ಸಾರಾಂಶ
ಹಲ್ದ್ವಾನಿ/ ಡೆಹ್ರಾಡೂನ್: 14 ವರ್ಷದ ಈಜುಪಟು, ಕಳೆದ ವರ್ಷ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದ ಭಾರತದ ಅತಿಕಿರಿಯ ಕ್ರೀಡಾಕೂಟ ಎನ್ನುವ ಹಿರಿಮೆಗೆ ಪಾತ್ರರಾಗಿದ್ದ ಕರ್ನಾಟಕದ ಧಿನಿಧಿ ದೇಸಿಂಘು, ಉತ್ತರಾಖಂಡದಲ್ಲಿ ನಡೆಯುತ್ತಿರುವ 38ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬುಧವಾರ 3 ಚಿನ್ನದ ಪದಕ ಗೆದ್ದರು. ಕರ್ನಾಟಕ ಈಜು ಸ್ಪರ್ಧೆಯಲ್ಲಿ 5 ಚಿನ್ನ, 2 ಬೆಳ್ಳಿಯೊಂದಿಗೆ 7 ಪದಕ ಪಡೆದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಮಹಿಳೆಯರ 200 ಮೀ. ಫ್ರೀ ಸ್ಟೈಲ್ ಫೈನಲ್‌ನಲ್ಲಿ 2 ನಿಮಿಷ 3.24 ಸೆಕೆಂಡ್‌ಗಳಲ್ಲಿ ಸ್ಪರ್ಧೆ ಮುಗಿಸಿ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದ ಧಿನಿಧಿ, ಆ ಬಳಿಕ ಮಹಿಳೆಯರ 100 ಮೀ. ಬಟರ್‌ಫ್ಲೈ ಸ್ಪರ್ಧೆಯಲ್ಲೂ ಸ್ವರ್ಣಕ್ಕೆ ಮುತ್ತಿಟ್ಟರು. ಇದೇ ಸ್ಪರ್ಧೆಯಲ್ಲಿ ನಯಿಶಾ ಶೆಟ್ಟಿಗೆ ಬೆಳ್ಳಿ ದೊರೆಯಿತು.
ಧಿನಿಧಿ, ಶಾಲಿನಿ, ಲತೀಶಾ ಹಾಗೂ ನೀನಾ ಅವರನ್ನೊಳಗೊಂಡ ಕರ್ನಾಟಕ ತಂಡ ಮಹಿಳೆಯರ 4X100 ಮೀ. ಫ್ರೀಸ್ಟೈಲ್ ರಿಲೇ ಸ್ಪರ್ಧೆಯಲ್ಲಿ ಚಿನ್ನ ಜಯಿಸಿತು. ಶ್ರೀಹರಿಗೆ 2 ಚಿನ್ನ: ಭಾರತದ ಮತ್ತೊಬ್ಬ ಒಲಿಂಪಿಯನ್ ಶ್ರೀಹರಿ ನಟರಾಜ್, ಕರ್ನಾಟಕಕ್ಕೆ ಮತ್ತೆರಡು ಚಿನ್ನ ತಂದುಕೊಟ್ಟರು. ಪುರುಷರ 200 ಮೀ. ಫ್ರೀ ಸ್ಟೈಲ್‌ನಲ್ಲಿ 1 ನಿಮಿಷ 50.57 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ಶ್ರೀಹರಿ ಚಿನ್ನ ಜಯಿಸಿದರೆ, ಅನೀಶ್ ಬೆಳ್ಳಿ ಪಡೆದರು.
ಶ್ರೀಹರಿ, ಅನೀಶ್, ಆಕಾಶ್ ಹಾಗೂ ಚಿಂತನ್ ಅವರನ್ನೊಳಗೊಂಡ ಕರ್ನಾಟಕ ತಂಡ 3 ನಿಮಿಷ 26.26 ಸೆಕೆಂಡ್‌ಗಳಲ್ಲಿ ಸ್ಪರ್ಧೆ ಪೂರ್ತಿಗೊಳಿಸಿ ಚಿನ್ನ ಜಯಿಸಿತು. --
ಖೋ-ಖೋ: ರಾಜ್ಯದ
ತಂಡಗಳಿಗೆ ಗೆಲುವು!
ಗುಂಪು ಹಂತದ ಖೋ-ಖೋ ಪಂದ್ಯಗಳಲ್ಲಿ ರಾಜ್ಯದ ಪುರುಷ ಹಾಗೂ ಮಹಿಳಾ ತಂಡಗಳು ಗೆಲುವು ಸಾಧಿಸಿದವು. ಪುರುಷರ ತಂಡ 36-18ರಲ್ಲಿ ಉತ್ತರಾಖಂಡ ವಿರುದ್ಧ ಗೆಲುವು ಸಾಧಿಸಿದರೆ, ಮಹಿಳಾ ತಂಡ ಕೂಡ ಉತ್ತರಾಖಂಡವನ್ನು 41-12ರಲ್ಲಿ ಸೋಲಿಸಿತು.
ಕಬಡ್ಡಿ: ರಾಜ್ಯ ಮಹಿಳಾ
ತಂಡ ಶುಭಾರಂಭ
ಕಬಡ್ಡಿ ಗುಂಪು ಹಂತದ ಪಂದ್ಯಗಳು ಬುಧವಾರ ಆರಂಭಗೊಂಡವು. ಕರ್ನಾಟಕ ಮಹಿಳಾ ತಂಡವು 43-24 ಅಂಕಗಳಲ್ಲಿ ಪಶ್ಚಿಮ ಬಂಗಾಳವನ್ನು ಸೋಲಿಸಿತು. ಆದರೆ ಪುರುಷರ ತಂಡ 29-62ರಲ್ಲಿ ಉತ್ತರಪ್ರದೇಶ ವಿರುದ್ಧ ಪರಾಭವಗೊಂಡಿತು.
ಬಾಸ್ಕೆಟ್‌ಬಾಲ್: ರಾಜ್ಯ
ತಂಡಗಳಿಗೆ ಗೆಲುವು
5X5 ಬಾಸ್ಕೆಟ್‌ಬಾಲ್ ಗುಂಪು ಹಂತದ ಮೊದಲ ಪಂದ್ಯದಲ್ಲಿ ಕರ್ನಾಟಕ ಪುರುಷರ ತಂಡ 100-59ರಲ್ಲಿ ಉತ್ತರಾಖಂಡವನ್ನು ಬಗ್ಗುಬಡಿದರೆ, ರಾಜ್ಯ ಮಹಿಳಾ ತಂಡ 71-59ರಲ್ಲಿ ದೆಹಲಿ ವಿರುದ್ಧ ಜಯಸಿತು.