-ಎಲ್ಲ ಕೆಲಸವನ್ನು ಎಐ, ರೋಬೋಟ್‌ಗಳು ಮಾಡುತ್ತೆ, ಬಡತನ ನಿವಾರಣೆಯಾಗುತ್ತದೆ, ಕೆಲಸ ಐಚ್ಛಿಕವಾಗುತ್ತದೆ-ಎಲಾನ್ ಮಸ್ಕ್ - 20 ವರ್ಷ ಬಳಿಕ ನೀವು ಬೇಕಿದ್ದರೆ ಮಾತ್ರ ಕೆಲಸ ಮಾಡಬಹುದು! -ಎಲಾನ್ ಮಸ್ಕ್
-ಎಲ್ಲ ಕೆಲಸವನ್ನು ಎಐ, ರೋಬೋಟ್‌ಗಳು ಮಾಡುತ್ತೆ, ಬಡತನ ನಿವಾರಣೆಯಾಗುತ್ತದೆ, ಕೆಲಸ ಐಚ್ಛಿಕವಾಗುತ್ತದೆ-ಎಲಾನ್ ಮಸ್ಕ್
ಅಮೆರಿಕವು ಭಾರತೀಯ ಪ್ರತಿಭೆಗಳಿಂದ ತುಂಬಾ ಲಾಭ ಪಡೆದಿದೆ. ಗೂಗಲ್-ಮೈಕ್ರೋಸಾಫ್ಟ್‌ನಂತಹ ಕಂಪನಿಗಳನ್ನು ಭಾರತೀಯರು ಸ್ಥಾಪಿಸಿದ್ದಾರೆ. ನಮ್ಮ ದೇಶಕ್ಕೆ ಯೋಗ್ಯ ಪ್ರತಿಭೆಗಳ ಕೊರತೆ ಇದೆ. ಕಷ್ಟಕರ ಕೆಲಸಗಳನ್ನು ಮಾಡಲು ಸಾಕಷ್ಟು ಯೋಗ್ಯ ಜನರನ್ನು ಹುಡುಕುವುದೇ ತೊಂದರೆಯಾಗಿದೆ. ಹಾಗಾಗಿ ಎಚ್1ಬಿ ವೀಸಾ ರದ್ದುಪಡಿಸಬಾರದು. ಅಮೆರಿಕಕ್ಕೆ ಇನ್ನಷ್ಟು ಪ್ರತಿಭೆಗಳು ಬಂದರೆ ಒಳ್ಳೆಯದು.
-ಎಲಾನ್ ಮಸ್ಕ್
ಟೆಸ್ಲಾ, ಸ್ಪೇಸ್‌ಎಕ್ಸ್ ಸ್ಥಾಪಕ
-ಯುವ ಉದ್ಯಮಿಗಳು ಗಳಿಸಿದ್ದಕ್ಕಿಂತ ಹೆಚ್ಚು ಕೊಡುಗೆ ನೀಡಬೇಕು
-ತೆರಿಗೆಯಿಂದ ಆರ್ಥಿಕತೆ ವಿನಾಶ, ಮುಕ್ತ ವ್ಯಾಪಾರವೇ ಉತ್ತಮ
-ಅಮೆರಿಕಕ್ಕೆ ಪ್ರತಿಭೆಗಳ ಕೊರತೆ, ಭಾರತೀಯರಿಂದಲೇ ಲಾಭ
ಇಂದು ಅಮೆರಿಕದಲ್ಲಿ ಎಚ್1ಬಿ ವೀಸಾ ಹಾಗೂ ವಲಸಿಗರ ವಿಚಾರ ಸಾಕಷ್ಟು ಚರ್ಚೆಯಲ್ಲಿದೆ. ವಲಸಿಗರು ಅಮೆರಿಕನ್ನರ ಉದ್ಯೋಗವನ್ನು ಕಸಿದುಕೊಳ್ಳುತ್ತಾರೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆತಂಕ ಹೊರಹಾಕಿದ್ದಾರೆ. ಆದರೆ ಈ ಆತಂಕ ಎಷ್ಟು
ವಾಸ್ತವಿಕ ಎಂಬುದು ನನಗೆ ಗೊತ್ತಿಲ್ಲ. ನನ್ನ ನೇರ ಅನುಭವದ ಪ್ರಕಾರ, ನಮ್ಮ ದೇಶಕ್ಕೆ ಯೋಗ್ಯ ಪ್ರತಿಭೆಗಳ ಕೊರತೆ ಇದ್ದೇ ಇದೆ. ಕಷ್ಟಕರ ಕೆಲಸಗಳನ್ನು ಮಾಡಲು ಸಾಕಷ್ಟು ಯೋಗ್ಯ ಜನರನ್ನು ಹುಡುಕುವುದೇ ನಮಗೆ ತೊಂದರೆಯಾಗುತ್ತಿದೆ. ಹಾಗಾಗಿ ಇನ್ನೂ ಹೆಚ್ಚು ಯೋಗ್ಯ ಜನ ಬಂದರೆ ಒಳ್ಳೆಯದು. ಅಮೆರಿಕವು ಭಾರತೀಯ ಪ್ರತಿಭೆಗಳಿಂದ ತುಂಬಾ ಲಾಭ ಪಡೆದಿದೆ, ಗೂಗಲ್-ಮೈಕ್ರೋಸಾಫ್ಟ್‌ನಂತಹ ಕಂಪನಿಗಳನ್ನು ಭಾರತೀಯರು ಸ್ಥಾಪಿಸಿದ್ದಾರೆ. ಅಮೆರಿಕದಲ್ಲಿ ವಿದೇಶಿ ನೌಕರರಿಗೆ ನೀಡುವ ಎಚ್1ಬಿ ವೀಸಾ ಯೋಜನೆಯನ್ನು ಕೆಲವರು ದುರುಪಯೋಗ ಮಾಡಿಕೊಂಡಿದ್ದಾರೆ ಎಂಬುದು ನಿಜ. ಕೆಲವು ಹೊರಗುತ್ತಿಗೆ ಕಂಪನಿಗಳು ಈ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡಿವೆ, ಅದನ್ನು ತಡೆಯಬೇಕು. ಆದರೆ ಎಚ್1ಬಿ ಯೋಜನೆಯನ್ನೇ ಸಂಪೂರ್ಣವಾಗಿ ಮುಚ್ಚಿಬಿಡಬೇಕು ಎಂಬ ಚಿಂತನೆಯಲ್ಲಿ ನಾನು ಖಂಡಿತಾ ಇಲ್ಲ. ಅದನ್ನು ಮುಚ್ಚಿದರೆ ತುಂಬಾ ದೊಡ್ಡ ಹಾನಿಯಾಗುತ್ತದೆ ಎಂದು ಟ್ರಂಪ್ ಅವರಿಗೆ ಅರ್ಥವಾಗುತ್ತಿಲ್ಲ.
ಮುಕ್ತ ವ್ಯಾಪಾರವೇ ಉತ್ತಮ
ನಾನು ಸಾಮಾನ್ಯವಾಗಿ ಮುಕ್ತ ವ್ಯಾಪಾರವೇ ಉತ್ತಮ, ಹೆಚ್ಚು ಸಮರ್ಥ ಎಂದು ಭಾವಿಸುತ್ತೇನೆ. ತೆರಿಗೆಗಳು ಮಾರುಕಟ್ಟೆಯಲ್ಲಿ ಸಮಸ್ಯೆಗಳನ್ನು ಹುಟ್ಟುಹಾಕುತ್ತವೆ. ಉದಾಹರಣೆಗೆ, ನೀವು ಮತ್ತು ಬೇರೆ ಯಾರಿಗಾದರೂ ವೈಯುಕ್ತಿಕ ಮಟ್ಟದಲ್ಲಿ ತೆರಿಗೆ ಇರಬೇಕೆಂದು ಬಯಸುವಿರಾ? ಅದು ಜೀವನವನ್ನು ತುಂಬಾ ಕಷ್ಟಕರಗೊಳಿಸುತ್ತದೆ. ಪ್ರತಿ ನಗರದ ನಡುವೆ ಸುಂಕ ಇರಬೇಕೆಂದು ಬಯಸುತ್ತೀರಾ? ಇಲ್ಲ, ಅದು ಕೂಡ ತುಂಬಾ ತೊಂದರೆ ಉಂಟುಮಾಡುತ್ತದೆ. ಅಮೆರಿಕದ ಪ್ರತಿ ರಾಜ್ಯದ ನಡುವೆ ತೆರಿಗೆ ಇದ್ದರೆ ಹೇಗಿರುತ್ತದೆ? ಅದು ಆರ್ಥಿಕತೆಗೆ ವಿನಾಶಕಾರಿ. ಹಾಗಿದ್ದಲ್ಲಿ ದೇಶಗಳ ನಡುವೆ ತೆರಿಗೆ ಏಕೆ ಬೇಕು? ಅಧ್ಯಕ್ಷ ಟ್ರಂಪ್ ಅವರು ತಮಗೆ ತೆರಿಗೆಯೆಂದರೆ ಬಹಳ ಇಷ್ಟ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ನಾನು ಈ ದೃಷ್ಟಿಕೋನದಿಂದ ಅವರನ್ನು ಹೊರತರಲು ಪ್ರಯತ್ನಿಸಿದೆ. ಆದರೆ ಯಶಸ್ಸು ಸಿಗಲಿಲ್ಲ.
