ಸಾರಾಂಶ
ಎಎಫ್‌ಸಿ ಏಷ್ಯನ್ ಕಪ್ ಫುಟ್ಬಾಲ್ ಟೂರ್ನಿಯ ಭಾರತಕ್ಕೆ ಸೋಲು ಎದುರಾಗಿದೆ. ತೀವ್ರ ಹೋರಾಟ ನಡೆಸಿದ್ರೂ ಭಾರತಕ್ಕೆ 0-2 ಗೋಲಿನ ಸೋಲು ತಪ್ಪಲಿಲ್ಲ. 102ನೇ ಸ್ಥಾನದಲ್ಲಿರುವ ಭಾರತ ‘ಬಿ’ ಗುಂಪಿನ ಮೊದಲ ಪಂದ್ಯದಲ್ಲಿ ನಿರೀಕ್ಷಿತ ಹೋರಾಟ ಪ್ರದರ್ಶಿಸಿತು.
ಅಲ್ ರಯ್ಯಾನ್(ಕತಾರ್): ಎಎಫ್‌ಸಿ ಏಷ್ಯನ್ ಕಪ್ ಫುಟ್ಬಾಲ್ ಟೂರ್ನಿಯ ಆರಂಭಿಕ ಪಂದ್ಯದಲ್ಲೇ ವಿಶ್ವ ನಂ.25 ಆಸ್ಟ್ರೇಲಿಯಾ ವಿರುದ್ಧ ಪ್ರಬಲ ಹೋರಾಟ ಪ್ರದರ್ಶಿಸಿದರೂ, ಭಾರತ ಸೋಲಿನ ಆರಂಭ ಪಡೆದಿದೆ. ಶನಿವಾರ ಭಾರತ 0-2 ಅಂತರದಲ್ಲಿ ವೀರೋಚಿತ ಸೋಲು ಅನುಭವಿಸಿತು.
ವಿಶ್ವ ರ್‍ಯಾಂಕಿಂಗ್‌ನಲ್ಲಿ 102ನೇ ಸ್ಥಾನದಲ್ಲಿರುವ ಭಾರತ ‘ಬಿ’ ಗುಂಪಿನ ಮೊದಲ ಪಂದ್ಯದಲ್ಲಿ ನಿರೀಕ್ಷಿತ ಹೋರಾಟ ಪ್ರದರ್ಶಿಸಿತು. ಮೊದಲ 50 ನಿಮಿಷಗಳಲ್ಲಿ ಎದುರಾಳಿ ತಂಡದ ಆಟಗಾರರಿಗೆ ಗೋಲು ಗಳಿಸಲು ಭಾರತೀಯರು ಬಿಡಲಿಲ್ಲ.
ಆದರೆ 50ನೇ ನಿಮಿಷದಲ್ಲಿ ಜಾಕ್ಸನ್ ಇರ್ವಿನ್ ಹೊಡೆದ ಗೋಲು, ಆಸ್ಟ್ರೇಲಿಯಾದ ಖಾತೆ ತೆರೆಸಿತು. ಬಳಿಕ ಜೋರ್ಡನ್ ಬ್ರೊಸ್ 73ನೇ ನಿಮಿಷದಲ್ಲಿ ಗೋಲು ಬಾರಿಸಿ ಭಾರತದ ಸೋಲನ್ನು ಖಚಿತಪಡಿಸಿಕೊಂಡರು.
ಸುನಿಲ್ ಚೆಟ್ರಿ ಹೆಡರ್ ಮೂಲಕ ಗೋಲು ದಾಖಲಿಸುವ ಅವಕಾಶ ಪಡೆದರೂ, ಅಲ್ಪದರಲ್ಲೇ ತಪ್ಪಿಸಿಕೊಂಡರು. ಸಂದೇಶ್ ಝಿಂಗನ್ ಅವರನ್ನೊಳಗೊಂಡ ಭಾರತದ ಡಿಫೆನ್ಸ್ ಪಡೆ ಅತ್ಯಾಕರ್ಷಕ ಆಟದ ಮೂಲಕ ಆಸೀಸ್‌ನ ಹಲವು ಗೋಲಿನ ಅವಕಾಶಗಳನ್ನು ತಪ್ಪಿಸಿತು. ಟೂರ್ನಿಯ 2ನೇ ಪಂದ್ಯದಲ್ಲಿ ಭಾರತ ಜ.18ರಂದು ಉಜ್ಬೇಕಿಸ್ತಾನ ವಿರುದ್ಧ ಆಡಲಿದೆ.
ಕತಾರ್ ಶುಭಾರಂಭ: ಶುಕ್ರವಾರ ನಡೆದ ಉದ್ಘಾಟನಾ ಪಂದ್ಯದಲ್ಲಿ ಲೆಬನಾನ್ ವಿರುದ್ಧ ಕತಾರ್ 3-0 ಗೋಲಿನ ಜಯದೊಂದಿಗೆ ಶುಭಾರಂಭ ಮಾಡಿದೆ.