ಸಾರಾಂಶ
ನವದೆಹಲಿ: ಭಾರತೀಯ ಅಥ್ಲೆಟಿಕ್ಸ್ ಫೆಡರೇಶನ್ (ಎಎಫ್‌ಐ) ಗುರುವಾರ ಕ್ರೀಡಾ ಉಡುಪುಗಳ ಬ್ರ್ಯಾಂಡ್ ಪೂಮಾ ಜೊತೆ ಬಹು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿತು. ಸಂಸ್ಥೆಯು ದೇಸಿ ಹಾಗೂ ಅಂತಾರಾಷ್ಟ್ರೀಯ ಕೂಟಗಳ ವೇಳೆ ಭಾರತದ ಸುಮಾರು 400 ಅಥ್ಲೀಟ್‌ಗಳಿಗೆ ಉಡುಪು, ಶೂ ಹಾಗೂ ಇನ್ನಿತರ ಕ್ರೀಡಾ ಉಪಕರಣಗಳನ್ನು ಒದಗಿಸಲಿದೆ.
ಪೂಮಾ, ಭಾರತೀಯ ಅಥ್ಲೆಟಿಕ್ಸ್‌ನ ಅಧಿಕೃತ ಕಿಟ್ ಪ್ರಾಯೋಜಕತ್ವ ಪಡೆದಿರುವ ಹಿನ್ನೆಲೆಯಲ್ಲಿ ಅಗ್ರ ಅಥ್ಲೀಟ್‌ಗಳಾದ ನೀರಜ್ ಚೋಪ್ರಾ, ಶ್ರೀಶಂಕರ್ ಮುರಳಿ, ಪಾರುಲ್ ಚೌಧರಿ ಸಹ ಇದೇ ಸಂಸ್ಥೆಯ ಉಪಕರಣಗಳನ್ನು ಬಳಸಲಿದ್ದಾರೆ.
ಸಾತ್ವಿಕ್-ಚಿರಾಗ್ ಶೆಟ್ಟಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ
ಬ್ಯಾಂಕಾಕ್: ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸಾತ್ವಿಕ್-ಚಿರಾಗ್ ಶೆಟ್ಟಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಗುರುವಾರ ಪುರುಷರ ಡಬಲ್ಸ್ 2ನೇ ಸುತ್ತಿನ ಪಂದ್ಯದಲ್ಲಿ ಭಾರತದ ಜೋಡಿಗೆ, ಚೀನಾದ ಕ್ಸೀ ಸಾವೊ ನಾನ್-ಝೆಂಗ್ ವೀ ವಿರುದ್ಧ 21-16, 21-11ರಲ್ಲಿ ಗೆಲುವು ಲಭಿಸಿತು. ಇದೇ ವೇಳೆ ಪುರುಷರ ಸಿಂಗಲ್ಸ್‌ನಲ್ಲಿ ಮೀರಬಾ ಲುವಾಂಗ್ ಮೈಸ್ನಮ್, ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ-ತನಿಶಾ ಕ್ರಾಸ್ಟೊ ಕೂಡಾ ಕ್ವಾರ್ಟರ್ ಫೈನಲ್‌ಗೇರಿದರು. ಮಹಿಳಾ ಸಿಂಗಲ್ಸ್‌ನಲ್ಲಿ ಅಶ್ಮಿತಾ ಸೋಲನುಭವಿಸಿದರು.