ಅಥ್ಲೀಟ್‌ ಸಿಕ್ಕಿ ಬಿದ್ದರೆ ಅವರನ್ನು ಅಮಾನತು ಮಾಡಿ, ಕೋಚ್‌ಗೆ ಕ್ರೀಡಾಂಗಣ ಪ್ರವೇಶಿಸದಂತೆ ನಿಷೇಧ ಹೇರುತ್ತೇವೆ. ಅವರ ಸರ್ಕಾರಿ ಹುದ್ದೆಗಳನ್ನೂ ಕಿತ್ತು ಹಾಕಲಾಗುವುದು ಎಂದು ಎಎಫ್‌ಐ ಎಚ್ಚರಿಸಿದೆ.

ನವದೆಹಲಿ: ಉದ್ದೀಪನ ಮದ್ದು ಸೇವನೆ ಮಾಡಿ ಅಥ್ಲೀಟ್‌ಗಳು ಸಿಕ್ಕಿ ಬೀಳುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಅಥ್ಲೆಟಿಕ್ಸ್‌ ಫೆಡರೇಶನ್‌(ಎಎಫ್‌ಐ) ಹೊಸ ಕ್ರಮ ಕೈಗೊಂಡಿದ್ದು, ಇನ್ನು ಮುಂದೆ ಡೋಪ್‌ ಪರೀಕ್ಷೆಯಲ್ಲಿ ಅಥ್ಲೀಟ್‌ ವಿಫಲವಾದರೆ ಅವರ ಕೋಚ್‌ಗೂ ಶಿಕ್ಷೆ ವಿಧಿಸಲು ತೀರ್ಮಾನಿಸಿದೆ.

 ಈ ಬಗ್ಗೆ ಮಾಹಿತಿ ನೀಡಿರುವ ಎಎಫ್‌ಐ ಅಧ್ಯಕ್ಷ ಅದಿಲ್ಲೆ ಸುಮರಿವಲ್ಲ, ‘ಡೋಪಿಂಗ್‌ ಪ್ರಕರಣಗಳು ಮಿತಿ ಮೀರುತ್ತಿದೆ. ಹೀಗಾಗಿ ಇದರ ನಿಯಂತ್ರಣಕ್ಕೆ ಕಠಿಣ ಹೆಜ್ಜೆ ಇಡುತ್ತಿದ್ದೇವೆ. ಡೋಪ್‌ ಪರೀಕ್ಷೆಗೆ ಮಾದರಿ ನೀಡುವಾಗ ಅಥ್ಲೀಟ್‌ಗಳು ಅವರ ಕೋಚ್‌ಗಳ ಹೆಸರನ್ನೂ ಉಲ್ಲೇಖಿಸಬೇಕು. ಒಂದು ವೇಳೆ ಅಥ್ಲೀಟ್‌ ಸಿಕ್ಕಿ ಬಿದ್ದರೆ ಅವರನ್ನು ಅಮಾನತು ಮಾಡಿ, ಕೋಚ್‌ಗೆ ಕ್ರೀಡಾಂಗಣ ಪ್ರವೇಶಿಸದಂತೆ ನಿಷೇಧ ಹೇರುತ್ತೇವೆ. ಅವರ ಸರ್ಕಾರಿ ಹುದ್ದೆಗಳನ್ನೂ ಕಿತ್ತು ಹಾಕಲಾಗುವುದು’ ಎಂದು ಮಾಹಿತಿ ನೀಡಿದ್ದಾರೆ.

ಒಲಿಂಪಿಕ್ಸ್‌ಗೆ ಮುನ್ನ ಆಯ್ಕೆ ಟ್ರಯಲ್ಸ್ ಬೇಡ: ರೆಸ್ಲರ್ಸ್‌

ನವದೆಹಲಿ: ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಭಾರತೀಯ ಮಹಿಳಾ ಕುಸ್ತಿಪಟುಗಳು ಒಲಿಂಪಿಕ್ಸ್‌ಗೂ ಮೊದಲು ಮತ್ತೊಂದು ಸುತ್ತಿನ ಆಯ್ಕೆ ಟ್ರಯಲ್ಸ್‌ ನಡೆಸದಂತೆ ಭಾರತೀಯ ಕುಸ್ತಿ ಫಡರೇಶನ್‌ (ಡಬ್ಲ್ಯುಎಫ್‌ಐ)ಗೆ ಮನವಿ ಸಲ್ಲಿಸಿದ್ದಾರೆ. 

ಇಲ್ಲಿಂದ ಮುಂದಕ್ಕೆ ಮಾನಸಿಕ ನೆಮ್ಮದಿ ಬಹಳ ಮುಖ್ಯ. ತಾವಿಡುವ ಪ್ರತಿ ಹೆಜ್ಜೆ, ಪ್ರತಿ ದಿನ ಕೈಗೊಳ್ಳುವ ಕಾರ್ಯಗಳು ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದರ ಮೇಲೆ ಪರಿಣಾಮ ಬೀರಲಿವೆ ಎಂದು ಅನ್ಶು ಮಲಿಕ್‌ ಸೇರಿದಂತೆ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಭಾರತದ ಐವರು ಮಹಿಳಾ ಕುಸ್ತಿಪಟುಗಳು ಹೇಳಿದ್ದಾರೆ. 

ಒಲಿಂಪಿಕ್ಸ್‌ ಕೋಟಾ ಪಡೆದ ಕುಸ್ತಿಪಟುಗಳನ್ನೇ ಪ್ಯಾರಿಸ್‌ಗೆ ಕಳುಹಿಸಬೇಕೋ ಅಥವಾ ಕೋಟಾ ಸಿಕ್ಕಿರುವ ತೂಕ ವಿಭಾಗಗಳಿಗೆ ಹೊಸದಾಗಿ ಆಯ್ಕೆ ಟ್ರಯಲ್ಸ್‌ ನಡೆಸಬೇಕೋ ಎನ್ನುವುದನ್ನು ಡಬ್ಲ್ಯುಎಫ್‌ಐ ಇನ್ನೂ ನಿರ್ಧರಿಸಿಲ್ಲ.