ಸಾರಾಂಶ
2025-26ನೇ ಸಾಲಿನ, 91ನೇ ಆವೃತ್ತಿಯ ರಣಜಿ ಟ್ರೋಫಿಗೆ ಬುಧವಾರ ಚಾಲನೆ ದೊರೆಯಲಿದೆ. ಎಲೈಟ್ ವಿಭಾಗದಲ್ಲಿ 32 ತಂಡಗಳು ಪ್ರಶಸ್ತಿಗಾಗಿ ಸೆಣಸಲಿದ್ದು, ಪ್ಲೇಟ್ ಚಾಂಪಿಯನ್‌ಶಿಪ್‌ಗೆ 6 ತಂಡಗಳು ಹೋರಾಟ ನಡೆಸಲಿವೆ. ಒಟ್ಟಾರೆ 138 ಪಂದ್ಯಗಳು ನಡೆಯಲಿದೆ.
ಬೆಂಗಳೂರು: 2025-26ನೇ ಸಾಲಿನ, 91ನೇ ಆವೃತ್ತಿಯ ರಣಜಿ ಟ್ರೋಫಿಗೆ ಬುಧವಾರ ಚಾಲನೆ ದೊರೆಯಲಿದೆ. ಎಲೈಟ್ ವಿಭಾಗದಲ್ಲಿ 32 ತಂಡಗಳು ಪ್ರಶಸ್ತಿಗಾಗಿ ಸೆಣಸಲಿದ್ದು, ಪ್ಲೇಟ್ ಚಾಂಪಿಯನ್‌ಶಿಪ್‌ಗೆ 6 ತಂಡಗಳು ಹೋರಾಟ ನಡೆಸಲಿವೆ. ಒಟ್ಟಾರೆ 138 ಪಂದ್ಯಗಳು ನಡೆಯಲಿದೆ.
ಭಾರತ ತಂಡದ ವೇಳಾಪಟ್ಟಿ ಟಿ20 ಪಂದ್ಯಗಳಿಂದ ತುಂಬಿರುವ ಕಾರಣ, ರಣಜಿ ಟ್ರೋಫಿಯಲ್ಲಿನ ಪ್ರದರ್ಶನ ಆಟಗಾರರಿಗೆ ಭಾರತ ಟೆಸ್ಟ್ ತಂಡದ ಬಾಗಿಲನ್ನು ತೆರೆಯುವ ಸಾಧ್ಯತೆ ಇಲ್ಲ. ಈ ವರ್ಷ ಉಳಿದಿರುವುದು ದಕ್ಷಿಣ ಆಫ್ರಿಕಾ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯಷ್ಟೇ. ವಿಂಡೀಸ್ ವಿರುದ್ಧ ಆಡಿದ ತಂಡವನ್ನೇ ಬಹುತೇಕ ಆಯ್ಕೆ ಮಾಡಲಾಗುತ್ತದೆ. ಇನ್ನು 2026ರ ದ್ವಿತೀಯಾರ್ಧದ ವರೆಗೂ ಭಾರತಕ್ಕೆ ಟೆಸ್ಟ್ ಸರಣಿಗಳಿಲ್ಲ.
2 ಹಂತ: ಕಳೆದ ಆವೃತ್ತಿಯಂತೆಯೇ ಈ ಸಲವೂ ಎರಡು ಹಂತಗಳಲ್ಲಿ ಟೂರ್ನಿ ನಡೆಯಲಿದೆ. ಮೊದಲ 5 ಸುತ್ತು ಅ.15ರಿಂದ ನ.19ರ ವರೆಗೂ ನಡೆಯಲಿದೆ. ಬಳಿಕ ಸಯ್ಯದ್ ಮುಷ್ತಾಕ್ ಅಲಿ ಟಿ20 (ನ.26-ಡಿ.18), ವಿಜಯ್ ಹಜಾರೆ ಏಕದಿನ (ಡಿ.26-ಜ.18) ಟೂರ್ನಿಗಳು ನಡೆಯಲಿವೆ. ಜ.22ರಿಂದ ರಣಜಿ ಟ್ರೋಫಿ ಪುನಾರಂಭಗೊಳ್ಳಲಿದ್ದು, 2ನೇ ಹಂತದಲ್ಲಿ ಗುಂಪು ಹಂತದ ಇನ್ನೆರಡು ಪಂದ್ಯ, ನಾಕೌಟ್ ಪಂದ್ಯಗಳು ನಡೆಯಲಿವೆ. ಫೆ.24ರಿಂದ ಫೆ.28ರ ವರೆಗೂ ಫೈನಲ್ ನಿಗದಿಯಾಗಿದೆ.
ಟೂರ್ನಿ ಮಾದರಿ ಹೇಗೆ?
