8ರಲ್ಲಿ 8 ಸಿಕ್ಸರ್‌, 11 ಎಸೆತಕ್ಕೆ ಫಿಫ್ಟಿ : ಆಕಾಶ್‌ ವಿಶ್ವ ದಾಖಲೆ!

| N/A | Published : Nov 10 2025, 09:53 AM IST

cricket
8ರಲ್ಲಿ 8 ಸಿಕ್ಸರ್‌, 11 ಎಸೆತಕ್ಕೆ ಫಿಫ್ಟಿ : ಆಕಾಶ್‌ ವಿಶ್ವ ದಾಖಲೆ!
Share this Article
  • FB
  • TW
  • Linkdin
  • Email

ಸಾರಾಂಶ

ರಣಜಿ ಟ್ರೋಫಿ ಪ್ಲೇಟ್‌ ಗ್ರೂಪ್‌ನಲ್ಲಿ ಭಾನುವಾರ ಮೇಘಾಲಯದ ಬ್ಯಾಟರ್‌ ಆಕಾಶ್‌ ಕುಮಾರ್‌ ಚೌಧರಿ ಸ್ಫೋಟಕ ಆಟವಾಡಿದ್ದು, 2 ವಿಶ್ವದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 8 ಎಸೆತಗಳಲ್ಲಿ 8 ಸಿಕ್ಸರ್‌ ಸಿಡಿಸಿದ ಮೊದಲ ಆಟಗಾರ ಮತ್ತು ಅತಿ ವೇಗದ ಅರ್ಧಶತಕ

 ಸೂರತ್‌: ರಣಜಿ ಟ್ರೋಫಿ ಪ್ಲೇಟ್‌ ಗ್ರೂಪ್‌ನಲ್ಲಿ ಭಾನುವಾರ ಮೇಘಾಲಯದ ಬ್ಯಾಟರ್‌ ಆಕಾಶ್‌ ಕುಮಾರ್‌ ಚೌಧರಿ ಸ್ಫೋಟಕ ಆಟವಾಡಿದ್ದು, 2 ವಿಶ್ವದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 8 ಎಸೆತಗಳಲ್ಲಿ 8 ಸಿಕ್ಸರ್‌ ಸಿಡಿಸಿದ ಮೊದಲ ಆಟಗಾರ ಮತ್ತು ಅತಿ ವೇಗದ(11 ಎಸೆತ) ಅರ್ಧಶತಕ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ.

ಅರುಣಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. 8ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದು ಮೊದಲ 3 ಎಸೆತಕ್ಕೆ 2 ರನ್‌ ಗಳಿಸಿದ್ದ ಆಕಾಶ್‌, ಎಡಗೈ ಸ್ಪಿನ್ನರ್‌ ಲಿಮಾರ್ ದಾಬಿ ಅವರ ಓವರ್‌ನಲ್ಲಿ ಸತತ 6 ಎಸೆತಗಳಲ್ಲಿ 6 ಸಿಕ್ಸರ್‌ ಬಾರಿಸಿದರು. ಬಳಿಕ ಮೋಹಿತ್‌ ಎಸೆದ ಮುಂದಿನ ಓವರ್‌ನ ಮೊದಲೆರಡೂ ಎಸೆತಗಳಲ್ಲಿ ಸಿಕ್ಸರ್‌ ಸಿಡಿಸಿ, ಒಟ್ಟಾರೆ 11 ಎಸೆತಗಳಲ್ಲೇ ಅರ್ಧಶತಕ ಪೂರೈಸಿದರು. ಈ ಮೂಲಕ ಇಂಗ್ಲೆಂಡ್‌ನ ಲೀಚೆಸ್ಟರ್‌ಶೈರ್‌ ಬ್ಯಾಟರ್‌ ವೇಯ್ನ್‌ ವೈಟ್‌ ಅವರ ಹೆಸರಲ್ಲಿದ್ದ 12 ಎಸೆತಗಳ ಅರ್ಧಶತಕದ ವಿಶ್ವ ದಾಖಲೆ ಮುರಿದರು. ಫಿಫ್ಟಿ ಬಳಿಕ ಆಕಾಶ್‌ 3 ಎಸೆತ ಎದುರಿಸಿದರೂ ಯಾವುದೇ ರನ್‌ ಗಳಿಸಲಿಲ್ಲ. ಒಟ್ಟಾರೆ 14 ಎಸೆತಕ್ಕೆ 50 ರನ್‌ ಬಾರಿಸಿದರು.

ರವಿ ಶಾಸ್ತ್ರಿ ದಾಖಲೆ

ಸರಿಗಟ್ಟಿದ ಆಕಾಶ್‌

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಒಂದೇ ಓವರ್‌ನಲ್ಲಿ 6 ಸಿಕ್ಸರ್‌ ಬಾರಿಸಿದ ವಿಶ್ವದ 3ನೇ, ಭಾರತದ 2ನೇ ಆಟಗಾರ ಆಕಾಶ್‌. 1984-85ರಲ್ಲಿ ಬಾಂಬೆ ಪರ ರವಿ ಶಾಸ್ತ್ರಿ ಅವರು ಬರೋಡಾ ವಿರುದ್ಧ ರಣಜಿ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರು. ವೆಸ್ಟ್‌ಇಂಡೀಸ್‌ನ ಗ್ಯಾರಿ ಸೋಬರ್ಸ್‌ 1968ರಲ್ಲಿ ಕೌಂಟಿ ಚಾಂಪಿಯನ್‌ಶಿಪ್‌ನ ನಾಟಿಂಗ್‌ಹ್ಯಾಮ್‌ಶೈರ್‌ ಪರ ಗ್ಲಾಮೋರ್ಗನ್‌ ವಿರುದ್ಧ ಒಂದೇ ಓವರ್‌ನಲ್ಲಿ ಸತತ 6 ಸಿಕ್ಸರ್‌ ಸಿಡಿಸಿದ್ದರು.

Read more Articles on