ಸಾರಾಂಶ
ಏಕಕಾಲಕ್ಕೆ 20 ಸಾವಿರ ಮಂದಿ ಧ್ಯಾನ ಮಾಡಬಲ್ಲ ವಿಶಾಲ ಸಭಾಂಗಣ, 3 ಲಕ್ಷ ಚದರಡಿ ವಿಸ್ತೀರ್ಣ, 7 ಅಂತಸ್ತಿನ ಕಟ್ಟಡಕ್ಕೆಸ್ವರವೇದ ಮಹಾಮಂದಿರ ಎಂದು ನಾಮಕರಣ ಮಾಡಲಾಗಿದೆ.
ವಾರಾಣಸಿ: ಕಳೆದ ಎರಡು ದಿನಗಳಿಂದ ಸ್ವಕ್ಷೇತ್ರ ವಾರಾಣಸಿ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಸೋಮವಾರ ನಗರದಲ್ಲಿ ವಿಶ್ವದ ಅತಿದೊಡ್ಡ ಧ್ಯಾನ ಕೇಂದ್ರವನ್ನು ಉದ್ಘಾಟಿಸಿದರು. ಈ ಧ್ಯಾನಕೇಂದ್ರಕ್ಕೆ ಸ್ವರವೇದ ಮಹಾಮಂದಿರ ಎಂದು ನಾಮಕರಣ ಮಾಡಲಾಗಿದ್ದು, ಇದು 3 ಲಕ್ಷ ಚದರ ಅಡಿ ವಿಸ್ತೀರ್ಣ ಹೊಂದಿದ್ದು, ಏಕಕಾಲಕ್ಕೆ 20 ಸಾವಿರ ಮಂದಿ ಧ್ಯಾನ ಮಾಡುವಷ್ಟು ವಿಶಾಲವಾಗಿದೆ ಹಾಗೂ 7 ಅಂತಸ್ತಿನ ಕಟ್ಟಡ ಇದಾಗಿದೆ.ಉದ್ಘಾಟನೆಯ ಬಳಿಕ ಮಾತನಾಡಿದ ಪ್ರಧಾನಿ, ‘ಭಾರತವು ದಾಸ್ಯದಿಂದ ಸ್ವಾತಂತ್ರ್ಯವನ್ನು ಘೋಷಿಸಿಕೊಂಡಿದೆ. ಸ್ವಾತಂತ್ರ್ಯಾ ನಂತರ ನಮ್ಮ ಸಂಸ್ಕೃತಿಯ ಚಿಹ್ನೆಗಳನ್ನು ಮರುಸೃಷ್ಟಿ ಮಾಡುವ ಕಾರ್ಯ ನಡೆಯುತ್ತಿದೆ. ಸೋಮನಾಥ ದೇವಾಲಯ ಮರು ನಿರ್ಮಾಣ ಮಾಡುವಾಗ ಉಂಟಾದ ಅಡೆತಡೆಗಳಂತೆ ವಾರಾಣಸಿಯಲ್ಲೂ ಗತವೈಭವ ನಿರ್ಮಾಣ ಮಾಡುವಲ್ಲಿ ಹಲವು ತೊಡರುಗಳು ಎದುರಾದವು. ಆದಾಗ್ಯೂ ಸರ್ಕಾರ, ಸಾಧು-ಸಂತರು ಮತ್ತು ಸಮಾಜದ ಒಗ್ಗಟ್ಟಿನ ಬಲದಿಂದ ಕಾಶಿಯಲ್ಲಿ ಗತವೈಭವ ಮರುಕಳಿಸುವ ಕಾಲ ಸನ್ನಿಹಿತವಾಗಿದೆ’ ಎಂದು ಹೇಳಿದ್ದಾರೆ. ಸ್ವರವೇದ ಮಹಾಮಂದಿರದ ಗೋಡೆಗಳ ಮೇಲೆ 3137 ಸ್ವರವೇದದ ಶ್ಲೋಕಗಳನ್ನು ಕೆತ್ತಲಾಗಿದೆ. ವಿಹಂಗಮ ಯೋಗ ಸಂಸ್ಥಾನ ಸ್ಥಾಪನೆಯಾಗಿ ಶತವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಭವ್ಯ ಮಂದಿರ ನಿರ್ಮಿಸಲಾಗಿದೆ. ಇದರ ಗುಮ್ಮಟವನ್ನು 125 ಕಮಲದ ದಳಗಳು ಆವರಿಸಿರುವ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ.