ಮಿತ್ರರ ಬಗ್ಗೆ ಬರೆಯುವದೆಂದೂ ಸುಲಭವಾದ ಕೆಲಸವಲ್ಲ. ಆದರೆ ಇಷ್ಟು ಕಷ್ಟಕರವೂ ಆಗಕೂಡದು. ಒಂದೆರಡು ನೆನಪುಗಳು, ಒಂದೆರಡು ಜೋಕು, ವ್ಯಕ್ತಿತ್ವದ ಒಂದೆರಡು ಮಗ್ಗುಲಗಳ ಕೌತುಕ ಇವನ್ನೆಲ್ಲ ಪೋಣಿಸಿ ದಾಟಿಸಿಬಿಡುವುದು ಹಳೆಯ ಹಸ್ತಚಾತುರ್ಯದ ಮಾತು.

- ಗಿರೀಶ್ ಕಾರ್ನಾಡ್

ಮಿತ್ರರ ಬಗ್ಗೆ ಬರೆಯುವದೆಂದೂ ಸುಲಭವಾದ ಕೆಲಸವಲ್ಲ. ಆದರೆ ಇಷ್ಟು ಕಷ್ಟಕರವೂ ಆಗಕೂಡದು. ಒಂದೆರಡು ನೆನಪುಗಳು, ಒಂದೆರಡು ಜೋಕು, ವ್ಯಕ್ತಿತ್ವದ ಒಂದೆರಡು ಮಗ್ಗುಲಗಳ ಕೌತುಕ ಇವನ್ನೆಲ್ಲ ಪೋಣಿಸಿ ದಾಟಿಸಿಬಿಡುವುದು ಹಳೆಯ ಹಸ್ತಚಾತುರ್ಯದ ಮಾತು. ಆದರೂ ಕೆಲ ವ್ಯಕ್ತಿತ್ವಗಳು ಪಾದರಸದ ಹಾಗೆ. ಯಾವೊಂದು ಖಚಿತ ಚೌಕಟ್ಟಿಗೂ ಸಿಗುವುದಿಲ್ಲ.

ಎ. ಕೆ. ರಾಮಾನುಜನ್ ಹಾಗಿದ್ದರು. ವೈಎನ್‌ಕೆನೂ ಅಷ್ಟೇ. ಆದ್ದರಿಂದ ಇತಿಹಾಸದಿಂದಲೇ ಆರಂಭಿಸುತ್ತೇನೆ. ನನಗೆ ವೈಎನ್‌ಕೆ ಪರಿಚಯವಾದದ್ದು ಮೂವತ್ತೈದು ವರ್ಷಗಳ ಹಿಂದೆ. ನಾನು ಮದ್ರಾಸಿನಿಂದ ರಾಮಾನುಜನ್ನರ ತಮ್ಮನ ಮದುವೆಗಾಗಿ ಬೆಂಗಳೂರಿಗೆ ಬಂದಿದ್ದೆ. ಲಗ್ನ ಮಂಟಪದಲ್ಲಿ ವೈಎನ್‌ಕೆಯ ಗುರುತಾಯಿತು. ಆ ಗಳಿಗೆಗೆ ನಾನು ಬೆಂಗಳೂರಿಗೆ ಹೊಸಬ ಎಂಬ ಭಾವನೆಯೇ ಅಳಿಸಿಹೋಯಿತೆಂದು ಹೇಳಬೇಕು. ಆ ಲಗ್ನ ಮಂಟಪದಲ್ಲಿದ್ದ ಅಷ್ಟೂ ಲೇಖಕರ, ಕಲಾಕಾರರ ಗುರುತು ಮಾಡಿಕೊಟ್ಟರು. ಲಗ್ನ ಮಂಟಪದಲ್ಲಿ ಹಾಜರ್ ಇಲ್ಲದ, ಆದರೆ ನಾನು ಭೆಟ್ಟಿಯಾಗಲೇಬೇಕಾದಂಥ ಬೆಂಗಳೂರಿಗರ ಬಗ್ಗೆ ಹೇಳಿದರು. ಬೆಂಗಳೂರು ನಗರದಲ್ಲಿ ಈ ವ್ಯಕ್ತಿಗೆ ಗುರುತಿಲ್ಲದ, ನಾಟಕ - ಕಲೆ - ಕಾವ್ಯ - ಪತ್ರಿಕೋದ್ಯಮದಲ್ಲಿ ತೊಡಗಿರುವ interesting ಮನುಷ್ಯನೇ ಇಲ್ಲವೇನೋ ಎನಿಸಿತು.

ಬೆಂಗಳೂರಿನಲ್ಲಿ ಬಂದ ಈ ಅನುಭವ ಮದ್ರಾಸಿನಲ್ಲೂ ಮುಂದುವರಿಯಿತು. ಕೈಲಾಸಂ ಅವರ ಮಗಳಾದ ಕಮಲಾ ಸುಬ್ರಹ್ಮಣ್ಯಂ ಅವರಿಗೆ ನನ್ನ ‘ಯಯಾತಿ’ ನಾಟಕದ ಪ್ರತಿ ಕಳಿಸಿಕೊಡಬೇಕು ಎಂದು ತಿಳಿಸಿದರು. ಅದರ ಪರಿಣಾಮವಾಗಿ ನನಗೆ ಒಂದು ಅಮೌಲ್ಯ ಸ್ನೇಹ ಸಂಬಂಧ ದೊರಕಿತು. ಒಂದು ದಿನ ದಿಲ್ಲಿಯ ಒಬ್ಬ ಶಾಲಾಶಿಕ್ಷಕರು ಇದ್ದಕ್ಕಿದ್ದ ಹಾಗೆ ನನ್ನ ಆಫೀಸಿಗೆ ಬಂದರು. ‘ವೈಎನ್‌ಕೆ ಭೆಟ್ಟಿಯಾಗು’ ಎಂದಿದ್ದಾರೆ ಎಂದರು. ಹೆಸರು: ಬಿ.ವಿ. ಕಾರಂತ! ಇನ್ನೊಂದು ಸಲ ಕಲಾಕಾರ ಎಸ್‌.ಜಿ. ವಾಸುದೇವ್. ಮತ್ತೊಮ್ಮೆ ಆಗ ‘ಮೇಲ್’ ಪತ್ರಿಕೆಯಲ್ಲಿ ಸಹಸಂಪಾದಕರಾಗಿರುವ ಬಿ.ಆ‌ರ್. ನಾಗರಾಜ್‌- ಈ ಎಲ್ಲರಿಗೂ ನನ್ನದೇ ಅನುಭವವಾಗಿತ್ತು. ಯಾವುದೇ ಕಲೆಯಿರಲಿ, ಕ್ಷೇತ್ರವಿರಲಿ ವೈಎನ್‌ಕೆ ಅದರಲ್ಲಿ ಕ್ರಿಯಾಶೀಲನಾಗಿರುವ ವ್ಯಕ್ತಿಯ ಆಸೆ-ಆಕಾಂಕ್ಷೆ-ಯೋಜನೆಗಳಿಗೆ ಪ್ರತಿಸ್ಪಂದಿಸಿ ಅವನ ಸೃಜನಕ್ರಿಯೆಯಲ್ಲಿ ಸಹಜವಾಗಿ ತನ್ಮಯರಾಗುತ್ತಾರೆ.

ನಾಟಕದಲ್ಲಿ ಅವರಿಗೆ ಹಿಂದಿನಿಂದಲೂ ಆಸಕ್ತಿಯಿತ್ತು. ಕೈಲಾಸಂರ ಪಟ್ಟ ಶಿಷ್ಯರಲ್ಲಿ ಇವರೂ ಒಬ್ಬರು. ಆದ್ಯ ರಂಗಾಚಾರ್ಯರಿಗೆ ಆತ್ಮೀಯರು. ಹೀಗಾಗಿ ನನ್ನ ನಾಟಕಗಳಲ್ಲಿ ಅವರು ಆಸಕ್ತಿವಹಿಸಿದ್ದು ಆಶ್ಚರ್ಯದ ಮಾತಲ್ಲ. ಆದರೆ 1965ರಲ್ಲಿ ನಾನು ‘ಸಂಸ್ಕಾರ’ ಕಾದಂಬರಿಯ ಒಂದು ಹಸ್ತಪ್ರತಿಯನ್ನೋದಿ ಉತ್ತೇಜಿತನಾದಾಗ, ಆ ಕೃತಿಯನ್ನಾಧಾರಿಸಿ ಒಂದು ಚಿತ್ರಪಟ ಮಾಡೋಣ ಎಂದು ಮದ್ರಾಸಿನ ಪಟ್ಟಾಭಿರಾಮ ರೆಡ್ಡಿ ಮುಂದೆ ಬಂದಾಗ, ವೈಎನ್‌ಕೆ ಸಹಜವಾಗಿಯೇ ಆ ಪ್ರಕ್ರಿಯೆಯಲ್ಲಿ ಭಾಗಿಯಾದರು. ನನಗಾಗಲಿ, ಪಟ್ಟಾಭಿಗಾಗಲಿ ಬೆಂಗಳೂರ್ ಬಗ್ಗೆ ಹೆಚ್ಚು ಗೊತ್ತಿರಲಿಲ್ಲ. ಇಲ್ಲಿಯ ಕಲಾವಿದರ ಪರಿಚಯವಿರಲಿಲ್ಲ. ವೈಎನ್‌ಕೆ ನಮ್ಮನ್ನು ತಮ್ಮ ಹಿಡಿತದಲ್ಲಿ ತೆಗೆದುಕೊಂಡರು.

ಗೋದಾ ರಾಮಕುಮಾ‌ರ್, ಬಿ. ಆರ್. ಜಯರಾಂ, ದಾಶರಥಿ ದೀಕ್ಷಿತ್, ಬಿ. ಎಸ್‌. ರಾಮರಾವ್, ಸಿ. ಆರ್. ಸಿಂಹ - ಇವರ ಮನೆಗೆ ಕರೆದೊಯ್ದರು. ಅವರನ್ನು ಕರೆಸಿದರು. ಮಾಧ್ವ ಸಂಪ್ರದಾಯದ ಬಗ್ಗೆ ಮಾರ್ಗದರ್ಶನ ಮಾಡಲಿಕ್ಕೆಂದು ಕಾನಕಾನಹಳ್ಳಿ ಗೋಪಿ ಯನ್ನೂ ಸೂಚಿಸಿದರು. ನಾರಣಪ್ಪನ ಪಾತ್ರ ಮಾಡಲು ಲಂಕೇಶ್ ಒಪ್ಪಬಹುದೇ ಎಂದಾಗ ಅವರ ಹತ್ತಿರ ಕರೆದೊಯ್ದರು. (ಮೊದಲು ಲಂಕೇಶ್ ಒಪ್ಪಲಿಲ್ಲ. ಆಮೇಲೆ ಸಿದ್ಧರಾದರು) ಹೊರಾಂಗಣವನ್ನೂ ಹುಡುಕಹೋದ ಮೊದಲನೇ ತಂಡದಲ್ಲಿ, ಚಿತ್ರಕ್ಕೆ ಕಲಾನಿರ್ದೇಶಕ ರಾದ ವಾಸುದೇವ್ ಅವರೊಡನೆ ವೈಎನ್‌ಕೆ ಕೂಡ ಇದ್ದರು. ಚಿತ್ರೀಕರಣದುದ್ದಕ್ಕೂ, ಅನನುಭವದ ಕಾರಣದಿಂದಾಗಿ ತಂಡದಲ್ಲಿ ಒಳಜಗಳಗಳೆದ್ದಾಗ ಎರಡೂ ಪಕ್ಷದ ಮಾತುಗಳಿಗೆ ಕಿವಿಗೊಟ್ಟು ಸಮಾಧಾನ ಹೇಳಿದರು.

ಇದಾದ ನಂತರ ನಾನು ನನ್ನನ್ನು ತೊಡಗಿಸಿಕೊಂಡ ಪ್ರತಿಯೊಂದು ಚಿತ್ರದಲ್ಲಿ ವೈಎನ್‌ಕೆ ಬರುವದು, ಇರುವದು, ಸಲಹೆ ನೀಡುವದು, ತಪ್ಪದ ritual ಆಯಿತು. ಅವರ ಈ ಸಹಾನುಭೂತಿಯ ಪರಿಣಾಮವಾಗಿ ‘ವಂಶವೃಕ್ಷ’ದ ಹೊತ್ತಿಗೆ ಎಲ್. ವಿ. ಶಾರದಾಗೆ ಗಾಡ್-ಫಾದರ್ ಆದರು. ಜಿ. ವಿ. ಅಯ್ಯರ್ ಅವರಿಗೆ ಆತ್ಮೀಯರಾದರು.