ಎಐನಿಂದ ಕೆಲಸವೇ ಐಚ್ಛಿಕ
ಇಂದು ಕೃತಕ ಬುದ್ಧಿಮತ್ತೆ (ಎಐ) ಮತ್ತು ರೊಬೊಟಿಕ್ಸ್ ಬಹಳ ವೇಗವಾಗಿ ಬೆಳೆಯುತ್ತಿವೆ. ಇನ್ನು 20 ವರ್ಷಗಳೊಳಗೆ ಮನುಷ್ಯ ಕೆಲಸ ಮಾಡುವುದು ಐಚ್ಛಿಕವಾಗಿರುತ್ತದೆ, ಅಂದರೆ ಕೆಲಸ ಮಾಡಲು ಇಷ್ಟವಿದ್ದರೆ ಮಾಡಬಹುದು, ಇಲ್ಲದಿದ್ದರೆ ಬಿಡಬಹುದು. ಬಹುಶಃ ಕೆಲಸ ಮಾಡುವುದು ಒಂದು ಹವ್ಯಾಸದಂತೆ ಆಗಿರುತ್ತದೆ. 20 ವರ್ಷಗಳ ನಂತರ ಜನರು ನಾನು ಇಂದು ಹೇಳಿದ ಮಾತನ್ನು ನೆನಪಿಸಿಕೊಂಡು, ‘ಎಲಾನ್ ಒಂದು ಹಾಸ್ಯಾಸ್ಪದ ಭವಿಷ್ಯವಾಣಿ ನುಡಿದಿದ್ದ. ಅದು ನಿಜವಾಗಲಿಲ್ಲ’ ಎನ್ನಬಹುದು. ಆದರೆ ನನ್ನ ನಂಬಿಕೆಯಂತೆ ಅದು ನಿಜವಾಗುತ್ತದೆ. 20 ವರ್ಷಗಳೊಳಗೆ, ಬಹುಶಃ 10 ಅಥವಾ 15 ವರ್ಷಗಳಲ್ಲೇ ಎಐ ಮತ್ತು ರೊಬೊಟಿಕ್ಸ್‌ನಲ್ಲಿನ ಪ್ರಗತಿಯಿಂದಾಗಿ, ಕೆಲಸ ಮಾಡುವುದು ಐಚ್ಛಿಕವಾಗಬಹುದು.
ಉದಾಹರಣೆಗೆ, ನೀವು ನಿಮ್ಮ ತೋಟದಲ್ಲಿ ತರಕಾರಿಗಳನ್ನು ಬೆಳೆಯಬಹುದು ಅಥವಾ ಅಂಗಡಿಗೆ ಹೋಗಿ ತರಕಾರಿ ಖರೀದಿಸಬಹುದು. ಸ್ವಂತವಾಗಿ ತರಕಾರಿ ಬೆಳೆಯುವುದು ತುಂಬಾ ಕಷ್ಟ. ಆದರೂ ಕೆಲವರಿಗೆ ಅದು ಇಷ್ಟ. ಭವಿಷ್ಯದಲ್ಲಿ ಕೆಲಸ ಕೂಡ ಹೀಗೆಯೇ ಐಚ್ಛಿಕವಾಗಿರುತ್ತದೆ. ಕೆಲಸ ಮಾಡುವ ಉತ್ಸಾಹ ಬಂದರೆ ಮಾಡಬಹುದು, ಇಲ್ಲದಿದ್ದರೆ ಬಿಡಬಹುದು. ಎಐ ಮತ್ತು ರೊಬೋಟ್ ಆ ಕೆಲಸ ಮಾಡುತ್ತವೆ. ಜನರಿಗೆ ಬೇಕಾದ ಎಲ್ಲ ಸರಕು-ಸೇವೆಗಳೂ ಇವುಗಳಿಂದಲೇ ಸಿಗುತ್ತವೆ. ಒಂದು ಹಂತದಲ್ಲಿ ಎಐ ಮಾನವರು ಯೋಚಿಸಬಹುದಾದ ಎಲ್ಲವನ್ನೂ ತನ್ನಲ್ಲಿ ತುಂಬಿಕೊಂಡು, ಮಾನವರನ್ನು ಸಂತೋಷಪಡಿಸಲು ಮಾಡಬೇಕಾದ್ದೆಲ್ಲ ಮಾಡಿ ಮುಗಿಸಿದ ನಂತರ ತನ್ನ ಮತ್ತು ರೊಬೊಟಿಕ್ಸ್‌ಗಾಗಿ ಕೆಲಸ ಮಾಡುವ ಪರಿಸ್ಥಿತಿ ಉಂಟಾಗಬಹುದು. ಏಕೆಂದರೆ ಅದಕ್ಕೂ ಒಂದು ಮಿತಿ ಇದೆ. ಆದರೆ ಭವಿಷ್ಯದಲ್ಲಿ ಯಾರಿಗೆ ಏನು ಬೇಕೋ ಅದೆಲ್ಲವೂ ಸಿಗುತ್ತದೆ. ಎಐ ಮತ್ತು ಹ್ಯೂಮನಾಯ್ಡ್ ರೊಬೋಟ್‌ಗಳು ಬಡತನವನ್ನೇ ತೊಡೆದುಹಾಕುತ್ತವೆ. ಎಲ್ಲರನ್ನೂ ಶ್ರೀಮಂತರನ್ನಾಗಿ ಮಾಡುತ್ತವೆ. ಕೆಲಸಕ್ಕಾಗಿ ಹಣ ನೀಡುವ ಅಗತ್ಯವಿರುವುದಿಲ್ಲ. ಹಾಗಾಗಿ ಹಣದ ಮೌಲ್ಯವೂ ನಾಟಕೀಯವಾಗಿ ಕಡಿಮೆಯಾಗುತ್ತಾ ಹೋಗುತ್ತದೆ.
