ರಣಜಿ ಟ್ರೋಫಿ ಫೈನಲ್‌: ಸೋಲು ತಪ್ಪಿಸಲು ವಿದರ್ಭ ಹೋರಾಟ

| Published : Mar 14 2024, 02:00 AM IST / Updated: Mar 14 2024, 02:01 AM IST

ಸಾರಾಂಶ

ವಿದರ್ಭದ ಗೆಲುವಿಗೆ 538 ರನ್‌ಗಳ ಬೃಹತ್‌ ಗುರಿ ನೀಡಿದ ಮುಂಬೈ. 4ನೇ ದಿನಾಂತ್ಯಕ್ಕೆ ವಿದರ್ಭ 5 ವಿಕೆಟ್‌ಗೆ 248. ಇನ್ನೂ 290 ರನ್‌ ಅಗತ್ಯ. ಇಂದು ಪಂದ್ಯ ಕೊನೆ ದಿನ. ಡ್ರಾ ಆದರೆ ಇನ್ನಿಂಗ್ಸ್ ಮುನ್ನಡೆ ಆಧಾರದಲ್ಲಿ ಮುಂಬೈ ಚಾಂಪಿಯನ್‌.

ಮುಂಬೈ: 41 ಬಾರಿ ಚಾಂಪಿಯನ್‌ ಮುಂಬೈ ತಂಡ ಈ ಬಾರಿ ರಣಜಿ ಟ್ರೋಫಿ ಫೈನಲ್‌ನಲ್ಲಿ ವಿದರ್ಭ ವಿರುದ್ಧ ಗೆಲುವಿನ ಸನಿಹಕ್ಕೆ ತಲುಪಿದೆ. ಪಂದ್ಯದಲ್ಲಿ ಮುಂಬೈ ಸಂಪೂರ್ಣ ಅಧಿಪತ್ಯ ಸಾಧಿಸಿದ ಹೊರತಾಗಿಯೂ ಸೋಲು ತಪ್ಪಿಸಲು 2 ಬಾರಿ ಚಾಂಪಿಯನ್‌ ವಿದರ್ಭ ಹೋರಾಡುತ್ತಿದ್ದು, ಕೊನೆ ಕ್ಷಣದ ಕ್ಲೈಮ್ಯಾಕ್ಸ್‌ ಮಾತ್ರ ಬಾಕಿ ಇದೆ. ವಿದರ್ಭಕ್ಕೆ ಕೊನೆ ದಿನವಾದ ಗುರುವಾರ 290 ರನ್‌ ಅಗತ್ಯವಿದ್ದು, ಮುಂಬೈ ಗೆಲುವಿಗೆ 5 ವಿಕೆಟ್‌ ಪಡೆಯಬೇಕಿದೆ.