ಅವರ ಎರಡು ಮುಖ್ಯ ಗುಣಗಳನ್ನು ಇಲ್ಲಿ ಉಲ್ಲೇಖಿಸಲೇಬೇಕು. ಅವರ ಉತ್ಸಾಹದ ಹಿಂದೆ ಅಸಾಧಾರಣ ನಿಷ್ಠೆಯಿದ್ದಂತೆ, ಆಳವಾದ ಪ್ರಾಮಾಣಿಕತೆ ಕೂಡ ಇದೆ. ನನ್ನ ‘ಹಯವದನ’ ನಾಟಕದ ವಾಚನ ಅವರ ಮನೆಯಲ್ಲೇ ಆಯಿತು. ಆಗ ಆ ನಾಟಕದ ಬಗ್ಗೆ ಹೆಚ್ಚು ಉತ್ಸಾಹ ತೋರಿಸಲಿಲ್ಲ. ಆದರೆ ಕಾರಂತರು ಅದನ್ನೂ ರಂಗಕ್ಕೆ ತಂದಾಗ ಹಿಗ್ಗಿ, ಸಂಭ್ರಮದಿಂದ ಪತ್ರ ಬರೆದರು. ಅಲ್ಲಿಯೂ ‘ನಾಟಕವನ್ನು ಓದಿಯೇ ಪಟ್ಟಾಭಿ ರಾಮ ರೆಡ್ಡಿ ಅದರ ಸಾಧ್ಯತೆಗಳನ್ನು ಕಂಡುಕೊಂಡರು! ನನಗೆ ಆಗ ತಿಳಿಯಲೇ ಇಲ್ಲ’ ಎಂದು ಒಪ್ಪಿಕೊಂಡರು.

ಎರಡನೆಯ ಗುಣ ಎಂದರೆ ಅವರ ಜಿಜ್ಞಾಸೆಗೆ ವಿಚಾರವಾದದ, Rationalism ಲಕ್ಷ್ಮಣರೇಖೆಯಿಲ್ಲ. ಯೌವನದಲ್ಲಿ ಜ್ಯಾಕ್ ಲಂಡನ್, ಮಾರ್ಕ್ಸ್‌ವಾದ, ಕೆಂಪುಕ್ರಾಂತಿಗೆ ಮಾರುಹೋದ ವೈಎನ್‌ಕೆ ಸತ್ಯಕಾಮರ ತಾಂತ್ರಿಕ ಪ್ರಯೋಗಗಳು, ಯು. ಜಿ. ಕೃಷ್ಣಮೂರ್ತಿ ಅವರ ದರ್ಶನ ಇವೆಲ್ಲವುಗಳ ಬಗ್ಗೆ ಆಳವಾಗಿ ಚಿಂತನ ಮಾಡಿದ್ದಾರೆ.

ಅದರ ಯಾವ ವೈಎನ್‌ಕೆ ಒಮ್ಮಿಂದೊಮ್ಮೆಲೆ ಉತ್ತಮ ಕವಿತೆಗಳನ್ನೂ ಬರೆಯಲಾರಂಭಿಸಿದಾಗ ನಮಗೆ ಯಾರಿಗೂ ಆಶ್ಚರ್ಯವಾಗಲಿಲ್ಲ. ಭಾಷೆ ಅವರ ಅಸ್ತಿತ್ವ ಸ್ವರೂಪವೂ ಅವರಿಗೆ ಪರಕೀಯವಲ್ಲ.

ವೈಎನ್‌ಕೆಯ ಬಗ್ಗೆ ಹೇಳಹೊರಟ ಈ ಲೇಖನ ಪ್ರತಿಭಾವಂತ ಕಲಾವಿದರ ಹೆಸರಿನ ಯಾದಿಯಾಗಿದ್ದರೆ (ವೈಎನ್‌ಕೆಯ ಮುಖಾಂತರ ನಾನು ಭೆಟ್ಟಿಯಾದ ಇನ್ನೆಷ್ಟೋ ಜನರಿದ್ದಾರೆ. ನಿಸ್ಸಾರ್, ಕೆಎಸ್‌ಎನ್, ರಾಜರತ್ನಂ, ವಿಸೀ, ಮಾಸ್ತಿ...) ವಿವಿಧ ಕಲಾ ಮಾಧ್ಯಮಗಳ ಪಟ್ಟಿಯಾಗಿದ್ದರೆ ಅದು ವೈಎನ್‌ಕೆಯ ನಿರಂತರ ಚೈತನ್ಯಶೀಲ ಜೀವನಕ್ಕೆ ಸಾಕ್ಷಿ. ರಾಜೀವ ತಾರಾನಾಥ ವೈಎನ್‌ಕೆಯನ್ನು Ezra Pound of Bangalore ಎಂದು ಕರೆದದ್ದು ಹಲವಾರು ರೀತಿಯಲ್ಲಿ ಅರ್ಥಪೂರ್ಣ.

ನನಗೆ ಹಲವು ಸಲ ಎನಿಸುತ್ತದೆ, ನನ್ನ ಬಹುತೇಕ ಮಿತ್ರರು ಐವತ್ತು ತಲುಪುವ ಮೊದಲೇ ತಮ್ಮ ಸಂಭಾಷಣೆಯನ್ನು, ವಿಚಾರಪದ್ಧತಿಯನ್ನು, ಅಷ್ಟೇ ಏಕೆ ತಮ್ಮ ದೈನಂದಿನ ಗೋಳುಗಳನ್ನು ಕೂಡ ಸಿದ್ಧಗೊಳಿಸಿ ಇಟ್ಟುಬಿಟ್ಟಿದ್ದಾರೇನೋ ಎಂದು. ಟೆಲಿಫೋನ್‌ನಲ್ಲಿ ‘ಹಲೋ, ಗಿರೀಶ್, ನಾನು...’ ಎಂದು ಅವರ ಧ್ವನಿ ಕೇಳಿದೊಡನೆ ಮುಂದೆ ಬರಲಿರುವ ಸಂವಾದ ನನ್ನ ಕಣ್ಣೆದುರಿಗೆ ಕಂಪ್ಯೂಟ‌ರ್ ಪ್ರಿಂಟ್‌ಔಟ್‌ದಂತೆ ಉರುಳುತ್ತದೆ. ಆದರೆ ಕಳೆದ ಮೂವತ್ತೈದು ವರ್ಷ ವೈಎನ್‌ಕೆಯೊಡನೆ ಯಾವುಯಾವುದೋ ಮಾಧ್ಯಮಗಳಲ್ಲಿ, ವಿಚಾರ ಪ್ರಣಾಲಿಗಳಲ್ಲಿ, ವಾಗ್ವಾದಗಳಲ್ಲಿ ನುಗ್ಗಿ ಬಂದಮೇಲೆ ಕೂಡ ಟೆಲಿಫೋನ್‌ದಲ್ಲಿ ‘ಗಿರೀಶ್, ವೈಎನ್‌ಕೆ...’ ಎಂಬ ಶಬ್ದಗಳನ್ನು ಕೇಳಿದೊಡನೆ ನಾನು ಒಂದು ಹೊಸ ಸಾಹಸಕ್ಕಾಗಿ ಸಿದ್ಧನಾಗುತ್ತೇನೆ.

