ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಚೊಚ್ಚಲ ಪ್ರಶಸ್ತಿ ನಿರೀಕ್ಷೆಯೊಂದಿಗೆ 17ನೇ ಆವೃತ್ತಿ ಐಪಿಎಲ್‌ಗೆ ಸಜ್ಜಾಗುತ್ತಿರುವ ಆರ್‌ಸಿಬಿ ಫ್ರಾಂಚೈಸಿಯು ಮಂಗಳವಾರ ಅಭಿಮಾನಿಗಳಿಗಾಗಿ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅದ್ಧೂರಿ ಅನ್‌ಬಾಕ್ಸ್ ಕಾರ್ಯಕ್ರಮ ಆಯೋಜಿಸಲಿದೆ.
ನಾರ್ವೆಯ ಖ್ಯಾತ ಸಂಗೀತ ಕಲಾವಿದ ಅಲಾನ್ ವಾಕರ್, ಭಾರತದ ನೀತಿ ಮೋಹನ್ ಸೇರಿದಂತೆ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.ಕಳೆದ ವರ್ಷವೂ ಆರ್‌ಸಿಬಿಯು ಅನ್‌ಬಾಕ್ಸ್ ಕಾರ್ಯಕ್ರಮವನ್ನು ನಡೆಸಿದ್ದು, ಈ ಬಾರಿ ಇನ್ನಷ್ಟು ವಿಶೇಷತೆಗಳು ಇರಲಿವೆ ಎಂದು ಫ್ರಾಂಚೈಸಿ ಈಗಾಗಲೇ ಸುಳಿವು ನೀಡಿದೆ.
ಪ್ರಮುಖವಾಗಿ ಆರ್‌ಸಿಬಿ ಹೆಸರಿನಲ್ಲಿರುವ Bangalore ಬದಲು Bengaluru ಎಂದು ಮರುನಾಮಕರಣ ಮಾಡುವ ನಿರೀಕ್ಷೆಯಿದೆ. ಜೆರ್ಸಿ ಅನಾವರಣ ಕಾರ್ಯಕ್ರಮವೂ ನಡೆಯಲಿದೆ.
ಸಮಾರಂಭಕ್ಕೂ ಮುನ್ನ ಆರ್‌ಸಿಬಿಯ ಎಲ್ಲಾ ಆಟಗಾರರು ನೆಟ್ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಮಾಜಿ ನಾಯಕ ವಿರಾಟ್ ಕೊಹ್ಲಿ ದೀರ್ಘ ಸಮಯದ ಬಳಿಕ ಮೈದಾನದಲ್ಲಿ ಅಭಿಮಾನಿಗಳಿಗೆ ಕಾಣಿಸಿಕೊಳ್ಳಲಿದ್ದಾರೆ.
ನಾಯಕ ಫಾಫ್ ಡು ಪ್ಲೆಸಿ, ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್, ಮೊಹಮದ್ ಸಿರಾಜ್ ಸೇರಿದಂತೆ ಇತರ ಆಟಗಾರರು ಕೂಡಾ ಅಭ್ಯಾಸ ನಡೆಸಲಿದ್ದಾರೆ.
ವನಿತಾ ತಂಡದಿಂದ ಟ್ರೋಫಿ ಪ್ರದರ್ಶನ: ಮಂಗಳವಾರದ ಅನ್‌ಬಾಕ್ಸ್ ಕಾರ್ಯಕ್ರಮದ ವೇಳೆ ಡಬ್ಲ್ಯುಪಿಎಲ್ ಚಾಂಪಿಯನ್ ಆರ್‌ಸಿಬಿ ಮಹಿಳಾ ತಂಡ ಟ್ರೋಫಿ ಪ್ರದರ್ಶನ ಮಾಡುವ ನಿರೀಕ್ಷೆಯಿದೆ.
ಆಟಗಾರ್ತಿಯರು ಈಗಾಗಲೇ ನಗರಕ್ಕೆ ಆಗಮಿಸಿದ್ದು, ಅನ್‌ಬಾಕ್ಸ್ ಸಮಾರಂಭಕ್ಕೂ ಮುನ್ನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದು ಟ್ರೋಫಿ ಪ್ರದರ್ಶನ, ಸಂಭ್ರಮಾಚರಣೆ ನಡೆಸಲಿದ್ದಾರೆ.