ಸಾರಾಂಶ
ಜವಾಹರ್ ಮಾವೂರ್ ತಂಡದ ಪರ ಆಡುತ್ತಿದ್ದ ಹಸ್ಸನ್ ಬಗ್ಗೆ ಅಭಿಮಾನಿಗಳು ಜನಾಂಗೀಯ ನಿಂದನೆ ಮಾಡಿದ್ದು, ಬಳಿಕ ಅಟ್ಟಾಡಿಸಿ ಹಲ್ಲೆ ಮಾಡಿದ್ದಾರೆ. ಹಸ್ಸನ್ ನೀಡಿದ ದೂರಿನನ್ವಯ ಪೊಲೀಸರು ಹಲವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಮಲಪ್ಪುರಂ: ಕೇರಳದ ಸ್ಥಳೀಯ ಫುಟ್ಬಾಲ್ ಟೂರ್ನಿಯಲ್ಲಿ ಆಡುತ್ತಿದ್ದ ಐವರಿ ಕೋಸ್ಟ್‌ನ ಆಟಗಾರನ ಮೇಲೆ ಅಭಿಮಾನಿಗಳು ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಇತ್ತೀಚೆಗೆ ಸೆವೆನ್ಸ್ ಮ್ಯಾಚ್ ವೇಳೆ ಈ ಘಟನೆ ನಡೆದಿದೆ. ಜವಾಹರ್ ಮಾವೂರ್ ತಂಡದ ಪರ ಆಡುತ್ತಿದ್ದ ಹಸ್ಸನ್ ಜೂನಿಯರ್ ಬಗ್ಗೆ ಅಭಿಮಾನಿಗಳು ಜನಾಂಗೀಯ ನಿಂದನೆ ಮಾಡಿದ್ದು, ಬಳಿಕ ಅಟ್ಟಾಡಿಸಿ ಹಲ್ಲೆ ಮಾಡಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಹಸ್ಸನ್ ಜೂನಿಯರ್ ಅವರನ್ನು ಅರೀಕೋಡ್‍ನ ಮೈದಾನದಲ್ಲಿ ಜನರ ಗುಂಪು ಅಟ್ಟಾಡಿಸಿದೆ. ಬಳಿಕ ಆಟಗಾರನನ್ನು ಜನರು ಹಿಡಿದು ಥಳಿಸಿರುವ ದೃಶ್ಯವಿದೆ. ಜನರ ಗುಂಪು ತನ್ನನ್ನು ಜನಾಂಗೀಯ ನಿಂದನೆ ಮಾಡಿ, ಹಲ್ಲೆ ನಡೆಸಿದೆ ಎಂದು ಹಸ್ಸನ್ ಆರೋಪಿಸಿದ್ದಾರೆ.ಘಟನೆ ಸಂಬಂಧ ಹಸ್ಸನ್ ನೀಡಿದ ದೂರಿನನ್ವಯ ಸ್ಥಳೀಯ ಪೊಲೀಸರು ಹಲವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.