ವೈಎನ್‌ಕೆ 100

ಒಂದು ತಲೆಮಾರಿನ ಲೇಖಕರಿಗೆ, ಕಲಾವಿದರಿಗೆ, ನಿರ್ದೇಶಕರಿಗೆ, ಸಂಗೀತಗಾರರಿಗೆ, ರಂಗಭೂಮಿಯವರಿಗೆ ಸ್ಫೂರ್ತಿಯಾಗಿದ್ದವರು ವೈಎನ್‌ಕೆ. ಕನ್ನಡದಲ್ಲಿ ನವ್ಯ ಸಾಹಿತ್ಯ ನೆಲೆಯೂರುವಂತೆ ಮಾಡುವಲ್ಲಿ ಅವರ ಪಾತ್ರ ಹಿರಿದು. ಕನ್ನಡದ ಜಾಯಮಾನಕ್ಕೆ ಗೊತ್ತೇ ಇಲ್ಲದ ನೂರಾರು ಪಾಶ್ಚಾತ್ಯ ಲೇಖಕರನ್ನು ಕನ್ನಡದ ಲೇಖಕರಿಗೆ ಪರಿಚಯ ಮಾಡಿಕೊಟ್ಟ ವೈಯನ್ಕೆ ಎಲ್ಲರ ಸ್ಫೂರ್ತಿಚಿಲುಮೆಯಂತೆ ಇದ್ದವರು.

1926ರ ಮೇ 16ರಂದು ಹುಟ್ಟಿದ ವೈಯನ್ಕೆ ಅವರ ಜನ್ಮಶತಮಾನೋತ್ಸವದ ನಿಮಿತ್ತ ಅವರ ಆಪ್ತರಾಗಿದ್ದ ಇಬ್ಬರು ಪ್ರತಿಭಾವಂತರು ಬರೆದ ಬರಹಗಳು ಇಲ್ಲಿವೆ.

ಮಾತು ಮತಾಪು, ನೆನಪು ತಾರಾಮಂಡಲ

- ಸಿ. ಆ‌ರ್. ಸಿಂಹ

ವಿಶ್ವಾಮಿತ್ರ ಮೇನಕೆ 

ಡಾನ್ಸ್ ಮಾಡೋದು ಏನಕೆ

ಆ್ಯಸ್ಕ್ ಮಿಸ್ಟರ್ ವೈ.ಎನ್.ಕೆ.

ಬರೀ ಅವರಿಬ್ಬರದೇಕೆ, ಇನ್ನೂ ಎಷ್ಟೋ ವ್ಯಕ್ತಿಗಳು, ವಿಷಯಗಳು ತಿಳಿಯಬೇಕೆ, Ask Mr. YNK. ನಾನಂತೂ ವೈಎನ್‌ಕೆ ಅವರಿಂದ ಕೇಳಿ ತಿಳಿದ ವಿಷಯಗಳಿಗೆ ಲೆಕ್ಕವೇ ಇಲ್ಲ. ಜೀವಂತ ವಿಶ್ವಕೋಶ ಎನ್ನುವುದಕ್ಕೆ ಅಡ್ಡ ಹೆಸರು ವೈಎನ್‌ಕೆ. ಅದೆಷ್ಟು ಅವರ ಆಸಕ್ತಿಗಳು, ಅದೆಂಥ ಉತ್ಸಾಹದ ಚಿಲುಮೆ. ಸಾಹಿತ್ಯವೇ, ನಾಟಕವೇ, ಚಿತ್ರಕಲೆಯೇ, ಚಲನಚಿತ್ರವೇ, ಕ್ರೀಡೆಯೇ, ಜ್ಯೋತಿಷ್ಯವೇ - ಯಾವ ಸಂಗತಿಯೇ ಆಗಲಿ ಅವರ ಫಳಕ್ಕನೆ ಮಿಂಚುವ ಮಾತು, ಮಾತು ಮಥಿಸಿ ಹುಟ್ಟುವ ಹೊಸ ಅರ್ಥ, ಅರ್ಥದ ಬೆಳಕಿನಲ್ಲಿ ಹೊಸ ಅರಿವು. ಇದು ಅವರ ಮಾತಿನ ರೀತಿ. ಮಾತು ಚಿನಕುರಳಿ, ಪಟಾಕಿ ಸರ, ಬಣ್ಣ ಬಣ್ಣದ ಮತಾಪು, ಚಿಮ್ಮಿ ಸ್ಫೋಟಿಸುವ ತಾರಾಮಂಡಲ. ಅವರ ಜೊತೆ ಮಾತೆಂದರೆ ನಿತ್ಯ ದೀಪಾವಳಿ, ಅವರ ಮಾತಿನ ವೇಗಕ್ಕೆ, ಓಘಕ್ಕೆ, ನಮ್ಮ ಕಿವಿ, ಮನಸ್ಸು ಅಷ್ಟೇ ಚುರುಕಾಗಿರಬೇಕು. ಇಲ್ಲದಿದ್ದರೆ ಖಾಲಿ ಕೈ.