ಕಳೆದ ಆವೃತ್ತಿಯಂತೆಯೇ ಈ ಸಲವೂ ಎಲೈಟ್ ವಿಭಾಗದಲ್ಲಿ 32 ತಂಡಗಳನ್ನು ತಲಾ 8 ತಂಡಗಳಂತೆ 4 ಗುಂಪುಗಳಾಗಿ ವಿಂಗಡಿಸಲಾಗಿದೆ. ಗುಂಪಿನಲ್ಲಿ ಅಗ್ರ-2 ಸ್ಥಾನ ಪಡೆಯುವ ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಲಿವೆ. ಪ್ಲೇಟ್ ವಿಭಾಗದಲ್ಲಿ 6 ತಂಡಗಳು ರೌಂಡ್ ರಾಬಿನ್ ಮಾದರಿಯಲ್ಲಿ ಸೆಣಸಲಿದ್ದು, ಅಗ್ರ-2 ತಂಡಗಳು ಫೈನಲ್‌ನಲ್ಲಿ ಆಡಲಿವೆ.
ಕರ್ನಾಟಕಕ್ಕೆ ಇಂದಿನಿಂದ
ಸೌರಾಷ್ಟ್ರ ವಿರುದ್ಧ ಪಂದ್ಯ
ರಾಜ್‌ಕೋಟ್: ಕರ್ನಾಟಕ ತಂಡ ಎಲೈಟ್ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಮೊದಲ ಸುತ್ತಿನಲ್ಲಿ ಬಲಿಷ್ಠ ಸೌರಾಷ್ಟ್ರ ವಿರುದ್ಧ ಸೆಣಸಲಿದೆ. ಬುಧವಾರದಿಂದ ಆರಂಭಗೊಳ್ಳಲಿರುವ ಪಂದ್ಯಕ್ಕೆ ರಾಜ್‌ಕೋಟ್ ಆತಿಥ್ಯ ವಹಿಸಲಿದೆ. ಕರ್ನಾಟಕ ತಂಡವನ್ನು ಹಿರಿಯ ಬ್ಯಾಟರ್ ಮಯಾಂಕ್ ಅಗರ್‌ವಾಲ್ ಮುನ್ನಡೆಸಲಿದ್ದು, ಕರುಣ್ ನಾಯರ್ ರಾಜ್ಯಕ್ಕೆ ಮರಳಿರುವುದು ತಂಡದ ಬ್ಯಾಟಿಂಗ್ ಬಲ ಹೆಚ್ಚಿಸಿದೆ.
ವಿಂಡೀಸ್ ವಿರುದ್ಧ 2ನೇ ಟೆಸ್ಟ್ ಮುಗಿಸಿಕೊಂಡು ದೇವ್‌ದತ್ ಪಡಿಕ್ಕಲ್ ದೆಹಲಿಯಿಂದ ರಾಜ್‌ಕೋಟ್‌ಗೆ ಪ್ರಯಾಣಿಸಿದ್ದು, ಈ ಪಂದ್ಯದಲ್ಲಿ ಆಡಲಿದ್ದಾರೆ ಎನ್ನಲಾಗಿದೆ. ಕಳೆದ ಆವೃತ್ತಿಯಲ್ಲಿ ರಾಜ್ಯದ ಪರ ಗರಿಷ್ಠ ರನ್ ಕಲೆಹಾಕಿದ್ದ ಎಡಗೈ ಬ್ಯಾಟರ್ ಆರ್.ಸ್ಮರಣ್ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ.
ಬೌಲಿಂಗ್ ವಿಭಾಗದಲ್ಲಿ ಈ ಬಾರಿ ವೇಗಿ ವಾಸುಕಿ ಕೌಶಿಕ್‌ರ ಅನುಪಸ್ಥಿತಿ ಕರ್ನಾಟಕವನ್ನು ಕಾಡುವ ಸಾಧ್ಯತೆ ಇದೆ. ಕೌಶಿಕ್, ಕರ್ನಾಟಕ ತಂಡ ಬಿಟ್ಟು ಗೋವಾ ಸೇರಿದ್ದಾರೆ. ವೈಶಾಖ್ ವಿಜಯ್‌ಕುಮಾರ್, ವಿದ್ವತ್ ಕಾವೇರಪ್ಪ ವೇಗದ ಬೌಲಿಂಗ್ ಹೊಣೆ ಹೊರಲಿದ್ದು, ಅನುಭವಿ ಶ್ರೇಯಸ್ ಗೋಪಾಲ್ ಸ್ಪಿನ್ ವಿಭಾಗವನ್ನು ಮುನ್ನಡೆಸಲಿದ್ದಾರೆ. ಸೌರಾಷ್ಟ್ರ ತಂಡವನ್ನು ಜಯ್‌ದೇವ್ ಉನಾದ್ಕತ್ ಮುನ್ನಡೆಸಲಿದ್ದಾರೆ. ಕರ್ನಾಟಕ, ಟೂರ್ನಿಯಲ್ಲಿ ಶುಭಾರಂಭ ಮಾಡಲು ಎದುರು ನೋಡುತ್ತಿದೆ.
ಪಂದ್ಯ ಆರಂಭ: ಬೆ.9.30ಕ್ಕೆ, ನೇರ ಪ್ರಸಾರ: ಜಿಯೋ ಹಾಟ್‌ಸ್ಟಾರ್