ಸದ್ಯ ವಿದರ್ಭದ ಮುಂದೆ ಗೆಲುವಿನ ಆಯ್ಕೆ ಮಾತ್ರ ಇದೆ. ಇದಕ್ಕಾಗಿ ತಂಡ ಕೊನೆ ದಿನ ಅಸಾಧಾರಣ ಪ್ರದರ್ಶನ ನೀಡಬೇಕಿದೆ. ತಂಡ ಈಗಾಗಲೇ ಮೊದಲ ಇನ್ನಿಂಗ್ಸ್‌ನಲ್ಲಿ ಹಿನ್ನಡೆ ಅನುಭವಿಸಿರುವ ಕಾರಣ ಪಂದ್ಯ ಡ್ರಾ ಗೊಂಡರೂ ಇನ್ನಿಂಗ್ಸ್‌ ಮುನ್ನಡೆ ಅಧಾರದಲ್ಲಿ ಮುಂಬೈ ಪ್ರಶಸ್ತಿ ಮುಡಿಗೇರಿಸಿಕೊಳ್ಳಲಿದೆ.538 ರನ್‌ಗಳ ಹಿಮಾಲಯದೆತ್ತರದ ಗುರಿ ಪಡೆದಿರುವ ವಿದರ್ಭ 4ನೇ ದಿನದಂತ್ಯಕ್ಕೆ 5 ವಿಕೆಟ್‌ಗೆ 248 ರನ್‌ ಕಲೆಹಾಕಿದೆ. ಮೊದಲ ವಿಕೆಟ್‌ಗೆ ಅಥರ್ವ ತೈಡೆ(32) ಹಾಗೂ ಧ್ರುವ್‌ ಶೋರೆ(28) 64 ರನ್‌ ಜೊತೆಯಾಟವಾಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡುವ ಮುನ್ಸೂಚನೆ ನೀಡಿದ್ದರು. ಆದರೆ ಇಬ್ಬರೂ 3 ಎಸೆತಗಳ ಅಂತರದಲ್ಲಿ ಪೆವಿಲಿಯನ್‌ ಸೇರಿದರು. ಅಥರ್ವಗೆ ಶಮ್ಸ್‌ ಮುಲಾನಿ ಪೆವಿಲಿಯನ್ ಹಾದಿ ತೋರಿದರೆ, ಧ್ರುವ್‌ ಅವರು ತನುಶ್‌ ಕೋಟ್ಯಾನ್‌ ಎಸೆತದಲ್ಲಿ ಬೌಲ್ಡ್‌ ಆದರು. ಇವರಿಬ್ಬರ ನಿರ್ಗಮನದೊಂದಿಗೆ ವಿದರ್ಭ ಮತ್ತೆ ಅಪಾಯಕ್ಕೆ ಸಿಲುಕಿತು.ಬಳಿಕ ಕ್ರೀಸ್‌ಗೆ ಬಂದ ಅಮನ್ ಮೋಖಡೆ 32, ಯಶ್‌ ರಾಥೋಡ್‌ 7 ರನ್‌ಗೆ ವಿಕೆಟ್‌ ಒಪ್ಪಿಸಿದರು. 133ಕ್ಕೆ 4 ವಿಕೆಟ್ ಕಳೆದುಕೊಂಡ ಬಳಿಕ ಕರುಣ್‌ ನಾಯರ್‌(74), ನಾಯಕ ಅಕ್ಷಯ್‌ ವಾಡ್ಕರ್‌(ಔಟಾಗದೆ 56 ರನ್‌) ತಂಡಕ್ಕೆ ಅಲ್ಪ ಚೇತರಿಕೆ ನೀಡಿದರು. ಸದ್ಯ ಅಕ್ಷರ್‌ ಅವರು ಹರ್ಷ್‌ ದುಬೆ(ಔಟಾಗದೆ 11) ಜೊತೆ ಕೊನೆ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದು, ತಂಡವನ್ನು ಸೋಲಿನಿಂದ ಪಾರು ಮಾಡಿ 3ನೇ ಬಾರಿ ಪ್ರಶಸ್ತಿ ಗೆಲ್ಲಲು ನೆರವಾಗಲಿದ್ದಾರೊ ಎಂಬ ಕುತೂಹಲವಿದೆ.2ನೇ ಇನ್ನಿಂಗ್ಸ್‌ನ ಶತಕ ವೀರ ಮುಶೀರ್‌ ಖಾನ್‌ ಬೌಲಿಂಗ್‌ನಲ್ಲೂ ಮಿಂಚಿ 2 ವಿಕೆಟ್‌ ಪಡೆದರು. ತನುಶ್‌ ಕೋಟ್ಯಾನ್‌ ಕೂಡಾ 2 ವಿಕೆಟ್‌ ಪಡೆದಿದ್ದು, ಮತ್ತೊಂದು ವಿಕೆಟ್‌ ಶಮ್ಸ್‌ ಮುಲಾನಿ ಪಾಲಾಯಿತು.ಸ್ಕೋರ್‌: ಮುಂಬೈ 224/10 ಮತ್ತು 418/10, ವಿದರ್ಭ 105/10 ಮತ್ತು 248/5 (4ನೇ ದಿನದಂತ್ಯಕ್ಕೆ) (ಕರುಣ್‌ 74, ಅಕ್ಷಯ್‌ ಔಟಾಗದೆ 56, ಮುಶೀರ್‌ 2-38, ತನುಶ್‌ 2-56)