ಬೆಂಗಳೂರಿನ ಗವಿಪುರದಲ್ಲಿ ಅವರ ಮನೆ. ಈಗ ಇರುವ ಮನೆಯ ಪಕ್ಕದ ಹಳೆಮನೆಯಲ್ಲಿ ಮುವ್ವತ್ತು ವರ್ಷಕ್ಕೆ ಮುಂಚೆ ಅವರನ್ನು ನೋಡಲು ಹೋಗುತ್ತಿದ್ದ ನೆನಪು ಇನ್ನೂ ಹಸಿರಾಗಿದೆ. ಅವರು ಸ್ನಾನ ಮಾಡಿ ರೆಡಿಯಾಗುವುದಕ್ಕೆ ಕಾದು ಅವರೊಂದಿಗೆ ಗಾಂಧಿ ಬಜಾರಿಗೆ ಬರುವುದು. ವಿದ್ಯಾರ್ಥಿ ಭವನದಲ್ಲಿ ವಿಶ್ವವಿಖ್ಯಾತ ಮಸಾಲೆದೋಸೆ. ಹೊರಗೆ ಬಂದು ನಿಂತ ಮೇಲೂ ಗೆಳೆಯರ ಕೂಟದ ಮಾತು ನಡೆದೇ ಇರುತ್ತಿತ್ತು. ಒಂದೆರಡು ಸಿಗರೇಟು. ಸಿಗರೇಟಿನ ಹೊಗೆ ವರ್ತುಳ ವರ್ತುಳವಾಗಿ ಹೊಮ್ಮುತ್ತಿದ್ದಂತೆಯೇ ಆ ಧೂಮ ಲೀಲೆಯ ಜೊತೆಯಲ್ಲೇ ಮಾತಿನ ಲೀಲೆ. ಅಡಿಗ, ಬೇಂದ್ರೆ, ಆಡೆನ್, ಎಲಿಯೆಟ್, ನವೋದಯ, ನವ್ಯ. ಗಹನವಾದ್ದರ ಜೊತೆಜೊತೆಯಲ್ಲೇ ದಿನನಿತ್ಯದ ಸುದ್ದಿ ಸಂಗತಿ, ವ್ಯಕ್ತಿ ವಿಷಯಗಳು. ಮಾತು ಸಾಗಿದಂತೆಯೇ ಬಸವನಗುಡಿ (ಮಾಸ್ತಿ) ಕ್ಲಬ್ ಮೂಲೆಯಲ್ಲಿ ಬಸ್ಸಿಗಾಗಿ ಒಂದು ಗಳಿಗೆ ಕಾದು ವೈಎನ್‌ಕೆ ರೂಟ್ ನಂಬರ್ 16ರಲ್ಲಿ ಪ್ರಜಾವಾಣಿಗೆ ಪ್ರಯಾಣ. ನಾವೆಲ್ಲ ಚದರುವುದು. ಎಷ್ಟೋ ವರ್ಷ ನಡೆಯಿತು ಹೀಗೆ. ಲಂಕೇಶ್, ಕಂಬಾರ, ಸದಾಶಿವ, ನಾಡಿಗ, ಕಿರಂ, ಬಾಕಿನ- ಇನ್ನೂ ಎಷ್ಟೋ ಗೆಳೆಯರು. ಆಗಿನ ವಿಶೇಷವೆಂದರೆ ಒಬ್ಬರು ಇನ್ನೊಬ್ಬರ ಕತೆ ಕವನ ನಾಟಕದ ಬಗ್ಗೆ ಮುಕ್ತ ರೀತಿಯಲ್ಲಿ ಚರ್ಚೆ ಮಾಡುತಿದ್ದುದು. ಅದೇ ಮುಂಜಾನೆ ಪ್ರಜಾವಾಣಿ ವಿಮರ್ಶೆಯಲ್ಲಿ ಕಟುವಾಗಿ ಟೀಕಿಸಿದ್ದ ವಿಮರ್ಶಕನೊಂದಿಗೂ ಮನಸ್ಸು ಕಹಿಯಾಗದೆ ಮಾತನಾಡಲು ಸಾಧ್ಯವಾಗುತ್ತಿದ್ದದ್ದು. ಪರಸ್ಪರ ಸೃಷ್ಟಿಶೀಲತೆಯನ್ನು ಗುರುತಿಸಲು ಮನಸ್ಸು ತೆರವಾಗಿದ್ದುದು. ಜಾತಿ ಜಗಳಗಳಿಲ್ಲದೆ ನಿರ್ಮಲವಾಗಿ ಸಾಹಿತ್ಯ, ರಂಗಭೂಮಿ, ಚಿತ್ರರಂಗ ಎಲ್ಲದರ ಬಗ್ಗೆ ತೀವ್ರವಾಗಿ ಎಲ್ಲರೂ ಸ್ಪಂದಿಸುತ್ತಿದ್ದರಿಂದ ಪ್ರತಿಯೊಂದು ಕಲೆತವೂ ಖುಷಿಯ ಜೊತೆಗೇ ವಿಕಾಸಕ್ಕೂ ಅವಕಾಶ ನೀಡುವಂಥದಾಗಿತ್ತು. ಇವೆಲ್ಲದರ ಕೇಂದ್ರದಲ್ಲಿದ್ದವರು ವೈಎನ್‌ಕೆ.

