ಆಸ್ಟ್ರೇಲಿಯಾಕ್ಕೆ ಶಾಕ್‌ ನೀಡಿ ಆಫ್ಘನ್‌ ಹೊಸ ಇತಿಹಾಸ!

| Published : Jun 24 2024, 01:37 AM IST / Updated: Jun 24 2024, 03:24 AM IST

ಸಾರಾಂಶ

ವಿಶ್ವಕಪ್‌ ಸೂಪರ್‌-8ರ ನಿರ್ಣಾಯಕ ಪಂದ್ಯದಲ್ಲಿ ಅಫ್ಘಾನಿಸ್ತಾನಕ್ಕೆ 21 ರನ್‌ ರೋಚಕ ಜಯ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲೇ ಮೊದಲ ಬಾರಿ ಆಫ್ಘನ್‌ ವಿರುದ್ಧ ಸೋಲುಂಡ ಆಸ್ಟ್ರೇಲಿಯಾ

ಕಿಂಗ್ಸ್‌ಟೌನ್‌ : ಈ ಬಾರಿ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಮತ್ತೊಮ್ಮೆ ದೈತ್ಯ ಸಂಹಾರ ನಡೆದಿದೆ. ಸೂಪರ್‌-8 ಹಂತದ ನಿರ್ಣಾಯಕ ಪಂದ್ಯದಲ್ಲಿ ಭಾನುವಾರ ಮಾಜಿ ಚಾಂಪಿಯನ್‌ ಆಸ್ಟ್ರೇಲಿಯಾ ವಿರುದ್ಧ ಅಫ್ಘಾನಿಸ್ತಾನ 21 ರನ್‌ ಗೆಲುವು ಸಾಧಿಸಿದೆ. 

ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಸೀಸ್‌ ವಿರುದ್ಧ ಅಫ್ಘಾನಿಸ್ತಾನಕ್ಕೆ ಲಭಿಸಿದ ಚೊಚ್ಚಲ ಗೆಲುವು. ಇದರೊಂದಿಗೆ ಗುಂಪು 1ರ ಸೆಮಿಫೈನಲ್‌ ರೇಸ್‌ ರೋಚಕತೆ ಸೃಷ್ಟಿಸಿದ್ದು, ಪೈಪೋಟಿ ಮತ್ತಷ್ಟು ಹೆಚ್ಚಿದೆ.ಸದ್ಯ 2 ತಂಡಗಳೂ ತಲಾ 2 ಅಂಕ ಹೊಂದಿದ್ದು, ತಮ್ಮ ಕೊನೆ ಪಂದ್ಯದ ಮೂಲಕ ಸೆಮಿಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಲು ಹೋರಾಡಬೇಕಿದೆ.

ಮೊದಲು ಬ್ಯಾಟ್‌ ಮಾಡಿದ ಆಫ್ಘನ್‌, ಉತ್ತಮ ಆರಂಭದ ಹೊರತಾಗಿಯೂ 6 ವಿಕೆಟ್‌ಗೆ 148 ರನ್‌ ಕಲೆಹಾಕಿತು. ರಹ್ಮಾನುಲ್ಲಾ ಗುರ್ಬಾಜ್‌(60) ಹಾಗೂ ಇಬ್ರಾಹಿಂ ಜದ್ರಾನ್‌(51) ಮೊದಲ ವಿಕೆಟ್‌ಗೆ 15.5 ಓವರ್‌ಗಳಲ್ಲಿ 118 ರನ್‌ ಜೊತೆಯಾಟವಾಡಿದರು. ಗುರ್ಬಾಜ್‌ ಔಟಾದ ಬಳಿಕ ತಂಡ ಪತನದ ಹಾದಿ ಹಿಡಿಯಿತು. ಕೊನೆ 4 ಓವರಲ್ಲಿ ತಂಡ ಕೇವಲ 30 ರನ್‌ ಗಳಿಸಿತು.

