವುದರಿಂದ ತಾಯಿಯೊಂದಿಗಿನ ಸಂಬಂಧ ಹದಗೆಡಬಹುದು.‌ ವೃಥಾ ಅಲೆದಾಟ ಇರುತ್ತದೆ. ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಹಣಕಾಸಿನ ಸಮಸ್ಯೆಗಳು ಮೇಲೇಳಬಹುದು. ಯಾವುದೋ ವ್ಯವಹಾರ ನಿಮ್ಮ ತಲೆಗೆ ಸುತ್ತಿಕೊಳ್ಳಬಹುದು. ಕೌಟುಂಬಿಕ ಶಾಂತಿ ಕದಡಬಹುದು.

ಮಕರ ರಾಶಿ:ನಿಮ್ಮ ವೃತ್ತಿಪರ ಜೀವನಕ್ಕೆ ಮಾತ್ರವಲ್ಲದೆ ನಿಮ್ಮ ದೇಶೀಯ ಸಮಸ್ಯೆಗಳಿಗೂ ನೀವು ಸುಲಭವಾಗಿ ಪರಿಹಾರಗಳನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ನೌಕರಿಯಲ್ಲಿ ಲಾಭ, ಮದುವೆಯನ್ನು ಎದುರು ನೋಡುತ್ತಿದ್ದವರಿಗೆ ವಿವಾಹ ಯೋಗ, ಆಸ್ತಿ ಖರೀದಿ, ಪ್ರವಾಸ ಮೊದಲಾದ ಎಲ್ಲ ಶುಭ ಸಂಗತಿಗಳೂ ಈಗ ನಿಮಗೆ ಇದೆ. ಮೂರರಲ್ಲಿ ರಾಹು ಹಾಗೂ ಐದರಲ್ಲಿ ಗುರು ಇದ್ದು ಈಗ ನಿಮಗೆ ಭಾಗ್ಯೋದಯವಾಗುವ ಸಮಯ.‌ ನಿಮ್ಮ ಕಷ್ಟಗಳಿಗೆ ಸಮಸ್ಯೆಗಳಿಗೆ ಒಂದೊಂದಾಗಿ‌ ಪರಿಹಾರ ಗೋಚರಿಸುತ್ತಾ ಹೋಗುತ್ತದೆ.

ಕುಂಭ ರಾಶಿ: ವ್ಯವಹಾರದ ವಿಸ್ತರಣೆಗೆ ಸಂಬಂಧಿಸಿದ ಯೋಜನೆಯಲ್ಲಿ ನೀವು ದೀರ್ಘಕಾಲ ಕೆಲಸ ಮಾಡುತ್ತಿದ್ದರೆ, ನಿಮ್ಮ ಆಸೆ ಈಡೇರುತ್ತದೆ. ಈ ಕೆಲಸದಲ್ಲಿ ನಿಕಟ ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ.ವಾರದ ಮಧ್ಯದಲ್ಲಿ ನೀವು ಯಾವುದೇ ಐಷಾರಾಮಿ ವಸ್ತುಗಳನ್ನು ಖರೀದಿಸಬಹುದು. ಭೂಮಿ, ಕಟ್ಟಡಗಳನ್ನು ಕೊಳ್ಳುವ ಮತ್ತು ಮಾರುವ ಆಸೆಯೂ ಈಡೇರಲಿದೆ. ಆರೋಗ್ಯದ ಬಗ್ಗೆ ಎಚ್ಚರ ಬೇಕು. ನಿರ್ಲಕ್ಷ್ಯ ಮಾಡಿದರೆ ಮುಂದೆ ಸಮಸ್ಯೆ ಆಗಬಹುದು.

ಹಣದ ಹರಿವು ತೃಪ್ತಿಕರ.

ಮೀನರಾಶಿ:

ಹತ್ತಿರದವರಿಂದಲೇ ಅವಮಾನಗಳು, ಆತ್ಮೀಯರೊಡನೆ ಮನಸ್ತಾಪ ಇವೆಲ್ಲ ಇರುತ್ತದೆ. ಹಣಕಾಸಿಗೆ ತೊಂದರೆ ಇರುತ್ತದೆ. ಎದೆಗುಂದದೆ ಸತ್ಯದ ದಾರಿಯಲ್ಲಿ ನಡೆಯಿರಿ. ಪ್ರಾಮಾಣಿಕತೆಯನ್ನು ಬಿಡಬೇಡಿ. ನಿಮ್ಮ ಗುರುಗಳ ಅನುಗ್ರಹ ಪಡೆದುಕೊಳ್ಳಿ. ವಾರಾಂತ್ಯದಲ್ಲಿ ವೃತ್ತಿ ಮತ್ತು ವ್ಯವಹಾರಕ್ಕೆ ಸಂಬಂಧಿಸಿದಂತೆ ಕೈಗೊಂಡ ಪ್ರಯಾಣವು ಅಪೇಕ್ಷಿತ ಯಶಸ್ಸನ್ನು ತರುತ್ತದೆ. ಪ್ರಭಾವಿಗಳ ಸಂಪರ್ಕಕ್ಕೆ ಬರುವಿರಿ. ಇದರಿಂದ ಭವಿಷ್ಯದಲ್ಲಿ ಲಾಭವಿದೆ.