ಭಾರತದ ಸಹಾಯಕ ಕೋಚ್‌ಗಳಾಗಿ ಅಭಿಷೇಕ್‌ ನಾಯರ್‌, ರ್‍ಯಾನ್‌ ಟೆನ್‌ ಡೊಶ್ಕಾಟೆ ಆಯ್ಕೆ ಬಹುತೇಕ ಖಚಿತ

| Published : Jul 21 2024, 01:16 AM IST / Updated: Jul 21 2024, 04:06 AM IST

ಸಾರಾಂಶ

ಇಬ್ಬರೂ ಭಾರತ ತಂಡದೊಂದಿಗೆ ಶ್ರೀಲಂಕಾ ಪ್ರವಾಸಕ್ಕೆ ತೆರಳಲಿದ್ದಾರೆ. ಆದರೆ ಭಾರತದ ಬೌಲಿಂಗ್‌ ಕೋಚ್‌ ಯಾರು ಆಗಲಿದ್ದಾರೆ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.

ನವದೆಹಲಿ: ಭಾರತ ತಂಡದ ಸಹಾಯಕ ಕೋಚ್‌ಗಳಾಗಿ ಅಭಿಷೇಕ್‌ ನಾಯರ್‌ ಹಾಗೂ ರ್‍ಯಾನ್‌ ಟೆನ್‌ ಡೊಶ್ಕಾಟೆ ನೇಮಕ ಬಹುತೇಕ ಖಚಿತವಾಗಿದೆ. ಇವರಿಬ್ಬರೂ ಭಾರತ ತಂಡದೊಂದಿಗೆ ಶ್ರೀಲಂಕಾ ಪ್ರವಾಸಕ್ಕೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ. 

ಅಭಿಷೇಕ್‌ 2024ರ ಐಪಿಎಲ್‌ ಚಾಂಪಿಯನ್‌ ಕೆಕೆಆರ್‌ ತಂಡದ ಬ್ಯಾಟಿಂಗ್‌ ಕೋಚ್‌ ಆಗಿದ್ದರೆ, ಡೊಶ್ಕಾಟೆ ತಂಡದ ಫೀಲ್ಡಿಂಗ್‌ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದರು. ಇವರಿಬ್ಬರ ಆಯ್ಕೆಗೆ ಕೆಕೆಆರ್‌ನ ಮೆಂಟರ್‌ ಆಗಿದ್ದ ಗಂಭೀರ್‌ ಬಿಸಿಸಿಐಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. 

ಇನ್ನು, ಭಾರತದ ಬೌಲಿಂಗ್‌ ಕೋಚ್‌ ಯಾರು ಆಗಲಿದ್ದಾರೆ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. ಗಂಭೀರ್‌ ಸೂಚನೆಯಂತೆ ದ.ಆಫ್ರಿಕಾದ ಮೊರ್ನೆ ಮಾರ್ಕೆಲ್‌ರನ್ನು ಬಿಸಿಸಿಐ ನೇಮಿಸಲಿದೆಯೇ ಅಥವಾ ಭಾರತದ ಮಾಜಿ ಕ್ರಿಕೆಟಿಗರಿಗೆ ಮಣೆ ಹಾಕಲಿದೆಯೇ ಎಂಬ ಕುತೂಹಲವಿದೆ. ಇದೇ ವೇಳೆ ಟೀಂ ಇಂಡಿಯಾದ ಫೀಲ್ಡಿಂಗ್‌ ಕೋಚ್‌ ಆಗಿದ್ದ ಟಿ. ದಿಲೀಪ್‌ ಅವರನ್ನು ಬಿಸಿಸಿಐ ತಂಡಕ್ಕೆ ರೀಟೈನ್‌ ಮಾಡಿಕೊಳ್ಳುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ನಾಡಿದ್ದು ಭಾರತ ತಂಡ ಶ್ರೀಲಂಕಾಕ್ಕೆ

ಶ್ರೀಲಂಕಾ ವಿರುದ್ಧ ಟಿ20 ಹಾಗೂ ಏಕದಿನ ಸರಣಿ ಜು.27ರಿಂದ ಆರಂಭಗೊಳ್ಳಲಿದ್ದು, ಭಾರತ ತಂಡ ಸೋಮವಾರ ಮುಂಬೈನಿಂದ ವಿಶೇಷ ವಿಮಾನದ ಮೂಲಕ ಕೊಲಂಬೊಗೆ ಪ್ರಯಾಣಿಸಲಿದೆ. ಲಂಕಾಕ್ಕೆ ಹೊರಡುವ ಮುನ್ನ ನೂತನ ಕೋಚ್‌ ಗೌತಮ್‌ ಗಂಭೀರ್‌ರಿಂದ ಸುದ್ದಿಗೋಷ್ಠಿ ನಡೆಯಲಿದೆ ಎಂದು ತಿಳಿದುಬಂದಿದೆ.