 ಕಮಿನ್ಸ್‌ ಹ್ಯಾಟ್ರಿಕ್‌ ಒಳಗೊಂಡಂತೆ 28 ರನ್‌ಗೆ 3 ವಿಕೆಟ್‌ ಕಿತ್ತರು.ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಆಸೀಸ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌ರ ಹೋರಾಟದ ಹೊರತಾಗಿಯೂ 19.2 ಓವರ್‌ಗಳಲ್ಲಿ 127 ರನ್‌ಗೆ ಸರ್ವಪತನ ಕಂಡಿತು. ಇನ್ನಿಂಗ್ಸ್‌ನ 3ನೇ ಎಸೆತದಲ್ಲಿ ಹೆಡ್‌, 3ನೇ ಓವರ್‌ನಲ್ಲಿ ಮಾರ್ಷ್‌ ವಿಕೆಟ್‌ ಕಿತ್ತ ನವೀನ್‌ ಆಫ್ಘನ್‌ಗೆ ಆರಂಭಿಕ ಮುನ್ನಡೆ ಒದಗಿಸಿದರು.

 ವಾರ್ನರ್‌ ನಬಿ ಎಸೆತದಲ್ಲಿ ಔಟಾದರು. ಒಂದೆಡೆ ಸತತ ವಿಕೆಟ್‌ ಕಳೆದುಕೊಳ್ಳುತ್ತಿದ್ದರೂ, ಕ್ರೀಸ್‌ನಲ್ಲಿ ಅಬ್ಬರಿಸುತಲ್ಲೇ ಇದ್ದ ಮ್ಯಾಕ್ಸ್‌ವೆಲ್‌ ಆಸೀಸ್‌ಗೆ ಗೆಲುವಿನ ಆಸೆ ಹುಟ್ಟಿಸಿದ್ದರು. 14 ಓವರಲ್ಲಿ 105 ರನ್ ಗಳಿಸಿದ್ದ ತಂಡಕ್ಕೆ 36 ಎಸೆತಗಳಲ್ಲಿ 44 ರನ್‌ ಬೇಕಿತ್ತು. ಆದರೆ 15ನೇ ಓವರಲ್ಲಿ ಮ್ಯಾಕ್ಸ್‌ವೆಲ್‌(41 ಎಸೆತಗಳಲ್ಲಿ 59) ವಿಕೆಟ್‌ ಕಿತ್ತ ಗುಲ್ಬದಿನ್‌ ಪಂದ್ಯದ ದಿಕ್ಕನ್ನೇ ಬದಲಿಸಿದರು. 

ಬಳಿಕ ವೇಡ್‌ ವಿಕೆಟ್‌ ಕಿತ್ತ ರಶೀದ್‌ ಆಫ್ಘನ್‌ ಐತಿಹಾಸಿಕ ಗೆಲುವಿಗೆ ಕಾರಣಾದರು. ಗುಲ್ಬದಿನ್‌ 20 ರನ್‌ಗೆ 4, ನವೀನ್‌ 20 ರನ್‌ಗೆ 3 ವಿಕೆಟ್ ಕಬಳಿಸಿದರು.ಸ್ಕೋರ್‌: ಅಫ್ಘಾನಿಸ್ತಾನ 20 ಓವರಲ್ಲಿ 148/6 (ಗುರ್ಬಾಜ್‌ 60, ಜದ್ರಾನ್‌ 51, ಕಮಿನ್ಸ್‌ 3-28), ಆಸ್ಟ್ರೇಲಿಯಾ 19.2 ಓವರಲ್ಲಿ 127/10 (ಮ್ಯಾಕ್ಸ್‌ವೆಲ್‌ 59, ಗುಲ್ಬದಿನ್‌ 4-20, ನವೀನ್‌ 3-20) ಪಂದ್ಯಶ್ರೇಷ್ಠ: ಗುಲ್ಬದಿನ್‌ ನೈಬ್

08 ಪಂದ್ಯ: ಆಸೀಸ್‌ 2022ರಿಂದ ಈ ವರೆಗೂ ಟಿ20 ವಿಶ್ವಕಪ್‌ನಲ್ಲಿ ಸತತ 8 ಪಂದ್ಯಗಳನ್ನು ಗೆದ್ದು ದಾಖಲೆ ಬರೆದಿತ್ತು. ತಂಡದ ಗೆಲುವಿನ ಓಟಕ್ಕೆ ಆಫ್ಘನ್‌ ಕಡಿವಾಣ ಹಾಕಿತು.

01ನೇ ಜಯ: ಆಫ್ಘನ್‌ಗೆ ಇದು ಅಂ.ರಾ. ಕ್ರಿಕೆಟ್‌ನಲ್ಲಿ ಆಸೀಸ್‌ ವಿರುದ್ಧ ಮೊದಲ ಗೆಲುವು. ಮೊದಲ 5 ಪಂದ್ಯದಲ್ಲೂ ಆಸೀಸ್‌ ಗೆದ್ದಿತ್ತು.