ನೆನಪಿನಲ್ಲಿ ನಿಂತುಬಿಟ್ಟಿರುವ ಮತ್ತೊಂದು ಎಂದರೆ, ಸಂಜೆ ಮೇಲೆ ಕಂಟೋನ್ಮೆಂಟಿನಲ್ಲಿ ವೈಎನ್‌ಕೆ ಭೇಟಿ. ಅಲ್ಲಿ ಇಲ್ಲಿ ಕಾಲ ಕಳೆದು ಯತಿ ಅವರ ಒಡೆತನದ ಗ್ರೀನ್ಸ್ ಬಾರ್. ಅಲ್ಲಿ ಗುಂಡು, ಹರಟೆ, ನಗು ನಗು. ಕೊನೆಯ ಪೆಗ್ಗಿಗೆ ಟೇಬಲ್ ಬಿಟ್ಟು ಯತಿ ಕೌಂಟರ್ ಬಳಿ ಪ್ರತಿಷ್ಠಾಪನೆ. ಯತಿ ಮನೆಯಿಂದ ತಂದ ಸೊಗಡು ಅವರೆಕಾಯಿ ಉಸಲಿ, ಚಳಿಯಲ್ಲಿ ನಮ್ಮಂಥ ‘ಗುಂಡು’ಗೋವಿಗಳಿಗೆ ಸರಿರಾತ್ರಿಯಲ್ಲಿ ಯತಿಯ ಹೋಮ್ ದೋಸೆ, ಚಟ್ನಿ ಪುಡಿ ಇಲ್ಲವೇ ಬದನೆಕಾಯಿ ಹುಳಿ ಕಲೆಸಿದ ಅನ್ನ. ಬೆಂಗಳೂರಿನ ಡಿಸೆಂಬರ್ ಮೇಡ್ ಆತಿಥ್ಯ ಎಂದರೆ ಅದಕ್ಕೆ ಒಂದೇ ಪದ ‘ದಿವ್ಯ’. ನಮ್ಮ ಜೊತೆ ಯತಿ ಕೂಡ ಒಂದು ಛೋಟಾ ಪೆಗ್. ಮುಗಿಸಿ ಆಚೆ ಮಹಾತ್ಮಗಾಂಧಿ ರಸ್ತೆಗೆ ಬಂದರೆ ಮೈಮನಸ್ಸೆಲ್ಲ ಹಗುರ. ನಿಜಕ್ಕೂ ತೇಲಿಕೊಂಡೇ ಮನೆ ಸೇರುತ್ತಿದೆ ನಾನು. ಆಗಿನ ಬೆಂಗಳೂರು, ಆ ಖುಷಿ ಏನೆನ್ನಲಿ? Good old days! ನಾಸ್ಟಾಲ್ವಿಯಾ ಇಲ್ಲದ ನರ ಯಾವೋನಿದ್ದಾನೆ?

ನವ್ಯ ಸಾಹಿತ್ಯದ ಮುಂಚೂಣಿಯಲ್ಲಿದ್ದ ಅನೇಕರಿಗೆ, ಬೆಂಗಳೂರಿಗರಾಗಲಿ ಬೇರೆಡೆಯವರಾಗಲಿ, ವೈಎನ್‌ಕೆ ಜೊತೆಗೆ ನಿಕಟ ಸಂಪರ್ಕವಿತ್ತು. ವೈಎನ್‌ಕೆ ಅವರ ಟೀಮಿನಲ್ಲಿದ್ದ ಯುವಪಡೆ ಎಂಥದ್ದು - ವೈಕುಂಠರಾಜು, ಸದಾಶಿವ, ರಂಗನಾಥ ರಾವ್, ಡೆಕ್ಕನ್ ಹೆರಾಲ್ಡ್‌ನ ಗಿರಿಧರ, ರಘುನಾಥ್. ಸಾಹಿತ್ಯ, ನಾಟಕ, ಚಿತ್ರಕಲೆ ಯಾವುದೇ ರಂಗದಲ್ಲಿ ಏನೇ ಹೊಸದು ಬರಲಿ ಅದನ್ನು ಬಿಂಬಿಸುವಲ್ಲಿ ವೈಎನ್‌ಕೆ ಅವರಿಗೆ ತೀರ ಆಸಕ್ತಿ. ಪತ್ರಿಕೆ ಯಿಂದಾಗಿ ಅದು ನಾಡಿನಾದ್ಯಂತ ಜನರಿಗೆ ತಲುಪುತ್ತಿತ್ತು. ಸಾಹಿತ್ಯ, ಕಲೆಗಳ ಬಗ್ಗೆ ವೈಎನ್‌ಕೆ ಕೊಡುಗೆ ಹೀಗೆ ಬೆಲೆಯುಳ್ಳದ್ದು.

ನೆನಪಿದೆ ಆ ಸಂಜೆ. ಲಂಕೇಶ್ ಸಂಪಾದಕರಾಗಿ ಅಕ್ಷರ ಹೊಸ ಕಾವ್ಯ ಸಂಗ್ರಹ ಬಿಡುಗಡೆ ಸಮಾರಂಭ. ನ್ಯಾಷನಲ್ ಕಾಲೇಜಿನಲ್ಲಿ ಗೋಪಾಲಕೃಷ್ಣ ಅಡಿಗರು ಮಾತ ನಾಡುತ್ತ ಹೇಳಿದರು - ತಾವು ನಡೆದ ದಾರಿಯ ಕಡೆ ತಿರುಗಿ ನೋಡಬಾರದೆಂದು ನಿರ್ಧರಿಸಿ ಬರೆದ ಕವನಗಳಿಗೆ ವೈಎನ್‌ಕೆ ಹೇಗೆ ಸ್ಪಂದಿಸಿದರು; ಇದು ಆಧುನಿಕ, ಇದೇ ನವ್ಯ ಎಂದು ಗುರುತಿಸಿದರು; ವೈಎನ್‌ಕೆ ಅವರಿಂದ ಉತ್ಸಾಹ ಪಡೆದು ತಾನು ಹೇಗೆ ಕಾವ್ಯ ರಚಿಸುತ್ತಾ ಹೋದೆ - ಎಂದು. ನವ್ಯಕಾವ್ಯದ ಉತ್ಕೃಷ್ಟ ಸಂಗ್ರಹವನ್ನು ಸಂಪಾದಿಸಿದ ಲಂಕೇಶ್‌ರನ್ನೂ ಶ್ಲಾಘಿಸಿದರು. ಲಂಕೇಶ್ ಅವರು ತಮ್ಮ ಕೃತಿಯೊಂದರ ಮುನ್ನುಡಿಯಲ್ಲಿ, ವೈಎನ್‌ಕೆ ಹೆಸರೂ ಹೇಳದಿದ್ದರೆ ತಾನು ಕೃತಿಚೌರ್ಯ ಮಾಡುತ್ತಿದ್ದೇನೆ ಅನಿಸುತ್ತೆ, ಅಂತ ಹೇಳಿದ್ದಾರೆ. ಆಗಿನ ಸಂದರ್ಭದಲ್ಲಿ ವೈಎನ್‌ಕೆ ಸ್ವತಃ ಬರೆಯುತ್ತಿದ್ದದ್ದು ಕಡಿಮೆ. ಆದರೆ ಅನೇಕರಿಗೆ ಪ್ರೇರಕರಾಗಿ, ಉತ್ತೇಜಕರಾಗಿ ಅವರು ತೆರೆಮರೆಯ ಕ್ರಿಯಾಶೀಲರು.

