ಅಂತರ್ಜಾಲದಲ್ಲಿ ಕನ್ನಡಿಗರಿಗೆ ಏನು ಬೇಕು? - ಬೆಂಗಳೂರಿನ ಸ್ಟಾರ್ಟ್‌ಅಪ್‌ ಕಂಪನಿ ಸರ್ವೇ

| Published : Dec 16 2024, 12:16 PM IST

Money Transfer Without Internet

ಸಾರಾಂಶ

ಬೆಂಗಳೂರಿನ ಸ್ಟಾರ್ಟ್‌ಅಪ್‌ ಕಂಪನಿ ಸರ್ವೇ

- 2022ರ ಹಾವೇರಿ ಸಾಹಿತ್ಯ ಸಮ್ಮೇಳನದ ಸಾಹಿತ್ಯಾಸಕ್ತರ ಸಮೀಕ್ಷೆ ನಡೆಸಿ ವರದಿ

- ಕನ್ನಡ ಭಾಷೆಯಲ್ಲಿಯೇ ಜ್ಞಾನಸಂಪತ್ತು, ಮಾಹಿತಿ ಸಿಗಬೇಕು ಎಂಬ ಅಂಶ ವರದಿಯಲ್ಲಿ ಬಹಿರಂಗ

- 2022ರ ಹಾವೇರಿ ಸಾಹಿತ್ಯ ಸಮ್ಮೇಳನದ ಸಾಹಿತ್ಯಾಸಕ್ತರ ಸಮೀಕ್ಷೆ ನಡೆಸಿ ವರದಿ

- ಕನ್ನಡ ಭಾಷೆಯಲ್ಲಿಯೇ ಜ್ಞಾನಸಂಪತ್ತು, ಮಾಹಿತಿ ಸಿಗಬೇಕು ಎಂಬ ಅಂಶ ವರದಿಯಲ್ಲಿ ಬಹಿರಂಗ

ಜನರಿಗೆ, ಅದರಲ್ಲೂ ವಿಶೇಷವಾಗಿ ಕನ್ನಡದ ಯುವಪ್ರತಿಭೆಗಳಿಗೆ ಜಾಗತಿಕ ಮಟ್ಟದ ಅವಕಾಶಗಳು ತೆರೆಯಲು ಸಾಧ್ಯವಾದಷ್ಟೂ ಜ್ಞಾನಸಂಪತ್ತು ಕನ್ನಡದಲ್ಲಿಯೇ ರಚಿತವಾಗಬೇಕು ಎಂದು ಇತ್ತೀಚಿನ ಸರ್ವೇಯೊಂದರ ವರದಿ ಬಹಿರಂಗಪಡಿಸಿದೆ.

ಬೆಂಗಳೂರಿನ ಸ್ಟಾರ್ಟ್‌ಅಪ್‌ ಕಂಪನಿ ‘ವರ್ಡ್‌ ವೈಸ್‌ ಲಾಂಗ್ವೇಜ್‌ ಲ್ಯಾಬ್ಸ್‌’ ಸರ್ವೇಯೊಂದನ್ನು ನಡೆಸಿತ್ತು. ಅದರ ವರದಿ ಈಗ ಬಹಿರಂಗಗೊಂಡಿದೆ. ವಿಶೇಷವೆಂದರೆ 2022ರಲ್ಲಿ ಹಾವೇರಿಯಲ್ಲಿ ನಡೆದ 86ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಕರ್ನಾಟಕದ 30 ಜಿಲ್ಲೆಗಳ ಆಯ್ದ 856 ಸಾಹಿತ್ಯಾಸಕ್ತರನ್ನು ಈ ಸರ್ವೇಗೆ ಬಳಸಿಕೊಂಡಿತ್ತು . ಕನ್ನಡಿಗರಿಗೆ ತಮ್ಮ ಮಾತೃಭಾಷೆಯಲ್ಲಿಯೇ ಸಿಗುತ್ತಿರುವ, ಸಿಗಬೇಕಾಗಿರುವ ಮತ್ತು ಅವರು ಬಯಸುತ್ತಿರುವ ಸೌಲಭ್ಯ-ಮಾಹಿತಿಗಳು ಏನು ಎಂಬುದನ್ನು ಈ ಸರ್ವೇಯ ವರದಿ ತೆರೆದಿಟ್ಟಿದೆ.

