ಸಾರಾಂಶ
ಬೆಂಗಳೂರು: ಇಂಧೋರ್‌ನಲ್ಲಿ ನಡೆದ 74ನೇ ರಾಷ್ಟ್ರೀಯ ಕಿರಿಯರ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಟ್ರೋಫಿ ವಿಜೇತ ಕರ್ನಾಟಕ ಮಹಿಳಾ ತಂಡವನ್ನು ಬುಧವಾರ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕರ್ನಾಟಕ ರಾಜ್ಯ ಬಾಸ್ಕೆಟ್‌ಬಾಲ್ ಸಂಸ್ಥೆ(ಕೆಎಸ್‌ಬಿಬಿಎ) ಅಧಿಕಾರಿಗಳು ಅದ್ಧೂರಿಯಾಗಿ ಸ್ವಾಗತಿಸಿದರು. ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಜ್ಯ ತಂಡದ ಆಟಗಾರ್ತಿಯರಿಗೆ ಹೂಗುಚ್ಛ ನೀಡಿ, ಸಿಹಿ ತಿನ್ನಿಸಿ ಬರ ಮಾಡಿಕೊಳ್ಳಲಾಯಿತು. ಈ ವೇಳೆ ಆಟಗಾರ್ತಿಯರು ಟ್ರೋಫಿ ಪ್ರದರ್ಶಿಸಿ ಸಂಭ್ರಮಿಸಿದರು. ಟ್ರೋಫಿ ಜೊತೆಗೆ ಫೋಟೋಶೂಟ್‌ನಲ್ಲೂ ಪಾಲ್ಗೊಂಡರು.
ಬಹುಮಾನ ಮೊತ್ತ ₹7.5 ಲಕ್ಷಕ್ಕೆ ಹೆಚ್ಚಳ
ಚಾಂಪಿಯನ್ ಆದ ಕರ್ನಾಟಕ ತಂಡಕ್ಕೆ ಫಿಬಾ ಏಷ್ಯಾ ಅಧ್ಯಕ್ಷ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಾ.ಕೆ. ಗೋವಿಂದರಾಜು ₹7.5 ಲಕ್ಷ ನಗದು ಬಹುಮಾನ ಘೋಷಿಸಿದ್ದಾರೆ. ಮಂಗಳವಾರ ₹5 ಲಕ್ಷ ನಗದು ಘೋಷಿಸಲಾಗಿತ್ತು. ಸದ್ಯ ಹೆಚ್ಚುವರಿ ₹2.5 ಲಕ್ಷ ನೀಡುವುದಾಗಿ ಗೋವಿಂದರಾಜು ತಿಳಿಸಿದ್ದಾರೆ.
ಇಟಾಲಿಯನ್ ಓಪನ್: ಬೋಪಣ್ಣ-ಎಬ್ಡೆನ್ ಔಟ್
ರೋಮ್: ಹಾಲಿ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಂ ಚಾಂಪಿಯನ್, ಭಾರತದ ರೋಹಣ್ ಬೋಪಣ್ಣ-ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಇಟಾಲಿಯನ್ ಓಪನ್ ಟೆನಿಸ್‌ನಲ್ಲಿ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಅಭಿಯಾನ ಕೊನೆಗೊಳಿಸಿದ್ದಾರೆ. ಮಂಗಳವಾರ ಇಂಡೋ-ಆಸೀಸ್ ಜೋಡಿಗೆ ಇಟಲಿಯ ಸಿಮೋನ್ ಬೊಲೆಲ್ಲಿ-ಆ್ಯಂಡ್ರಿಯಾ ವಾವಸ್ಸರಿ ವಿರುದ್ಧ 2-6, 4-6 ಸೆಟ್‌ಗಳಲ್ಲಿ ಸೋಲು ಎದುರಾಯಿತು. ಮೊದಲ ಸುತ್ತಿನ ಪಂದ್ಯದಲ್ಲಿ ಬೋಪಣ್ಣ-ಎಬ್ಡೆನ್, ಇಟಲಿಯ ಮ್ಯಾಥ್ಯೂ ಅರ್ನಾಲ್ಡಿ-ಫ್ರಾನ್ಸಿಸ್ಕೊ ಪಾಸ್ಸರೋ ವಿರುದ್ಧ ಗೆಲುವು ಸಾಧಿಸಿದ್ದರು.