ನಮ್ಮ ನಾಟಕಗಳಿಗೆ ವೈಎನ್‌ಕೆ ಬರಬೇಕು. ಅವರ ನಿರ್ದಾಕ್ಷಿಣ್ಯವಾದ, ಹಾಗೆಯೇ ಸ್ಪೂರ್ತಿಯುತವಾದ ಅಭಿಪ್ರಾಯ ನಾವು ತಿಳಿಯಬೇಕು. ಅದು ಸಿಗುವವರೆಗೆ ನಮಗೆ ಏನೋ ಕೊರತೆ ಅನಿಸುತ್ತಿತ್ತು.

69ನೇ ಇಸವಿಯಲ್ಲಿ ‘ಸಂಸ್ಕಾರ’ ಚಿತ್ರ ತಯಾರಾಯಿತು. ಅನಂತಮೂರ್ತಿ ಅವರ ಈ ಮಹತ್ವಪೂರ್ಣ ಕೃತಿಯನ್ನು ಓದಿಯೇ ಖುಷಿಯಾಗಿದ್ದ ನನ್ನಂಥವರಿಗೆ ಚಲನಚಿತ್ರ ಆಗುತ್ತದೆ ಎಂಬುದೇ ರೋಮಾಂಚಕವಾಗಿತ್ತು. ಬೆಂಗಳೂರು ರಂಗಭೂಮಿಯ ನಾವು ಅನೇಕರು ಅದರಲ್ಲಿ ಪಾತ್ರ ಮಾಡಿದೆವು. ಬಹಳಷ್ಟು ಜನರನ್ನು ಗಿರೀಶ್ ಕಾರ್ನಾಡರು ಆಯ್ಕೆ ಮಾಡಿದ್ದು ವೈಎನ್‌ಕೆ ಮನೆಯಲ್ಲೆ. ಪಟ್ಟಾಭಿ, ಸ್ನೇಹಾ, ಗಿರೀಶ್, ಟಾಮ್ ಕೋವನ್ ಪ್ರತ್ಯಕ್ಷವಾಗಿ ಚಿತ್ರಕ್ಕೆ ದುಡಿಯುತ್ತಿದ್ದರೆ ವೈಎನ್‌ಕೆ ಎಂದಿನಂತೆ ತೆರೆಮರೆಯಲ್ಲಿದ್ದುಕೊಂಡೇ ಚಿತ್ರತಂಡಕ್ಕೆ ಅನೇಕ ರೀತಿಯಲ್ಲಿ ಪ್ರೇರಣೆ ನೀಡುತ್ತಾ, ಚೈತನ್ಯ ತುಂಬುತ್ತಾ ಉತ್ಸಾಹದಿಂದ ಭಾಗವಹಿಸಿದ್ದರು. 1970ರಲ್ಲಿ ಬಿಡುಗಡೆಯಾದ ‘ಸಂಸ್ಕಾರ’ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ಭಾರತೀಯ ಚಿತ್ರರಂಗದಲ್ಲೇ ಒಂದು ಶಾಶ್ವತ ಸ್ಥಾನಮಾನವನ್ನು ಗಳಿಸಿತು. ಕನ್ನಡದಲ್ಲಿ ಹೊಸ ಅಲೆಯನ್ನೇ ಹುಟ್ಟಿಹಾಕಿತು. ಆ ಹೆಗ್ಗಳಿಕೆ ಯಲ್ಲಿ ಪರೋಕ್ಷವಾಗಿ ವೈಎನ್‌ಕೆ ಪಾಲೂ ಇದೆ.

ಅವರ ಜೊತೆ ಇದ್ದಾಗ, ಯಾರಿಗಾದರೂ ಸರಿ, ಬೆರಗು ಹುಟ್ಟಿಸುವ ಸಂಗತಿ ಎಂದರೆ ಅವರ ಅಸಾಧಾರಣ ಜ್ಞಾಪಕ ಶಕ್ತಿ. ಕನ್ನಡ ಇಂಗ್ಲಿಷ್ ಸಾಹಿತ್ಯದ ಹೆಸರಾಂತ ಲೇಖಕರ ಅನೇಕ ಕೃತಿಗಳ ಸಾಲುಸಾಲುಗಳನ್ನೇ ಉದ್ಧರಿಸುತ್ತಾ, ಅವೆಲ್ಲದರ ಬಗ್ಗೆ ಬಂದ ವಿಮರ್ಶಾ ಕೃತಿಗಳನ್ನೂ ವಿಶ್ಲೇಷಿಸುತ್ತಾ ಮಾತಾಡುತ್ತಿದ್ದರೆ ಕೇಳಿದವರು ದಂಗಾಗಿಬಿಡಬೇಕು. ಹಾಗಿರುತ್ತೆ ಅವರ ವರಸೆ. ಮಾತುಗಾರರಾಗಿ ಮಾತ್ರ ಅಲ್ಲ, ವೈಎನ್‌ಕೆ ಒಳ್ಳೆ ಕೇಳುಗರೂ ಕೂಡ. ಮತ್ತೊಬ್ಬರ ಮಾತಿಗೆ ಮನ್ನಣೆ ಉಂಟು. ಅಭಿಪ್ರಾಯಭೇದ ಉಂಟಾದರೆ ‘ಹೌದಾ?, ಇರಬಹುದು’ ಅನ್ನುವ ಪೈಕಿ. ಆದರೆ ಆ ಮತ್ತೊಬ್ಬನ ಮಾತು ಬರಿಯ ಉಡಾಫೆ ಅನಿಸಿದಾಗ ಒಂದೇ ಮಾತಿನಲ್ಲಿ ಅವ ಕ್ಲೀನ್ ಬೌಲ್ಡ್.