‘ಅಂತರ್ಜಾಲದಲ್ಲಿ ಕನ್ನಡಿಗರಿಗೆ ಏನು ಬೇಕು?’ ಎಂಬ ಮುಖ್ಯಪ್ರಶ್ನೆಯಡಿ, ಅಂತರ್ಜಾಲದಲ್ಲಿ ಕೊಳ್ಳುವಿಕೆ (eCom), ಬ್ಯಾಂಕಿಂಗ್, ಜೀವವಿಮೆ, ಹೂಡಿಕೆ, ಆರೋಗ್ಯ ಮತ್ತು ಜೀವನಶೈಲಿ, ಸುದ್ದಿ ಮತ್ತು ಮನರಂಜನೆ, ಆಹಾರ ಮತ್ತು ಪ್ರವಾಸ ವಿಷಯಗಳನ್ನು ಒಳಗೊಂಡ ವಿಭಾಗಗಳನ್ನು ಅಳವಡಿಸಲಾಗಿತ್ತು.

ಸರ್ವೇಯ ವರದಿಯ ಮುಖ್ಯಾಂಶ ಹೀಗಿದೆ:

ಸರ್ವೇ ಪ್ರಕಾರ ಶೇ.50ಕ್ಕೂಹೆಚ್ಚಿನ ಜನರು ದಿನಕ್ಕೆ 4 ಗಂಟೆಗೂ ಹೆಚ್ಚಿನ ಸಮಯವನ್ನುಅಂತರ್ಜಾಲದಲ್ಲಿ ಕಳೆಯುತ್ತಾರೆ. ಶೇ.39.3ರಷ್ಟು ಜನ ಸಾಮಾಜಿಕ ಜಾಲತಾಣಗಳಲ್ಲಿ ಮನರಂಜನೆಯ ಕಂಟೆಂಟ್‌ನ್ನು ಹೆಚ್ಚು ವೀಕ್ಷಿಸುತ್ತಾರೆ. ಶೇ.40ಕ್ಕೂ ಹೆಚ್ಚು ಮಂದಿ ಹಣ ಕೊಟ್ಟಾದರೂ ವೈಜ್ಞಾನಿಕ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಲು ಬಯಸುತ್ತಾರೆ. ಶೇ.23.7ರಷ್ಟು ಮಂದಿಗೆ ಮಾಹಿತಿ ಮತ್ತು ತಿಳುವಳಿಕೆಗಳು ಉಚಿತವಾಗಿ ದೊರಕಬೇಕು. ಈ ರೀತಿ ಉಚಿತವಾಗಿ ಪಡೆಯಲು ಬಯಸುವವರ ಪೈಕಿ, ಶೇ.65ಕ್ಕಿಂತ ಹೆಚ್ಚಿನವರು ಪುರುಷರು ಎಂಬುದು ವಿಶೇಷ. ಇದಕ್ಕೆ ವ್ಯತಿರಿಕ್ತವಾಗಿ ಮಹಿಳೆಯರು ಮಾಹಿತಿ ಮತ್ತು ತಿಳುವಳಿಕೆಗೆ ಸಂಬಂಧಿಸಿದ ವಿಷಯಗಳನ್ನು ತಿಂಗಳಿಗೆ 50-100ರು. ವ್ಯಯಿಸಿ ಪಡೆಯಲು ಸಿದ್ಧರಿದ್ದಾರೆ.

ಈ ಪೈಕಿ, ಶೇ.54ಕ್ಕಿಂತಲೂ ಹೆಚ್ಚಿನ ಜನರಿಗೆ ಬ್ಯಾಂಕಿಂಗ್, ಉಳಿತಾಯ ಮತ್ತು ಹೂಡಿಕೆಗಳ ಬಗ್ಗೆ ಕನ್ನಡದಲ್ಲಿ ಮಾಹಿತಿ ಬೇಕು. ಶೇ.69ರಷ್ಟು ಮಂದಿಗೆ ಕನ್ನಡದಲ್ಲಿ ಬ್ಯಾಂಕಿಂಗ್‌ ಮತ್ತು ಉಳಿತಾಯ ಯೋಜನೆಗಳ ಬಗ್ಗೆ ಮಾಹಿತಿ ಲಭ್ಯವಿಲ್ಲದಿರುವುದೇ ಸಮಸ್ಯೆಯಾಗಿದೆ. ಇನ್ನು, ಶೇ.89.10ಕ್ಕೂ ಹೆಚ್ಚು ಮಂದಿ ಸುದ್ದಿಯನ್ನು ತಮ್ಮ ಮಾತೃಭಾಷೆಯಲ್ಲಿಯೇ ಪಡೆಯುತ್ತಾರೆ. ಇವರಿಗೆ ವೈಜ್ಞಾನಿಕ ಮಾಹಿತಿ ಮತ್ತು ಹೊರಜಗತ್ತಿನ ಸುದ್ದಿಗಳನ್ನು ಕನ್ನಡದಲ್ಲಿ ಡಬ್ಬಿಂಗ್‌ ಮಾಡಿಯಾದರೂ ಪಡೆಯುವ ಇಚ್ಛೆಯಿದೆ.

ಪ್ರವಾಸಿ ಸ್ಥಳಗಳ ವಿಷಯಕ್ಕೆ ಬಂದರೆ, ಶೇ.92.50ಕ್ಕೂ ಹೆಚ್ಚು ಮಂದಿಗೆ ಪ್ರವಾಸಿ ಸ್ಥಳಗಳ ಮಾಹಿತಿ ಕನ್ನಡದಲ್ಲಿಯೇ ಬೇಕು. ಅನ್ಯಸ್ಥಳಗಳಿಗೆ ಪ್ರವಾಸಕ್ಕೆ ಹೋದಾಗ ಭಾಷೆಯ ತೊಡಕೇ ತಮಗೆ ಸಮಸ್ಯೆಯಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು, ಶೇ.92ಕ್ಕೂ ಹೆಚ್ಚು ಮಂದಿ ಅಡುಗೆ, ಆಹಾರದ ರೆಸಿಪಿಗಳು ಕನ್ನಡದಲ್ಲಿ ದೊರಕಬೇಕು ಎಂದು ಬಯಸುತ್ತಾರೆ.

ಶೇ.61ರಷ್ಟು ಜನರು ಯಾವುದೇ ಬಗೆಯ ಹೊಸ ಆ್ಯಪ್‌ಗಳನ್ನು ಕೆಲವೇ ಗಂಟೆಗಳಲ್ಲಿ ತಾವು ಕಲಿಯಬಲ್ಲೆವು ಎಂದು ಆತ್ಮವಿಶ್ವಾಸದಿಂದ ಹೇಳಿದ್ದರೆ, ಶೇ.59ಕ್ಕಿಂತಲೂ ಹೆಚ್ಚಿನ ಜನರಿಗೆ ಕನ್ನಡದಲ್ಲಿ ಹೊಸ ಆ್ಯಪ್‌ಗಳು ದೊರಕದಿರುವುದು ಸಮಸ್ಯೆಯಾಗಿ ಕಾಣಿಸುತ್ತಿದೆ.

ಬೆಂಗಳೂರು ಮೂಲಕ ಸ್ಟಾರ್ಟ್‌ ಅಪ್‌ನಿಂದ ಸಮೀಕ್ಷೆ -

WordWise Language Labs ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ಆಗಿದ್ದು ಭಾರತೀಯ ಭಾಷೆಗಳಲ್ಲಿ ಎಐ ಉತ್ಪನ್ನಗಳ ಮೇಲೆ ಕೆಲಸ ಮಾಡುತ್ತಿದೆ. ಗೂಗಲ್ ಕೆ.ಪಿ.ಎಂ.ಜಿ 2017 ರಲ್ಲಿ Indian Languages Defining the Internet ಎಂಬ ಹೆಸರಿನ ಪ್ರಕಟಿಸಿದ್ದ ವಿಸ್ತೃತ ವರದಿಯನ್ನು ಕನ್ನಡ ಭಾಷೆಯ ಸಂದರ್ಭದಲ್ಲಿಟ್ಟು ಒರೆಗೆ ಹಚ್ಚುವುದು ಈ ಸರ್ವೆಯ ಉದ್ದೇಶವಾಗಿತ್ತು. ಈ ಸರ್ವೆಕ್ಷಣೆಯಲ್ಲಿ ಪಾಲ್ಗೊಂಡಿದ್ದ ಶೇ 50ಕ್ಕೂ ಹೆಚ್ಚಿನವರು 40ಕ್ಕಿಂತ ಕಡಿಮೆ ವಯೋಮಾನದವರಾಗಿದ್ದು - ಭಾರತದ ಯುವ ಪ್ರತಿಭೆಗಳಿಗೆ ಜಾಗತಿಕ ಮಟ್ಟದ ಅವಕಾಶಗಳು ತೆರೆಯಲು ಕನ್ನಡದಲ್ಲಿ ಸಾಧ್ಯವಾದಷ್ಟೂ ಜ್ಞಾನಸಂಪತ್ತು ರಚಿತವಾಗಬೇಕು ಎಂಬುದು ಈ ವರದಿಯ ಮುಖ್ಯ ಒಳನೋಟ ಮತ್ತು ಒತ್ತಾಯವಾಗಿದೆ.