ಯುವ ಉದ್ಯಮಿಗಳಿಗೆ ಸಂದೇಶ
ಉದ್ಯಮಿಗಳು ತಾವು ಗಳಿಸುವುದಕ್ಕಿಂತ, ಸಮಾಜಕ್ಕೆ ಹೆಚ್ಚಿನ ಕೊಡುಗೆ ನೀಡಬೇಕು. ಅಂದರೆ, ನೀವು ಸಮಾಜದಿಂದ, ಗ್ರಾಹಕರಿಂದ, ಸಂಪನ್ಮೂಲಗಳಿಂದ ಎಷ್ಟು ತೆಗೆದುಕೊಳ್ಳುತ್ತೀರೋ ಅದಕ್ಕಿಂತ ಹೆಚ್ಚು ಮೌಲ್ಯವನ್ನು ಹಿಂದಿರುಗಿಸಿ. ಹಣವನ್ನು ನೇರ ಉದ್ದೇಶವನ್ನಾಗಿ ಮಾಡಿಕೊಳ್ಳಬೇಡಿ; ಬದಲಿಗೆ ಜನರಿಗೆ ನಿಜವಾಗಿಯೂ ಉಪಯುಕ್ತವಾದ ಉತ್ಪನ್ನಗಳು ಮತ್ತು ಸೇವೆಗಳನ್ನು ಸೃಷ್ಟಿಸಿ. ಅವುಗಳನ್ನು ಜನರಿಗೆ ತಲುಪಿಸಿ. ಇದರ ಪರಿಣಾಮವಾಗಿ ಹಣ ಸಹಜವಾಗಿಯೇ ನಿಮ್ಮ ಬಳಿ ಬರುತ್ತದೆ. ಇನ್‌ಪುಟ್‌ಗಿಂತ ಔಟ್‌ಪುಟ್ ಯಾವಾಗಲೂ ದೊಡ್ಡದಾಗಿರಲಿ. ಕಠಿಣ ಪರಿಶ್ರಮದಿಂದ ಕೆಲಸ ಮಾಡಿ. ಏಕೆಂದರೆ ವಿಫಲತೆಯ ಸಾಧ್ಯತೆ ಯಾವಾಗಲೂ ಇರುತ್ತದೆ. ಗಳಿಸುವುದಕ್ಕಿಂತ ಹೆಚ್ಚು ಕೊಡುಗೆ ನೀಡುವವರನ್ನು ನಾನು ತುಂಬಾ ಗೌರವಿಸುತ್ತೇನೆ. ಭವಿಷ್ಯದಲ್ಲಿ ಎಐ ಮತ್ತು ರೊಬೊಟಿಕ್ಸ್‌ನಿಂದ ಕೆಲಸವೇ ಐಚ್ಛಿಕವಾಗಿ ಬದಲಾಗುತ್ತಿರುವಾಗಲೂ, ಈ ತತ್ವವೇ ಯುವ ಉದ್ಯಮಿಗಳನ್ನು ದೀರ್ಘಕಾಲ ಯಶಸ್ವಿಯಾಗಿ ನಿಲ್ಲಿಸುತ್ತದೆ.
(ಜೆರೋಧಾ ಸಹಸಂಸ್ಥಾಪಕ, ಕನ್ನಡಿಗ ನಿಖಿಲ್ ಕಾಮತ್ ಜೊತೆಗಿನ ಪಾಡ್‌ಕಾಸ್ಟ್‌ನಲ್ಲಿ ಹೇಳಿದಂತೆ)