ಅವರ ಮತ್ತೊಂದು ವಿಶೇಷ PUN. ಕನ್ನಡ, ಇಂಗ್ಲಿಷ್ ಪದಗಳೊಡನೆ ಅವರು ಕ್ರೀಡೆಯಾಡಬಲ್ಲರು. ಪದವನ್ನು ಸೀಳುತ್ತ, ಪದದ ಒಂದು ಅರ್ಥವನ್ನು ಮತ್ತೊಂದು ಸಂದರ್ಭದಲ್ಲಿ ಶ್ಲೇಷೆಯಾಗಿಸುತ್ತ, ಕನ್ನಡ, ಇಂಗ್ಲಿಷ್ ಕಲೆಸಿ ರಸಾಯನ ಮಾಡುವುದರಲ್ಲಿ ನಿಸ್ಸಿಮರು. ಎಷ್ಟೋ ಸಲ ಕೇಳಿದಷ್ಟನ್ನೂ ನೆನಪಿನಲ್ಲಿಡುವುದೇ ಕಷ್ಟವಾಗಿ ಬಿಡುತ್ತದೆ ನಮಗೆ. ಇಗೋ ಕೆಲವು ಸ್ಯಾಂಪಲ್‌ಗಳು. ದಿ. ಗಿರಿಧರ ಆಗ ಪತ್ರಿಕಾಲಯದಲ್ಲಿದ್ದ. ಸ್ಕೂಟರ್ ಓಡಿಸುವಾಗ ಹಾಕಿದ್ದ ರೈಡಿಂಗ್ ಗ್ಲಾಸನ್ನು ತೆಗೆಯದೇ ಕಚೇರಿಗೆ ಹೋದ. ವೈಎನ್‌ಕೆಗೆ ‘ಹಲೋ’ ಎಂದ. ಇವರು ನೋಡಿ ‘ಏಯ್ ಘಾ!, ಏನಿದು ಕನ್ನಡಕ?’ ಅಂದರು. ಅವನು, ‘ಏನಿಲ್ಲ. ಹಾಕಿಕೊಂಡರೆ ನಾನು ಸುಂದರವಾಗಿ ಕಾಣ್ತೀನಿ ಅಂತ ಯಾರೋ ಅಂದರು. ಅದಕ್ಕೇ’ ಅಂದ. ವೈಎನ್‌ಕೆ ಥಟ್ಟನೆ - ‘ಓಹೋ, ಅದು ನಿನ್ನ Optical illusion!’ ಯಾರೋ ಒಬ್ಬ, ಮತ್ತೊಬ್ಬ ಕವಿ ಬಗ್ಗೆ ಹೇಳುತ್ತಾ ‘He is not a good poet’ ಅಂದ. ಅದಕ್ಕೆ ವೈಎನ್‌ಕೆ - ‘Good is unnecessary’. ಇದು ಕೇಳಿ. ಪಾಪ! ಒಬ್ಬ ನಾಟಕಕಾರನ ಯಾವುದೇ ನಾಟಕಕ್ಕೂ ಜನವೇ ಬರುಲ್ಲ ಅಂತ ತಿಳಿದಾಗ ವೈಎನ್‌ಕೆ - ‘ಅವನು ತಪ್ಪು ಮಾಡ್ತಿದಾನೆ. ಪ್ರವೇಶ Free ಮಾಡಿ, Exitಗೆ ಟಿಕೆಟ್ ಹಾಕಲಿ. ಭರ್ಜರಿ ಕಾಸು ಮಾಡ್ತಾನೆ?’ ಮಕ್ಕಳ ಫಿಲ್ಡ್ ಸೊಸೈಟಿ ಕಾರ್ಯಕ್ರಮ ಬೆಳಗ್ಗೆ. ಸಂಜೆ ಅದರ ನಿಮಿತ್ತ ಅಶೋಕ ಹೋಟೇಲಿನಲ್ಲಿ ಪಾರ್ಟಿ. ಪಾರ್ಟಿಯಲ್ಲಿ ಬರೀ ಹೆಗ್ಗಣಗಳೇ. ಒಳಗೆ ಹೋಗುತ್ತಿದ್ದ ಹಾಗೇ ಜೊತೆಯಲ್ಲಿದ್ದವರು, ‘ಏನಿದು, ಮಕ್ಕಳ ಸೊಸೈಟಿದು ಅಂತ ಬಂದರೆ, ಇಲ್ಲಿ ಮಕ್ಕಳೇ ಇಲ್ಲವಲ್ಲ’ ಅಂದರು. ಅದಕ್ಕೆ ವೈಎನ್‌ಕೆ - ‘ಛೇ! ಛೇ! ಇಲ್ಲಾಂತ ಯಾರು ಅಂದರು. ಸರಿಯಾಗಿ ನೋಡು. ಬರೀ ಕಳ್ಳ ನನ್ನ ಮಕ್ಕಳೇ ಇದ್ದಾರೆ.’ ಅವರ ಪದ್ಯಗಳಲ್ಲೇ ನೋಡಿ- ‘ಮೊದಲ ಪೆಗ್‌ಗೆ ನವೋದಯ, ಎರಡನೆಯದಕ್ಕೆ ನವ್ಯ, ಮೂರಕ್ಕೆ ಬಂಡಾಯ.’ ಸಿಕ್ಕಾಪಟ್ಟೆ ಗುಂಡು ಹಾಕಿದ ಗುಂಡನ ಸ್ಥಿತಿ - ‘ನಾನು ಸ್ಥಾವರ, ರೂಮು ಜಂಗಮ.’

ನನ್ನ ಫೇವರಿಟ್ ಅವರ ‘ಮಾತು ಮಾತು ಮಥಿಸಿ’ ಪುಸ್ತಕ. ‘ಬಾಳಿಗೊಂದು ಅರ್ಥ ಉಂಟೆ?’ ಎಂಬ ಲೇಖನದಲ್ಲಿ divine discontent ಎಂಬ ಮಾತು ಬರುತ್ತದೆ. ದೈವಿಕ ಅತೃಪ್ತಿಯೇ ಮನುಷ್ಯನ ವೈಶಿಷ್ಟ್ಯ. ಲೇಖನವನ್ನು ಹೀಗೆ ಮುಗಿಸುತ್ತಾರೆ. ‘ಕೋಟಿ ಕೋಟಿ’ ಗ್ರಹ ತಾರೆಗಳ ವಿಶಾಲ ವಿಶ್ವದಲ್ಲಿ ಒಂದು ಕಣದಂತಿರುವ ಈ ಭೂಗ್ರಹದಲ್ಲಿ ಪರಮ ಪರಮ ಕಣದಂತಿರುವ ಮಾನವ ಏನು ಮಾಡಬಹುದು? ಈ ಕತ್ತಲಿನ ಮೊತ್ತದಲ್ಲಿ ಹೊರಳುತ್ತಿರುವ ಈ ಸುಂದರ ವಸುಂಧರೆಯಲ್ಲಿ ನಿಂತು ಈ ಬಾಳೆಂಬ ವಿಸ್ಮಯ ಕಂಡು ಬೆರಗಾಗುವುದು ಬಿಟ್ಟು ಇನ್ನೇನು ಮಾಡಬಹುದು?’